logo
ಕನ್ನಡ ಸುದ್ದಿ  /  ಕರ್ನಾಟಕ  /  Kalburgi News: ಅನಧಿಕೃತ ಬ್ಯಾನರ್‌ ಅಳವಡಿಕೆ; ಸಚಿವ ಪ್ರಿಯಾಂಕ್‌ ಖರ್ಗೆಗೆ ಕಲಬುರಗಿ ಪಾಲಿಕೆಯಿಂದ ದಂಡ

Kalburgi News: ಅನಧಿಕೃತ ಬ್ಯಾನರ್‌ ಅಳವಡಿಕೆ; ಸಚಿವ ಪ್ರಿಯಾಂಕ್‌ ಖರ್ಗೆಗೆ ಕಲಬುರಗಿ ಪಾಲಿಕೆಯಿಂದ ದಂಡ

HT Kannada Desk HT Kannada

Aug 31, 2023 11:06 AM IST

ಅನುಮತಿ ಪಡೆಯದೇ ಬ್ಯಾನರ್‌ ಹಾಕಿದ್ದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ದವೇ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ,

    • Minister Priyank Kharge fined ಕಲಬುರಗಿಯಲ್ಲಿ ಗೃಹಲಕ್ಷ್ಮಿ( Gruha Lakshmi) ಯೋಜನೆಗೆ ಚಾಲನೆ ನೀಡಲೆಂದು ಅಳವಡಿಸಲಾಗಿದ್ದ ಬ್ಯಾನರ್‌ಗೆ ಅನುಮತಿ ಪಡೆಯದ ಕಾರಣಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಕಲಬುರಗಿ ನಗರ ಪಾಲಿಕೆ ( Kalburgi City Corporation) ದಂಡ ವಿಧಿಸಿದೆ.
ಅನುಮತಿ ಪಡೆಯದೇ ಬ್ಯಾನರ್‌ ಹಾಕಿದ್ದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ದವೇ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ,
ಅನುಮತಿ ಪಡೆಯದೇ ಬ್ಯಾನರ್‌ ಹಾಕಿದ್ದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ದವೇ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ,

ಕಲಬುರಗಿ: ಅನುಮತಿ ಪಡೆಯದೇ ಬ್ಯಾನರ್‌ ಹಾಕುವವರಿಗೆ ದಂಡ ವಿಧಿಸಿ. ಬ್ಯಾನರ್‌ ತೆರವುಗೊಳಿಸಿ. ಇಂತಹುದ್ದಕ್ಕೆ ಅವಕಾಶ ನೀಡಬೇಡಿ ಎಂದು ಕೆಲ ದಿನಗಳ ಹಿಂದೆಯಷ್ಟೇ ಕಟ್ಟುನಿಟ್ಟಿನ ಸೂಚನೆ ನೀಡಿ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರೇ ದಂಡ ಬಿದ್ದಿದೆ. ಅದೂ ಅವರದ್ದೇ ಬ್ಯಾನರ್‌ ಅನ್ನು ಅಳವಡಿಸಿದ್ದಕ್ಕೆ. ಜತೆಗೆ ಅನುಮತಿ ಪಡೆಯದೇ ಇರುವುದಕ್ಕೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ರಸ್ತೆಗಳಲ್ಲಿ ಮರ ಬೀಳುವ ಸನ್ನಿವೇಶವಿದೆಯಾ, ಈ ನಂಬರ್‌ಗಳಿಗೆ ಕರೆ ಮಾಡಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಇದು ನಡೆದದ್ದು ಕಲಬುರಗಿ ನಗರದಲ್ಲಿ. ಬುಧವಾರ ಗೃಹಲಕ್ಷ್ಮಿಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕಾಗಿ ಕಲಬುರಗಿಯಲ್ಲಿ ಎಲ್ಲೆಡೆ ಬ್ಯಾನರ್‌ಗಳ ಭರಾಟೆ ಜೋರಾಗಿತ್ತು. ಪರಿಶೀಲಿಸಿದ ಅಧಿಕಾರಿಗಳಿಗೆ ಸಚಿವರ ಭಾವಚಿತ್ರ ಇರುವ ಬ್ಯಾನರ್‌ಗೆ ಅನುಮತಿ ಪಡೆಯದೇ ಇರುವುದು ಕಂಡು ಬಂದಿತು. ನಗರ ಪಾಲಿಕೆ ಅಧಿಕಾರಿಗಳು ಐದು ಸಾವಿರ ದಂಡವನ್ನೂ ಸಚಿವರಿಗೆ ವಿಧಿಸಿದರು. ಸಚಿವರೂ ಪಾವತಿಸಿದರು.

