logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburgi News: ಬಾಲಕಿ ಮೇಲೆ ವೃದ್ದನಿಂದ ಅತ್ಯಾಚಾರ, ಅಳಂದ ಪಟ್ಟಣದಲ್ಲಿ ಮಿಂಚಿನ ಪ್ರತಿಭಟನೆ; ಕಲಬುರ್ಗಿಯಲ್ಲಿ ಗುಂಡು ಹಾರಿಸಿದವನ ಬಂಧನ

Kalaburgi News: ಬಾಲಕಿ ಮೇಲೆ ವೃದ್ದನಿಂದ ಅತ್ಯಾಚಾರ, ಅಳಂದ ಪಟ್ಟಣದಲ್ಲಿ ಮಿಂಚಿನ ಪ್ರತಿಭಟನೆ; ಕಲಬುರ್ಗಿಯಲ್ಲಿ ಗುಂಡು ಹಾರಿಸಿದವನ ಬಂಧನ

HT Kannada Desk HT Kannada

Aug 27, 2023 05:09 PM IST

google News

ಕಲಬುರ್ಗಿಯಲ್ಲಿ ಗುಂಡು ಹಾರಿಸಿದ ಸ್ಥಳ (ಎಡಚಿತ್ರ), ಅಳಂದ ಪಟ್ಟಣದಲ್ಲಿ ಪ್ರತಿಭಟನೆ (ಬಲಚಿತ್ರ)

    • Crime News: ಅಮಾನವೀಯ, ಆಘಾತಕಾರಿ ಸುದ್ದಿ ಕೇಳಿ ಕೆರಳಿದ ಜನರು ಹಾಗೂ ವರ್ತಕರು ಆರೋಪಿ ಬಂಧನಕ್ಕೆ ಆಗ್ರಹಿಸಿ ಮಿಂಚಿನ ಪ್ರತಿಭಟನೆ ನಡೆಸಿದರು.
ಕಲಬುರ್ಗಿಯಲ್ಲಿ ಗುಂಡು ಹಾರಿಸಿದ ಸ್ಥಳ (ಎಡಚಿತ್ರ), ಅಳಂದ ಪಟ್ಟಣದಲ್ಲಿ ಪ್ರತಿಭಟನೆ (ಬಲಚಿತ್ರ)
ಕಲಬುರ್ಗಿಯಲ್ಲಿ ಗುಂಡು ಹಾರಿಸಿದ ಸ್ಥಳ (ಎಡಚಿತ್ರ), ಅಳಂದ ಪಟ್ಟಣದಲ್ಲಿ ಪ್ರತಿಭಟನೆ (ಬಲಚಿತ್ರ)

ಕಲಬುರ್ಗಿ: ಅರು ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಪೈಶಾಚಿಕ, ಅಮಾನವೀಯ ಕೃತ್ಯ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ಘಟನೆ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದರಿಂದ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ತಾಲೂಕಿನಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಕಹಿ ಮಾಸುವ ಮುನ್ನ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಮಾನವೀಯ, ಆಘಾತಕಾರಿ ಸುದ್ದಿ ಕೇಳಿ ಕೆರಳಿದ ಜನರು ಹಾಗೂ ವರ್ತಕರು ಆರೋಪಿ ಬಂಧನಕ್ಕೆ ಆಗ್ರಹಿಸಿ ಮಿಂಚಿನ ಪ್ರತಿಭಟನೆ ನಡೆಸಿದರು. ಅಂಗಡಿಗಳನ್ನು ಬಂದ್ ಮಾಡಿ ಪೊಲೀಸ್ ಠಾಣೆಗೂ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸುದ್ದಿ ತಿಳಿಯುತ್ತಲೇ ಎಸ್‌ಪಿ ಇಶಾ ಪಂತ್ ಸ್ಥಳಕ್ಕೆ ಆಗಮಿಸಿ ಸ್ಥಿತಿಗತಿ ಅವಲೋಕನ ನಡೆಸಿದರು. ಘಟನೆ ಮಾಹಿತಿ ಕಲೆ ಹಾಕಿ ಕೂಡಲೇ ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡರು. ಪ್ರತಿಭಟನಾಕಾರರ ಜತೆಗೆ ಸಮಾಲೋಚಿಸಿ, ಅವರನ್ನು ಸಮಾಧಾನಪಡಿಸಿದರು. ಆರೋಪಿಯನ್ನು ಬಂಧಿಸಿದ್ದು, ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಘಟನೆ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಡಿವೈಎಸ್‌ಪಿ ಗೋಪಿ ಆರ್, ಸಿಪಿಐ ಭಾಸು ಚವ್ಹಾಣ್, ಮಹಾದೇವ ಪಂಚಮುಖಿ, ಪಿಎಸ್‌ಐಗಳಾದ ದಿನೇಶ ಟಿ., ವಾತ್ಸಲ್ಯ ಬಿರಾದಾರ, ಗಂಗಮ್ಮ, ರಾಹುಲ್ ಪವಾಡ ನೇತೃತ್ವದಲ್ಲಿ ಎಲ್ಲೆಡೆ ಕಣ್ಗಾವಲು ಹಾಕಲಾಗಿದೆ. ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ಮತ್ತು ಡಿಎಆರ್ ತಂಡಗಳನ್ನು ನಿಯೋಜಿಸಲಾಗಿತ್ತು.

ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯರ ಅತ್ಯಾಚಾರ, ಕೊಲೆ ಹೆಚ್ಚುತ್ತಿವೆ. ಪೊಲೀಸರು ನಿಷ್ಕಾಳಜಿ ಮಾಡುತ್ತಿದ್ದಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ಶಾಲಾ-ಕಾಲೇಜಿಗೆ ಬರಲು ವಿದ್ಯಾರ್ಥಿನಿಯರು ಹಿಂದೇಟು ಹಾಕುವಂತಹ ಸ್ಥಿತಿ ಸೃಷ್ಟಿಯಾಗಿದೆ. ಪೊಲೀಸರು ಏಕೆ ಗಂಭೀರತೆ ಪ್ರದರ್ಶಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುಂಡು ಗೌಳಿ, ತುಳಸಿರಾಮ ನರೋಟಿ, ಅನೀಲ ಕಡಗಂಚಿ, ಮೌನೇಶ ಸುತಾರ, ಧರ್ಮ ಬಂಗರಗಾ ನೇತೃತ್ವದಲ್ಲಿ ಪ್ರತಿಭಟನೆ ತೀವ್ರಗೊಂಡಿತು. ಪೊಲೀಸರು ಆರೋಪಿಯನ್ನು ಬಂಧಿಸಿದ ಬಳಿಕವೇ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಶ್ನೆ ಕೇಳಿದ್ದಕ್ಕೆ ಫೈರಿಂಗ್ ಮಾಡಿ ಪೊಲೀಸ್ ಅತಿಥಿಯಾದ ಭೂಪ

ಅಪರಿಚಿತರು ಯಾರೋ ರಾತ್ರಿ ಹೊತ್ತಲ್ಲಿ ಏರಿಯಾದಲ್ಲಿ ಬಂದು ಅನುಮಾನಸ್ಪದವಾಗಿ ಓಡಾಡುತ್ತ ಇದ್ದರೆ ಸಹಜವಾಗಿ ಏರಿಯಾದವರಿಗೆ ಯಾರು ಇತ ಯಾಕೆ ಬಂದಿದ್ದಾನೆ ಎಂಬ ಅನುಮಾನ ಬರೋದು ಸಹಜ. ಅದೇ ಮಾದರಿಯಲ್ಲಿ ಕಲಬುರ್ಗಿ ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿ ವ್ಯಕ್ತಿಯೊಬ್ಬ 'ಯಾರು ನೀವು' ಎಂದು ಪ್ರಶ್ನೆ ಮಾಡಿದ್ದಕ್ಕೆ ಗನ್ ತೆಗೆದುಕೊಂಡು ಫೈರಿಂಗ್ ಮಾಡಿದ್ದಾನೆ. ಅದೃಷ್ಟವಶಾತ್ ಪ್ರಶ್ನೆ ಮಾಡಿದ ವ್ಯಕ್ತಿ ಬಚಾವ್ ಆಗಿದ್ದಾನೆ. ಆಳಂದ ತಾಲೂಕಿನ ಭೂಸನೂರ ಗ್ರಾಮದ ಮುಖಂಡ ಸುನೀಲ್ ಕುಮಾರ ಯಳವಂತಗಿ ಎಂಬಾತ ಗುಂಡು ಹಾರಿಸಿದ್ದು, ಮಹಾಲಕ್ಷ್ಮೀ ಲೇಔಟ್ ನಿವಾಸಿ ಉಮೇಶ ಎಂಬಾತ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ.

