ಯಾದಗಿರಿಯ ಕನ್ನಡ ಸಾಹಿತ್ಯ ಸಂಘಕ್ಕೆ ಕೊನೆಗೂ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ: ಕನ್ನಡಕ್ಕಾಗಿ 8 ದಶಕಗಳ ಸೇವೆ
Oct 31, 2023 09:59 PM IST
ಯಾದಗಿರಿಯ ಕನ್ನಡ ಸಾಹಿತ್ಯ ಸಂಘದ ಮುಂದಾಳುಗಳು
81 ವರ್ಷಗಳಿಂದ ನಿರಂತರವಾಗಿ ಕನ್ನಡ ಭುವನೇಶ್ವರಿಯ ಸೇವೆಯಲ್ಲಿರುವ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಸಾಹಿತಿಗಳಿಗೆ, ಕನ್ನಡಾಭಿಮಾನಿಗಳಿಗೆ ಹರ್ಷ ತಂದಿದೆ.
ಯಾದಗಿರಿ: ಕರ್ನಾಟಕದ ಶರಣ ಧರ್ಮ, ಸಾಹಿತ್ಯ, ಸಂಸ್ಕೃತಿ ಪರಂಪರೆಗಳಿಗೆ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆ ಸ್ಫೂರ್ತಿಯ ಚಿಲುಮೆ. ಭೀಮ -ಕೃಷ್ಣಾ ನದಿಗಳ ಮಧ್ಯಭಾಗದಲ್ಲಿರುವ ಸಗರನಾಡು ಸ್ಪೂರ್ತಿಯ ನೆಲೆಯಾದ ಸುರಪುರದಿಂದ ಕೂಗಳತೆ ದೂರದಲ್ಲಿದೆ. ಇಲ್ಲಿ 81ವರ್ಷಗಳಿಂದ ನಿರಂತರವಾಗಿ ಕನ್ನಡ ಭುವನೇಶ್ವರಿಯ ಸೇವೆಯಲ್ಲಿರುವ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿರುವುದು ಸಾಹಿತಿಗಳಿಗೆ, ಕನ್ನಡಾಭಿಮಾನಿಗಳಿಗೆ ಹರ್ಷ ತಂದಿದೆ.
ಪ್ರತಿ ವರ್ಷ ಸಂಭ್ರಮದಿಂದ ನಾಡಹಬ್ಬ ಆಚರಿಸಿಕೊಂಡು ಬರುತ್ತಿರುವುದಲ್ಲದೆ ಸಾಹ್ಯಿತಿಗಳು, ಉಪನ್ಯಾಸಕರು ಉಪನ್ಯಾಸ ನೀಡುತ್ತಿದ್ದರು. ಕವಿಗಳು ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದು ಇಲ್ಲಿನ ಕನ್ನಡ ಸಾಹಿತ್ಯ ಸಂಘ ಅಂದಿನಿಂದ ಇಂದಿನವರೆಗೂ ನಾಡ ಹಬ್ಬವನ್ನು ಆಚರಿಸಿಕೊಂಡು ಬಂದಿದೆ. ಒಂದೆಡೆ ಅಂದಿನ ಹೈದರಾಬಾದಿನ ಸಂಸ್ಥಾನದ ಆಳರಸರ ಸರ್ಕಾರ ಕನ್ನಡ ಸಂಘ ಸಂಸ್ಥೆಗಳನ್ನು ಸಂಶಯ ದೃಷ್ಟಿಯಿಂದ ಕಾಣುತ್ತಿದ್ದ ಕಾಲವಿತ್ತು. ಅಂಥ ಸಂದರ್ಭದಲ್ಲಿ ಮಾಡು ಇಲ್ಲವೇ ಮಡಿ ಎಂದು ಪ್ರಾಣವನ್ನೇ ಪಣಕ್ಕಿಟ್ಟು ಹೈದರಾಬಾದ್ ಪ್ರಾಂತ್ಯವನ್ನು ಅರಸೊತ್ತಿಗೆ ಆಡಳಿತದ ಮುಕ್ತಿಗಾಗಿ ಹೋರಾಡುತ್ತಿದ್ದ ಭೀಷ್ಮಕಾಲ.
