Priyanka Gandhi: ನಮ್ಮ ಸರ್ಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ; ಬಿಜೆಪಿ ಲೂಟಿಯಲ್ಲಿ ತೊಡಗಿದೆ; ಪ್ರಿಯಾಂಕಾ ಗಾಂಧಿ ಟೀಕೆ
May 07, 2023 06:56 PM IST
ಪ್ರಿಯಾಂಕಾ ಗಾಂಧಿ
- ಆತಂಕವಾದದ ಕುರಿತು ಪ್ರಧಾನಿ ಮೋದಿ ಮಾತನಾಡುತ್ತಾರೆ. ಆದರೆ ಇಲ್ಲಿ ಇಡೀ ಲೂಟಿಯಾಗುತ್ತಿದ್ದು, ಮಂಗಳೂರಿನ ಬಂದರು, ವಿಮಾನ ನಿಲ್ದಾಣ ಯಾರ ಕೈಗೆ ಹೋಗಿದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಪರೋಕ್ಷವಾಗಿ ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನ ಮೂಲ್ಕಿಯಲ್ಲಿ ಅವರು ಪ್ರಚಾರ ಭಾಷಣ ಮಾಡಿದ್ದಾರೆ.
ಮಂಗಳೂರು: ಭಯೋತ್ಪಾದನೆ, ಆತಂಕವಾದದ ಕುರಿತು ಮಾತನಾಡುವ ಪ್ರಧಾನಮಂತ್ರಿಗಳೇ, ನಮ್ಮ ಆತಂಕವನ್ನೂ ಗಮನಿಸಿ. ನಿಮ್ಮದೇ ರಾಜ್ಯ ಸರಕಾರ 40 ಪರ್ಸೆಂಟ್ ಭ್ರಷ್ಟಾಚಾರ ಮಾಡಿರುವ ಆತಂಕ ನಮಗಿದೆ. ಮಂಗಳೂರಿನ ಬಂದರು, ವಿಮಾನ ನಿಲ್ದಾಣಗಳನ್ನೆಲ್ಲಾ ಖಾಸಗಿಗೆ ಅಡವಿಟ್ಟಿರುವ ಕುರಿತ ಆತಂಕ ನಮಗಿದೆ. ಇಂಥ ಹಲವಾರು ಆತಂಕಗಳು ಇದ್ದು, ಇದನ್ನು ಗಮನಿಸಬೇಕು ಎಂದು ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಹೇಳಿದ್ದಾರೆ.
ಮಂಗಳೂರಿನ ಮೂಲ್ಕಿಯಲ್ಲಿ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರ ಭಾಷಣ ಮಾಡಲು ಭಾನುವಾರ ಆಗಮಿಸಿದ ಪ್ರಿಯಾಂಕಾ, ಪ್ರಧಾನಮಂತ್ರಿಗಳೇ, ರಾಜ್ಯದಲ್ಲಿರುವ ನಿಮ್ಮ ನಲ್ವತ್ತು ಪರ್ಸೆಂಟ್ ಸರಕಾರದ ಆತಂಕ ನಮಗಿದೆ ಎಂದರು. ಕರ್ನಾಟಕದ ಚುನಾವಣೆಯಲ್ಲಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ (Narendra Modi) ಆತಂಕವಾದದ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಆತಂಕವಾದದ ಬಗ್ಗೆ ಭಯವಿಲ್ಲ. ಇಲ್ಲಿ 40% ಕಮೀಷನ್, ಬೆಲೆ ಏರಿಕೆ, ನಿರುದ್ಯೋಗದ ಆತಂಕ ಇದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದರು.
