logo
ಕನ್ನಡ ಸುದ್ದಿ  /  ಕರ್ನಾಟಕ  /  ನೀವು ಕೃಷಿ ಮಾಡುತ್ತೀದ್ದೀರಾ, ಯಂತ್ರಗಳ ಖರೀದಿಗೆ ಸಿಗಲಿದೆ ಸಹಾಯಧನ, ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸೋದು ಹೇಗೆ

ನೀವು ಕೃಷಿ ಮಾಡುತ್ತೀದ್ದೀರಾ, ಯಂತ್ರಗಳ ಖರೀದಿಗೆ ಸಿಗಲಿದೆ ಸಹಾಯಧನ, ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸೋದು ಹೇಗೆ

Umesha Bhatta P H HT Kannada

Nov 15, 2024 07:57 PM IST

google News

ಕೃಷಿ ಯಾಂತ್ರೀಕರಣ ಯೋಜನೆಯಡಿ ಯಂತ್ರಗಳ ಖರೀದಿಗೆ ಕರ್ನಾಟಕ ಕೃಷಿ ಇಲಾಖೆಯು ಸಹಾಯಧನ ನೀಡಲಿದ್ದು, ಇದಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ.

    • ಕರ್ನಾಟಕ ಸರಕಾರದ ಕೃಷಿ ಇಲಾಖೆಯು ಕೃಷಿ ಯಂತ್ರೋಪಕರಣಗಳ ಖರೀದಿಗೆ ರೈತರಿಗೆ ಸಹಾಯಧನವನ್ನು 2024-25ನೇ ಸಾಲಿಗೆ ನೀಡಲಿದೆ. ಇದಕ್ಕೆ ಅರ್ಜಿ ಸಲ್ಲಿಸುವ ವಿವರಗಳನ್ನು ನೀಡಲಾಗಿದೆ.
ಕೃಷಿ ಯಾಂತ್ರೀಕರಣ ಯೋಜನೆಯಡಿ ಯಂತ್ರಗಳ ಖರೀದಿಗೆ ಕರ್ನಾಟಕ ಕೃಷಿ ಇಲಾಖೆಯು ಸಹಾಯಧನ ನೀಡಲಿದ್ದು, ಇದಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ.
ಕೃಷಿ ಯಾಂತ್ರೀಕರಣ ಯೋಜನೆಯಡಿ ಯಂತ್ರಗಳ ಖರೀದಿಗೆ ಕರ್ನಾಟಕ ಕೃಷಿ ಇಲಾಖೆಯು ಸಹಾಯಧನ ನೀಡಲಿದ್ದು, ಇದಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು: ಪ್ರಸಕ್ತ(2024-25) ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರ ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರ ರಿಯಾಯಿತಿಯಲ್ಲಿ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟೋವೇಟರ್, ಕಳೆ ಕೊಚ್ಚುವ ಯಂತ್ರಗಳು, ಪವರ್ ವೀಡರ್, ಪವರ್ ಸ್ಪ್ರೇಯರ್ಸ್, ಡೀಸೆಲ್ ಪಂಪ್‍ಸೆಟ್, ಪ್ಲೋರ್‍ಮಿಲ್, ಯಂತ್ರ ಚಾಲಿತ ಮೋಟೋಕಾರ್ಟ್, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು ಮತ್ತು ಇತರೆ ಹೈಟೆಕ್ ಕೃಷಿ ಉಪಕರಣಗಳನ್ನು ಹಾಗೂ ತುಂತುರು ನೀರಾವರಿ ಯೋಜನೆಯಡಿಯಲ್ಲಿ ಶೇ.90ರ ರಿಯಾಯ್ತಿ ದರದಲ್ಲಿ ತುಂತುರು ನೀರಾವರಿ ಘಟಕ(ಹೆಚ್‍ಡಿಪಿಇ ಪೈಪ್ಸ್) ವಿತರಿಸಲಾಗುತ್ತಿದೆ.

