Opinion: ಕಠೋರ ಕೋಮುವಾದಕ್ಕೆ ಕರ್ನಾಟಕದ ತಿರಸ್ಕಾರ, ಕಳಚಿದ ಕಮಲದ ಹಿಂದಿನ ಮುಖ್ಯ ಕಾರಣ; ಪ್ರಕಾಶ ಕುಗ್ವೆ ಬರಹ
Sep 30, 2024 11:48 AM IST
ಬೆಂಗಳೂರಿನಲ್ಲಿ ನವೆಂಬರ್ 10, 2017ರಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆಯಲ್ಲಿ ಸಿದ್ದರಾಮಯ್ಯ (ಎಡಚಿತ್ರ), ಫೆಬ್ರುವರಿ 8, 2022ರಲ್ಲಿ ಹಿಂದುತ್ವವಾದಿಗಳ ವಿರುದ್ಧ ಘೋಷಣೆ ಕೂಗಿದ್ದ ಮಂಡ್ಯ ವಿದ್ಯಾರ್ಥಿನಿ (ಮಧ್ಯದ ಚಿತ್ರ), ಏಪ್ರಿಲ್ 9, 2022ರಂದು ಶ್ರೀರಾಮಸೇನೆ ಕಾರ್ಯಕರ್ತರ ದಾಂದಲೆಯಿಂದ ಹುಬ್ಬಳ್ಳಿಯಲ್ಲಿ ಕಲ್ಲಂಗಡಿ ನಷ್ಟಮಾಡಿಕೊಂಡ ವ್ಯಾಪಾರಿಯನ್ನು ಹಿಂದೂಗಳು ಸಂತೈಸಿದ್ದರು (ಬಲಚಿತ್ರ).
- Communal Polarisation Politics: ಧಾರ್ಮಿಕ ತುಷ್ಟೀಕರಣ ಯಾವುದೇ ಪಕ್ಷಕ್ಕೂ ಅಪಾಯಕಾರಿ. ಹಿಂದೆ ಸಿದ್ದರಾಮಯ್ಯ ಧಾರ್ಮಿಕ ತುಷ್ಟೀಕರಣ ನಡೆಸಿದ್ದರು. ಈಗ ಬಿಜೆಪಿಗೆ ಮಾಡಿದ ಶಾಸ್ತಿಯನ್ನೇ ಅಂದು ಜನ ಕಾಂಗ್ರೆಸ್‌ಗೆ ಮಾಡಿದ್ದರು. ಈ ವಿಷಯವನ್ನು ಕಾಂಗ್ರೆಸ್ ಎಂದಿಗೂ ಮರೆಯಬಾರದು ಎಂದು ಎಚ್ಚರಿಸುತ್ತಾರೆ ಹಿರಿಯ ಪತ್ರಕರ್ತ ಪ್ರಕಾಶ್ ಕುಗ್ವೆ
ಕರ್ನಾಟಕದ ಜನ ಕಠೋರ ಕೋಮುವಾದವನ್ನು ಎಂದಿಗೂ ಬೆಂಬಲಿಸಲ್ಲ ಎನ್ನುವುದನ್ನು ಈ ಚುನಾವಣೆ ಮತ್ತಷ್ಟು ಬಲಪಡಿಸಿದೆ. ಯಡಿಯೂರಪ್ಪ ಆರ್‌ಎಸ್ಎಸ್ ಗರಡಿಯಲ್ಲೇ ಪಳಗಿದ್ದರೂ ಪಕ್ಕಾ ಕೋಮುವಾದಿಯಲ್ಲ; ಅವರನ್ನು ತಮ್ಮ ಅಣತಿಯಂತೆ ಪಳಗಿಸಲು ಆರ್‌ಎಸ್‌ಎಸ್ ಮುಖಂಡರಿಗೆ ಸಾಧ್ಯವಾಗದಿದ್ದಕ್ಕೆ ಅವರಿಂದ ಅಧಿಕಾರ ಕಿತ್ತುಕೊಳ್ಳಲಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ಇತಿಹಾಸ. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿರುವಷ್ಟು ಕಾಲ ಗರಿಷ್ಠವಾಗಿಯೇ ಇದ್ದ ಬಿಜೆಪಿಯ ಜನಪ್ರಿಯತೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗುತ್ತಿದ್ದಂತೆ ತೀವ್ರ ಕುಸಿತ ಕಂಡಿತು. ಬೊಮ್ಮಾಯಿ ಅಧಿಕಾರವಹಿಸಿಕೊಳ್ಳುತ್ತಲೇ ಆರಂಭಗೊಂಡ ವ್ಯಾಪಾರದಲ್ಲಿ ಮುಸ್ಲಿಂರ ನಿರ್ಬಂಧ, ಹಿಜಾಬ್ ಗಲಾಟೆ, ಆಜಾನ್ ಅಪಸ್ವರ, ಹಲಾಲ್-ಜಟ್ಕಾ ಕಟ್ ಜಿಜ್ಞಾಸೆ, ಪಠ್ಯಪುಸ್ತಕಗಳ ಕೇಸರಿಕರಣ... ಈ ಎಲ್ಲವೂ ವಿವಾದ ಸ್ವರೂಪದ ಪಡೆದು ಕರ್ನಾಟಕದ ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯಾಗಿತ್ತು. ಅದರ ಪರಿಣಾಮವೇ ಈ ಬಾರಿಯ ಫಲಿತಾಂಶ.