40 ಪರ್ಸೆಂಟ್ ಸರ್ಕಾರ
ಇಲ್ಲಿಯೂ ಪ್ರಧಾನಿ ಮೋದಿ ಸಭೆ ಆಗಿತ್ತು. ಆದರೆ ಈ ಸರ್ಕಾರ ನಿಮಗಾಗಿ ಏನು ಮಾಡಿದೆ? ಯಾವ ಯೋಜನೆ ತಂದಿದೆ? ಮೋದಿ ಚುನಾವಣೆ ಹೊತ್ತಲ್ಲಿ ಬಂದು ಆತಂಕವಾದ ಮತ್ತು ಸುರಕ್ಷತೆ ಬಗ್ಗೆ ಮಾತನಾಡ್ತಾರೆ. ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯೇ ಆಗಿಲ್ಲ, ಮಾತನಾಡೋದು ಹೇಗೆ ಕೊನೆಗೆ ಆತಂಕವಾದ, ಸುರಕ್ಷತೆಯ ಭಾಷಣ ಮಾಡಿ ಹೋಗ್ತಾರೆ. ಪ್ರಧಾನಿಯವರಿಗೆ ರೈತರ ಆತ್ಮಹತ್ಯೆಯ ಬಗ್ಗೆ ಗೊತ್ತಿದ್ಯಾ ಕರ್ನಾಟಕದಲ್ಲಿ ಮತ್ತೊಂದು ಆತಂಕ ಇದೆ, ಇಲ್ಲಿ 40 ಪರ್ಸೆಂಟ್ ಸರ್ಕಾರದ ಆತಂಕ ಇದೆ. ಜನರನ್ನು ಲೂಟಿ ಮಾಡುವ ಬಿಜೆಪಿ ಸರ್ಕಾರದ ಬಗ್ಗೆ ಆತಂಕ ಇದೆ. 40 ಪರ್ಸೆಂಟ್ ಸರ್ಕಾರ ಪ್ರತೀ ಸರ್ಕಾರಿ ಹುದ್ದೆಗೂ ರೇಟ್ ಫಿಕ್ಸ್ ಮಾಡ್ತಿದೆ. ಇದರ ಆತಂಕವಿದೆ. ಭ್ರಷ್ಟಾಚಾರದ ಆತಂಕ ಇಡೀ ರಾಜ್ಯದಲ್ಲಿ ಇದೆ ಎಂದರು.
ಲಕ್ಷ ಕೋಟಿ ರೂಪಾಯಿ ಲೂಟಿ
ಕರ್ನಾಟಕದ ಒಂದೂವರೆ ಲಕ್ಷ ಕೋಟಿ ರೂಪಾಯಿ ಲೂಟಿಯಾಗಿದೆ. ಇದರಲ್ಲಿ ಆಸ್ಪತ್ರೆ, ಮನೆಗಳನ್ನು ಕಟ್ಟಬಹುದಿತ್ತು. ಇಂಥ ಲೂಟಿಯನ್ನು ತಡೆಗಟ್ಟಲು ಕಾಂಗ್ರೆಸ್ ಸರಕಾರ ಬೇಕು. ಕಾಂಗ್ರೆಸ್ ಇಂಥ ಸೋರಿಕೆಗಳನ್ನು ತಡೆಗಟ್ಟಿ, ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ತುಳುವಿನಲ್ಲೇ ಭಾಷಣ ಆರಂಭಿಸಿದ ಪ್ರಿಯಾಂಕ ಗಾಂಧಿ ನಮಸ್ಕಾರ ತುಳುನಾಡು, ಮಾತೆರೆಗ್ಲ ಎನ್ನ ಸೊಲ್ಮೆಲು. ಇದು ದೈವ ಭೂಮಿ, ಧರ್ಮದ ಮಣ್ಣು, ಜೈನ ಧರ್ಮದ ಪವಿತ್ರ ಬೀಡು ಮೂಡಬಿದ್ರೆ. ಬಪ್ಪನಾಡು,ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಆಶೀರ್ವಾದ ಈ ಭೂಮಿಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಏನು ಮಾಡಿದೆ
ಕರಾವಳಿಯ ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್ ಎಲ್ಲವನ್ನೂ ವಿಲೀನ ಮಾಡಿದರು. ಇಂದಿರಾಗಾಂಧಿ ನವ ಮಂಗಳೂರು ಬಂದರು ಮಾಡಿದರು. ನೆಹರೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರು. ಆದರೆ, ಎರಡನ್ನೂ ಅದಾನಿಗೆ ಮಾರಾಟ ಮಾಡಿದರು. ಇದೆಲ್ಲವನ್ನೂ ಒಂದಿಬ್ಬರು ಜನರಿಗೆ ಮಾರಾಟ ಮಾಡೋದು ಆತಂಕ ಅಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದೆಲ್ಲವೂ ಬಿಜೆಪಿಯ ಭ್ರಷ್ಟಾಚಾರದ ಬಹುದೊಡ್ಡ ಆತಂಕ. ಚುನಾವಣೆ ಹೊತ್ತಲ್ಲಿ ಅಭಿವೃದ್ಧಿ, ಉದ್ಯೋಗದ ಮಾತು ಆಡುವುದಿಲ್ಲ. ಇಲ್ಲಿ ಉದ್ಯೋಗ ಸೃಷ್ಟಿಸಲು ಅವಕಾಶ ಇದೆ. ಬೆಂಗಳೂರು ಸೇರಿ ಬೇರೆ ಜಿಲ್ಲೆಯ ಯುವಕರಿಗೆ ಉತ್ತಮ ಶಿಕ್ಚಣ ಇದೆ. ಆದರೆ ಇಲ್ಲಿ ಉದ್ಯೋಗ ಸಿಗದೇ ಜಗತ್ತಿನ ಬೇರೆ ಕಡೆ ಹೋಗಿ ಕೆಲಸ ಪಡೀತಿದಾರೆ. ಚುನಾವಣೆ ಹೊತ್ತಲ್ಲಿ ನಿಮ್ಮ ಅಗತ್ಯಗಳಿಗಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ.
