logo
ಕನ್ನಡ ಸುದ್ದಿ  /  ಕರ್ನಾಟಕ  /  Aap Manifesto: ರಾಜ್ಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಿ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲು ಎಎಪಿ ನಿರ್ಧಾರ

AAP manifesto: ರಾಜ್ಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಿ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲು ಎಎಪಿ ನಿರ್ಧಾರ

HT Kannada Desk HT Kannada

Mar 14, 2023 10:22 PM IST

ಆಮ್‌ ಆದ್ಮಿ ಪಾರ್ಟಿ ಸುದ್ದಿಗೋಷ್ಠಿ

    • ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಾಹಿತಿ ಸಂಗ್ರಹಿಸಿ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಆಮ್‌ ಆದ್ಮಿ ಪಾರ್ಟಿ ಸುದ್ದಿಗೋಷ್ಠಿ
ಆಮ್‌ ಆದ್ಮಿ ಪಾರ್ಟಿ ಸುದ್ದಿಗೋಷ್ಠಿ

ಬೆಂಗಳೂರು: ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಾಹಿತಿ ಸಂಗ್ರಹಿಸಿ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಟ್ರೆಂಡಿಂಗ್​ ಸುದ್ದಿ

108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಒಂದು ದಿನ ಮುಂದೂಡಿಕೆ; ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವರು

Hassan Scandal: ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್‌ಗೆ ಸಿಎಂ, ಡಿಸಿಎಂ ಕಾರಣ: ವಕೀಲ ದೇವರಾಜೇಗೌಡ ಸ್ಪೋಟಕ ಮಾಹಿತಿ

Drought fund: ಮುಂಗಾರು 2023 ಬರ ಪರಿಹಾರ ವಿತರಣೆಗೆ ಕ್ಷಣಗಣನೆ, ಹಣ ಬಂದಿದೆಯೇ ಎಂದು ಹೀಗೆ ಪರೀಕ್ಷಿಸಿ

Indian Railways: ಬೇಸಿಗೆಗೆ ಹುಬ್ಬಳ್ಳಿ, ಬೆಳಗಾವಿಯಿಂದ ಉತ್ತರ ಭಾರತಕ್ಕೆ ವಿಶೇಷ ರೈಲು, ಅರಸೀಕೆರೆ 2 ರೈಲು ಸಂಚಾರ ರದ್ದು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಅವರಿಗೆ ಯಾವುದರ ಅಗತ್ಯವಿದೆ ಎಂಬ ಮಾಹಿತಿ ಆಧರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಹಲವು ಪಕ್ಷಗಳು ಕಾಟಾಚಾರಕ್ಕೆ ಎಂಬಂತೆ ಒಂದು ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆಂದು ಬಿಂಬಿಸಿಕೊಳ್ಳುತ್ತವೆ. ಕೆಲವು ಪಕ್ಷಗಳು ಫೈವ್‌ ಸ್ಟಾರ್‌ ಹೋಟಲ್‌ನಲ್ಲಿ ಚರ್ಚೆ ನಡೆಸುತ್ತವೆ. ಆದರೆ ನಿಜವಾಗಿಯೂ ಚರ್ಚೆ ನಡೆಸಬೇಕಿರುವುದು ಜನಸಾಮಾನ್ಯರ ಜೊತೆ ಹಾಗೂ ಹಳ್ಳಿಕಟ್ಟೆಗಳಲ್ಲಿ. ಇದಕ್ಕಾಗಿ ಒಂದು ವ್ಯವಸ್ಥೆ ಮಾಡಿಕೊಡಲು ಆಮ್‌ ಆದ್ಮಿ ಪಾರ್ಟಿಯು ಈ ಯೋಜನೆ ರೂಪಿಸಿದೆ. ಎಲ್ಲ ವರ್ಗಗಳ ಜನರೂ ಇದರಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆಯಿದೆ. ಬೇರೆಲ್ಲ ರಾಜ್ಯಗಳಲ್ಲಿ ಚುನಾವಣೆ ನಡೆದಾಗಲೂ ಪಕ್ಷವು ಗ್ಯಾರೆಂಟಿ ಕಾರ್ಡ್‌ ರೂಪದಲ್ಲಿ ಮತದಾರರಿಗೆ ಆಶ್ವಾಸನೆಗಳನ್ನು ನೀಡಿದೆ. ಹಾಗೂ ನಾವು ಜಯಗಳಿಸಿದ ಕಡೆಯೆಲ್ಲ ನಮ್ಮ ಸಾಧನೆಗಳ ಬಗ್ಗೆ ಮತದಾರರಿಗೆ ರಿಪೋರ್ಟ್‌ ಕಾರ್ಡ್‌ ನೀಡಲಾಗಿದ್ದು, ಅವರು ಅದನ್ನು ಗ್ಯಾರೆಂಟಿ ಕಾರ್ಡ್‌ ಜೊತೆ ಹೋಲಿಕೆ ಮಾಡಿ ನೋಡಬಹುದಾಗಿದೆ” ಎಂದರು.

