logo
ಕನ್ನಡ ಸುದ್ದಿ  /  ಕರ್ನಾಟಕ  /  New Parliament: ಅದೇನು ಬಿಜೆಪಿ, ಆರೆಸ್ಸೆಸ್ ಕಚೇರಿಯಲ್ಲ, ಸಂಸತ್ ಭವನ ಉದ್ಘಾಟನೆಗೆ ಹೋಗ್ತೀನಿ ಎಂದ ಎಚ್​ಡಿ ದೇವೇಗೌಡ

New Parliament: ಅದೇನು ಬಿಜೆಪಿ, ಆರೆಸ್ಸೆಸ್ ಕಚೇರಿಯಲ್ಲ, ಸಂಸತ್ ಭವನ ಉದ್ಘಾಟನೆಗೆ ಹೋಗ್ತೀನಿ ಎಂದ ಎಚ್​ಡಿ ದೇವೇಗೌಡ

HT Kannada Desk HT Kannada

May 25, 2023 07:45 PM IST

ಸಂಸತ್ ಭವನ ಉದ್ಘಾಟನೆಗೆ ಹೋಗ್ತಾರೆ ಎಚ್​ಡಿಡಿ

    • New parliament inauguration row: ಅದು ದೇಶದ ಆಸ್ತಿ, ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಇದು ದೇಶದ ಕಾರ್ಯಕ್ರಮ, ಯಾರ ವೈಯಕ್ತಿಕ ಕಾರ್ಯಕ್ರಮ ಅಲ್ಲ. ಆ ಭವ್ಯ ಕಟ್ಟಡ ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ. ಅದು ದೇಶಕ್ಕೆ ಸೇರಿದ್ದು. ಹೋಗದೇ ಇರಲು ಅದೇನು ಬಿಜೆಪಿ, ಆರೆಸ್ಸೆಸ್ ಕಚೇರಿಯಲ್ಲ ಎಂದು ಎಚ್​ಡಿ ದೇವೇಗೌಡ ಹೇಳಿದ್ದಾರೆ.
ಸಂಸತ್ ಭವನ ಉದ್ಘಾಟನೆಗೆ ಹೋಗ್ತಾರೆ ಎಚ್​ಡಿಡಿ
ಸಂಸತ್ ಭವನ ಉದ್ಘಾಟನೆಗೆ ಹೋಗ್ತಾರೆ ಎಚ್​ಡಿಡಿ

ಬೆಂಗಳೂರು: ನೂತನ ಸಂಸತ್ ಭವನ ಉದ್ಘಾಟನೆಗೆ ಕಾಂಗ್ರೆಸ್​ ಸೇರಿದಂತೆ 19 ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ. ಆದರೆ, ಕಾರ್ಯಕ್ರಮಕ್ಕೆ ನಾನು ಹೋಗ್ತೀನಿ ಎಂದು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hassan Scandal: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನಿಖರವಾದ ಸಾಕ್ಷಿಗಳಿದ್ದರೆ ಎಲ್ಲರನ್ನೂ ಬಂಧಿಸುತ್ತೇವೆ: ಡಾ.ಪರಮೇಶ್ವರ್‌

Forest Tales: ಅಜಯ್‌ ಮಿಶ್ರ ಎಂಬ ಅಧಿಕಾರಿ ರೂಪಿಸಿದ ಅಂಚೆಯೊಳಗಿನ ಅರಣ್ಯ ಲೋಕ, ನೋಡುವ ಆಸಕ್ತಿಯುಂಟೆ

Breaking News: ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ

Hassan Scandal:ಪ್ರಜ್ವಲ್‌ ಪ್ರಕರಣ, ಹೆಚ್ಚುವರಿ ಇಬ್ಬರು ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ದೇವೇಗೌಡರು, ಅದು ದೇಶದ ಆಸ್ತಿ, ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಇದು ದೇಶದ ಕಾರ್ಯಕ್ರಮ, ಯಾರ ವೈಯಕ್ತಿಕ ಕಾರ್ಯಕ್ರಮ ಅಲ್ಲ. ಆ ಭವ್ಯ ಕಟ್ಟಡ ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ. ಅದು ದೇಶಕ್ಕೆ ಸೇರಿದ್ದು. ಹೋಗದೇ ಇರಲು ಅದೇನು ಬಿಜೆಪಿ, ಆರೆಸ್ಸೆಸ್ ಕಚೇರಿಯಲ್ಲ ಎಂದರು.

ಸಂಸತ್ ಭವನದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ಹಾಜರಾಗುತ್ತಿದ್ದೇನೆ. ಓರ್ವ ಮಾಜಿ ಪ್ರಧಾನಮಂತ್ರಿಯಾಗಿ, ದೇಶದ ಪ್ರಜೆಯಾಗಿ ಭಾಗಿಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯನ್ನು ರಾಜಕೀಯವಾಗಿ ವಿರೋಧ ಮಾಡಲಿಕ್ಕೆ ನನ್ನಲ್ಲಿ ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ರಾಜಕೀಯ ತರುವುದು ನನಗೆ ಇಷ್ಟವಿಲ್ಲ. ನಾನು ಸಂಸತ್ತಿನ ಎರಡು ಸದನಗಳಿಗೆ ಆಯ್ಕೆಯಾಗಿದ್ದೇನೆ. ಅಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ, ಈಗಲೂ ಸದಸ್ಯನಾಗಿದ್ದೇನೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ಸಂವಿಧಾನದ ವಿಷಯದಲ್ಲಿ ನಾನು ರಾಜಕೀಯ ತರಲಾರೆ ಎಂದು ತಮ್ಮ ನಿಲುವು ತಿಳಿಸಿದರು.

