Internal rift in Congress: CM ರೇಸ್- ಡಿಸೈಡಿಂಗ್ ಫ್ಯಾಕ್ಟರ್ 100 ಸೀಟ್; ಟಿಕೆಟ್ ಗೆಲ್ಲೋರು ಡಿಕೆಶಿ ಬೆಂಬಲಿಗರಾ, ಸಿದ್ದು ಬೆಂಬಲಿಗರಾ
Apr 05, 2023 09:59 AM IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ
Internal rift in Congress: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈಗ 100 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯೇ ಬಹುದೊಡ್ಡ ಸವಾಲು. ಸಿದ್ದು ಬೆಂಬಲಿಗರು ಟಿಕೆಟ್ ಗೆದ್ದರೆ ಸಿದ್ದು ಸಿಎಂ ಫೇಸ್ ಆಗ್ತಾರೆ, ಡಿಕೆಶಿ ಬೆಂಬಲಿಗರು ಟಿಕೆಟ್ ಗೆದ್ದರೆ ಡಿಕೆಶಿ ಸಿಎಂ ಫೇಸ್ ಆಗ್ತಾರೆ ಅನ್ನೋದೇ ಈಗ ಡಿಸೈಡಿಂಗ್ ಫ್ಯಾಕ್ಟರ್ ಎಂಬ ವದಂತಿ ಹರಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಹಳ ಸಲೀಸಾಗಿ ಸಿದ್ಧವಾಯಿತು. ಬಿಡುಗಡೆಯೂ ಆಯಿತು. ಆದರೆ ಎರಡನೇಯದು ಹಾಗಲ್ಲ. ಉಳಿದ ಸ್ಥಾನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪಕ್ಷದ ಹೈಕಮಾಂಡ್‌ಗೆ ಸವಾಲಾಗಿ ಪರಿಣಮಿಸಿದೆ.
ನಾಯಕತ್ವದ ಮೇಲಿನ ಅಸಮಾಧಾನ ಮತ್ತು ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದ ವಿಷಯಗಳು ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನು ಇನ್ನಷ್ಟು ಬಿಗಡಾಯಿಸುವಂತೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಜಾತ್ಯತೀತ ಜನತಾ ದಳ (ಜೆಡಿಎಸ್) ನ ಹನ್ನೆರಡು ನಾಯಕರು ಪಕ್ಷ ಸೇರಿದ್ದು ಅವರೆಲ್ಲರೂ ಟಿಕೆಟ್ ಆಕಾಂಕ್ಷಿಗಳು. ಸಂಭಾವ್ಯ ಅಭ್ಯರ್ಥಿಗಳ ಜತೆಗೆ ಎಲ್ಲರನ್ನೂ ಓಲೈಸಿಕೊಂಡು ಹೋಗುವ ದೊಡ್ಡ ಸವಾಲು ಈಗ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ. ಅದು ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಾರವನ್ನು ದುರ್ಬಲಗೊಳಿಸುವ ಅಪಾಯ ಕಂಡುಬಂದಿದೆ.
ಮಾಜಿ ಮುಖ್ಯಮಂತ್ರಿ, ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಟೆಲಿವಿಷನ್ ಚಾನೆಲ್‌ಗೆ ಸೋಮವಾರ ನೀಡಿದ ಸಂದರ್ಶನದಲ್ಲಿ, ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷವು ನಿರ್ಧರಿಸಿಲ್ಲ. ಈ ಚುನಾವಣೆ ತನ್ನ ಕೊನೆಯ ವಿಧಾನಸಭಾ ಚುನಾವಣೆ. ಮುಖ್ಯಮಂತ್ರಿ ರೇಸ್‌ನಲ್ಲಿ ತಾನಿದ್ದೇನೆ ಎಂದು ಹೇಳಿದ್ದರು. ಆದಾಗ್ಯೂ, ಮಂಗಳವಾರ ತಮ್ಮ ಮಾತುಗಳನ್ನು ಹಿಂಪಡೆಯಲೆತ್ನಿಸಿದ ಅವರು ಹೇಳಿಕೆಯನ್ನು ಭಾಗಶಃ ನಿರಾಕರಿಸಿದರು.
ಸುದ್ದಿ ವಾಹಿನಿಯು ತನ್ನನ್ನು ತಪ್ಪಾಗಿ ಉಲ್ಲೇಖಿಸಿದೆ. ಸಿಎಂ ಆಯ್ಕೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಎಂದು ನಾನು ಹೇಳಿದ್ದೇನೆ. ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಮತ್ತು ಅವರು (ಡಿಕೆ ಶಿವಕುಮಾರ್) ಆಕಾಂಕ್ಷಿ, ಆದರೆ ಅವರು ಹೇಳುತ್ತಿರುವುದು ಸುಳ್ಳು ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು. ಆದರೆ, ಡಿ.ಕೆ.ಶಿವಕುಮಾರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೋಲಾರದಲ್ಲಿ ಸಿದ್ದರಾಮಯ್ಯ ಎರಡನೇ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಇನ್ನೂ ಕರೆ ನೀಡಿಲ್ಲ. ಅವರು ವರುಣಾದಿಂದ ಸ್ಪರ್ಧಿಸುವುದನ್ನು ಪಕ್ಷವು ಈಗಾಗಲೇ ನಿರ್ಧರಿಸಿದೆ. ಕೋಲಾರ ಸ್ಪರ್ಧೆಯ ವಿಚಾರ ಇನ್ನೂ ಚಿಂತನೆಯಲ್ಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷವು 124 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೂ ಬಹು ಆಕಾಂಕ್ಷಿಗಳಿರುವ ಉಳಿದ 100 ಸ್ಥಾನಗಳಲ್ಲಿ ಇನ್ನೂ ಅವರ ಹೆಸರುಗಳನ್ನು ಹೆಸರಿಸಲಾಗಿಲ್ಲ. ಅಭ್ಯರ್ಥಿಗಳ ಘೋಷಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಬ್ಬರೂ ನಾಯಕರು ತಮ್ಮನ್ನು ಬೆಂಬಲಿಸುವ ಟಿಕೆಟ್ ಆಕಾಂಕ್ಷಿಗಳ ಪರವಾಗಿ ಪ್ರಬಲ ಲಾಬಿ ಮಾಡುತ್ತಿದ್ದಾರೆ.ಇಬ್ಬರು ನಾಯಕರು ತಮ್ಮ ಬೆಂಬಲಿಗರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದನ್ನು ದೃಢಪಡಿಸಲು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ಈ ವಿದ್ಯಮಾನದ ಅರಿವು ಇರುವಂತಹ ಕೆಪಿಸಿಸಿ ನಾಯಕರು ಹೇಳಿದ್ದಾರೆ.