“ಮಾರ್ಚ್‌ 4ರಂದು ದಾವಣಗೆರೆಯಲ್ಲಿ, ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಶ್ರೀ ಅರವಿಂದ್‌ ಕೇಜ್ರಿವಾಲ್‌ರವರು ಕರ್ನಾಟಕದ ಜನತೆಗೆ ಗ್ಯಾರೆಂಟಿಗಳ ಮೊದಲ ಪಟ್ಟಿಯನ್ನು ಘೋಷಿಸಿದರು. ಅದರಲ್ಲಿ ಶೂನ್ಯ ಭ್ರಷ್ಟಾಚಾರ, 300 ಯೂನಿಟ್‌ ಉಚಿತ ವಿದ್ಯುತ್‌, ಯುವಜನತೆಗೆ ಖಚಿತ ಉದ್ಯೋಗ ಹಾಗೂ ಉದ್ಯೋಗ ಸಿಗುವ ತನಕ ತಿಂಗಳಿಗೆ 3000 ರೂಪಾಯಿ ಉದ್ಯೋಗ ಭತ್ಯೆ, ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ, ಉಚಿತ ಗುಣಮಟ್ಟದ ಶಿಕ್ಷಣ, ಉಚಿತ ಗುಣಮಟ್ಟದ ಆರೋಗ್ಯ ಸೇವೆ, ಗುತ್ತಿಗೆ ನೌಕರರಿಗೆ ಖಾಯಂ ಉದ್ಯೋಗ ಎಂಬ ಗ್ಯಾರೆಂಟಿಗಳನ್ನು ಘೋಷಿಸಿದ್ದಾರೆ. ಇದಕ್ಕೆ ಇನ್ನಷ್ಟು ಗ್ಯಾರೆಂಟಿಗಳನ್ನು ಸೇರಿಸಲು ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸಲಾಗುತ್ತದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಒಂದುವೇಳೆ ಸರ್ಕಾರದ ಬಳಿ ಸ್ವಲ್ಪ ಹಣ ಮಾತ್ರ ಇದ್ದರೆ, ಅದರಲ್ಲಿ ಮೇಲ್ಸೇತುವೆ ನಿರ್ಮಿಸಬೇಕೋ ಅಥವಾ ಶಾಲೆ ನಿರ್ಮಿಸಬೇಕೋ ಎಂಬ ಬಗ್ಗೆ ಪಕ್ಷದ ಸಭೆಯಲ್ಲಿ ಒಮ್ಮೆ ಚರ್ಚೆ ನಡೆದಿತ್ತು. ಮೇಲ್ಸೇತುವೆ ಬದಲು ಶಾಲೆ ನಿರ್ಮಿಸಿದರೆ, ಅದರ ಕೆಳಗೆ ಮನೆಯಿಲ್ಲದ ಮಕ್ಕಳು ಮಲಗಬಹುದು. ಆದರೆ ಶಾಲೆ ನಿರ್ಮಿಸಿದರೆ, ಆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಮುಂದೊಂದು ದಿನ ನೂರಾರು ಮೇಲ್ಸೇತುವೆ ನಿರ್ಮಿಸುತ್ತಾರೆ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಇದರಂತೆ ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಅಶ್ವಿನ್‌ ಮಹೇಶ್ ಮಾತನಾಡಿ, “ಪ್ರತಿ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಜನರು ನಮಗೆ ನಾನಾ ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ಕೊಡುತ್ತಾರೆ. ಈ ಸಲಹೆಗಳನ್ನು ಸರ್ಕಾರಕ್ಕೆ ಯಾಕೆ ನೀಡಿಲ್ಲ ಎಂದು ನಾವು ಪ್ರಶ್ನಿಸಿದರೆ, ʻನಮ್ಮ ಮಾತನ್ನು ಯಾರು ಕೇಳುತ್ತಾರೆ?ʼ ಎನ್ನುತ್ತಾರೆ. ಜನಸಾಮಾನ್ಯರಿಗೆ ಸಮಸ್ಯೆಗಳೂ ಗೊತ್ತು, ಪರಿಹಾರಗಳೂ ಗೊತ್ತು. ಆದ್ದರಿಂದ ಜನರ ಮಾತುಗಳನ್ನು ಕೇಳಿಸಿಕೊಂಡು ಆಡಳಿತ ನಡೆಸಬೇಕು ಎಂಬ ಉದ್ದೇಶದಿಂದ, ಜನರಿಂದ ಮಾಹಿತಿ ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಆಮ್‌ ಆದ್ಮಿ ಪಾರ್ಟಿಯು ಮೊದಲ ಚುನಾವಣೆಯಿಂದಲೂ ದೆಹಲಿಯಲ್ಲಿ ಇದನ್ನೇ ಮಾಡುತ್ತಿದೆ, ಕರ್ನಾಟಕದ ಚುನಾವಣೆಯಲ್ಲೂ ಇದೇ ಪ್ರಕ್ರಿಯೆಯನ್ನು ಮಾಡುತ್ತೇವೆ” ಎಂದರು.