ಕರ್ನಾಟಕ ಎಂದೆಂದಿಗೂ ಧರ್ಮ ಸಹಿಷ್ಣುತೆಗೆ ಹೆಸರಾದ ರಾಜ್ಯ. ಆದರೆ, ಕೇಂದ್ರ ಬಿಜೆಪಿ ಚುನಾವಣೆ ಗೆಲ್ಲುವ ತಂತ್ರವಾಗಿ ಕಳೆದೊಂದು ವರ್ಷದಿಂದ ಕರ್ನಾಟಕವನ್ನು ಕೋಮು ಸೂಕ್ಷ್ಮಗೊಳಿಸಲು ಸಾಕಷ್ಟು ಪ್ರಯತ್ನಿಸಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ʼಕ್ರಿಯೆಗೆ ಪ್ರತಿಕ್ರಿಯೆ ಸಹಜʼ ಎನ್ನುವ ಮೂಲಕವೇ ಅದು ಪ್ರಾರಂಭಗೊಂಡಿತು ಎಂದು ಹೇಳಬಹುದು. ಜಾತ್ರೆ, ಸಂತೆಗಳಲ್ಲಿ ಅಂಗಡಿ ಇಟ್ಟು ವ್ಯಾಪಾರ -ವಹಿವಾಟು ನಡೆಸುವುದು ಹೆಚ್ಚಾಗಿ ಮುಸ್ಲಿಂ ಸಮುದಾಯ. ಅವರಿಗೆ ನಿಷೇಧ ಹೇರುವ ಕಾರ್ಯ, ಅದೂ ಸರ್ಕಾರಕ್ಕೆ ಸೇರಿದ ದೇವಸ್ಥಾನಗಳ ಜಾತ್ರೆಗಳಲ್ಲಿ, ಸಂತೆ ಮೈದಾನಗಳಲ್ಲಿ ನಡೆಯಿತು ಎನ್ನುವುದು ವಿಪರ್ಯಾಸ. ಇದು ಮುಕ್ತಾಯಗೊಳ್ಳುತ್ತಿದ್ದಂತೆ ಹಿಜಾಬ್ ಗದ್ದಲ ಎಬ್ಬಿಸಲಾಯಿತು; ಇದರಿಂದ ಎಷ್ಟೊಂದು ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣದಿಂದ ದೂರ ಸರಿದರು? ಅದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೇಗೆ ಗಮನ ಸೆಳೆಯಿತು? ಇದರಿಂದಾಗಿ ಕರ್ನಾಟಕದ ಪ್ರತಿಷ್ಠೆ ಹೇಗೆ ಮಣ್ಣಾಯಿತು? ಎನ್ನುವುದು ಅವಾಗ ಎಣಿಕೆಗೆ ಬರಲೇ ಇಲ್ಲ. ಇದು ನಡೆಯುತ್ತಿರುವಾಗಲೇ ಹಲಾಲ್ ಕಟ್, ಜಟ್ಕಾ ಕಟ್‌ನ್ನು ವಿವಾದಗೊಳಿಸಿದ್ದು ಕೇವಲ ಮುಸ್ಲಿಂ ವ್ಯಾಪಾರಸ್ಥರಿಗಷ್ಟೇ ಅಲ್ಲ ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದವರ ವ್ಯಾಪಾರ-ವಹಿವಾಟಿಗೆ ದೊಡ್ಡ ಪೆಟ್ಟು ಕೊಟ್ಟಿತು.