ಉಮೇಶ್ ಅವರ ಶುಕ್ರವಾರ ಮಧ್ಯರಾತ್ರಿ ತಮ್ಮ ಏರಿಯಾದಲ್ಲಿ ಸ್ನೇಹಿತನ ಜೊತೆ ವಾಕ್ ಮಾಡುತ್ತಿದ್ದರು. ಆಗ ವೈಟ್ ಕಲರ್ ಸ್ಕಾರ್ಪಿಯೋ ಕಾರ್ ಕಾಣಿಸಿತು. ಮಹಾಲಕ್ಷ್ಮಿ ಲೇಔಟ್ ನ ಲಿಂಗರಾಜು ಎಂಬುವರ ಮನೆಯಲ್ಲಿ ಬಾಡಿಗೆಯಿದ್ದ ಕಾವೇರಿ ಎಂಬುವರ ಮನೆಗೆ ಸುನೀಲ್ ಕುಮಾರ ಪಾಟೀಲ್ ಬಂದಿದ್ದ. ಆಗ ಉಮೇಶ ಇದ್ಯಾರೋ ಹೊಸಬ ಈ ರಾತ್ರಿ ನಮ್ಮ ಏರಿಯಾಗೆ ಬಂದಿದ್ದಾನೆವೆಂದು ಅನುಮಾನ ಬಂದು ಆತನನ್ನು ಯಾರು ನೀ ನಮ್ಮ ಏರಿಯಾಗೆ ಯಾಕೆ ಬಂದಿದ್ದಿಯಾ ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಸ್ಕಾರ್ಪಿಯೋ ಕಾರ್‌ನಲ್ಲಿ ಬಂದಿದ್ದ ಸುನೀಲ್ ಕುಮಾರ ಪಾಟೀಲ್ ಎಂಬ ವ್ಯಕ್ತಿ ಮತ್ತು ಬಡಾವಣೆಯ ನಿವಾಸಿ ಉಮೇಶ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸ್ಕಾರ್ಪಿಯೋ ಕಾರ್‌ನಲ್ಲಿದ್ದ ಸುನೀಲ ಕುಮಾರ ಪಾಟೀಲ್ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್‌ನಿಂದ ಉಮೇಶ ಮೇಲೆ ಗುಂಡು ಹಾರಿಸಿದ. ಗುಂಡು ನೇರವಾಗಿ ಮನೆಯ ಗೋಡೆಗೆ ನುಗ್ಗಿತು. ತಕ್ಷಣ ಉಮೇಶ ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಸ್ಥಳಕ್ಕೆ ಬಂದು ಫೈರಿಂಗ್ ಮಾಡಿದ ಸುನೀಲಕುಮಾರ ಪಾಟೀಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆಯ ಬಳಿಕ ಅಸಲಿ ಸತ್ಯ ಹೊರ ಬರಬೇಕಾಗಿದೆ. ಕಂಡವರ ಮೇಲೆ ಗುಂಡು ಹಾರಿಸೋಕೆ ಹೋದರೆ ಕಂಬಿ ಎಣಿಸೋದಂತು ಗ್ಯಾರೆಂಟಿ ಎಂದು ಪೊಲೀಸರು ತೋರಿಸಿಕೊಟ್ಟಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಆರ್.ಚೇತನ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