ಅನೇಕ ಪಕ್ಷಗಳು ಸಂಸತ್ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಓರ್ವ ಮಾಜಿ ಪ್ರಧಾನಿಯಾಗಿ ನೀವು ಹೋಗುತ್ತೀರಾ? ಇಲ್ಲವಾ? ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಹೌದು, ನಾನು ಸಂವಿಧಾನಕ್ಕೆ ಬದ್ಧನಾಗಿದ್ದೇನೆ. ಅದಕ್ಕಾಗಿ ಸಂಸತ್ ಭವನ ಉದ್ಘಾಟನೆಗೆ ಹೋಗುತ್ತೇನೆ ಎಂದು ಅವರಿಗೆ ಹೇಳಲು ಬಯಸುತ್ತೇನೆ ಎಂದರು.

ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟನೆಗೆ ಮುಂದಾಗಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್‌, ಡಿಎಂಕೆ, ಎನ್‌ಸಿಪಿ, ಆರ್‌ಜೆಡಿ, ಜೆಡಿಯು, ಆರ್‌ಎಲ್‌ಡಿ, ಸಮಾಜವಾದಿ ಪಕ್ಷ, ಸಿಪಿಐ, ಸಿಎಐಎಂ, ಶಿವಸೇನಾ (ಠಾಕ್ರೆ ಬಣ), ಜಾರ್ಖಂಡ್‌ ಮುಕ್ತಿ ಮೋರ್ಚಾ, ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಆಹ್ವಾನ ತಿರಸ್ಕರಿಸಿವೆ. ಶಿರೋಮಳಿ ಅಕಾಲಿ ದಳ, ಬಿಜು ಜನತಾದಳ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ, ಎಐಎಡಿಎಂಕೆ,. ಬಿಎಸ್ಪಿ. ಶಿವಸೇನಾ ( ಶಿಂಧೆ ಬಣ) ಕಾರ್ಯಕ್ರಮದಲ್ಲಿ ಭಾಗಹಿಸುವುದಾಗಿ ಗುರುವಾರ ಪ್ರಕಟಣೆ ಹೊರಡಿಸಿವೆ.

ಪಕ್ಷವನ್ನು ಉಳಿಸುತ್ತೇನೆ

ಪಕ್ಷಕ್ಕಾಗಿ ನನ್ನ ಜೀವ ಸವೆಸಿದ್ದೇನೆ. ನಾನು ಬದುಕಿರುವಷ್ಟು ಕಾಲವೂ ಪಕ್ಷಕ್ಕಾಗಿಯೇ ಬದುಕುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ನಾನು ಪಕ್ಷಕ್ಕೇ ಮೀಸಲು ಎಂದು ಇದೇ ವೇಳೆ ಅವರು ಭಾವುಕರಾಗಿ ನುಡಿದರು.ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂಬುದಕ್ಕೆ ನನಗೆ ಬಹಳ ನೋವಿದೆ. ಅದೇ ನೋವಿನಿಂದ ಕಾಲ ದೂಡಲು ಸಾಧ್ಯವೇ? ಪುಟಿದೆದ್ದು ಪಕ್ಷ ಕಟ್ಟಬೇಕು, ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಹೇಳಿದರು.

ಸೋತಿದ್ದಕ್ಕೆ ಪ್ರಾಮಾಣಿಕವಾಗಿ ಕಾರಣಗಳನ್ನು ಹುಡುಕೋಣ. ಅವುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯೋಣ. 1989ರಲ್ಲಿ ನಮ್ಮ ಪಕ್ಷ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಅದಾದ ಮೇಲೆ ಐದು ವರ್ಷಗಳ ನಂತರ ನಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ನಾನೇ ಮುಖ್ಯಮಂತ್ರಿ ಆದೆ. ಆಮೇಲೆ ಪ್ರಧಾನಿಯೂ ಆದೆ. ಜನರ ಆಶೀರ್ವಾದದಿಂದ ಅದು ಸಾಧ್ಯವಾಯಿತು. ಸೋತಾಗ ನಿರಾಶೆ, ನೋವು ಸಹಜ. ನಾನು ಈ ಎಲ್ಲಾ ಹಂತಗಳನ್ನು ದಾಟಿಕೊಂಡು ಮುಂದೆ ಬಂದಿದ್ದೇನೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಈ ಪಕ್ಷವನ್ನು ಉಳಿಸುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ ಎಂದರು.

    ಹಂಚಿಕೊಳ್ಳಲು ಲೇಖನಗಳು