ನಂದಿನ ಹಾಲು ಚೆನ್ನಾಗಿಯೇ ಇದೆ. ಈಗ ಗುಜರಾತ್ನ ಅಮುಲ್ಗೆ ವಿಲೀನ ಮಾಡಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಕೆಲವು ಗ್ಯಾರಂಟಿಗಳನ್ನು ಕೊಟ್ಟಿದೆ, ಆದರೆ ಅದಕ್ಕೆ ಹಣ ಎಲ್ಲಿಂದ ತರ್ತಾರೆ ಅಂತ ಪ್ರಶ್ನಿಸ್ತಿದ್ದಾರೆ. ಆದರೆ ನಮ್ಮ ಸರ್ಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ. ಬಿಜೆಪಿಯವರು ಲೂಟಿಯಲ್ಲೇ ತೊಡಗಿದ್ದಾರೆ, ನಿಮ್ಮ ಸಮಸ್ಯೆ ಕೇಳ್ತಾ ಇಲ್ಲ.ಧರ್ಮ ಮತ್ತು ಆತಂಕವಾದದ ಬಗ್ಗೆ ಮಾತನಾಡೋದು ಬಿಟ್ರೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡ್ತಿಲ್ಲ ಎಂದರು.
ಜನಾರ್ದನ ಪೂಜಾರಿಗೆ ಗೌರವ
ನೆಹರು ಕುಟುಂಬದೊಂದಿಗೆ ಆತ್ನೀಯ ಸಂಬಂಧ ಹೊಂದಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಇಳಿವಯಸ್ಸಿನಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಹಂಚಿಕೊಂಡರು. ಕೇಂದ್ರ ಮಾಜಿ ಸಚಿವ ಹಾಗೂ ಇಂದಿರಾ , ರಾಜೀವ್ ಸಂಪುಟದಲ್ಲಿದ್ದ ಜನಾರ್ದನ ಪೂಜಾರಿ ಅವರಿಗೆ ಮಾತಿನ ಮೂಲಕ ಗೌರವಾರ್ಪಣೆ ಮಾಡಿದರು.
ಗ್ಯಾರಂಟಿ ಈಡೇರಿಸುತ್ತೇವೆ
ಕಾಂಗ್ರೆಸ್ ಕೆಲವು ಗ್ಯಾರಂಟಿಗಳನ್ನ ಕೊಟ್ಟಿದೆ, ನಮ್ಮ ಸರಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ. ಬಿಜೆಪಿಯವರು ಲೂಟಿಯಲ್ಲೇ ತೊಡಗಿದ್ದಾರೆ, ಜನರ ಸಮಸ್ಯೆ ಅವರಿಗೆ ಬೇಕಾಗಿಲ್ಲ. ಧರ್ಮ ಮತ್ತು ಆತಂಕವಾದದ ಬಗ್ಗೆ ಮಾತನಾಡೋದು ಬಿಟ್ಟರೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದರು. ನಾವು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಅಲ್ಲದೆ ನೂರಕ್ಕೆ ನೂರು ವಿಕಾಸ ಮಾಡುತ್ತೇವೆ. ಉಚಿತ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಪ್ರಿಯಾಂಕಾ ಆಶ್ವಾಸನೆ ನೀಡಿದರು.