logo
ಕನ್ನಡ ಸುದ್ದಿ  /  ಕರ್ನಾಟಕ  /  Why Bjp Lost: ಬಿಜೆಪಿ ಗೇಮ್ ಪ್ಲಾನ್ ಫೇಲ್ ಆಗಿದ್ದೇಕೆ; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾದ 10 ಅಂಶಗಳಿವು

Why BJP Lost: ಬಿಜೆಪಿ ಗೇಮ್ ಪ್ಲಾನ್ ಫೇಲ್ ಆಗಿದ್ದೇಕೆ; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾದ 10 ಅಂಶಗಳಿವು

HT Kannada Desk HT Kannada

May 13, 2023 03:57 PM IST

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್ ಶಾ

    • Karnataka Assembly Elections Result Analysis: ಇಷ್ಟು ದೊಡ್ಡಮಟ್ಟದ ಗೆಲುವನ್ನು ಕಾಂಗ್ರೆಸ್ ನಿರೀಕ್ಷೆ ಮಾಡಿತ್ತಾದರೂ, ಇಂಥಾ ಪರಿ ಸೋಲನ್ನು ಬಿಜೆಪಿ ಅಂದಾಜು ಮಾಡಿರಲಿಲ್ಲ. ಬಿಜೆಪಿಯ ಸೋಲಿಗೆ ಸ್ವಯಂಕೃತ ಅಪರಾಧಗಳೇ ಹೆಚ್ಚು ಕಾರಣ ಎಂದು ವಿಶ್ಲೇಷಿಸುತ್ತಾರೆ ಪತ್ರಕರ್ತ ಎಂ.ಶ್ರೀನಿವಾಸ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್ ಶಾ
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ- 2023ರಲ್ಲಿ (Karnataka Assembly Elections 2023) ಕಾಂಗ್ರೆಸ್ ಪ್ರಚಂಡ ಬಹುಮತದತ್ತ ಸಾಗಿದೆ. ಇಷ್ಟು ದೊಡ್ಡಮಟ್ಟದ ಗೆಲುವನ್ನು ಕಾಂಗ್ರೆಸ್ (Congress) ನಿರೀಕ್ಷಿಸುತ್ತಾ ಇತ್ತು ಹೌದಾದರೂ ಈ ಪರಿಯ ಸೋಲನ್ನು ಬಿಜೆಪಿ (BJP) ಅಂದಾಜು ಕೂಡ ಮಾಡಿರಲಿಲ್ಲ. ಇತ್ತ ಜೆಡಿಎಸ್‌ನಲ್ಲಿ (JDS) ಆತಂಕದ ವಾತಾವರಣ ಇದೆ. 'ಗಂಡ ಹೊಡೆದಿದ್ದಕ್ಕಿಂತ ನಾದಿನಿ ನಕ್ಕಿದ್ದೇ ದುಃಖ' ಎಂಬ ಸನ್ನಿವೇಶ ಆ ಪಕ್ಷದಲ್ಲಿದೆ. ಜೆಡಿಎಸ್ ಸೋಲಿಗಿಂತ ಹೆಚ್ಚಾಗಿ ಕಾಂಗ್ರೆಸ್ ಗೆಲ್ಲುತ್ತಿರುವ ಪರಿ ಕುಮಾರಸ್ವಾಮಿ ಅವರನ್ನು ಈಗಾಗಲೇ ಚಿಂತೆಗೆ ಗುರಿ ಮಾಡಿರಲಿಕ್ಕೂ ಸಾಕು. ಬಿಜೆಪಿ ಇಷ್ಟು ಹೀನಾಯವಾದ ಪ್ರದರ್ಶನ ನೀಡುವುದಕ್ಕೆ ಕಾರಣವಾದ ಅಂಶಗಳನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

