logo
ಕನ್ನಡ ಸುದ್ದಿ  /  ಕರ್ನಾಟಕ  /  Bpl Card Conversion: ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಬದಲಾವಣೆ, ಆಹಾರ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ಏನು

BPL Card Conversion: ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಬದಲಾವಣೆ, ಆಹಾರ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ಏನು

Umesha Bhatta P H HT Kannada

Nov 21, 2024 12:13 AM IST

google News

ಬಿಪಿಎಲ್ ಪಡಿತರ ಕಾರ್ಡ್‌ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಮುಖ ಸೂಚನೆ ನೀಡಿದ್ದಾರೆ.

    • ಕರ್ನಾಟಕದಲ್ಲಿ ತೀವ್ರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವ ಬಿಪಿಎಲ್‌ ಕಾರ್ಡ್‌ ಬದಲಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಆಹಾರ ಇಲಾಖೆ ಅಧಿಕಾರಿಗಳಿಗೆ ಪ್ರಮುಖ ಸೂಚನೆ ನೀಡಿದ್ದಾರೆ.
ಬಿಪಿಎಲ್ ಪಡಿತರ ಕಾರ್ಡ್‌ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಮುಖ ಸೂಚನೆ ನೀಡಿದ್ದಾರೆ.
ಬಿಪಿಎಲ್ ಪಡಿತರ ಕಾರ್ಡ್‌ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಮುಖ ಸೂಚನೆ ನೀಡಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ಬದಲಾವಣೆ ತೀವ್ರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದಂತೆ ಯಾರೊಬ್ಬರ ಪಡಿತರ ಚೀಟಿ ರದ್ದು ಮಾಡದಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಡುನಿಟ್ಡಿನ ಸೂಚನೆ ನೀಡಿದ್ದಾರೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದಂತೆ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣ ವಾಪಸ್ ನೀಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ಬಡ ಕುಟುಂಬಗಳವರ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಎಚ್ವರಿಕೆ ನೀಡಿದ್ದಾರೆ.

ಬಡವರಿಗೆ ಮರಳಿ ರೇಷನ್‌ ಕಾರ್ಡ್‌ ನೀಡಿ, ಇಲ್ಲದಿದ್ದರೆ ಸರ್ಕಾರಿ ಕಚೇರಿಗಳಿಗೆ ಬೀಗ: ಆರ್‌.ಅಶೋಕ

ಬೆಂಗಳೂರು: ರಾಜ್ಯ ಸರ್ಕಾರ ಬಡವರಿಗೆ ಮರಳಿ ಬಿಪಿಎಲ್‌ ಕಾರ್ಡ್‌ ನೀಡಬೇಕು. ಕಾರ್ಡ್‌ ರದ್ದು ಪ್ರಕ್ರಿಯೆ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಎಚ್ಚರಿಕೆ ನೀಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ವೃಷಭಾವತಿ ನಗರ, ನಂದಿನಿ ಲೇಔಟ್ ಗಳಲ್ಲಿ ಬಿಪಿಎಲ್‌ ಕಾರ್ಡ್‌ ರದ್ದುಗೊಂಡ ಕುಟುಂಬದವರನ್ನು ಶಾಸಕರಾದ ಡಾ. ಅಶ್ವತ್ಥನಾರಾಯಣ ಮತ್ತು ಕೆ. ಗೋಪಾಲಯ್ಯ ಅವರೊಂದಿಗೆ ಭೇಟಿ ಮಾಡಿ ಸಮಸ್ಯೆ ಆಲಿಸಿದರು.

ನಂತರ ಮಾತನಾಡಿ, ಜನರಿಗೆ ಅನ್ನ ಕೊಡಬೇಕಿದ್ದ ಸರ್ಕಾರ ಅನ್ನಕ್ಕೆ ಕನ್ನ ಹಾಕುವ ಕೆಲಸ ಮಾಡುತ್ತಿದೆ. ಯಾರೂ ಹಸಿವಿನಿಂದ ಸಾಯಬಾರದು ಎಂಬ ಪ್ರಜ್ಞೆ ಸರ್ಕಾರಕ್ಕೆ ಇರಬೇಕು. ಬಿಪಿಎಲ್‌ ಕಾರ್ಡ್‌ ಕಳೆದುಕೊಂಡವರು ಯಾರೂ ಶ್ರೀಮಂತರಲ್ಲ, ಕಾರಿನಲ್ಲಿ ಓಡಾಡುವುದಿಲ್ಲ. 2 ವರ್ಷದ ಮಗು ಇರುವ ಮಹಿಳೆ ಗಾರ್ಮೆಂಟ್‌ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಅಂಗವಿಕಲ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಬಜ್ಜಿ ಮಾರಾಟ ಮಾಡುತ್ತಿದ್ದು, ಅನಾರೋಗ್ಯದಿಂದಾಗಿ ಕೆಲಸಕ್ಕೆ ಹೋಗುತ್ತಿಲ್ಲ. ಇಂತಹ ಬಡ ಕುಟುಂಬದ ಜನರ ಮನೆಗೆ ಸಿಎಂ ಸಿದ್ದರಾಮಯ್ಯ ಕನ್ನ ಹಾಕಿದ್ದಾರೆ ಎಂದು ದೂರಿದರು.

