Indian Railways: ಯಾದಗಿರಿಯಲ್ಲಿ ನಿಲುಗಡೆಯಾಗಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್, ಬೇಡಿಕೆಗೆ ಸ್ಪಂದಿಸಿದ ಸಚಿವ ಸೋಮಣ್ಣ
Aug 05, 2024 01:40 PM IST
ಯಾದಗಿರಿಯಲ್ಲೂ ನಿಲ್ಲಲಿದೆ ಬೆಂಗಳೂರು ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್
- Vande Bharat Express ಕಲಬುರಗಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಯಾದಗಿರಿಯಲ್ಲೂ ನಿಲುಗಡೆ ಆರಂಭಿಸಿದೆ.
ಕಲಬುರಗಿ: ಬೆಂಗಳೂರಿನಿಂದ ಕಲಬುರಗಿಗೆ ತೆರಳುವ ಹಾಗೂ ಕಲಬುರಗಿಯಿಂದ ಬೆಂಗಳೂರಿಗೆ ಆಗಮಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಈಗ ಯಾದಗಿರಿಯಲ್ಲೂ ನಿಲುಡಗಡೆಯಾಗಲಿದೆ. ಬೆಂಗಳೂರು ಕಲಬುರಗಿ ವಂದೇ ಭಾರತ್ ರೈಲು ಆರಂಭವಾದಾಗಿನಿಂದ ಯಾದಗಿರಿ ನಿಲುಗಡೆಗೆ ಬೇಡಿಕೆಯಿತ್ತು. ಆದರೆ ಅದು ಜಾರಿಯಾಗಿರಲಿಲ್ಲ. ಕೇಂದ್ರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕರ್ನಾಟಕದವರೇ ಆದ ವಿ.ಸೋಮಣ್ಣ ಅವರು ಈ ಸೇವೆಗೆ ಅನುಮತಿ ನೀಡುವ ಜತೆಗೆ ಯಾದಗಿರಿಯಲ್ಲಿ ವಂದೇ ಭಾರತ್ ನಿಲುಗಡೆಗೆ ಚಾಲನೆ ಕೂಡ ನೀಡಿದರು. ಎರಡೂ ಬದಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಯಾದಗಿರಿಯಲ್ಲಿ ನಿಲುಗಡೆಯಾಗಲಿದೆ. ಇದರಿಂದ ಯಾದಗಿರಿ ಭಾಗದವರಿಗೆ ಬೆಂಗಳೂರು ಸಂಪರ್ಕ ಸುಲಭವಾಗಲಿದೆ.
ವಂದೇ ಭಾರತ್ ರೈಲು ಕಲಬುರಗಿ, ರಾಯಚೂರು, ಮಂತ್ರಾಲಯಂ, ಗುಂಟಕಲ್, ಅನಂತಪುರ, ಯಲಹಂಕದಲ್ಲಿ ನಿಲುಗಡೆಗೆ ಅವಕಾಶವಿತ್ತು. ಈಗ ಯಾದಗಿರಿಗೂ ನಿಲುಗಡೆಯ ಅವಕಾಶ ಮಾಡಿಕೊಡಲಾಗಿದೆ.
ರೈಲು ಸಂಖ್ಯೆ 22231 ಕಲಬುರಗಿ-ಎಸ್ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ಬೆಳಿಗ್ಗೆ 5:54 ಕ್ಕೆ ಬಂದು, 5:55 ಕ್ಕೆ ಹೊರಡಲಿದೆ. ರೈಲು ಸಂಖ್ಯೆ 22232 ಎಸ್ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ರಾತ್ರಿ 9:44 ಗಂಟೆಗೆ ಆಗಮಿಸಿ, 9:45 ಕ್ಕೆ ಹೊರಡಲಿದೆ. ಈ ಹೊಸ ಸಮಯವನ್ನೂ ಈಗಾಗಲೇ ಪ್ರಕಟಿಸಲಾಗಿದ್ದು, ಸ್ಥಳೀಯರು ಬಳಕೆ ಮಾಡಿಕೊಳ್ಳುತ್ತಿದ್ಧಾರೆ.