ಸಂದಿಗ್ಧ ಕಾಲದಲ್ಲಿ ಶಾಲಿವಾಹನ ಶಕೆ 1865ರ ಯುಗಾದಿ ಶುಭದಿನದಂದು ಏಪ್ರಿಲ್ 5 ,1943 ರಂಗಂಪೇಟ ಕನ್ನಡ ಸಾಹಿತ್ಯ ಸಂಘ ಅಸ್ತಿತ್ವಕ್ಕೆ ಬಂದಿತು. ಸಾಹಿತ್ಯಸಕ್ತರು, ಸಾಹಿತ್ಯಾಭಿಮಾನಿಗಳು ಎಂ ಆರ್ ಬುದ್ಧಿವಂತ ಶೆಟ್ಟಿ, ಸಗರ ಕೃಷ್ಣಾಚಾರ್ಯ, ರುದ್ರಸ್ವಾಮಿ, ಬಂಡಿ ಗುರುರಾಜಾಚಾರ್ಯ, ಶ್ರೀನಿವಾಸಚಾರ್ಯ ಜಹಾಗೀರದಾರ, ಗೋವಿಂದಪ್ಪ ಡೊಳ್ಳೆ, ಮುಮ್ಮಡಿ ಶಿವಣ್ಣ, ಗಿರೆಪ್ಪ ತ್ರಿವೇದಿ, ಜನಾರ್ಧನ್ ಹಳಿಜೋಳ, ರಾಮಯ್ಯ ಕಲಕುಂಡಿ, ಅಷ್ಟಾವಧಾನಿ ನರಸಿಂಹ ಶಾಸ್ತ್ರಿಗಳು, ಜಯತೀರ್ಥಾಚಾರ್ಯ ಮಣೂರು ಹೆಬ್ಬಾಳ ಶಾಸ್ತ್ರಿಗಳ ಗೆಳೆಯರ ಬಳಗ ಸಂಘದ ಸ್ಥಾಪಕರು.
ಕನ್ನಡ ಸಾಹಿತ್ಯ ಸಂಘದ ಸ್ಥಾಪನೆಯಿಂದ ಮೊದಲಗೊಂಡು ಇಂದಿನವರೆಗೂ ಸಂಘದ ಸಮಸ್ತ ಜವಾಬ್ದಾರಿಯನ್ನು ಹೊತ್ತು ಬೆಳೆಸಿಕೊಂಡು ಬಂದ ಶ್ರೇಯಸ್ಸು ಮಿರಿಯಾಲ ಬುದ್ಧಿವಂತ ಶೆಟ್ಟಿ ಅವರಿಗೆ ಸಲ್ಲುತ್ತದೆ. ಶೆಟ್ಟರು ವೃತ್ತಿಯಿಂದ ವ್ಯಾಪಾರಿಗಳಾದರೂ ಪ್ರವೃತ್ತಿಯಿಂದ ಸಾಹಿತ್ಯ ಆಸಕ್ತರು. ನಾಡು ನುಡಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನಗಳನ್ನು ಏರ್ಪಡಿಸಿ ಗೌರವಿಸುವಂತಹ ಪರಂಪರೆಯನ್ನು ಸಂಘ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ಕನ್ನಡ ಸಾಹಿತ್ಯ ಸಂಘದ ಅತ್ಯಂತ ಆಕರ್ಷಣೀಯ ಮತ್ತು ಹೆಮ್ಮೆಯ ಕಾರ್ಯಕ್ರಮ ಪ್ರತಿ ವರ್ಷ ಆಚರಿಸುವ ನಾಡಹಬ್ಬ ಮಹೋತ್ಸವ ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪಡೆದಂತ ಲೇಖಕರು, ವಿಮರ್ಶಕರು, ಕವಿಗಳು ,ಚಲನಚಿತ್ರ ನಟರು, ಕರ್ನಾಟಕ ಹಾಗೂ ಆಂಧ್ರದ ಮುಖ್ಯಮಂತ್ರಿ, ಲೋಕಸಭಾ ಸದಸ್ಯರು , ಸಚಿವರು ಶಾಸಕರು, ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು,ಪತ್ರಕರ್ತರು, ಮಠಾಧೀಶರು , ಹಾಸ್ಯ ಕಲಾವಿದರು,ಉಪನ್ಯಾಸಕರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಅನೇಕ ಮಹನೀಯರನ್ನು ಆಮಂತ್ರಿಸಿ ಸತತವಾಗಿ 1943 ರಿಂದ 2023ರವರೆಗೂ ಅವರಿಂದ ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ನಾಡಿನ ಕನ್ನಡ ನಾಡು ನುಡಿ,ಸಾಹಿತ್ಯ, ಸಂಸ್ಕೃತಿ ,ಇತಿಹಾಸ ಶಿಕ್ಷಣ, ಇತ್ಯಾದಿಗಳ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸುತ್ತಾ ಬರಲಾಗಿದೆ.