ಡಿಕೆಶಿವಕುಮಾರ್‌ಗೆ ಹಳೇಮೈಸೂರು ಪ್ರಾಂತ್ಯ, ಬೆಳಗಾವಿ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮತ ಸೆಳೆಯುವ ಪ್ರಭಾವ ಇದ್ದರೆ, ಸಿದ್ದರಾಮಯ್ಯ ಅವರಿಗೂ ಈ ತಾಕತ್ತಿದೆ. ಆದರೆ ಒಕ್ಕಲಿಗರ ಮತ ಗಳಿಸುವುದು ಸಿದ್ದರಾಮಯ್ಯಗೆ ಕಷ್ಟ. 2013ರ ಚುನಾವಣೆಯಲ್ಲಿ ಅಹಿಂದ ಭಾವ ಜಾಗೃತಗೊಳಿಸಿದ ಸಿದ್ದರಾಮಯ್ಯ ಈ ಸಲವೂ ಪಕ್ಷವನ್ನು ಅಧಿಕಾರಕ್ಕೇರಿಸುವುದು ತುಸು ಕಷ್ಟ. ಈ ಸಲ ಡಿಕೆ ಶಿವಕುಮಾರ್ ಅವರಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿರುವ ಕಾರಣ, ಸಿದ್ದರಾಮಯ್ಯ ಅವರನ್ನು, ಅವರ ಬೆಂಬಲಿಗರನ್ನು ಸೋಲಿಸಲು, ಡಿಕೆ ಶಿವಕುಮಾರ್ ಅದೇ ರೀತಿ ಡಿ.ಕೆ.ಶಿವಕುಮಾರ್ ಮತ್ತು ಬೆಂಬಲಿಗರನ್ನು ಸೋಲಿಸಲು ಸಿದ್ದರಾಮಯ್ಯ ಬಣ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎನ್ನುತ್ತಿವೆ ಪಕ್ಷದ ಮೂಲಗಳು.
ಸೋಮವಾರ ಮತ್ತು ಮಂಗಳವಾರದ ವಿದ್ಯಮಾನವನ್ನು ಗಮನಿಸಿದರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಮುಂತಾದೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್‌ಗೆ ಬಂದು ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರುವವರ ವಿರುದ್ಧ ಆಕ್ರೋಶ ಈ ಸಂದರ್ಭದಲ್ಲಿ ವ್ಯಕ್ತವಾಗಿದೆ. ಮೊಳಕಾಲ್ಮೂರು ಕ್ಷೇತ್ರವನ್ನು ಪ್ರತಿನಿಧಿಸಿರುವ ಎನ್.ವೈ.ಗೋಪಾಲಕೃಷ್ಣ ಅವರು ಬಿಜೆಪಿ ಬಿಟ್ಟು ಮತ್ತೆ ಕಾಂಗ್ರೆಸ್ ಕಡೆ ಮುಖಮಾಡಿರುವುದು ಈ ಪ್ರತಿಭಟನೆಗೆ ಕಾರಣ.
ಪ್ರತಿಭಟನೆಗಳನ್ನು ಗಮನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೇರೆ ಪಕ್ಷದಿಂದ ಬಂದವರನ್ನು ಎಲ್ಲರಿಗೂ ಟಿಕೆಟ್ ನೀಡಲಾಗದು. ಟಿಕೆಟ್ ವಿತರಣೆಯು ಗೆಲ್ಲುವ ಅಂಶದ ಮೇಲೆ ನಿರ್ಧಾರವಾಗುತ್ತದೆ. ಇದರ ಹೊರತು ಬೇರಾವ ಮಾನದಂಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವಿದ್ಯಮಾನವೆಲ್ಲವೂ ಕಾಂಗ್ರೆಸ್‌ನ ಒಳಬೇಗುದಿಯನ್ನು ಬಹಿರಂಗಪಡಿಸಿದ್ದು, ಸಿಎಂ ರೇಸ್‌ಗೆ ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದಲೇ ತಯಾರಿ ನಡೆದಿದೆ ಎಂಬ ಅಂಶ ಎಲ್ಲರಿಗೂ ವೇದ್ಯವಾಗುವಂತೆ ಮಾಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ್ತಷ್ಟು ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
HT ಕನ್ನಡ ವಾಟ್ಸಾಪ್ ಕಮ್ಯುನಿಟಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