ಯಾದಗಿರಿಗೆ ವಂದೇ ಭಾರತ್ ನಿಲುಗಡೆ ಮಾಡುವಂತೆ ಕೋರಿಕೊಂಡಿದ್ದೆವು. ಆದರೆ ಆ ಹೊತ್ತಿಗೆ ಚುನಾವಣೆ ಬಂದು ಅದು ಜಾರಿಯಾಗಲೇ ಇಲ್ಲ. ಈಗ ಮತ್ತೆ ಎನ್‌ಡಿಎ ಸರ್ಕಾರ ಬಂದಿದೆ. ಕರ್ನಾಟಕದವರೇ ಕೇಂದ್ರ ಸಚಿವರಾಗಿರುವುದರಿಂದ ನಮ್ಮ ಅಹವಾಲಿಗೆ ದನಿ ಸಿಕ್ಕಿತು. ಈಗಾಗಲೇ ಯಾದಗಿರಿಗೆ ವಂದೇ ಭಾರತ್ ರೈಲು ನಿಲುಗಡೆಯಾಗುವುದರಿಂದ ಬೆಂಗಳೂರಿಗೆ ಸುಲಭವಾಗಿ ಹೋಗಿ ಬರಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಇದೇ ರೀತಿ ಬೆಂಗಳೂರು ಧಾರವಾಡ ವಂದೇಭಾರತ್ ರೈಲಿನ ನಿಲುಗಡೆಗೆ ಹಲವು ಕಡೆ ಬೇಡಿಕೆಯಿದೆ. ಆದರೆ ಅದಕ್ಕಿನ್ನೂ ಅನುಮತಿ ದೊರೆತಿಲ್ಲ.
ಯಾದಗಿರಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಬೆಂಗಳೂರಿನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಭಾನುವಾರ ಚಾಲನೆ ನೀಡಿದರು.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಿಂದ ವಿಡಿಯೋ ಲಿಂಕ್ ಮೂಲಕ ರಿಮೋಟ್ ಮೂಲಕ ಉದ್ಘಾಟನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸೋಮಣ್ಣ, 2024-25ಕ್ಕೆ ಸಾಲಿನಲ್ಲಿ ಕರ್ನಾಟಕಕ್ಕೆ ರೈಲ್ವೆ ಬಜೆಟ್ ಹಂಚಿಕೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದು 2009-14ರಲ್ಲಿ ವಾರ್ಷಿಕ ಸರಾಸರಿಗಿಂತ ಒಂಬತ್ತು ಪಟ್ಟು ಹೆಚ್ಚಾಗಿದೆ. 7,560 ಕೋಟಿ ರೂ.ಗಳಷ್ಟನ್ನು ಕರ್ನಾಟಕಕ್ಕೆ ಬಜೆಟ್‌ನಲ್ಲಿ ಒದಗಿಸಲಾಗಿದೆ. ಕರ್ನಾಟಕದಲ್ಲಿ ಶೇ.90 ರಷ್ಟು ರೈಲ್ವೆ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ರಾಜ್ಯದಲ್ಲಿನ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದರು.
ಯಾದಗಿರಿಯಲ್ಲಿ ವಂದೇ ಭಾರತ್‌ಗೆ ಹೊಸ ನಿಲುಗಡೆಯನ್ನು ಸೇರಿಸುವುದರಿಂದ ಸಾರ್ವಜನಿಕರಿಗೆ ಕರ್ನಾಟಕದ ರಾಜಧಾನಿ ನಗರ ಪ್ರದೇಶಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸಲು ಅನುಕೂಲಕರ ಸಂಪರ್ಕವನ್ನು ಒದಗಿಸುವ ನಿರೀಕ್ಷೆಯಿದೆ ಎನ್ನುವುದು ಸಚಿವ ಸೋಮಣ್ಣ ಅವರ ವಿವರಣೆ.