Gandhari Vidye: ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಎಲ್ಲಾ ಕೆಲಸವನ್ನೂ ಮಾಡ್ತಾರೆ ಈ ಮಕ್ಕಳು; ಗಾಂಧಾರಿ ವಿದ್ಯೆ ಕಲಿತ ಚಿಂಚೋಳಿಯ ವಿದ್ಯಾರ್ಥಿಗಳು
Jul 03, 2023 06:30 AM IST
ಗಾಂಧಾರಿ ವಿದ್ಯೆ ಕಲಿತ ಚಿಂಚೋಳಿಯ ವಿದ್ಯಾರ್ಥಿಗಳು
- Gandhari Vidye: ಅಂದು ಗಾಂಧಾರಿ ಗಂಡನಿಗೆ ಕಣ್ಣಿಲ್ಲ ಎಂದು ಕಣ್ಣಿದ್ದು ತಾನೂ ಕುರುಡಳಾಗಿದ್ಲು. ಇಂದು ಚಿಂಚೋಳಿಯ ಮಕ್ಕಳು ಕೂಡ ಕಣ್ಣಿದ್ದು ಕುರುಡರಾಗೇ ಓದೋದು, ಬರೆಯೋದು, ಟಿವಿ ನೋಡೋದು, ಸೈಕಲ್-ಬೈಕ್ ಓಡ್ಸೋದು ಮಾಡ್ತಿದ್ದಾರೆ.
ಕಲಬುರಗಿ: ಅಂದು ಮಹಾಭಾರತದಲ್ಲಿ ಗಾಂಧಾರಿ ಗಂಡನಿಗೆ ಕಣ್ಣಿಲ್ಲ ಎಂದು ಕಣ್ಣಿದ್ದು ತಾನೂ ಕುರುಡಳಾಗಿದ್ಲು. ಇಂದು ಚಿಂಚೋಳಿಯ ಮಕ್ಕಳು ಕೂಡ ಕಣ್ಣಿದ್ದು ಕುರುಡರಾಗೇ ಓದುವುದು, ಬರೆಯುವುದು, ಟಿವಿ ನೋಡುವುದು, ಸೈಕಲ್ ತುಳಿಯುವುದು, ಮೊಬೈಲ್ ಬಳಸುವುದು, ಕೇರಮ್ ಆಡುವುದು, ಕಲರ್ ಪೆನ್ಸಿಲ್ ಗುರುತಿಸುತ್ತಾರೆ. ಮಿನಿ ಮಲೆನಾಡು ಎಂದೇ ಹೆಸರುವಾಸಿಯಾದ ಜಿಲ್ಲೆಯ ಚಿಂಚೋಳಿಯ ಮೂವರು ಮಕ್ಕಳು ಈ ಗಾಂಧಾರಿ ವಿದ್ಯೆಯನ್ನು ಕಲಿತಿದ್ದಾರೆ.
ಮಂಜುನಾಥ ಗುರೂಜಿಯಿಂದ ಕಲಿಕೆ
ಚಿಂಚೋಳಿ ಪಟ್ಟಣದ ಡಾ.ವೀರೇಂದ್ರ ಪಾಟೀಲ್ ಶಾಲೆಯ 4ನೇ ತರಗತಿಯಲ್ಲಿ ಅಭ್ಯಾಸ ಮಾಡುವ ಗುರುಪ್ರಸಾದ್, 6ನೇ ತರಗತಿಯ ಪ್ರಜ್ವಲ್ ಹಾಗೂ 7ನೇ ತರಗತಿಯ ಪ್ರತೀಕ್ ಈ ಗಾಂಧಾರಿ ವಿದ್ಯೆ ಕಲಿತ ಮಕ್ಕಳು. ಬಳ್ಳಾರಿಯ ಕೊಟ್ಟೂರಿನ ಜಾಗಟಗೇರಾದ ಆನಂದ ಯೋಗಾಶ್ರಮದಲ್ಲಿ ಮಂಜುನಾಥ ಗುರೂಜಿ ಅವರಿಂದ 10 ದಿನಗಳ ಕಾಲ ಈ ಗಾಂಧಾರಿ ವಿದ್ಯೆ ಕಲಿತಿದ್ದಾರೆ. ಅಲ್ಲಿಂದ ಬಂದ ಮಕ್ಕಳು ಮನೆಯಲ್ಲೂ ನಿರಂತರ ಅಭ್ಯಾಸ ಮಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ಮುಂದೆ ಏನಿದೆ ಎಂಬುದನ್ನು ಹೇಳುತ್ತಾರೆ.