ಟ್ರೆಂಡಿಂಗ್​ ಸುದ್ದಿ

ಮಂಗಳೂರು ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನ; ಆರೋಪಿ ಬಂಧನ

ಬೆಂಗಳೂರಿನಲ್ಲಿ ಸತತ ಎರಡನೇ ದಿನವೂ ಮಳೆ, ತೊಂದರೆ ಅನುಭವಿಸಿದರೂ ಮಳೆಯಾಗಿದ್ದಕ್ಕೆ ಖುಷಿಪಟ್ಟ ನಾಗರಿಕರು

ಕರ್ನಾಟಕ ಹವಾಮಾನ ಮೇ 10; ಮೈಸೂರು, ಬೆಂಗಳೂರು ಸೇರಿ 25 ಜಿಲ್ಲೆಗಳಲ್ಲಿ ಸಾಧಾರಣ ಮಳೆ, ತುಮಕೂರು ಸೇರಿ 6 ಜಿಲ್ಲೆಗಳಲ್ಲಿ ಒಣಹವೆ

ಬೆಂಗಳೂರು ಗುಡ್‌ಗಿಂಗ್ ಅಂಡ್ ಮಿಂಚಿಂಗ್ ಹೆವಿಲಿ: ಮಳೆ ಕಂಡು ಖುಷಿಯಾದ ನೆಟ್ಟಿಗರು ಹಂಚಿಕೊಂಡ ಖುಷಿ ವಿಡಿಯೊಗಳು ಇಲ್ಲಿವೆ

1) ಬಿಜೆಪಿ ವಿರುದ್ಧದ ಭ್ರಷ್ಟಾಚಾರದ ಆರೋಪ: ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಮಗಾರಿಗಳಲ್ಲಿ ಶೇಕಡಾ ನಲವತ್ತು ಪರ್ಸೆಂಟ್ ಕಮಿಷನ್ ತೆಗೆದುಕೊಂಡಂಥ ಆರೋಪವನ್ನು ಮಾಡಲಾಗಿತ್ತು. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆಯಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಆರೋಪ ಯಾವುದೇ ಪರಿಣಾಮ ಬೀರಲ್ಲ ಎಂಬ ವಿಶ್ವಾಸ ಬಿಜೆಪಿಗೆ ಇತ್ತು. ಆದರೆ ಕಾಂಗ್ರೆಸ್ ಈ ವಿಚಾರವನ್ನು ಚುನಾವಣೆಯ ವಿಷಯವಾಗಿ ತೆಗೆದುಕೊಂಡು, ಮತದಾರರನ್ನು ಸೆಳೆಯುವಲ್ಲಿ ಸಫಲವಾದಂತೆ ಇದೆ.

2) ರಾಜ್ಯನಾಯಕರಿಗಿಂತ ಕೇಂದ್ರ ನಾಯಕರಿಂದಲೇ ಪ್ರಚಾರ: ಈ ಬಾರಿ ಚುನಾವಣೆಯಲ್ಲಿ ಕೇಂದ್ರ ನಾಯಕರು ಇಡೀ ಚುನಾವಣೆಯ ಪ್ರಚಾರದಲ್ಲಿ ಆಕ್ರಮಣಕಾರಿಯಾಗಿ ತೊಡಗಿಕೊಂಡಿದ್ದರು. ರಾಜ್ಯ ನಾಯಕರು ಅಂತ ತೆಗೆದುಕೊಂಡಾಗ ಸ್ವತಃ ಬಸವರಾಜ್ ಬೊಮ್ಮಾಯಿ ಅವರೇ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸ್ಥಳೀಯ ನಾಯಕರಾದ ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ನೆಚ್ಚಿಕೊಂಡಿತು. ಬಿಜೆಪಿಯಿಂದ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ಹೀಗೆ ರಾಜ್ಯದ ಹೊರಗಿನ ನಾಯಕರ ಮೇಲೆ ಅವಲಂಬನೆ ಆಯಿತು.