ಕರ್ನಾಟಕದ ಎಲ್ಲಾ ತಾಲ್ಲೂಕು ವ್ಯಾಪ್ತಿಯ ಆಸಕ್ತ ರೈತರು ಪಹಣಿ(ಆರ್‍ಟಿಸಿ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ಎರಡು ಭಾವಚಿತ್ರ, ರೂ.100 ರ ಛಾಪಾ ಕಾಗಗದೊಂದಿಗೆ ಹೋಬಳಿಯಲ್ಲಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರೈತರಿಗೆ ನೀರು ಸಂಗ್ರಹಣಾ ರಚನೆ(ಕೃಷಿ ಹೊಂಡ), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಾಣ, ಹೊಂಡದಿಂದ ನೀರು ಎತ್ತಲು ಡೀಸೆಲ್/ ಸೋಲಾರ್ ಪಂಪ್ ಸೆಟ್(ಅಪ್ ಟು 10 ಹೆಚ್‍ಪಿ) ಮತ್ತು ಬೆಳೆಗೆ ನೀರು ಹಾಯಿಸಲು ಸೂಕ್ಷ್ಮ ನೀರಾವರಿ ಘಟಕಗಳ ಸೌಲಭ್ಯಗಳನ್ನು ಸಾಮಾನ್ಯ ರೈತರಿಗೆ ಶೇ.80ರ ಸಹಾಯಧನದಲ್ಲಿ /ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ನೀಡಲಾಗುವುದು.

ಕೃಷಿ ಭಾಗ್ಯ ಯೋಜನೆಗೆ ರೈತರು ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೇ ನಂಬರ್‍ನಲ್ಲಿ ಕನಿಷ್ಠ 1 ಎಕರೆ ಭೂಮಿ ಹೊಂದಿರಬೇಕು. ಹಿಂದಿನ ಸಾಲುಗಳಲ್ಲಿ ಕೃಷಿ ಭಾಗ್ಯ ಯೋಜನೆ ಅಥವಾ ಇನ್ನಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ(ಕೆ ಕಿಸಾನ್ ಪೋರ್ಟಲ್‍ನಲ್ಲಿ ಭೌತಿಕವಾಗಿ ಸ್ಥಳ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವುದು).

ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

ಕೃಷಿ ಯಾಂತ್ರೀಕರಣ ಕಾರ್ಯಕ್ರಮವು ವಿವಿಧ ಕೃಷಿ ಕಾರ್ಯಾಚರಣೆಗಳನ್ನು ಸಮಯಕ್ಕೆ ಸರಿಯಾಗಿ ಕೈಗೊಳ್ಳಲು, ಕೃಷಿ ವೆಚ್ಚವನ್ನು ಕಡಿಮೆ ಮಾಡಲು, ಕೃಷಿ ವಿದ್ಯುತ್ ಲಭ್ಯತೆಯನ್ನು ಹೆಚ್ಚಿಸಲು, ಕಾರ್ಮಿಕರ ಕೊರತೆಯನ್ನು ತಗ್ಗಿಸಲು, ಕೃಷಿಯಲ್ಲಿ ಯುವಕರನ್ನು ಆಕರ್ಷಿಸಲು ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಪರಿಚಯಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿ ಅಭಿವೃದ್ಧಿ. ಬೀಜಗಳು, ಗೊಬ್ಬರಗಳು, ರಸಗೊಬ್ಬರಗಳು, ಕಳೆನಾಶಕಗಳು ಮತ್ತು ಕೀಟನಾಶಕಗಳನ್ನು ಸರಿಯಾದ ಸಮಯದಲ್ಲಿ ಸೂಕ್ತವಾಗಿ ಅನ್ವಯಿಸುವುದು, ಕೃಷಿ ಚಟುವಟಿಕೆಗಳ ಅವಧಿಯನ್ನು ಕಡಿತಗೊಳಿಸುವುದು, ಅಪಾಯಗಳ ನಿರ್ಮೂಲನೆ ಮತ್ತು ವಿವಿಧ ಕೃಷಿ ಕಾರ್ಯಾಚರಣೆಗಳ ಪರಿಹಾರವು ಕೃಷಿ ಯಾಂತ್ರೀಕರಣದ ಮೂಲಕ ರೈತರ ಹೆಚ್ಚಿನ ನಿವ್ವಳ ಆದಾಯಕ್ಕೆ ಕಾರಣವಾಗುತ್ತದೆ ಎನ್ನುವ ಕಾರಣದಿಂದ ಹಲವಾರು ರಾಜ್ಯಗಳು ಈ ಯೋಜನೆ ಜಾರಿಗೊಳಿಸಿವೆ. ಕರ್ನಾಟಕದಲ್ಲೂ ಕೃಷಿ ಯಾಂತ್ರೀಕರಣ ಯೋಜನೆ ಜಾರಿಯಾಗಿದೆ.

ಯೋಜನೆಯ ಕುರಿತ ಮಾಹಿತಿ ಕರ್ನಾಟಕ ರಾಜ್ಯ ಕೃಷಿ ಇಲಾಖೆ ನಿರ್ದೇಶಕರ ಕಚೇರಿಯಲ್ಲಿ ಸಿಗಲಿದೆ.ಸಂಪರ್ಕ ಸಂಖ್ಯೆ 08022074103 080-22242746

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