Kalaburagi News: ಬಾಲಕಿಯ ಅತ್ಯಾಚಾರಗೈದು ಬಾವಿಗೆ ಎಸೆದ ಕಾಮುಕರು
Jul 20, 2023 10:46 AM IST
ಸಾಂದರ್ಭಿಕ ಚಿತ್ರ (HT PHOTO)
- Crime News: ಎರಡು ದಿನಗಳ ಹಿಂದೆ ಮನೆ ಪಕ್ಕದಲ್ಲಿ ಓದಲು ಹೋಗಿದ್ದ ಬಾಲಕಿ ಮನೆಗೆ ಬಾರದಿದ್ದಾಗ ಒಂದು ದಿನದ ನಂತರ ಪೊಲೀಸ್ ಠಾಣೆಗೆ ಹೋಗಿ ಕಾಣೆಯಾಗಿದ್ದಾಳೆಂದು ಪಾಲಕರು ದೂರು ನೀಡಿದ್ದರು. ಸೋಮವಾರ ಗ್ರಾಮದ ಸೀಮಾಂತರದ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಕಲಬುರಗಿ: 12 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ ಕಾಮುಕರು ಬಾವಿಗೆ ಎಸೆದು ಹೋದ ಅಮಾನುಷ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಮನೆ ಪಕ್ಕದಲ್ಲಿ ಓದಲು ಹೋಗಿದ್ದ ಬಾಲಕಿ ಮನೆಗೆ ಬಾರದಿದ್ದಾಗ ಒಂದು ದಿನದ ನಂತರ ಪೊಲೀಸ್ ಠಾಣೆಗೆ ಹೋಗಿ ಕಾಣೆಯಾಗಿದ್ದಾಳೆಂದು ಪಾಲಕರು ದೂರು ನೀಡಿದ್ದರು. ಸೋಮವಾರ ಗ್ರಾಮದ ಸೀಮಾಂತರದ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಈ ಘಟನೆ ತಲ್ಲಣಗೊಳಿಸಿದ್ದು, ವರ್ಷದ ಹಿಂದೆ ಇದೇ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಕಬ್ಬಿನ ಗದ್ದೆಯಲ್ಲಿ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನುಷ ಕೃತ್ಯ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಸಮಾಜ ತಲೆ ತಗ್ಗಿಸುವಂತಾಗಿದೆ.
ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆ ಪೊಲೀಸರು ಅತ್ಯಾಚಾರ ಹಾಗೂ ಕೊಲೆ ಎಂದು ದೂರು ಸ್ವೀಕರಿಸಿದ್ದು, ಆರೋಪಿಗಳ ಶೋಧನಾ ಕಾರ್ಯ ಚುರುಕುಗೊಳಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ನಿರೀಕ್ಷಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಇಶಾ ಪಂತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅತ್ಯಾಚಾರ ಹಾಗೂ ಕೊಲೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಕುಟುಂಬಸ್ಥರೊಡನೆ ಗ್ರಾಮಸ್ಥರು, ರಾಜಕೀಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ರಾತ್ರಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ ಅವರು ಪ್ರತಿಭಟನಾಕಾರರ ಬಳಿ ಬಂದು ಮನವಿ ಸ್ವೀಕರಿಸಿ,ಅವರನ್ನು ಸಮಾಧಾನಪಡಿಸಿ, ಆರೋಪಿಗಳನ್ನು ತಕ್ಷಣವೇ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.