ಆಗಿದ್ದೇನು

ಯಾವುದೇ ಕಾರ್ಯಕ್ರಮ ಕುರಿತು ಸಾರ್ವಜನಿಕ ರಸ್ತೆಗಳ ಮೇಲೆ ಬ್ಯಾನರ್‌ ಅಳವಡಿಸಬೇಕಾದರೆ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಅನುಮತಿ ಪಡೆಯದೆ ಬೆಂಬಲಿಗರು ಹಾಕಿದ್ದ ಬ್ಯಾನರ್​ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಗೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿದರು.

ಬುಧವಾರ ಸರಕಾರದ ಮಹತ್ವ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ಸಚಿವ ಪ್ರಿಯಾಂಕ್​ ಖರ್ಗೆ ಆಗಮಿಸಿದ್ದು, ಈ ಕಾರ್ಯಕ್ರಮಕ್ಕೆ ಸಚಿವರು ಆಗಮಿಸುವ ಕುರಿತು ನಗರದ ಆಳಂದ ಚೆಕ್​ಪೋಸ್ಟ್​ ಬಳಿ ಪ್ರಿಯಾಂಕ್ ಖರ್ಗೆ ಭಾವಚಿತ್ರವಿರುವ ಬ್ಯಾನರ್​​ ಬೆಂಬಲಿಗರು ಹಾಕಿದ್ದರು.

ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಪಾಸಣೆಯಲ್ಲಿ ನಿರತರಾಗಿದ್ದರು. ಇದರಲ್ಲಿ ಕೆಲವಕ್ಕೆ ಅನುಮತಿ ಪಡೆದಿದ್ದರೆ ಇನ್ನು ಕೆಲವಕ್ಕೆ ಅನುಮತಿ ಇಲ್ಲದೇ ಇರುವುದು ಕಂಡು ಬಂದಿತು. ಅದರಲ್ಲೂ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಭಾವಚಿತ್ರ ಇರುವ ಬ್ಯಾನರ್‌ಗೆ ಅನುಮತಿ ಇರಲಿಲ್ಲ. ಕೂಡಲೇ ಪಾಲಿಕೆಯ ಘನತ್ಯಾಜ್ಯ ವಿಭಾಗದ ಮೂಲಕ ಐದು ಸಾವಿರ ರೂ. ದಂಡದ ಪ್ರತಿಯನ್ನು ಸಚಿವರ ಕಚೇರಿಗೆ ರವಾನಿಸಲಾಯಿತು.

ಸಚಿವರ ಸ್ವಾಗತಕ್ಕೆ ಅವರ ಬೆಂಬಲಿಗರು ಮಹಾನಗರ ಪಾಲಿಕೆಯ ಅನುಮತಿ ಪಡೆಯದೆ ಬ್ಯಾನರ್‌ ಹಾಕಿದ್ದಾರೆ ಮತ್ತು ಬ್ಯಾನರ್‌ನಲ್ಲಿ ಯಾರ ಹೆಸರು ಇಲ್ಲದೆ ಇರುವುದರಿಂದ ಸಚಿವರಿಗೆ ಪಾಲಿಕೆ ಅಧಿಕಾರಿಗಳು 5 ಸಾವಿರ ರೂ. ದಂಡ ವಿಧಿಸಿದ್ದು, ಈ ಪಾಲಿಕೆ ಕ್ರಮಕ್ಕೆ ಸಚಿವರು ಸ್ವಾಗತಿಸಿ, ದಂಡ ನೀಡಲು ಒಪ್ಪಿಕೊಂಡು ಸಿಬ್ಬಂದಿ ಮೂಲಕ ದಂಡ ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೂಚನೆ ನೀಡಿದ್ದ ಸಚಿವರು

