Karnataka Election 2023: ಕರ್ನಾಟಕ ಚುನಾವಣೆ ಮತ್ತು ಜಾತಿ ಲೆಕ್ಕಾಚಾರದ ಒಂದು ಚಿತ್ರಣ
Apr 03, 2023 07:02 PM IST
ಕರ್ನಾಟಕ ಚುನಾವಣೆ 2023
Karnataka Election 2023: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸೋಲು-ಗೆಲುವು ನಿರ್ಧರಿಸುವಲ್ಲಿ ಜಾತಿ ರಾಜಕಾರಣ ಕೇಂದ್ರ ಬಿಂದುವಾಗುತ್ತದೆ. ಯಾವ ಪಕ್ಷದ ಕಡೆಗೆ ಯಾವ ಜಾತಿಯ ಅಥವಾ ಸಮುದಾಯದ ಒಲವು ಹೇಗಿದೆ? 224 ಕ್ಷೇತ್ರಗಳ ಪೈಕಿ ಎಷ್ಟು ಕ್ಷೇತ್ರದಲ್ಲಿ ಯಾವ ಸಮುದಾಯ ನಿರ್ಣಾಯಕ ಎಂಬಿತ್ಯಾದಿ ಲೆಕ್ಕಾಚಾರ ಗಮನಸೆಳೆಯುತ್ತದೆ.
ಚುನಾವಣಾ ದಿನಾಂಕ ಘೋಷಣೆ ಆದ ದಿನದಿಂದ ರಾಜ್ಯದಲ್ಲಿ ಚುನಾವಣಾ ಕಾವು ಏರತೊಡಗಿದೆ. ಆಡಳಿತಾರೂಢ ಬಿಜೆಪಿ ಆಡಳಿತ ಚುಕ್ಕಾಣಿ ಉಳಿಸುವ ಭರವಸೆ ಹೊಂದಿದ್ದರೆ, ಕಾಂಗ್ರೆಸ್ ಅಧಿಕಾರಕ್ಕೇರುವ ಭರವಸೆ ಹೊಂದಿದೆ. ಈ ನಡುವೆ, ಅತಂತ್ರ ಜನಾದೇಶ ಬರಬಹುದು ಎಂಬ ಮಾತುಗಳು ಜನರ ನಡುವೆ ಕೇಳುತ್ತಲೇ ಇದೆ. ಹೀಗಾಗಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಲೇ ಪ್ರಚಾರ ಮಾಡುತ್ತಿದ್ದಾರೆ. ಇನ್ನು, ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲಿ ಒಂದು ಹೆಜ್ಜೆ ಗುರುತು ಮೂಡಿಸುವ ಭರವಸೆಯೊಂದಿಗೆ ಕಣಕ್ಕೆ ಇಳಿದಿದೆ. ಇವೆಲ್ಲ ಏನೇ ಇದ್ದರೂ, ಪಕ್ಷಗಳ ಸೋಲು ಗೆಲುವಿನಲ್ಲಿ ಜಾತಿ ರಾಜಕಾರಣ ಮೇಲುಗೈ ಪಡೆಯುತ್ತದೆ.
ಜಾತಿ, ಸಮುದಾಯಗಳ ಕ್ಷೇತ್ರ ಪ್ರಾಬಲ್ಯ
ಸಿಎನ್‌ಬಿಸಿಟಿವಿ18 ವರದಿ ಪ್ರಕಾರ, ಕರ್ನಾಟಕದ ಜನಸಂಖ್ಯೆ ಗಮನಿಸಿದರೆ ಲಿಂಗಾಯತರದ್ದು ಶೇಕಡ 17, ಒಕ್ಕಲಿಗರದ್ದು ಶೇಕಡ 15, ಒಬಿಸಿ ಶೇಕಡ 35 ಮತ್ತು ಎಸ್‌ಸಿ/ಎಸ್‌ಟಿ ಶೇಕಡ 18 ಮತ್ತು ಮುಸ್ಲಿಮರ ಪಾಲು ಶೇಕಡ 12.92, ಬ್ರಾಹ್ಮಣರ ಪಾಲು ಶೇಕಡ 3.
ಇದರಂತೆ, ರಾಜ್ಯದ 224 ಕ್ಷೇತ್ರಗಳ ಪೈಕಿ 65ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯ ಇದ್ದರೆ, 40 ಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಒಬಿಸಿಯವರು 24 ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದರೆ, ಮುಸ್ಲಿಮರು 18 ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.
