logo
ಕನ್ನಡ ಸುದ್ದಿ  /  ಕರ್ನಾಟಕ  /  Madhuswamy Audio Viral: 'ಬಿಜೆಪಿ Vs ಬಿಜೆಪಿ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿವೆ' ಎಂದ ರಾಜ್ಯ ಕಾಂಗ್ರೆಸ್​

Madhuswamy audio viral: 'ಬಿಜೆಪಿ vs ಬಿಜೆಪಿ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿವೆ' ಎಂದ ರಾಜ್ಯ ಕಾಂಗ್ರೆಸ್​

HT Kannada Desk HT Kannada

Aug 16, 2022 05:37 PM IST

google News

ಕಾಂಗ್ರೆಸ್ ಪಕ್ಷದ​ ಚಿಹ್ನೆ

    • "ಸರ್ಕಾರ ನಡೆಯುತ್ತಿಲ್ಲ, ಹೇಗೋ ಮ್ಯಾನೇಜ್​ ಮಾಡ್ತೀದ್ದೀವಿ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿರುವ ಆಡಿಯೋ ವೈರಲ್​ ಬಗ್ಗೆ ರಾಜ್ಯ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು,​ ಬಿಜೆಪಿ vs ಬಿಜೆಪಿ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿವೆ ಎಂದು ಹೇಳಿದೆ.
ಕಾಂಗ್ರೆಸ್ ಪಕ್ಷದ​ ಚಿಹ್ನೆ
ಕಾಂಗ್ರೆಸ್ ಪಕ್ಷದ​ ಚಿಹ್ನೆ

ಬೆಂಗಳೂರು: "ಸರ್ಕಾರ ನಡೆಯುತ್ತಿಲ್ಲ, ಹೇಗೋ ಮ್ಯಾನೇಜ್​ ಮಾಡ್ತೀದ್ದೀವಿ" ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿರುವ ಆಡಿಯೋ ವೈರಲ್​ ಬಗ್ಗೆ ರಾಜ್ಯ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು,​ ಬಿಜೆಪಿ vs ಬಿಜೆಪಿ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿವೆ ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಕಾಂಗ್ರೆಸ್​, ಸಚಿವರು ಕೆಲಸ ಮಾಡ್ತಿಲ್ಲ ಅಂತಾ ಸಿಎಂ ರಾಜಕೀಯ ಕಾರ್ಯದರ್ಶಿ ಹೇಳುತ್ತಾರೆ. ಸಹಕಾರ ಸಚಿವರು ಕೆಲಸ ಮಾಡ್ತಿಲ್ಲ ಅಂತಾ ಮಾಧುಸ್ವಾಮಿ ಹೇಳುತ್ತಾರೆ. ಕಾನೂನು ಸಚಿವರು ಕೆಲಸ ಮಾಡ್ತಿಲ್ಲ ಅಂತಾ ಎಸ್.ಟಿ ಸೋಮಶೇಖರ್ ಹೇಳುತ್ತಾರೆ. ಮಾಧುಸ್ವಾಮಿ ರಾಜೀನಾಮೆ ಕೊಡಲಿ ಅಂತಾ ಮುನಿರತ್ನ ಹೇಳುತ್ತಾರೆ. ರಾಜ್ಯ ಕಂಡ ಕಳಪೆ ಸರ್ಕಾರ ಇದು ಎನ್ನಲು ಒಂದಷ್ಟು ಪುರಾವೆಗಳಿವು ಎಂದು ಹೇಳಿದೆ.

ನಮ್ಮ ಸರ್ಕಾರ ಸರಾಗವಾಗಿ ನಡೆಯುತ್ತಿಲ್ಲ, ನಾವೇ ಅದನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋವೊಂದು ಭಾರೀ ವೈರಲ್‌ ಆಗಿತ್ತು. ತಮ್ಮದೇ ಸರ್ಕಾರದ ವಿರುದ್ಧವೇ ಹಗರುವಾಗಿ ಮಾತನಾಡಿರುವ ಮಾಧುಸ್ವಾಮಿ ವಿರುದ್ಧ ಸ್ವಪಕ್ಷದ ಸಚಿವರೇ ತಿರುಗಿ ಬಿದ್ದಿದ್ದಾರೆ.

ಶೀಘ್ರದಲ್ಲೇ ಮತ್ತೆ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ, ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬರ್ಥದಲ್ಲಿ ಮಾಧುಸ್ವಾಮಿ ಮಾತನಾಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಸರ್ಕಾರದ ಮಟ್ಟದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವಾದಕ್ಕೆ ಈ ಘಟನೆ ಪುಷ್ಠಿ ನೀಡಿದೆ.