“ ಇದೇ ತಿಂಗಳ 18 ಮತ್ತು 19 ಶನಿವಾರ ಹಾಗೂ ಭಾನುವಾರದಂದು ಪಕ್ಷದ ಕಾರ್ಯಾಧ್ಯಕ್ಷ, ಉಪ ಕಾರ್ಯಾಧ್ಯಕ್ಷರು, ಸ್ಪರ್ಧಾಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಅವರವರ ಕ್ಷೇತ್ರಗಳಲ್ಲಿ ಪ್ರಣಾಳಿಕೆಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಇದಕ್ಕಾಗಿ ಹಿಂದಿನ ಅಭಿಯಾನದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ 15 ಪ್ರಮುಖ ವಿಷಯಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇವುಗಳ ಆಧಾರದಲ್ಲಿ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ನಾವು ಪ್ರಣಾಳಿಕೆ ಸಿದ್ಧಪಡಿಸುತ್ತೇವೆ. ನಾವು ಮಾಹಿತಿಗಳನ್ನು ಸಂಗ್ರಹಿಸಲು ಸರಳ ಡಿಜಿಟಲ್‌ ಪ್ರಕ್ರಿಯೆಯನ್ನು ಕೂಡ ನಾವು ರಚಿಸಿದ್ದೇವೆ. http://bit.ly/JanaraPranalike ಲಿಂಕ್‌ ಓಪನ್‌ ಮಾಡಿ ಪ್ರಣಾಳಿಕೆಗೆ ಮಾಹಿತಿಗಳನ್ನು ನೀಡಬಹುದಾಗಿದೆ. 9353116032 ಸಂಖ್ಯೆಗೆ ವಾಟ್ಸಪ್‌ "ಜನರ ಪ್ರಣಾಳಿಕೆ" ಎಂದು ವಾಟ್ಸಪ್‌ ಮೆಸೇಜ್‌ ಕಳುಹಿಸಿ ಕೂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಈ ಸಂಖ್ಯೆಗೆ ಯಾರು ಮೆಸೇಜ್‌ ಕಳುಹಿಸಿದರೂ, ಅವರಿಗೆ ತಮ್ಮ ಸ್ವಂತ ಕ್ಷೇತ್ರದ ಪ್ರಣಾಳಿಕೆಗೆ ಹೇಗೆ ಮಾಹಿತಿ ನೀಡಬಹುದು ಎಂದು ತಿಳಿಸಲಾಗುತ್ತದೆ” ಎಂದು ಡಾ. ಅಶ್ವಿನ್‌ ಮಹೇಶ್‌ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಮಾತನಾಡಿ, “ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜಕೀಯ ಪಕ್ಷಗಳು ಪ್ರತಿ ಐದು ವರ್ಷಗಳಿಗೊಮ್ಮೆ ಪ್ರತಿ ರಾಜ್ಯದಲ್ಲೂ ಪ್ರಣಾಳಿಕೆಯನ್ನು ಘೋಷಿಸುತ್ತಲೇ ಇವೆ. ಆದರೆ 65 ವರ್ಷಗಳ ನಂತರ ಕೂಡ, ಭಾರತೀಯರು ಬೇರೆ ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಶಿಕ್ಷಣ ಹಾಗೂ ಕುಟುಂಬಕ್ಕೆ ಆರೋಗ್ಯ ಸೇವೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಅವು ಅರ್ಥ ಮಾಡಿಕೊಂಡಿಲ್ಲ. ಇಂತಹ ದೊಡ್ಡ ವಿಚಾರವನ್ನು ಅವು ಹೇಗೆ ಬಿಟ್ಟವು? ಏಕೆಂದರೆ ಅವು ಎಂದೂ ಕೂಡ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿಲ್ಲ. ಎಎಪಿಯು ಅವೆಲ್ಲವನ್ನೂ ಬದಲಾಯಿಸಿದೆ. ಇಂದು, ಭಾರತದ ಪ್ರತಿ ಚುನಾವಣೆಯಲ್ಲೂ ಶಿಕ್ಷಣ ಹಾಗೂ ಆರೋಗ್ಯವು ಪ್ರಮುಖ ವಿಷಯಗಳಾಗಿವೆ. ಇದಕ್ಕೆ ಆಮ್ ಆದ್ಮಿ ಪಾರ್ಟಿಯೊಂದೇ ಏಕೈಕ ಜವಾಬ್ದಾರಿಯಾಗಿದೆ. ನಾವು ಜನರಿಗೆ ಏನು ಬೇಕು ಎಂದು ಕೇಳಿದ್ದರಿಂದಾಗಿ ನಮಗೆ ಇವುಗಳ ಮಹತ್ವ ಅರ್ಥವಾಯಿತು. ಹಾಗೂ ಸಮಸ್ಯೆಗಳಿಗೆ ಪರಿಹಾರಗಳನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬ ಬಗ್ಗೆ ಜನರ ಉಪಾಯಗಳನ್ನು ಕೂಡ ನಾವು ಪರಿಗಣಿಸಿದೆವು. ಈ ರೀತಿ ಜನರ ಜೊತೆ ಕೆಲಸ ಮಾಡುವುದು ಆಡಳಿತ ನಡೆಸಲು ವಿಶೇಷ ಶಕ್ತಿ ನೀಡುತ್ತದೆ” ಎಂದು ಹೇಳಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು