logo
ಕನ್ನಡ ಸುದ್ದಿ  /  ಕರ್ನಾಟಕ  /  Akkalkot Accident: ಅಕ್ಕಲಕೋಟೆ ಬಳಿ ಭೀಕರ ರಸ್ತೆ ಅಪಘಾತ; ಆಳಂದದ ಮಹಿಳೆ, ಮಗು ಸೇರಿ 6 ಸಾವು-ಹತ್ತು ಜನರಿಗೆ ಗಾಯ

Akkalkot Accident: ಅಕ್ಕಲಕೋಟೆ ಬಳಿ ಭೀಕರ ರಸ್ತೆ ಅಪಘಾತ; ಆಳಂದದ ಮಹಿಳೆ, ಮಗು ಸೇರಿ 6 ಸಾವು-ಹತ್ತು ಜನರಿಗೆ ಗಾಯ

HT Kannada Desk HT Kannada

Jun 30, 2023 09:25 PM IST

google News

ಅಳಂದ ಸಮೀಪದ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

    • ಮೃತಪಟ್ಟವರೆಲ್ಲರೂ ಆಳಂದ ತಾಲೂಕಿನ ಅಣೂರು ಗ್ರಾಮದವರು ಎಂದು ಗೊತ್ತಾಗಿದೆ. ಕ್ರೂಸರ್ ವಾಹನದಲ್ಲಿ ಅಫಜಲಪುರ ತಾಲೂಕಿನ ಘತ್ತರಗಿ ದರ್ಶನ ಮುಗಿಸಿಕೊಂಡು, ಅಕ್ಕಲಕೋಟೆಯ ಸ್ವಾಮಿ ಸಮರ್ಥ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
ಅಳಂದ ಸಮೀಪದ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಅಳಂದ ಸಮೀಪದ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಕಲಬುರಗಿ: ಆಳಂದ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಶಿರವಾಳ ವಾಡಿ ಹೊರ ವಲಯದಲ್ಲಿ ಕ್ರೂಸರ್ ಮತ್ತು ಸಿಮೆಂಟ್ ಬಲ್ಕರ್ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಆಳಂದ ತಾಲೂಕಿನ ಅಣೂರು ಗ್ರಾಮದ 6 ಜನರು ಸಾವನ್ನಪ್ಪಿರುವ ಘಟನೆ ಸಂಜೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಆಳಂದ ತಾಲೂಕಿನ ಅಣೂರು ಗ್ರಾಮದವರು ಎಂದು ಗೊತ್ತಾಗಿದೆ.

ಕ್ರೂಸರ್ ವಾಹನದಲ್ಲಿ ಅಫಜಲಪುರ ತಾಲೂಕಿನ ಘತ್ತರಗಿ ದರ್ಶನ ಮುಗಿಸಿಕೊಂಡು, ಅಕ್ಕಲಕೋಟೆಯ ಸ್ವಾಮಿ ಸಮರ್ಥ ದರ್ಶನ ಮುಗಿಸಿಕೊಂಡು ವಾಪಸ್ಸು ಬರುವಾಗ ಈ ದುರಂತ ನಡೆದಿದೆ. ಎರಡು ಕುಟುಂಬಗಳ ಸದಸ್ಯರು ಇದ್ದರೆಂದು ಗೊತ್ತಾಗಿದೆ. ಸತ್ತವರಲ್ಲಿ ಐವರು ಮಹಿಳೆಯರು ಹಾಗೂ ಒಂದು ಮಗು ಸೇರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಗ್ರಾಮಸ್ಥರ ಮಾಹಿತಿಯೂ ಕಲೆ ಹಾಕಲಾಗುತ್ತಿದೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವೂ ನಡೆದಿದೆ ಎಂದು ಆಳಂದ ಸಿಪಿಐ ಮಹಾದೇವ ಪಂಚಮುಖಿ ಹಾಗೂ ಡಿವೈಎಸ್‌ಪಿ ತಿಳಿಸಿದ್ದಾರೆ.

ಅಪಘಾತದ ತೀವ್ರತೆಗೆ ಕ್ರೂಸರ್‌ನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟರೆ, 10 ಮಂದಿ ಗಾಯಗೊಂಡರು. ರಸ್ತೆಯ ಮೇಲೆಯೇ ಮೃತದೇಹಗಳು ಇದ್ದವು. ವಿಷಯ ತಿಳಿದ ಸಮೀಪದ ಹಳ್ಳಿಗಳ ಜನರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ನೆರವಾದರು. ಅಕ್ಕಲಕೋಟ ಮತ್ತು ಅಳಂದ ಪೊಲೀಸರಿಗೆ ಜನರು ಫೋನ್ ಮಾಡಿ ವಿಷಯ ಮುಟ್ಟಿಸಿದರು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತರ ವಿವರ

ಅಪಘಾತದಲ್ಲಿ ಮೃತಪಟ್ಟವರ ವಿವರಗಳನ್ನು ಪೊಲೀಸರು ಒದಗಿಸಿದ್ದಾರೆ. ಮೃತರನ್ನು ಲಲಿತಾ ಬುಗ್ಗೆ (50), ಸುಂದರಬಾಯಿ (55), ರೋಹಿಣಿ ಪೂಜಾರಿ (40), ಸಾಯಿನಾಥ ಪೂಜಾರಿ (10), ಛಾಯಾ (46), ಸಂಗೀತಾ ಮಾನೆ (35) ಎಂದು ಗುರುತಿಸಲಾಗಿದೆ.

ಗಾಯಾಳುಗಳ ವಿವರ

ಗಾಯಾಳುಗಳನ್ನು ರೇಖಾ ಗೋವಿಂದ ಪೂಜಾರಿ, ಸುಮಿತ್ ಪೂಜಾರಿ, ವಿಠ್ಠಲ್ ನಾನವರೆ, ಗೋಪಾಲ ಪೂಜಾರಿ, ನಾಗೇಶ ಕುಂಡಾಳೆ, ಅಜಿತ್ ಕುಂಡಾಳೆ, ಕೋಮಲ್ ಶಾಮಂಡೆ, ಸುನಿಲ್ ಪಾಂಚಾಲ್, ಅಶೋಕ್ ಕುಂಡಾಳೆ ಎಂದು ಗುರುತಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