ಸಚಿವ ಮಾಧುಸ್ವಾಮಿ ಮತ್ತು ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ನಡುವಿನ ದೂರವಾಣಿ ಸಂಭಾಷಣೆ ಶನಿವಾರ ವೈರಲ್ ಆಗಿತ್ತು. ಇದರಲ್ಲಿ “ನಾವು ಇಲ್ಲಿ ಸರ್ಕಾರವನ್ನು ನಡೆಸುತ್ತಿಲ್ಲ, ನಾವು ಹೇಗೋ ಮ್ಯಾನೇಜ್‌ ಮಾಡುತ್ತಿದ್ದೇವೆ. ಮುಂದಿನ 7-8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಎಲ್ಲವನ್ನೂ ಮ್ಯಾನೇಜ್‌ ಮಾಡುತ್ತಿದ್ದೇವೆ” ಎಂದು ಮಾಧುಸ್ವಾಮಿ ಹೇಳಿದ್ದ ಆಡಿಯೋ ತುಣುಕು ಎಲ್ಲೆಡೆ ವೈರಲ್‌ ಆಗಿತ್ತು. ರೈತರಿಗೆ ಸಂಬಂಧಿಸಿದಂತೆ ವಿಎಸ್ಎಸ್ಎನ್ ಬ್ಯಾಂಕ್ ವಿರುದ್ಧದ ಭಾಸ್ಕರ್ ಅವರ ದೂರುಗಳಿಗೆ ಮಾಧುಸ್ವಾಮಿ ಹೀಗೆ ಪ್ರತಿಕ್ರಿಯೆ ನೀಡಿದ್ದರು.

“ನನಗೆ ಈ ಸಮಸ್ಯೆಗಳ ಬಗ್ಗೆ ತಿಳಿದಿವೆ. ನಾನು ಇದನ್ನು ಎಸ್ ಟಿ ಸೋಮಶೇಖರ್ ಅವರ ಗಮನಕ್ಕೆ ತಂದಿದ್ದೇನೆ. ಅವರು ಕ್ರಮ ಕೈಗೊಳ್ಳುತ್ತಿಲ್ಲ. ಏನು ಮಾಡಬೇಕು?” ಎಂದು ಮಾಧುಸ್ವಾಮಿ ಅವರು ಸೋಮಶೇಖರ್‌ ಬಗ್ಗೆ ಲಘುವಾಗಿ ಮಾತನಾಡಿದ್ದನ್ನು ಆಡಿಯೋದಲ್ಲಿ ಕೇಳಬಹುದು.

ಈ ಕುರಿತು ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿರುವ ತೋಟಗಾರಿಕಾ ಸಚಿವ ಮುನಿರತ್ನ, ಇಂತಹ ಹೇಳಿಕೆ ನೀಡುವ ಬದಲು ಮಾಧುಸ್ವಾಮಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. “ಸರ್ಕಾರದ ಭಾಗವಾಗಿರುವ ಅವರು, ಸಚಿವ ಸಂಪುಟದಲ್ಲಿ ಪ್ರತಿಯೊಂದು ವಿಷಯದಲ್ಲೂ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಅವರಿಗೂ ಇದರಲ್ಲಿ ಪಾಲು ಇದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂತಹ ಬಾಲಿಷ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಇದು ಅವರ ಹಿರಿತನಕ್ಕೆ ತಕ್ಕುದಲ್ಲ” ಎಂದು ಮುನಿರತ್ನ ಹೇಳಿದ್ದಾರೆ.

ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಕೂಡ ಮಾಧುಸ್ವಾಮಿ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ಅದು ಮಾಧುಸ್ವಾಮಿ ಅವರ ಧ್ವನಿಯೇ ಆಗಿದ್ದರೆ, ಅದು ತಪ್ಪು ಎಂದು ಹೇಳಿದ್ದಾರೆ. ಮಾಧುಸ್ವಾಮಿಗೆ ತಾನೊಬ್ಬನೇ ಬುದ್ದಿವಂತ ಎಂಬಂತೆ ಅನ್ನಿಸುತ್ತಿದೆ. ಅದನ್ನು ಮೊದಲು ತಲೆಯಿಂದ ತೆಗೆಯಬೇಕು ಎಂದು ಸಲಹೆ ನೀಡಿದ್ದಾರೆ.

ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದ ಸಿಎಂ

ಮಾಧುಸ್ವಾಮಿ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಕುರಿತು ನಾನು ಸಚಿವ ಮಾಧುಸ್ವಾಮಿ ಅವರೊಂದಿಗೆ ಮಾಡಿದ್ದೇನೆ. ಬೇರೆ ಸಂದರ್ಭದಲ್ಲಿ ತಾವು ಈ ರೀತಿ ಹೇಳಿದ್ದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಅವರ ಹೇಳಿಕೆ ಬಗ್ಗೆ ಅಪಾರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.

ಸರ್ಕಾರದ ಮಟ್ಟದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಇಲಾಖೆಯೊಂದರ ಕಾರ್ಯವೈಖರಿ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದನ್ನೇ ದೊಡ್ಡದು ಮಾಡಿ ಸರ್ಕಾರ ಅಪಾಯದಲ್ಲಿದೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಬಸವರಾಜ ಬೊಮ್ಮಾಯಿ ಅಸಮಾಧಾನ ಹೊರಹಾಕಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