ಅಜಾನ್‌ಗೂ ಅಲ್ಲಲ್ಲಿ ಅಪಸ್ವರ ಕೇಳಿ ಬಂತು; ಒಂದು ಧರ್ಮವನ್ನು ಮುಖ್ಯವಾಹಿನಿಯಿಂದ ಹೊರಗಿಟ್ಟು, ಅವರು ಇನ್ನಷ್ಟು ಪ್ರಚೋದನೆಗೊಂಡು ಗಲಾಟೆ-ಗದ್ದಲ ಎಬ್ಬಿಸಿದಾಗ, ಅದಕ್ಕೂ ಒಂದು ಹಣೆಪಟ್ಟಿ ಕಟ್ಟುವ ವ್ಯವಸ್ಥಿತ ತಂತ್ರಗಾರಿಕೆಯೂ ಆ ಸಮಯದಲ್ಲಿ ಯಶಸ್ವಿಯಾಯಿತು. ಈ ಮಧ್ಯೆ ಪಠ್ಯಪುಸ್ತಕಗಳಲ್ಲಿನ ಧರ್ಮ ಸಮಾನತೆ, ವೈಜ್ಞಾನಿಕತೆ, ವೈಚಾರಿಕತೆ ಬೋಧಿಸುವ ಪಠ್ಯಗಳನ್ನು ತೆಗೆದು ಹಾಕಿ ಹಿಂದೂ ಸಂಸ್ಕೃತಿಯ ಹೆಸರಿನಲ್ಲಿ ಪುರೋಹಿತಶಾಯಿ ಧೋರಣೆ, ಮೂಢನಂಬಿಕೆ ಹುಟ್ಟಿಸುವ ಪಠ್ಯಗಳನ್ನು ಹಾಕುವ ದೊಡ್ಡ ಪ್ರಯತ್ನ ಬೊಮ್ಮಾಯಿ ಸರ್ಕಾರದಲ್ಲಿ ನಡೆಯಿತು. ಬಹಳಷ್ಟು ಪ್ರಜ್ಞಾವಂತರು ಆ ಸಮಯದಲ್ಲಿ ಈ ಬೆಳವಣಿಗೆಯನ್ನು ಪ್ರತಿರೋಧಿಸಿದರು. ಕೂಡ. ಆದರೆ, ಸರ್ಕಾರ ಈ ಪ್ರತಿರೋಧವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅದೆಲ್ಲವೂ ಆಕ್ರೋಶವಾಗಿ ಜನರ ಮನಸ್ಸಲ್ಲಿ ಮಡುಗಟ್ಟಿ ನಿಂತಿತ್ತು. ಈ ಚುನಾವಣೆಯಲ್ಲಿ ಎಲ್ಲವೂ ಸಂಪೂರ್ಣ ತಿಳಿಗೊಂಡಿತು.
ವಿಪರ್ಯಾಸ ಎಂದರೆ ಹಿಜಾಬ್ ವಿವಾದದ ಹಿಂದಿದ್ದ ಉಡುಪಿ ಶಾಸಕ ರಘುಪತಿ ಭಟ್ಟರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಯಿತು. ಮುಸ್ಲಿಂ ದ್ವೇಷವನ್ನೇ ಉಸಿರಾಡುತ್ತಿದ್ದ ಕೆ.ಎಸ್. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಬೇಕಾಯಿತು. ಬಾಬಾ ಬುಡನಗಿರಿ ವಿವಾದವನ್ನೇ ಹೋರಾಟ ಮಾಡಿಕೊಂಡಿದ್ದ ಸಿ.ಟಿ. ರವಿ ಸೋಲು ಕಾಣಬೇಕಾಯಿತು. ಈ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಮತ್ತೊಂದು ಪ್ರಮುಖ ಕಾರಣ ಸರ್ಕಾರದ ಮೇಲಿನ 40 ಪರ್ಸೆಂಟ್ ಕಮಿಷನ್ ಆರೋಪ. ಇದು ಬಂದಿದ್ದೇ ಈಶ್ವರಪ್ಪ ಅವರಿಂದ. ಕಾಂಗ್ರೆಸ್ ಇದನ್ನು ತನ್ನ ಚುನಾವಣೆ ಪ್ರಚಾರದ ಉದ್ದಕ್ಕೂ ಬಳಸಿಕೊಂಡು ಯಶಸ್ವಿಯಾಯಿತು.
