Avishkar Lab: 123 ಶಾಲೆಗಳಲ್ಲಿ ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪನೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ
Nov 10, 2023 06:20 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಸಾಂಕೇತಿಕ ಚಿತ್ರ)
ಹೊಸ ಕಲ್ಪನೆಯನ್ನು ವಾಸ್ತವಕ್ಕೆ ತರುವುದಕ್ಕಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಕ ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪಿಸಲು ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದೆ.
ಬೆಂಗಳೂರು: ಕರ್ನಾಟಕದ 123 ಶಾಲೆಗಳಲ್ಲಿ ತಲಾ 20 ಕೋಟಿ ರೂಪಾಯಿ ವೆಚ್ಚದಲ್ಲಿ ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪಿಸುವುದಕ್ಕೆ ರಾಜ್ಯ ಸರ್ಕಾರ ಗುರುವಾರ (ನ.9) ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು (ನ.9) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾದ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ.
ಹೊಸ ಕಲ್ಪನೆಯನ್ನು ವಾಸ್ತವಕ್ಕೆ ತರುವುದಕ್ಕಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಕ ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪಿಸುವ ಉದ್ದೇಶ ಸರ್ಕಾರದ್ದು.
ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ 4 ಪದವಿಪೂರ್ವ ಕಾಲೇಜು, 73 ಕೆಪಿಎಸ್ ಶಾಲೆ, 50 ಆದರ್ಶ ವಿದ್ಯಾಲಯಗಳಲ್ಲಿ ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಅನ್ನು ತಲಾ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಇದು ಈ ವರ್ಷವೇ ಅನುಷ್ಠಾನಕ್ಕೆ ಬರಲಿದೆ.
ಪ್ರತಿ ಕಂದಾಯ ವಿಭಾಗದಲ್ಲಿ 4 ಲ್ಯಾಬ್‌ಗಳ ಸ್ಥಾಪನೆಯಾಗಲಿದೆ. ಮಾಧ್ಯಮಿಕ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಈ ಲ್ಯಾಬ್‌ಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರದ್ದು.
ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪನೆಯ ಉದ್ದೇಶ
ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲಗಳಾದ ಸಮಸ್ಯಾ ಪರಿಹಾರ ಕೌಶಲ್ಯ ಅವಿಷ್ಕಾರಾತ್ಮಕ ಹಾಗೂ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳನ್ನು ಬಳಸಿ ಹೊಸ ಕಲ್ಪನೆಗಳನ್ನು ವಾಸ್ತವಕ್ಕೆ ತರಲು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು, ವಿಜ್ಞಾನ, ಎಲೆಕ್ಟ್ರಾನಿಕ್ಸ್, ರೊಬಾಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಟೋಮೇಷನ್ ಬಳಸಲು ಸಹಕರಿಸುವಂತಹ ಆವಿಷ್ಕಾರಾತ್ಮಕ ಪ್ರಯೋಗಾಲಯಗಳನ್ನು ಸ್ಥಾಪಿಸುವಂಥದ್ದು ಅತಿ ಮುಖ್ಯವಾದುದು. ಇದುವೇ ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪನೆಯ ಉದ್ದೇಶ ಕೂಡ.
ಇದರಿಂದ ವಿದ್ಯಾರ್ಥಿಗಳಲ್ಲಿ ಡಿಸೈನ್ ಮೈಂಡ್‌ಸೆಟ್, ಕಂಪ್ಯೂಟೇಶನಲ್ ಥಿಂಕಿಂಗ್ ಬಳಸಿ ಅವರಲ್ಲಿ ಕುತೂಹಲಾತ್ಮಕ ಕಲಿಕೆಯೊಂದಿಗೆ, ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಗಳಲ್ಲಿನ ಪ್ರಯೋಗಾಲಯಗಳು ಅನುಕೂಲ ಒದಗಿಸಲಿವೆ.
ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪನೆಗೆ ಸಂಬಂಧಿಸಿದ ಅಂಕಿನೋಟ
- ಪ್ರತಿಯೊಂದು ಆವಿಷ್ಕಾರ್ ಇನ್ನೋವೇಟಿವ್ ಲ್ಯಾಬ್ ಸ್ಥಾಪನೆಗೆ ಒಟ್ಟು ವೆಚ್ಚ 20 ಕೋಟಿ ರೂಪಾಯಿ.
- 93 ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ
- 73 ಕರ್ನಾಟಕ ಪಬ್ಲಿಕ್ ಶಾಲೆಗಳು
- 50 ಆದರ್ಶ ವಿದ್ಯಾಲಯಗಳು
- ಒಟ್ಟು 123 ಶಾಲೆಗಳಲ್ಲಿ ಈ ಪ್ರಯೋಗಾಲಯಗಳು ಸ್ಥಾಪನೆಯಾಗಲಿವೆ.