ಲಿಂಗಾಯತರು
ಕರ್ನಾಟಕದ ಮತದಾರರ ಯಾದಿಯಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಪಾರಮ್ಯ. ವೋಟ್ ಬ್ಯಾಂಕ್ ಲೆಕ್ಕಾಚಾರ ಹಾಕಿದರೆ ಈ ಸಮುದಾಯದ ಪಾಲು ಶೇಕಡ 17. ಲಿಂಗಾಯತ ಸಮುದಾಯ ರೂಪುಗೊಂಡಿದ್ದು 12ನೇ ಶತಮಾನದಲ್ಲಿ. ಸಮಾಜದ ಸುಧಾರಣೆಗಾಗಿ ಬಸವಣ್ಣನವರು ಹುಟ್ಟುಹಾಕಿದ ಚಳವಳಿಯೇ ಲಿಂಗಾಯತ ಸಮುದಾಯದ ಮೂಲ. ಲಿಂಗಾಯತರಲ್ಲಿ ಬಹುತೇಕರು ಭಾರತೀಯ ಜನತಾಪಾರ್ಟಿ ಬಗ್ಗೆ ಒಲವು ಇರುವಂಥವರು. ಬಿ.ಎಸ್.ಯಡಿಯೂರಪ್ಪ ಅವರ ಬೆನ್ನಿಗೆ ನಿಂತುಕೊಂಡಿದೆ ಈ ಸಮುದಾಯ.
ಒಕ್ಕಲಿಗರು
ಕರ್ನಾಟಕದ ದಕ್ಷಿಣ ಭಾಗದ 10 ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಸಮುದಾಯ ಇದು. ಬಹುತೇಕರು ಕೃಷಿಕರು, ಜಮೀನು ಹೊಂದಿರುವಂಥವರು. ಹಳೆ ಮೈಸೂರು ಎಂದ ಕೂಡಲೇ ನೆನಪಾಗುವುದು ಒಕ್ಕಲಿಗರು. ಕಾರಣ ಅಲ್ಲೆಲ್ಲ ಅವರದ್ದೇ ಪಾರಮ್ಯ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಬೆನ್ನಿಗೆ ನಿಂತಿದೆ ಈ ಸಮುದಾಯ. ಜೆಡಿಎಸ್ ಒಕ್ಕಲಿಗರ ಪಕ್ಷ ಎಂದೇ ಬಿಂಬಿತವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದೇ ಸಮುದಾಯದ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿಯಾಗಿ ಕಂಡುಬಂದಿದ್ದಾರೆ. ಆದ್ದರಿಂದ ಸಮುದಾಯದಲ್ಲೂ ಮತಗಳ ಸ್ಪಷ್ಟ ವಿಭಜನೆ ನಿರೀಕ್ಷಿಸಬಹುದು.
ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದಲಿತರು)
ಅಹಿಂದ ಎಂದ ಕೂಡಲೇ ತತ್‌ಕ್ಷಣಕ್ಕೆ ನೆನಪಾಗುವುದು ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ವಾಸ್ತವದಲ್ಲಿ ಅಹಿಂದ ಪರಿಕಲ್ಪನೆ ಹುಟ್ಟುಹಾಕುವಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪಾತ್ರ ಹಿರಿದು. ಒಕ್ಕಲಿಗರು ಮತ್ತು ಲಿಂಗಾಯತರ ನಡುವೆ ಅಧಿಕಾರ ಕೇಂದ್ರೀಕೃತ ಆಗುವುದನ್ನು ತಡೆಯಲು ಅವರು ಇದನ್ನು ಹುಟ್ಟುಹಾಕಿದರು. ಬಳಿಕ, ಸಿದ್ದರಾಮಯ್ಯ 2013ರ ಚುನಾವಣೆ ಸಂದರ್ಭದಲ್ಲಿ ಇದಕ್ಕೆ ಮರುಜೀವ ನೀಡುವುದಾಗಿ ಘೋಷಿಸಿ ಚುನಾವಣೆ ಗೆದ್ದು ಮುಖ್ಯಮಂತ್ರಿ ಆಗಿದ್ದು ಇತಿಹಾಸ. ಈಗ ಅಹಿಂದ ಮತಬ್ಯಾಂಕ್ ಧ್ರುವೀಕರಣಕ್ಕೆ ಪೂರಕ ಕೆಲಸಗಳು ಆಗಿಲ್ಲ.
ಮುಸ್ಲಿಮರು
ರಾಜ್ಯದ ಮತದಾರರ ಪೈಕಿ ಮುಸ್ಲಿಮರ ಪಾಲು ಶೇಕಡ 13. ರಾಜ್ಯ ರಾಜಕೀಯದಲ್ಲಿ ಇವರ ಬೆಂಬಲ ಬಹುತೇಕ ಕಾಂಗ್ರೆಸ್ ಪಕ್ಷಕ್ಕೇ ಇತ್ತು. ಜೆಡಿಎಸ್ ಪ್ರವರ್ಧಮಾನಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯದ ಮತ ವಿಭಜನೆ ಆಗಿರುವುದು ಸ್ಪಷ್ಟ. ಕಳೆದ ಐದು ವರ್ಷಗಳ ಅವಧಿಯನ್ನು ಅವಲೋಕಿಸಿದರೆ ಮುಸ್ಲಿಂ ಮತ ಬ್ಯಾಂಕ್ ಮೇಲೆ ಈಗ ಕಾಂಗ್ರೆಸ್, ಜೆಡಿಎಸ್ ಹೊರತಾಗಿ ಎಸ್‌ಡಿಪಿಐ ಮತ್ತು ಎಐಎಂಐಎಂ ಕಣ್ಣಿಟ್ಟು ಕೆಲಸ ಮಾಡುತ್ತಿವೆ.