3) ಅತಿಯಾದ ಪ್ರಯೋಗಗಳು: ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರಂಥ ವಿಚಾರದಲ್ಲಿ ಬಿಜೆಪಿ ಟಿಕೆಟ್ ನೀಡುವುದು ಬೇಡ ಅಂದುಕೊಂಡಿದ್ದು ಬೇರೆ. ಆದರೆ ರಘುಪತಿ ಭಟ್, ಲಕ್ಷ್ಮಣ ಸವದಿ ಸೇರಿದಂತೆ ಹಲವರ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನ ಸರಿಯಾಗಿಯೇ ಕೈ ಕೊಟ್ಟಿದೆ. ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿಯ ನಾಯಕರ ಐತಿಹಾಸಿಕ ಪ್ರಮಾದ ಆಗಿದೆ. ಬಿಜೆಪಿಯ ಸಚಿವರಾಗಿದ್ದವರ ಪೈಕಿ ಅದೆಷ್ಟು ಮಂದಿ ಸೋತಿದ್ದಾರೆ ಎಂಬುದನ್ನು ಸಹ ಗಮನಿಸಬೇಕಾಗುತ್ತದೆ.

4) ಅಭಿವೃದ್ಧಿಗಿಂತ ಹೆಚ್ಚಾಗಿ ಹಿಂದುತ್ವದ ವಿಚಾರಕ್ಕೆ ಪ್ರಾಶಸ್ತ್ಯ ನೀಡಿದ್ದು: ಚುನಾವಣೆಯಲ್ಲಿ ಅಭಿವೃದ್ಧಿಗಿಂತ ಹೆಚ್ಚಾಗಿ ಹಿಂದುತ್ವದ ವಿಚಾರಕ್ಕೆ ಪ್ರಾಶಸ್ತ್ಯ ನೀಡಲಾಗಿತ್ತು. ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಸಂಗತಿಗಳನ್ನು ಪ್ರಸ್ತಾವ ಮಾಡುತ್ತಿದ್ದವರು ಬಜರಂಗದಳದ ನಿಷೇಧ ವಿಚಾರವನ್ನು ಮುಂದಿಟ್ಟುಕೊಂಡು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಚಾರ ಕಾಂಗ್ರೆಸ್‌ಗೆ ಒಳೇಟು ನೀಡುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ ಈಗಿನ ಫಲಿತಾಂಶ ನೋಡಿದರೆ ಹಿಂದುತ್ವದ ವಿಚಾರಕ್ಕೆ ಮತದಾರರು ಪ್ರಾಶಸ್ತ್ಯವನ್ನೇ ಕೊಟ್ಟಿಲ್ಲ ಎಂಬುದು ಮನದಟ್ಟಾಗುತ್ತದೆ.

5) ಜನರ ಕಷ್ಟ ಮುಖ್ಯವಾಗಲ್ಲ ಎಂಬ ನಿರೀಕ್ಷೆ ಸುಳ್ಳಾಗಿದೆ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಇಂಥ ವಿಚಾರಗಳು ಚುನಾವಣೆಯಲ್ಲಿ ವಿಷಯವೇ ಅಲ್ಲ ಎಂಬುದು ಬಿಜೆಪಿಯ ವಿಶ್ವಾಸ ಆಗಿತ್ತು. ಆದರೆ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಈ ವಿಚಾರಗಳು ಪ್ರಮುಖವಾಗಿದೆ. ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯ ಬಿಸಿಗೆ ತತ್ತರಿಸಿದ ಜನ ತಮ್ಮ ಮತದಾನದ ಮೂಲಕ ಉತ್ತರಿಸಿದ್ದಾರೆ.