ಅನುಮತಿ ಪಡೆಯದೆ ಬ್ಯಾನರ್ ಹಾಕುವವರ ವಿರುದ್ಧ ಕ್ರಮಗೊಳ್ಳುವಂತೆ ಕೆಲವು ದಿನಗಳ ಹಿಂದೆ ಅಧಿಕಾರಿಗಳಿಗೆ ಸೂಚನೆ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದರು. ನಗರ ಪಾಲಿಕೆಯ ಪ್ರಗತಿ ಪರಿಶೀಲನೆ ನಡೆಸುವಾಗ ಯಾವ ಮುಲಾಜಿಗೂ ಒಳಗಾಗದೇ ಕ್ರಮ ಕೈಗೊಳ್ಳಿ. ನಗರದ ಸೌಂದರ್ಯ ಮುಖ್ಯ ಎಂದು ಸ್ಪಷ್ಟ ಮಾತುಗಳಲ್ಲಿ ಸಚಿವರು ಹೇಳಿದ್ದರು.

ಮೊದಲಿನಿಂದಲೂ ನಗರದಲ್ಲಿ ಎಲ್ಲಿಯೇ ಬ್ಯಾನರ್‌ ಅಳವಡಿಸಿದರೂ ಅನುಮತಿ ಪಡೆಯಬೇಕು. ಇಂತಿಷ್ಟು ಸಮಯಕ್ಕೆ ಅಂತ ಶುಲ್ಕ ನಿಗದಿಯಾಗಿದೆ. ಆನಂತರ ಅವರೇ ತೆರವುಗೊಳಿಸಬೇಕು. ಇಲ್ಲದೇ ಇದ್ದರೆ ಪಾಲಿಕೆ ತೆರವು ಮಾಡಿ ದಂಡ ವಿಧಿಸುತ್ತದೆ. ವಿಶೇಷ ಕಾರ್ಯಕ್ರಮ ಇದ್ದಾಗ ಹೆಚ್ಚು ಬ್ಯಾನರ್‌ ಅಳವಡಿಸುವುದರಿಂದ ತಪಾಸಣೆ ಹೆಚ್ಚಿರಲಿದೆ. ಬುಧವಾರವೂ ತಪಾಸಣೆ ನಡೆಸುವಾಗ ಸಚಿವರ ಭಾವಚಿತ್ರ ಇರುವ ಬ್ಯಾನರ್‌ಗೆ ಅನುಮತಿ ಇಲ್ಲದ್ದು ಕಂಡು ಬಂದಿತು.ನಿಯಮದಂತೆ ದಂಡ ವಿಧಿಸಿದ್ದೇವೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ಅಧಿಕಾರಿಗಳ ಕ್ರಮಕ್ಕೆ ಮೆಚ್ಚುಗೆ

ಕಲಬುರಗಿ ಪಾಲಿಕೆ ಅಧಿಕಾರಿಗಳು ಕೈಗೊಂಡ ಕ್ರಮಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಅಧಿಕಾರಿಗಳು ಬರೀ ಸಾಮಾನ್ಯರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಆರೋಪಗಳು ಆಗಾಗ ಕೇಳಿ ಬರುತ್ತವೆ. ಇದರ ನಡುವೆ ಸಚಿವರ ಮೇಲೆಯೇ ದಂಡ ವಿಧಿಸಿರುವುದು ಮೆಚ್ಚಬೇಕಾದದ್ದೇ. ಆಗ ಸಾರ್ವಜನಿಕರಲ್ಲೂ ಭಯ ಇರಲಿದೆ ಎನ್ನುವುದು ಕಲಬುರಗಿ ಜನರ ಮೆಚ್ಚುಗೆಯ ನುಡಿ.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