ಕೆಲವೊಮ್ಮೆ ನಮ್ಮವರೇ ಶಾಮೀಲಾಗಿರುತ್ತಾರೆ: ಆರ್‌ಡಿ ಪಾಟೀಲ್ ಪರಾರಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
Nov 08, 2023 09:13 PM IST
ಸಚಿವ ಪ್ರಿಯಾಂಕ್ ಖರ್ಗೆ (ಎಡಚಿತ್ರ). ಆರೋಪಿ ಆರ್‌ಡಿ ಪಾಟೀಲ (ಬಲಚಿತ್ರ)
ಸರ್ಕಾರದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಒಂದಿಬ್ಬರು ಕಾಪಿ ಮಾಡಿರಬಹುದು ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಕಲಬುರಗಿ: ಕೆಲವೊಮ್ಮೆ ಮಾಹಿತಿ ಸಿಗಲ್ಲ ಕೆಲವೊಮ್ಮೆ ಮಾಹಿತಿ ಕೊಟ್ಟರೂ ಕೂಡಾ ಕಾರಣಾಂತರಗಳಿಂದ ಕ್ರಮ ಮಾಡಲಾಗಿರುವುದಿಲ್ಲ. ಕೆಲವೊಮ್ಮೆ ನಮ್ಮವರೇ ಶಾಮೀಲಾಗಿರುತ್ತಾರೆ ಎಂದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಬುಧವಾರ (ನ 8) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಎಪಿ ಪರೀಕ್ಷೆಯ ಪ್ರಕರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಪರಾರಿ ಕುರಿತು ಪ್ರತಿಕ್ರಿಯಿಸಿದರು.
ನಮ್ಮವರು ಅಕ್ರಮದಲ್ಲಿ ಶಾಮೀಲಾಗಿರುವುದು ಕಂಡುಬಂದರೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಜವಾಬ್ದಾರಿಯಿಂದ ಜಾರಿಕೊಳ್ಳುವುದಿಲ್ಲ. ಆರ್‌ಡಿ ಪಾಟೀಲ್ ಪ್ರಕರಣದಲ್ಲಿ ಈಗಾಗಲೇ ಒಂದು ಮೊಬೈಲ್ ಸಿಕ್ಕಿದೆ. ಅದನ್ನು ವಿಧಿವಿಜ್ಞಾನ ಸಂಸ್ಥೆಗೆ ಕಳಿಸಲಾಗಿದೆ. ಈ ಹಂತದಲ್ಲಿ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದರು.
ಸರ್ಕಾರದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಒಂದಿಬ್ಬರು ಕಾಪಿ ಮಾಡಿರಬಹುದು. ಕೆಲವು ಕಡೆ ಬ್ಲೂಟೂಥ್ ಬಳಕೆಯಾಗಿದೆ. ಕಲಬುರಗಿ ಮಾತ್ರ ಅಲ್ಲದೇ ಯಾದಗಿರಿ, ವಿಜಯಪುರದಲ್ಲಿ, ಹುಬ್ಬಳ್ಳಿಯಲ್ಲಿ ಹಾಗೂ ಬೆಂಗಳೂರಿನಲ್ಲಿಯೂ ಕೂಡಾ ಇಂಥ ಘಟನೆಗಳು ನಡೆದಿವೆ. ಲೋಪಗಳ ಕುರಿತು ಪರಿಶೀಲನೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಓಎಂಆರ್ ನಮ್ಮ ಜಿಲ್ಲೆಯಲ್ಲಿ ನಡೆದಿಲ್ಲ, ಬೇರೆ ಕಡೆ ನಡೆದಿದೆ. ಓಎಂಆರ್ ಹೊರಗಡೆ ಬಂದಿದೆ ಎಂದರೆ ಯಾರಾದರೂ ಮೊಬೈಲ್ ಬಳಸಿರಬಹುದು. ಇದು ರಾಜ್ಯದ ಬೇರೆ ಬೇರೆ ಕಡೆ ನಡೆದಿದೆ. ಹಾಗಾಗಿ ಈ ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಯುತ್ತಿದೆ ಅದರ ವರದಿ ಆಧರಿಸಿ ಪ್ರಕರಣವನ್ನು ಸಿಓಡಿಗೆ ಅಥವಾ ಸಿಬಿಐ ಗೆ ಕೊಡುವ ಕುರಿತು ಗೃಹ ಸಚಿವರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಆರ್ ಡಿ ಪಾಟೀಲ್ ಗೆ ಪ್ರಿಯಾಂಕ್ ಖರ್ಗೆ ಅವರ ಶ್ರೀ ರಕ್ಷೆ ಇದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಟಾಂಗ್ ನೀಡಿದ ಅವರು ಈ ಹಿಂದೆ ಪಿಎಸ್ ಐ ಪರೀಕ್ಷೆ ನಡೆದಾಗ ಯಾವ ಸಂಸದರು ಶಾಲೆಯೊಂದರಲ್ಲೇ ಪರೀಕ್ಷೆ ನಡೆಯಬೇಕು ಪತ್ರ ಬರೆದಿದ್ದರು. ಯಾವ ಶಾಸಕರು ಶಾಸಕರ ಭವನದಲ್ಲೇ ಡೀಲ್ ಮಾಡಿದ್ದರು. ಅಂದಿನ ಗೃಹ ಸಚಿವರ ಆರೋಪಿತರ ಮನೆಗೆ ಹೋಗಿ ಗೋಡಂಬಿ ಚಹಾ ಸೇವನೆ ಮಾಡಿದ್ದರು. ಮಾಜಿ ಸಚಿವರೊಬ್ಬರು ಆರೋಪಿಗಳ ಬಂಧನವಾದಾಗ ಬಿಡುಗಡೆ ಮಾಡಲು ಕೋರಿದ್ದರು. ಈಗ ನಮ್ಮ ಬಗ್ಗೆ ನನ್ನ ಶಾಸಕರ ಬಗ್ಗೆ ಅನುಮಾನಗಳಿದ್ದರೆ ಬಿಜೆಪಿ ದಾಖಲೆ ನೀಡಲಿ. ನನಗೆ ಆರ್‌ಡಿ ಪಾಟೀಲ್ ಆತ್ಮೀಯನಿದ್ದರೆ ಬಿಜೆಪಿಯವರು ಯಾಕೆ ಅವನನ್ನು ಬಂಧಿಸಲಿಲ್ಲ. ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
32 ಆರೋಪಿಗಳ ಬಂಧನ
ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರದ ವಿವಿಧ ಹುದ್ದೆಗಳಿಗೆ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಪಟ್ಟಂತೆ ಕಲಬುರಗಿ ಜಿಲ್ಲೆಯಲ್ಲಿ 13 ಜನ, ಯಾದಗಿರಿ ಜಲ್ಲೆಯಲ್ಲಿ 19 ಮಂದಿ ಸೇರಿದಂತೆ ಒಟ್ಟು 32 ಜನರನ್ನು ಬಂಧಿಸಲಾಗಿದ್ದು, ಈ ಪ್ರಕರಣ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ರುದ್ರಗೌಡ ಪಾಟೀಲ್ (ಆರ್.ಡಿ.ಪಾಟೀಲ್) ನನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.