6) ಲಿಂಗಾಯತರ ವಿಚಾರ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿದ್ದು, ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡದಿದ್ದದ್ದು ಲಿಂಗಾಯತರ ವಿಚಾರದಲ್ಲಿ ದುಬಾರಿಯಾಗಿ ಪರಿಣಮಿಸಿತು. ಬಿಜೆಪಿಯು ಲಿಂಗಾಯತರನ್ನು ನಿರ್ಲಕ್ಷಿಸುತ್ತಿದೆ ಎಂಬ ಸಂದೇಶ ರವಾನಿಸಿತು. ಬಿಜೆಪಿಯು ಕರ್ನಾಟಕದಲ್ಲಿ ಅಧಿಕಾರ ಹಿಡಿದಿದ್ದು ಯಡಿಯೂರಪ್ಪ ಅವರ ಪ್ರಯತ್ನ ಬಲದಿಂದ. ಅವರನ್ನು ಅವಧಿ ಪೂರ್ಣಗೊಳಿಸಲು ಬಿಡದೆ ಅಧಿಕಾರದಿಂದ ಕೆಳಗೆ ಇಳಿಸಲಾಯಿತು. ಆ ವೇಳೆ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಇನ್ನು ಜಗದೀಶ್ ಶೆಟ್ಟರ್ ಟಿಕೆಟ್ ವಿಚಾರದಲ್ಲೂ ತೆಗೆದುಕೊಂಡ ನಿರ್ಧಾರ ಹಾಗೂ ಲಕ್ಷ್ಮಣ ಸವದಿಗೆ ಟಿಕೆಟ್ ನೀಡದೇ ಹೋದದ್ದು ಸೇರಿ ಬಿಜೆಪಿಯು ಲಿಂಗಾಯತ ಸಮುದಾಯದ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿತು. ಚುನಾವಣೆ ಇನ್ನು ಕೆಲವೇ ದಿನ ಇದೆ ಎನ್ನುವಾಗ ಸಂತೋಷ್ ಅವರು ನೀಡಿದ್ದಾರೆ ಎನ್ನುವ ಲಿಂಗಾಯತ ವಿರೋಧಿ ಹೇಳಿಕೆಯನ್ನು ಹೊತ್ತ ಪತ್ರಿಕಾ ತುಣುಕೊಂದು ವೈರಲ್ ಆಗಿತ್ತು. ಇದನ್ನು ಬಿಜೆಪಿಯ ಪ್ರಮುಖ ನಾಯಕರು ಅಧಿಕೃತವಾಗಿ ನಿರಾಕರಿಸಲಿಲ್ಲ. ಇದೂ ಸಹ ಲಿಂಗಾಯತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿಯಿತು.

7) ಫಲ ಕೊಡಲಿಲ್ಲ ಕೋಮು ಧ್ರುವೀಕರಣ ಪ್ರಯತ್ನ: ಟಿಪ್ಪು ವರ್ಸಸ್ ಸಾವರ್ಕರ್, ಉರಿಗೌಡ- ನಂಜೇಗೌಡ, ಹಿಜಾಬ್ ಇತ್ಯಾದಿ ವಿಚಾರಗಳು ಬಿಜೆಪಿಗೆ ನೆರವಾಗಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಟಿಪ್ಪು ವರ್ಸಸ್ ಸಾವರ್ಕರ್, ಉರಿಗೌಡ- ನಂಜೇಗೌಡ ಹಾಗೂ ಹಿಜಾಬ್ ವಿಚಾರಗಳನ್ನು ಮುನ್ನೆಲೆಗೆ ತಂದಿತು. ಜನರು ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈ ಅಂಶಗಳು ಬಿಜೆಪಿಗೆ ಲಾಭ ತಂದುಕೊಟ್ಟಂತೆ ಕಾಣಿಸುವುದೂ ಇಲ್ಲ.