14 ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲ. ಬ್ಯಾಂಕಿನಲ್ಲಿ ಸಾಲ ಕೇಳಲು ಕೂಡ ಆದಾಯ ತೆರಿಗೆ ವಿವರ ಸಲ್ಲಿಸಬೇಕಾಗುತ್ತದೆ. ಇದನ್ನು ಅರಿಯದೆ ಕಾಂಗ್ರೆಸ್‌ ಸರ್ಕಾರ, ಮನೆಗೆ ಭೇಟಿ ನೀಡದೆ ರೇಷನ್‌ ಕಾರ್ಡ್‌ಗಳನ್ನು ರದ್ದುಪಡಿಸಿದೆ. ಈಗ 11 ಲಕ್ಷ ಕಾರ್ಡ್‌ ರದ್ದುಪಡಿಸಿದ್ದು, ಇನ್ನೂ 14 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತದೆ. ಇದಕ್ಕೂ ಮುನ್ನ ಒಂದು ನೋಟಿಸ್‌ ನೀಡಿ, ಮಾಹಿತಿ ಪಡೆಯಬಹುದಿತ್ತು. ಎಲ್ಲರೂ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಕಣ್ಣಿಲ್ಲದ ಸರ್ಕಾರ ಹೇಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ದುಡ್ಡಿಲ್ಲ

ಕಾಂಗ್ರೆಸ್‌ ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲ. ಇರುವ ಹಣವನ್ನು ಲಂಚಕ್ಕೆ ಬಳಸಲಾಗುತ್ತಿದೆ. ಶಾಸಕರು ಸರ್ಕಾರದ ಕತ್ತುಪಟ್ಟಿ ಹಿಡಿದಿದ್ದಾರೆ. ಅನುದಾನ ಸಿಗದ ಬಗ್ಗೆ ಕಾಂಗ್ರೆಸ್‌ ಶಾಸಕರೇ ದೂರು ಹೇಳುತ್ತಿದ್ದಾರೆ. 25 ಲಕ್ಷ ಕಾರ್ಡ್‌ ರದ್ದುಪಡಿಸಿದರೆ 20,000 ಕೋಟಿ ರೂ. ಬರಬಹುದು. ಆ ಹಣವನ್ನು ಶಾಸಕರಿಗೆ ಕೊಟ್ಟು ಸಮಾಧಾನ ಮಾಡಬಹುದು. ಇದು ಕಾರ್ಡ್‌ ರದ್ದು ಮಾಡುವುದರ ಹಿಂದಿನ ಉದ್ದೇಶ ಎನ್ನುವುದು ಅಶೋಕ ಅವರ ಟೀಕೆ.

ಸರ್ಕಾರದ ಈ ಕ್ರಮದಿಂದಾಗಿ ಬಡವರಿಗೆ ಯಾವುದೇ ಯೋಜನೆಗಳು ಸಿಗುವುದಿಲ್ಲ. ಸಹಾಯಧನ ಸಿಗುವುದಿಲ್ಲ. ಯಾವುದೇ ಕಾರಣಕ್ಕೂ ಇನ್ನು ಮುಂದೆ ರೇಷನ್‌ ಕಾರ್ಡ್‌ ರದ್ದು ಮಾಡಬಾರದು ಎಂದು ಬಿಜೆಪಿ ಆಗ್ರಹಿಸುತ್ತದೆ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ. ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕರೆ ನೀಡಲಾಗುವುದು. ರೇಷನ್‌ ಕಾರ್ಡ್‌ ನೀಡದಿದ್ದರೆ ಅಧಿಕಾರಿಗಳನ್ನು ಕೊಠಡಿಯಲ್ಲಿ ಹಾಕಿ ಕಚೇರಿಗೆ ಬೀಗ ಹಾಕುತ್ತೇವೆ. ಸರ್ಕಾರಕ್ಕೆ ನಿಜವಾಗಲೂ ತಾಕತ್ತಿದ್ದರೆ ಬೋಗಸ್‌ ಕಾರ್ಡ್‌ ಮಂಜೂರು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸದೆ ಕಚೇರಿಯಲ್ಲಿ ಕುಳಿತು ಬಿಪಿಎಲ್ ಕಾರ್ಡುಗಳನ್ನು ಕಡಿತಗೊಳಿಸಿದ್ದಾರೆ. 22 ಲಕ್ಷ ಕಾರ್ಡುಗಳನ್ನು ರದ್ದುಗೊಳಿಸಲು ಇಲಾಖೆಗೆ ಗುರಿ ನೀಡಲಾಗಿದೆ ಎಂಬ ಮಾಹಿತಿಯಿದೆ. ಒಮ್ಮೆ ಕೊಟ್ಟು ಮತ್ತೆ ಕಿತ್ತುಕೊಳ್ಳುತ್ತಿರುವ ಕಟುಕ ಸರಕಾರಕ್ಕೆ ಬಡವರ ಕಣ್ಣೀರು ಕಾಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