logo
ಕನ್ನಡ ಸುದ್ದಿ  /  ಕರ್ನಾಟಕ  /  Psi Scam: ಪಿಎಸ್‌ಐ ಮರು ಪರೀಕ್ಷೆ ನಡೆಸುವ ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ; ಇದು ಆಕಾಂಕ್ಷಿಗಳ ಗೆಲುವು ಎಂದ ಸಚಿವ

PSI Scam: ಪಿಎಸ್‌ಐ ಮರು ಪರೀಕ್ಷೆ ನಡೆಸುವ ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ; ಇದು ಆಕಾಂಕ್ಷಿಗಳ ಗೆಲುವು ಎಂದ ಸಚಿವ

HT Kannada Desk HT Kannada

Nov 11, 2023 07:44 AM IST

google News

ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ

    • PSI Re-exam:ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದು ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ಮರು ಪರೀಕ್ಷೆ ಬೇಡ ಎಂದು ನ್ಯಾಯಾಲಯದ ಕಟ್ಟೆ ಹತ್ತಿದ್ದ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಭಾರಿ ನಿರಾಶೆ ಉಂಟಾಗಿದೆ.
ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ
ಹೈಕೋರ್ಟ್‌ ಆದೇಶ ಸ್ವಾಗತಿಸಿದ ಪ್ರಿಯಾಂಕ್​ ಖರ್ಗೆ

ಕಲಬುರಗಿ: ಕಳೆದ ವರ್ಷದ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪಿಎಸ್‌ಐ ಪರೀಕ್ಷಾ ಅಕ್ರಮ ಬಾರಿ ಸದ್ದು ಮಾಡಿತ್ತು. ಈ ಅಕ್ರಮದ ರುವಾರಿ ಆರ್‌.ಡಿ.ಪಾಟೀಲ್‌ (ರುದ್ರಗೌಡ ಪಾಟೀಲ್​​)ನನ್ನು ಬಂಧಿಸಲಾಗಿತ್ತು. ಬಳಿಕ ಬಿಡುಗಡೆಗೊಂಡು ಈ ಬಾರಿ ಕೆಇಎ ಪರೀಕ್ಷಾ ಅಕ್ರಮ ಸಹ ನಡೆಸಿದ್ದನು. ಆತನನ್ನು ಬಂಧಿಸಲು ಹೋದ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದನು. ಆದರೆ ನಿನ್ನೆ (ನ.10, ಶುಕ್ರವಾರ ) ಆತನನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇತ್ತ ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷೆ ನಡೆಸಲು ತೀರ್ಮಾನಿಸಿದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದು ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ಮರು ಪರೀಕ್ಷೆ ಬೇಡ ಎಂದು ನ್ಯಾಯಾಲಯದ ಕಟ್ಟೆ ಹತ್ತಿದ್ದ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಭಾರಿ ನಿರಾಶೆ ಉಂಟಾಗಿದೆ.

ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಲು ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸಿ ಎಂದು ಆಯ್ಕೆಯಾಗಿದ್ದ ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಕುರಿತು ತೀರ್ಪನ್ನು ಶುಕ್ರವಾರ ಹೈಕೋರ್ಟ್‌ ಪ್ರಕಟಿಸಿದ್ದು, ಸ್ವತಂತ್ರ ಸಂಸ್ಥೆಯಿಂದ ಮತ್ತೊಮ್ಮೆ ಪಿಎಸ್ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ ಹೊರಡಿಸಿದೆ.

ಪಿಎಸ್‌ಐ ಆಯ್ಕೆ ಪಟ್ಟಿಯಲ್ಲಿದ್ದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆಯನ್ನು 2023ರ ಅ.26ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗಿತ್ತು. ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ಮಧ್ಯಾಹ್ನ ತೀರ್ಪು ನೀಡಿದೆ.

ಹೈಕೋರ್ಟ್ ತೀರ್ಪು ಸ್ವಾಗತಿಸಿದ ಸಚಿವ ಪ್ರಿಯಾಂಕ್ ಖರ್ಗೆ

ಕರ್ನಾಟಕದ ಉಚ್ಚ ನ್ಯಾಯಾಲಯ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಸಚಿವರು ಹಿಂದೆ ನಡೆದಿರುವ 545 ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಸಂಪೂರ್ಣ ರದ್ದುಗೊಳಿಸಲು ಆದೇಶಿಸಿ ಸ್ವತಂತ್ರ ಸಂಸ್ಥೆಯಿಂದ ಮತ್ತೆ ಮರುಪರೀಕ್ಷೆ ನಡೆಸಬೇಕು ಎಂದು ಆದೇಶಿಸಿರುವುದು ಹಿಂದಿನ ಬಿಜೆಪಿ ಸರ್ಕಾರದ ದುಷ್ಟ ಆಡಳಿತಕ್ಕೆ ಉಚ್ಚ ನ್ಯಾಯಾಲಯದ ಸಾಕ್ಷಿ ಮುದ್ರೆಯಾಗಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆದೇ ಇಲ್ಲಾ ಎಂದು ಹಲವಾರು ಬಾರಿ ಸದನಕ್ಕೆ ವಾದಿಸಿದ್ದ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಾಗೂ ಪ್ರಕರಣವನ್ನು ಹಳ್ಳ ಹಿಡಿಸಲು ತನಿಖೆ ಮೇಲೆ ಪ್ರಭಾವ ಬೀರಿದ ಮತ್ತು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ್ದ ಅಂದಿನ ಬಿಜೆಪಿ ಸಚಿವರಿಗೆ ಛೀಮಾರಿ ಹಾಕಿದಂತೆ ಎಂದು ಹೇಳಿದ್ದಾರೆ.

ಆಗಿರುವ ಅಕ್ರಮದ ಸಂಪೂರ್ಣ ಚಿತ್ರಣವನ್ನು ನ್ಯಾಯಲಯಕ್ಕೆ ಸಮರ್ಥವಾಗಿ ಮನವರಿಕೆ ಮಾಡಿಸಿ 56,000ಕ್ಕೂ ಹೆಚ್ಚು ಆಕಾಂಕ್ಷಿಗಳ ಪರವಾಗಿ ತೀರ್ಪು ಬರುವಂತೆ ಮಾಡಿರುವ ನಮ್ಮ ಸರ್ಕಾರದ ವಕೀಲರ ತಂಡಕ್ಕೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ. ಈ ಗೆಲುವು ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧ ಸಿಡಿದೆದ್ದು ಸಂಘಟಿತರಾಗಿ, ಪ್ರಕರಣವನ್ನು ಮುನ್ನಲೆಗೆ ತರಲು ಹೋರಾಡಿದ ಎಲ್ಲಾ ನ್ಯಾಯಯುತ ಪಿಎಸ್ಐ ಉದ್ಯೋಗ ಆಕಾಂಕ್ಷಿಗಳ ಗೆಲುವಾಗಿದೆ ಎಂದು ಅವರು ಹೇಳಿದ್ದಾರೆ.

ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