ರಾಜ್ಯದ ಧಾರ್ಮಿಕ ಇತಿಹಾಸ ಗೊತ್ತಿದ್ದವರು ಇವತ್ತಿನ ಆರ್‌ಎಸ್‌ಎಸ್‌ನ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು; ಹಾಗೆಯೇ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್. ಇವರಿಬ್ಬರೂ ಕರ್ನಾಟಕದವರು. ಇವರಿಬ್ಬರಿಗೂ ಬೊಮ್ಮಾಯಿ ಕಾಲದಲ್ಲಿ ನಡೆಸಿದ ಧಾರ್ಮಿಕ ಮೂಲಭೂತವಾದದ ಪ್ರಯೋಗ ಗೊತ್ತಿರಲಿಲ್ಲವೇ? ಅಥವಾ ಇವರ ನೇತೃತ್ವದಲ್ಲಿ ನಡೆದಿತ್ತೇ? ಅಥವಾ ಇವರಿಬ್ಬರನ್ನೂ ನಿರ್ಲಕ್ಷಿಸಿ ಮೋದಿ, ಅಮಿತ್ ಶಾ ಜೋಡಿಯೇ ಈ ಕರಾಮತ್ ನಡೆಸಿತ್ತಾ? ಎನ್ನುವುದು ಈಗ ಪ್ರಶ್ನೆ.
ಧಾರ್ಮಿಕ ತುಷ್ಟೀಕರಣ ಯಾವುದೇ ಪಕ್ಷಕ್ಕೂ ಅಪಾಯಕಾರಿ ಎನ್ನುವುದು ಕರ್ನಾಟಕದ ರಾಜಕೀಯ ಇತಿಹಾಸ ತಿಳಿದವರಿಗೆ ಗೊತ್ತು. 2018ರ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ಗೆ ದೊಡ್ಡ ಪಾಠ ಕಲಿಸಿತ್ತು. ಟಿಪ್ಪು ಜಯಂತಿಯನ್ನು ಹೊಸದಾಗಿ ಆರಂಭಿಸುವುದರ ಜತೆಗೆ ಮುಸ್ಲಿಂ ಹೆಣ್ಣುಮಕ್ಕಳಿಗೆ ಶಾಧಿ ಭಾಗ್ಯ ಕಲ್ಪಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರ್ಮಿಕ ತುಷ್ಟೀಕರಣ ನಡೆಸಿದ್ದರು. ಈಗ ಬಿಜೆಪಿಗೆ ಮಾಡಿದ ಶಾಸ್ತಿಯನ್ನೇ ಅಂದು ಜನ ಕಾಂಗ್ರೆಸ್‌ಗೆ ಮಾಡಿದ್ದರು.
ಬರಹ: ಪ್ರಕಾಶ್ ಕುಗ್ವೆ
ಲೇಖಕರು ಪ್ರಜಾವಾಣಿಯಲ್ಲಿ ಸುಮಾರು 20 ವರ್ಷ ವರದಿಗಾರರಾಗಿ ಕೆಲಸ ಮಾಡಿದವರು. ಬೆಂಗಳೂರು, ಶಿವಮೊಗ್ಗ, ದಾವಣಗೆರೆ ನಗರಗಳ ರಾಜಕಾರಣದ ಬಗ್ಗೆ ಚೆನ್ನಾಗಿ ತಿಳಿದವರು. ಪ್ರಸ್ತುತ ಸಾಗರದಲ್ಲಿ ನೆಲೆಸಿದ್ದಾರೆ. ಲೇಖನದಲ್ಲಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸಂಪರ್ಕಕ್ಕೆ facebook.com/prakash.kugwe