ನೀವು ಯಾವುದೇ ನೋಟ್ (ರೂಪಾಯಿ) ನೀಡಿದರೂ, ಗುರುತಿಸುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಸಲೀಸಾಗಿ ಸೈಕಲ್ ತುಳಿಯುತ್ತಾರೆ. ಕೈಗೆ ಏನೇ ಕೊಟ್ಟರೂ ಅದರಲ್ಲಿ ಏನು ಬರೆದಿದೆ ಎಂಬುದನ್ನೂ ಕ್ಷಣಾರ್ಧದಲ್ಲಿ ಉತ್ತರಿಸುತ್ತಾರೆ. ಈ ಮಕ್ಕಳು ಕೇವಲ 10 ದಿನದಲ್ಲೇ ಈ ಗಾಂಧಾರಿ ವಿದ್ಯೆ ಕಲಿತು ಕರಗತ ಮಾಡಿಕೊಂಡಿರುವುದು ವಿಶೇಷ.
ವಿದ್ಯಾರ್ಥಿಗಳ ಮಾತು
ಗಾಂಧಾರಿ ವಿದ್ಯೆ ಕಲಿತ ಈ ಮಕ್ಕಳು ತಮ್ಮ ಪಾಲಕರೊಂದಿಗೆ ಕಲಬುರಗಿ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆಶ್ರಮದಲ್ಲಿ ಮಂಜುನಾಥ ಗುರೂಜಿ ಅವರು 10 ದಿನ ಬೆಳಗ್ಗೆ ನಾಲ್ಕು ಗಂಟೆಗೆ ಎಬ್ಬಿಸಿ ಕ್ಯಾಂಡಿಲ್ ತೋರಿಸುವರು, ಆ ಬಳಿಕ ಸೂರ್ಯೋದಯ ತೋರಿಸುವರು, ಸೂರ್ಯ ಮುಳುಗುವುದು ತೋರಿಸುವರು ಮತ್ತು ವಿವಿಧ ವಸ್ತುಗಳನ್ನು ತೋರಿಸಿ ಗುರುತಿಸುವ ವಿದ್ಯೆ ಕಲಿಸಿದ್ದಾರೆ ಎಂದರು.
ಪೋಷಕರಿಗೆ ಸಂತೋಷ
ವಿಜಯಲಕ್ಷ್ಮಿ ರಾಚೋಟಿ ಮತ್ತು ಮಲ್ಲಿಕಾರ್ಜುನ ರಾಚೋಟಿ ಮಾತನಾಡಿ, ಪ್ರಜ್ವಲ್ ಮತ್ತು ಪ್ರತೀಕ್ ನಮ್ಮ ಮಕ್ಕಳಾಗಿದ್ದು, ಗುರುಪ್ರಸಾದ್ ನಮ್ಮ ಅಳಿಯ. ಈ ಮೂವರನ್ನು ಮೇ ತಿಂಗಳಲ್ಲಿ ಬೇಸಿಗೆ ಶಿಬಿರವೆಂದು ಆನಂದ ಯೋಗಾಶ್ರಮದಲ್ಲಿ ಮಂಜುನಾಥ ಗುರೂಜಿ ಅವರ ಬಳಿ ಕಳುಹಿಸಲಾಗಿತ್ತು. ತಲಾ 10 ಸಾವಿರ ರೂಪಾಯಿ ಪಡೆದುಕೊಂಡು 10 ದಿನಗಳ ಕಾಲ ಊಟ, ವಸತಿಯೊಂದಿಗೆ ಈ ಗಾಂಧಾರಿ ವಿದ್ಯೆ ಕಲಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಂತೆ ನಿರಂತರ 3 ತಿಂಗಳ ಅಭ್ಯಾಸ ಮಾಡಿದ ಮಕ್ಕಳು ಈಗ ಎಲ್ಲವೂ ಲೀಲಾಜಾಲವಾಗಿ ಕಣ್ಣು ಕಟ್ಟಿಕೊಂಡು ಮಾಡುತ್ತಾರೆ ಎಂದು ಹೇಳಿದರು.
ಈ ಗಾಂಧಾರಿ ವಿದ್ಯೆಯಿಂದ ಮಕ್ಕಳ ಬುದ್ಧಶಕ್ತಿ ಹೆಚ್ಚಾಗಿದೆ. ಅವರ ಮನಸ್ಸು ಜಾಗೃತಗೊಂಡಿದೆ. ಯಾವಾಗಲೂ ಈ ಮಕ್ಕಳು ಲವಲವಿಕೆಯಿಂದ ಚೈತನ್ಯರಾಗಿ ಇರುತ್ತಾರೆ. ದಿನವೂ ಕೆಲವು ಗಂಟೆ ಈ ಗಾಂಧಾರಿ ವಿದ್ಯೆ ಅಭ್ಯಾಸ ಮಾಡುತ್ತಾರೆ. ನಮ್ಮ ಮಕ್ಕಳ ಪ್ರತಿಭೆ ನೋಡಿ ನಮಗೆ ಆನಂದವಾಗಿದೆ ಎನ್ನುತ್ತಾರೆ ಪಾಲಕರು.
ಏನಿದು ಗಾಂಧಾರಿ ವಿದ್ಯೆ?
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 3ನೇ ಕಣ್ಣಿನಿಂದ ನೋಡುವ ವಿದ್ಯೆಗೆ ಗಾಂಧಾರಿ ವಿದ್ಯೆ ಎನ್ನುತ್ತಾರೆ. ಶಿವನಿಗೆ ಮೂರನೇ ಕಣ್ಣಿದೆ ಅಂತ ಕೇಳಿರುತ್ತೇವೆ. ಅದೇ ಕಣ್ಣು ಮನುಷ್ಯ, ಪ್ರಾಣಿ, ಪಕ್ಷಿಗಳಿಗೂ ಇರುತ್ತೆ ಅನ್ನೋದು ಈ ವಿದ್ಯೆಯ ಸಾರಾಂಶ. ಶರೀರದಲ್ಲಿನ 72 ಸಾವಿರ ನಾಡಿಗಳಲ್ಲಿನ ಹಿಡನಾಡಿ, ಪಿಂಗಳನಾಡಿ ಹಾಗೂ ಶುಷಮ್ನನಾಡಿ ಸಹಾಯದಿಂದ ಈ ವಿದ್ಯೆ ಕರಗತವಾಗುತ್ತೆ.
ಇವುಗಳ ಜೊತೆ ಮೂಲಧಾರ, ಸ್ವಾಧಿಷ್ಠಾನ, ಮಣಿಪುರಕ, ಅನಾಥ, ವಿಶುದ್ಧಿ, ಆಜ್ಞಾ, ಸಹಸ್ರರ ಎಂಬ ಏಳು ಸುಪ್ತ ಚಕ್ರಗಳು ಕೆಲಸ ಮಾಡುತ್ತವೆ. ಇದರಲ್ಲಿ ಆಜ್ಞಾ ಚಕ್ರಕ್ಕೆ ಸೂಕ್ಷ್ಮ ವಿಚಾರವನ್ನು ಗ್ರಹಿಸುವ ಶಕ್ತಿ ಇದೆ. ಇದನ್ನು ಬಳಸಿ ಮಕ್ಕಳು ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಬೇಗ ಜಾಗೃತಯಾಗ್ತಾರೆ ಎಂದು ಹೇಳಲಾಗುತ್ತಿದೆ.
(ಮಾಹಿತಿಗೆ ಪ್ರತೀಕ್ ತಂದೆ ಮಲ್ಲಿಕಾರ್ಜುನ ರಾಚೋಟಿ 9740487586)