ಇಲ್ಲಿ ಆಚರಿಸುವ ನಾಡಹಬ್ಬವೆಂದರೆ ಅದೊಂದು ಸಾಹಿತ್ಯಗಳಿಗೆ ರಸದೂಟವಾಗಿತ್ತು.ನಮ್ಮ ನಾಡಿನ ಸುಪ್ರಸಿದ್ಧ ಸಾಹಿತಿಗಳಾದ 1943 ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ,ಬೆಟಗೇರಿ ಕೃಷ್ಣಶರ್ಮ ಹೈದರಾಬಾದಿನ ಮುಖ್ಯಮಂತ್ರಿ ಬಿ. ರಾಮಕೃಷ್ಣ ,ದ. ರಾ .ಬೇಂದ್ರೆ ಕರ್ನಾಟಕದ ಮುಖ್ಯಮಂತ್ರಿ ಡಿ. ದೇವರಾಜ ಅರಸ್ , ಶ್ರೀಮತಿ ಜಯಲಕ್ಷ್ಮಿ ಮಂಗಳಮೂರ್ತಿ, ಮೀನಾಕ್ಷಿ ಬಾಳಿ , ಅಂತರರಾಷ್ಟ್ರೀಯ ಹಾಸ್ಯ ಕಲಾವಿದರಾದ ಪ್ರಾಣೇಶ್ ಗಂಗಾವತಿ, ಬಸವರಾಜ ಮಹಾಮನಿ ಸೇರಿದಂತೆ ಇನ್ನೂ ಅನೇಕರು ಮಹನೀಯರು ಬಂದು ಸ್ವ-ಹಸ್ತದ ಬರಹವನ್ನು ಅಭಿಪ್ರಾಯ ಪುಸ್ತಕದಲ್ಲಿ ಬರೆದಿದ್ದು ಸಂಘದಲ್ಲಿ ದಾಖಲೆಗಳನ್ನಾಗಿರಿಸಲಾಗಿದೆ.
ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯವೂ ಇಲ್ಲ. 1992 ರಲ್ಲಿ ವಿಜೃಂಭಣೆಯಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಾಗದೆ ಸರಳ ರೀತಿಯಲ್ಲಿ 50ನೇ ವರ್ಷ ಪೂರೈಸಿತು. ಊರಿನ ಹಿರಿಯರು ಕಿರಿಯರ ಸಹಕಾರದಿಂದ ವಜ್ರ ಮಹೋತ್ಸವ ಕಾರ್ಯಕ್ರಮವನ್ನು 2004ರ ಎಪ್ರಿಲ್ 3, 4 ರಂದು ವಿಜೃಂಭಣೆಯಿಂದ ಆಚರಿಸಿದ್ದು ಸ್ಮರಿಸಬಹುದು. ವಜ್ರ ಮಹೋತ್ಸವದಲ್ಲಿ ಸಾಹಿತಿಗಳು ಕವಿಗಳು ಯುವ ಬರಹಗಾರರು ಬಂದು ಕಾರ್ಯಕ್ರಮ ಯಶಸ್ವಿಯಾಗಿದ್ದು ಇಲ್ಲಿ ಸ್ಮರಿಸಬಹುದು.
ಕನ್ನಡ ಸಾಹಿತ್ಯ ಸಂಘದ ಸ್ವಂತ ಕಟ್ಟಡ ಇರಲಿಲ್ಲ ಸಂಘದ ಪ್ರಥಮ ಅಧ್ಯಕ್ಷ ರಾಮಣ್ಣ ಬೋಡಾ ಅವರ ಮೊಮ್ಮಗ ಮಾಣಿಕರಾವ ಬೋಡಾ ಅವರು ತಮ್ಮ ತಾತನವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಸಂಘ ಕಟ್ಟಡ ಕಟ್ಟಿಸಿದರು. ನಂತರ ಜಿಲ್ಲಾ ಪಂಚಾಯಿತ್ ಉಪಾಧ್ಯಕ್ಷ ಹಾಗೂ ಸಂಘದ ಅಧ್ಯಕ್ಷ ಸುರೇಶ್ ಸಜ್ಜನ್ ಅವರು 2008 ರಲ್ಲಿ ಜಿಲ್ಲಾ ಪಂಚಾಯಿತ್ ಯಿಂದ ಮೊದಲನೇಯ ಮಹಡಿ ನಿರ್ಮಿಸಿದರು. ಶಾಸಕ ರಾಜೂಗೌಡ ಅವರು ಸರ್ಕಾರದಿಂದ 10 ಲಕ್ಷ ರೂ.ಮಂಜೂರ ಮಾಡಿಸಿ ಸಂಘದ ಪಕ್ಕದಲ್ಲಿಯೇ ಕನ್ನಡ ಸಾಂಸ್ಕೃತಿಕ ಭವನ ಕಟ್ಟಿಸಿದರಲ್ಲದೆ ವೈಯಕ್ತಿಕವಾಗಿ 4 ಲಕ್ಷ ರೂ.ವೆಚ್ಚದಲ್ಲಿ ದಿ ಎಂ.ಆರ್.ಬುದ್ದಿವಂತಶೆಟ್ಟರ್ ಮೂರ್ತಿ ಕಟ್ಟಿಸಿದ್ದು ಇಲ್ಲಿ ಸ್ಮರಿಸಬಹುದು.
ಕನ್ನಡ ಸಂಘವನ್ನು ಕಟ್ಟಿ ಕಳೆದ 81 ವರ್ಷಗಳಿಂದಲೂ ರಂಗಂಪೇಟೆಯಲ್ಲಿ ಹೈದರಾಬಾದ್ ನಿಜಾಮರಾದ ಆಡಳಿತ ಹಾಗೂ ಉರ್ದು ಪ್ರಾಬಲ್ಯದ ಪ್ರದೇಶದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ತಮ್ಮ ಜೀವವನ್ನೇ ಮುಡಿಪಿಟ್ಟು ಸೇವೆಗೈದ ಹಿರಿಯ ಬುದ್ಧಿವಂತ ಶೆಟ್ಟರ್ ಸೇವೆ ಅವಿಸ್ಮರಣೀಯವಾದದ್ದು ಆದರೆ ಕನ್ನಡಕ್ಕಾಗಿ ತಮ್ಮ ಜೀವವನ್ನೇ ಮುಡಿಪಿಟ್ಟು ಸೇವೆಗೈದ ಕನ್ನಡದ ಕಟ್ಟಾಳನ್ನು ಈ ಭಾಗದ ಮುಖ್ಯಮಂತ್ರಿ ಧರ್ಮಸಿಂಗ್,ಸಚಿವರು,ಶಾಸಕರಿದ್ದರು ಕೂಡ ಬುದ್ಧಿವಂತ ಶೆಟ್ಟಿಯವರು ಕೊನೆಯ ಉಸಿರು ಇರುವವರೆಗೂ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಆಗಲಿ, ಮರಣೋತ್ತರ ಪ್ರಶಸ್ತಿ ಸಿಗದಿರುವುದಕ್ಕೆ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೇ ಕಾರಣ ಎಂದು ಕನ್ನಡಾಭಿಮಾನಿಗಳಿಗೆ, ಸಾಹಿತಿಗಳ ಕೊರಗಾಗಿತ್ತು .
ದಿ ಬುದ್ದಿವಂತ ಶೆಟ್ಟಿಯವರು ಕಂಡ ಕನಸು ನನಸು
ಕನ್ನಡ ಸಾಹಿತ್ಯ ಸಂಘದ ಕಟ್ಟಾಳು ಹಾಗೂ ಸಂಘದ ಅಧ್ಯಕ್ಷ ಎಂ.ಆರ್.ಬುದ್ದಿವಂತಶೆಟ್ಟಿಯವರಿಗೆ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿ ಸಿಗುತ್ತದೆ ಎಂಬ ಭರವಸೆಯಲ್ಲಿ ಇದ್ದೆವು ಆದರೆ ಕೊನೆಯವರೆಗೂ ಸಿಗಲಿಲ್ಲ ಕೊನೆಗೇ ಅವರ ನಿಧನದ ನಂತರವಾದರೂ ಮರಣೋತ್ತರ ಪ್ರಶಸ್ತಿಗಾಗಿ ಸಾಕಷ್ಟು ಪ್ರಯತ್ನಿಸಿದರು ಫಲ ಸಿಗಲಿಲ್ಲ ಆದರೂ 8 ದಶಕಗಳ ನಂತರ ಅಮೃತ ಮಹೋತ್ಸವ ಆಚರಿಕೊಳ್ಳುವ ಶುಭ ಸಂದರ್ಭದಲ್ಲಿ ನಮ್ಮ ಕನ್ನಡ ಸಾಹಿತ್ಯ ಸಂಘಕ್ಕೆ ಪ್ರಶಸ್ತಿ ಸಿಕ್ಕಿರುವುದು ನಮ್ಮ ಕನಸು ನನಸಾಯಿತು ಎಂದು ಸಂಘದ ಮಾಜಿ ಅಧ್ಯಕ್ಷ ಸುರೇಶ್ ಸಜ್ಜನ ಹಾಗೂ ಸಂಘದ ಅಧ್ಯಕ್ಷ ಸೂಗೂರೇಶ್ವರ ವಾರದ್ ಅವರು ಹರ್ಷ ವ್ಯಕ್ತಪಡಿಸಿ ಮುಖ್ಯ ಮಂತ್ರಿ ಸಿದ್ದರಾಮಯ್ಯ,ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅಭಿನಂದನೆಗಳು ತಿಳಿಸಿದ್ದಾರೆ.
ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವ ಸುದ್ದಿ ಹರಿದಾಡುತ್ತಿದ್ದಂತೆ ಗೌರವಾಧ್ಯಕ್ಷ ಶಾಂತಪ್ಪ ಬೂದಿಹಾಳ, ಅಧ್ಯಕ್ಷ ಸೂಗೂರೇಶ್ವರ ವಾರದ, ಸೋಮಶೇಖರ್ ಶಾಬಾದಿ, ಸುಭಾಷ್ ಬೋಡಾ ,ಸೋಮರಾಯ ಶಖಾಪುರ, ಮಹಾದೇವಪ್ಪ ಗುತ್ತೇದಾರ್, ಶ್ರೀರಂಗು ಮಿರಿಯಾಲ್, ಯಂಕಣ್ಣ ಗದ್ವಾಲ್, ಮುದ್ದಪ್ಪ ಅಪ್ಪಗೋಳ , ಪ್ರಕಾಶ್ ಅಂಗಡಿ, ಪ್ರಕಾಶ್ ಆಲಬನೂರ, ಚನ್ನಪ್ಪ ಗುಳಗಿ,ಮಲ್ಕಯ್ಯ ತೇಲ್ಕರ್, ಮಲ್ಲು ಬಾದ್ಯಾಪುರ,ಅರುಣ್ ಗೋಲಗೇರಿ, ರವಿ ತ್ರಿವೇದಿ ಮಹೇಶ್ ಉಲ್ಪೇನವರ್ ಸೇರಿದಂತೆ ಇತರರು ಸೇರಿ ಸಂಘದಲ್ಲಿರುವ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಂತರ ದಿ.ಎಂ.ಆರ್.ಬುದ್ದಿವಂತ ಶೆಟ್ಟಿಯವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