Indian Railways: ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್; ಎಕಾನಮಿ ಮೀಲ್ಸ್ಗೆ ಚಾಲನೆ, 20 ರೂಪಾಯಿಗೆ ಊಟ, 3 ರೂಪಾಯಿಗೆ ನೀರು
Jul 21, 2023 12:26 PM IST
ರೈಲು ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಊಟ, ನೀರು
- Economy Meals: ಸಾಮಾನ್ಯ ಬೋಗಿಗಳ ಬಳಿಯ ಪ್ಲಾಟ್‌ಫಾರ್ಮ್‍ನಲ್ಲಿ ‘ಎಕಾನಮಿ ಮೀಲ್ಸ್’ ಸ್ಟಾಲ್ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಊಟದ ಪೊಟ್ಟಣ ವಿತರಿಸಲಾಗುತ್ತದೆ. 20 ರೂಪಾಯಿಗೆ ಊಟ, 3 ರೂಪಾಯಿಗೆ ನೀರು ಸಿಗಲಿದೆ.
ಬೆಂಗಳೂರು: ಜನರಲ್ ಕೋಚ್ನ ರೈಲು ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಆಹಾರ, ನೀರು ಒದಗಿಸುವ ಭಾರತೀಯ ರೈಲ್ವೆಯ 'ಎಕಾನಮಿ ಮೀಲ್ಸ್' ಯೋಜನೆಗೆ ಕರ್ನಾಟಕದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿನ್ನೆ (ಜುಲೈ 20, ಗುರುವಾರ) ಚಾಲನೆ ನೀಡಲಾಯಿತು.
ಸಾಮಾನ್ಯ ಬೋಗಿಗಳ ಬಳಿಯ ಪ್ಲಾಟ್‌ಫಾರ್ಮ್‍ನಲ್ಲಿ ‘ಎಕಾನಮಿ ಮೀಲ್ಸ್’ ಸ್ಟಾಲ್ ಸ್ಥಾಪಿಸಲಾಗುತ್ತಿದ್ದು, ಇಲ್ಲಿ ಊಟದ ಪೊಟ್ಟಣ ವಿತರಿಸಲಾಗುತ್ತದೆ. 20 ರೂಪಾಯಿಗೆ ಊಟ, 3 ರೂಪಾಯಿಗೆ ನೀರು ಸಿಗಲಿದೆ. ಸದ್ಯ ಈ ಯೋಜನೆಯನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಹುಬ್ಬಳ್ಳಿಯ ಸಿದ್ಧಾರೂಡ ಸ್ವಾಮೀಜಿ ನಿಲ್ದಾಣಗಳಲ್ಲಿ ಆರಂಭಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ನಿಲ್ದಾಣಗಳಲ್ಲಿ ಸೇವೆ ಒದಗಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಇಲಾಖೆ ನಿಗದಿಪಡಿಸಿದ ಕ್ಯಾಟರಿಂಗ್ ಬೆಲೆಯ ಪ್ರಕಾರ ಪ್ರಯಾಣಿಕರಿಗೆ ಕೇವಲ 20 ರೂಪಾಯಿಗೆಗೆ 7 ಪುರಿ (175 ಗ್ರಾಂ), 150 ಗ್ರಾಂ ಆಲೂ ವೆಜ್ ಮತ್ತು ಉಪ್ಪಿನಕಾಯಿ (12 ಗ್ರಾಂ) ಒಳಗೊಂಡ ಪ್ಯಾಕೆಟ್ ಸಿಗಲಿದೆ.
2ನೇ ವಿಧದ ಊಟದಲ್ಲಿ ರಾಜ್ಮಾ-ರೈಸ್, ಖಿಚ್ಡಿ, ಚೋಲೆ ಕುಲ್ಚೆ, ಚೋಲೆ ಭಾತುರೆ, ಪಾವ್ ಭಾಜಿ ಅಥವಾ ಮಸಾಲಾ ದೋಸೆ ಇರಲಿದ್ದು, ಇದಕ್ಕೆ 50 ರೂಪಾಯಿ ದರ ನಿಗದಿಪಡಿಸಲಾಗಿದೆ. 3 ರೂ.ಗೆ 200 ಎಂಎಲ್ ಪ್ರಮಾಣದ ಕುಡಿಯುವ ನೀರು ಸಿಗಲಿದೆ.
IRCTC (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಈ ಆಹಾರ ಮಳಿಗೆಗಳನ್ನು ಸ್ಥಾಪಿಸುತ್ತಿದ್ದು, ರೈಲಿನಲ್ಲಿ 1 ಲೀಟರ್‌ನ ನೀರಿನ ಬಾಟಲಿಯನ್ನು 15 ರೂ.ಗೆ ಮಾತ್ರ ಮಾರಾಟ ಮಾಡಬೇಕು ಎಂದು ಘೋಷಿಸಿದೆ. ಒಂದು ವೇಳೆ ಹೆಚ್ಚುವರಿ ಶುಲ್ಕ ವಿಧಿಸಿದರೆ, ಯಾವುದೇ ನಿಲ್ದಾಣದಲ್ಲಿ ಅಥವಾ ಆನ್‌ಲೈನ್‌ನಲ್ಲಿ ಪ್ರಯಾಣಿಕರು ದೂರು ದಾಖಲಿಸಬಹುದಾಗಿದೆ.