Kannada Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಮುಂದಿನ 87ನೇ ಕನ್ನಡ ಸಾಹಿತ್ಯ ಸಮ್ಮೇಳನ, ಬಳ್ಳಾರಿಗೆ 1 ಅಂಕದಲ್ಲಿ ತಪ್ಪಿದ ಅವಕಾಶ
Jan 08, 2023 12:38 PM IST
Kannada Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ
- ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇದೇ ಸಮಯದಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕೆಂದು ನಿರ್ಧಾರವಾಗಿದೆ. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಅಂದರೆ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿದೆ.
ಹಾವೇರಿ: ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇದೇ ಸಮಯದಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಬೇಕೆಂದು ನಿರ್ಧಾರವಾಗಿದೆ. ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಅಂದರೆ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿದೆ.
ಒಟ್ಟು ಒಂಬತ್ತು ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ, ) ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಬಹುತೇಕರು ಮತ ಹಾಕಿದ್ದು ಸಕ್ಕರೆ ನಾಡು ಮಂಡ್ಯಕ್ಕೆ. ಮಂಡ್ಯಕ್ಕೆ ಒಟ್ಟು 17 ಮತಗಳು ಲಭಿಸಿವೆ.
ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನವು ಬಳ್ಳಾರಿಯಲ್ಲಿ ನಡೆಯುವ ಅವಕಾಶವೂ ಇತ್ತು. ಆದರೆ, ಬಳ್ಳಾರಿಗೆ 16 ಮತ ಬಂದಿರುವುದರಿಂದ ಈ ಅವಕಾಶ ತಪ್ಪಿದೆ. ಹದಿನೇಳು ಅಂಕ ಪಡೆದ ಮಂಡ್ಯಕ್ಕೆ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಸೌಭಾಗ್ಯ ದೊರಕಿದೆ.
"87ನೇ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಸಬೇಕು ಎನ್ನುವುದರ ಕುರಿತು ಚರ್ಚಿಸಲಾಗಿದೆ. ಒಂಬತ್ತು ಜಿಲ್ಲೆಯವರು ನಮ್ಮ ಜಿಲ್ಲೆಯಲ್ಲಿ ಸಮ್ಮೇಳನ ಮಾಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್ಚು ಜನರು ಬೆಂಬಲ ನೀಡಿರುವುದರಿಂದ ಮಂಡ್ಯ ಜಿಲ್ಲೆಯಲ್ಲಿ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆʼʼ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಹೇಳಿದ್ದಾರೆ.
"ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ. ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಆಗಿರಬಹುದು. ಇಂತಹ ದೊಡ್ಡ ಕಾರ್ಯಕ್ರಮ ನಡೆಯುವಾಗ ಸಣ್ಣಪುಟ್ಟ ತೊಂದರೆಗಳು ಆಗುವುದು ಸಹಜ. ಮುಂದೆ ಇಂತಹ ಸಮಸ್ಯೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲಾಗುವುದುʼʼ ಎಂದು ಅವರು ಹೇಳಿದ್ದಾರೆ.
ಯಾವ ಯಾವ ಜಿಲ್ಲೆಗಳಿಂದ ಮನವಿ ಬಂದಿತ್ತು?
ಮುಂದಿನ ಸಮ್ಮೇಳನವನ್ನು ನಮ್ಮ ಜಿಲ್ಲೆಯಲ್ಲಿಯೇ ಮಾಡಿ ಎಂದು ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು ಕಸಾಪ ರಾಜ್ಯಧ್ಯಕ್ಷರಿಗೆ ಮನವಿ ಮಾಡಿದ್ದರು. ಮಂಡ್ಯ, ಬಳ್ಳಾರಿ, ರಾಮನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸಲು ಬೇಡಿಕೆ ಬಂದಿತ್ತು.
ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಬೆಂಗಳೂರು ಸುತ್ತಲಿನ ಜಿಲ್ಲೆಯಲ್ಲಿ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಅಕ್ಷರ ಸಮ್ಮೇಳನ ನಡೆಸಬೇಕು. ಇದರಿಂದ ಕನ್ನಡ ಪ್ರೇಮ ಹೆಚ್ಚುತ್ತದೆ ಎಂದು ರಾಮನಗರದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರು ಮನವಿ ಸಲ್ಲಿಸಿದ್ದರು.
ಸುಮಾರು ಒಂಬತ್ತು ಜಿಲ್ಲೆಯವರು ಇದೇ ರೀತಿ ತಮ್ಮ ಜಿಲ್ಲೆಯಲ್ಲಿಯೇ ಮುಂದಿನ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಮನವಿ ಸಲ್ಲಿಸಿದರೂ, ಅಂತಿಮವಾಗಿ ಸಕ್ಕರೆ ನಾಡು ಮಂಡ್ಯಕ್ಕೆ ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ದೊರಕಿದೆ.