8) ನರೇಂದ್ರ ಮೋದಿ ಫ್ಯಾಕ್ಟರ್: ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಶುರು ಮಾಡಿದ ಮೇಲೆ ಕರ್ನಾಟಕದ ಚಿತ್ರಣವೇ ಬದಲಾಗುತ್ತದೆ. ಪ್ರಧಾನಿಯೊಬ್ಬರೇ ಬಿಜೆಪಿಯನ್ನು ಗೆಲ್ಲಿಸಿಕೊಳ್ಳಬಲ್ಲರು ಎಂಬುದು ಆತ್ಮವಿಶ್ವಾಸ ಆಗಿತ್ತು. ಆದರೆ ಅದು ಕೆಲಸವೇ ಮಾಡಿಲ್ಲ ಎಂಬುದು ಫಲಿತಾಂಶದಿಂದ ತಿಳಿದುಬರುತ್ತದೆ. ಬೆಂಗಳೂರಿನ ಫಲಿತಾಂಶ ಟ್ರೆಂಡ್ ನಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ.

9) ಸ್ಥಳೀಯ ನಾಯಕತ್ವ ದುರ್ಬಲ: ಚುನಾವಣೆ ಸಂದರ್ಭದಲ್ಲಿ ಬಿ.ಎಲ್.ಸಂತೋಷ್, ಅಮಿತ್ ಶಾ ಸೇರಿ ಕೇಂದ್ರದ ನಾಯಕರು ಹೇಳಿದ ಯಾವ ಸಂಖ್ಯೆಯ ಹತ್ತಿರ ಕೂಡ ಬಿಜೆಪಿ ಬಂದಿಲ್ಲ. ಮುಖ್ಯವಾಗಿ ಸ್ಥಳೀಯ ನಾಯಕತ್ವವನ್ನು ನಿರ್ಲಕ್ಷ್ಯ ಮಾಡಿದ್ದು, ದುರ್ಬಲ ಮಾಡಿದ್ದರ ಫಲತಾಂಶವನ್ನು ಕಾಣುವಂತಾಗಿದೆ.

10) ಪ್ರಾದೇಶಿಕ ವಿಚಾರಗಳು: ನಂದಿನಿ ವರ್ಸಸ್ ಅಮುಲ್ ಹಾಲಿನ ವಿಚಾರ ಇರಬಹುದು, ಹಿಂದಿ ಹೇರಿಕೆ, ಕನ್ನಡಿಗರ ಅಸ್ಮಿತೆ ಇಂಥ ವಿಚಾರಗಳು ಸಹ ಬಿಜೆಪಿ ಪಾಲಿಗೆ ಭರ್ತಿ ಪೆಟ್ಟನ್ನೇ ನೀಡಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆಯಂತಹ ರಾಷ್ಟ್ರೀಯ ವಿಚಾರಗಳನ್ನು ಕರ್ನಾಟಕಕ್ಕೆ ತರುವ ಅಗತ್ಯವೇ ಇರಲಿಲ್ಲ. ಆದರೆ ಈ ವಿಷಯವನ್ನು ಕಾಂಗ್ರೆಸ್ ಬಹಳ ಚೆನ್ನಾಗಿ ಬಳಸಿಕೊಂಡಿತು. ರಾಹುಲ್ ಗಾಂಧಿ ಒಂದು ಸಭೆಯಲ್ಲಿ ಜನರನ್ನು ಕನ್ನಡದಲ್ಲಿ ಪ್ರಶ್ನೆ ಕೇಳಿ ಎಂದಿದ್ದರು. ಪ್ರಿಯಾಂಕಾ ಗಾಂಧಿ ಜನರ ಮಧ್ಯೆ ತುಂಬ ಚೆನ್ನಾಗಿ ಬೆರೆತರು. ಇವೆಲ್ಲದರ ಜತೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಇನ್ನೂರು ಯೂನಿಟ್ ವಿದ್ಯುತ್, ಸಿಲಿಂಡರ್‌ಗೆ ಐನೂರು ರೂಪಾಯಿ ಸಹಾಯ ಧನ ಇಂಥ ಸಂಗತಿಗಳಿಗೆ ಮತದಾರರು ಪ್ರಾಮುಖ್ಯ ಪಡೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು