Karnataka Election: ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಮಾಜಿ ಕಾರ್ಪೊರೇಟರ್ ಕೃತ್ಯವೆಂದ ಸಂಸದ ತೇಜಸ್ವಿ ಸೂರ್ಯ
May 08, 2023 07:05 AM IST
ಗಾಯಗೊಂಡ ಬಿಜೆಪಿ ಕಾರ್ಯಕರ್ತ
- Bengaluru Crime News: ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು: ಬಿಟಿಎಂ ಬಡಾವಣೆಯಲ್ಲಿ ನಮ್ಮ ಕಾರ್ಯಕರ್ತ ಹರಿನಾಥ್ ಮೇಲೆ ಕಾಂಗ್ರೆಸ್ ರೌಡಿಗಳು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಬದುಕಿನಲ್ಲಿ ಇಂತಹದ್ದೇ ಘಟನೆ ಎರಡು ವರ್ಷ ಹಿಂದೆಯೂ ನಡೆದಿತ್ತು. ನನ್ನ ಮೇಲೆ ಮಾಜಿ ಕಾರ್ಪೊರೇಟರ್ ಮಂಜುನಾಥ್ ರೆಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಹರಿನಾಥ್ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಬಿಟಿಎಂ ಬಡಾವಣೆಯ ಒಂದನೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಪರ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿದ್ದಾರೆ. ಈ ಸಂದರ್ಭದಲ್ಲಿ ಎರಡು ಪಾರ್ಟಿಯವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ ಎಂದು ವರದಿಗಳು ತಿಳಿಸಿವೆ.
ತೇಜಸ್ವಿ ಸೂರ್ಯ ಮಾಡಿರುವ ಟ್ವೀಟ್‌ನಲ್ಲಿರುವ ಗಂಭೀರವಾಗಿ ಗಾಯಗೊಂಡ ಹರಿನಾಥ್‌ನ ಫೋಟೊಗಳನ್ನು ಹಂಚಿಕೊಳ್ಳಲಾಗಿದೆ. ಫೋಟೊದಲ್ಲಿ ಹರಿನಾಥ್‌ಗೆ ಗಂಭೀರವಾಗಿ ಗಾಯಗೊಂಡಿರುವುದು ಕಾಣಿಸುತ್ತದೆ. ಜತೆಗೆ ದೇಹದಲ್ಲಿ ಸಾಕಷ್ಟು ರಕ್ತದ ಕಲೆಗಳು ಕಾಣಿಸುತ್ತವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೆರಡು ಫೋಟೊಗಳು ಟ್ವೀಟ್‌ನಲ್ಲಿವೆ.
ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ಪುತ್ರ ಮತ್ತು ಬಿಜೆಪಿ ಕಾರ್ಯಕರ್ತರು ಈ ಘಟನೆಯ ಕುರಿತು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಕರ್ನಾಟವನ್ನು ನಂಬರ್ ಒನ್ ರಾಜ್ಯ ಮಾಡಲು ಮತ್ತೊಮ್ಮೆ ಆಶೀರ್ವದಿಸಿ: ಸಿಎಂ ಬೊಮ್ಮಾಯಿ
ಶಿಗ್ಗಾಂವಿ: ಶಿಗ್ಗಾಂವಿ ಸವಣೂರು ತಾಲೂಕುಗಳನ್ನು ರಾಜ್ಯದ ನಂಬರ್ ತಾಲೂಕು ಮಾಡಲು ಹಾಗೂ ಹಾವೇರಿಯನ್ನು ರಾಜ್ಯದ ನಂಬರ್ ಒನ್ ಜಿಲ್ಲೆ ಹಾಗೂ ಕರ್ನಾಟಕವನ್ನು ನಂಬರ್ ಒನ್ ರಾಜ್ಯ ಮಾಡಲು ಮತ್ತೊಮ್ಮೆ ಆಶೀರ್ವಾದ ಮಾಡಿ ನನ್ನನ್ನು ಆಯ್ಕೆ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ನಿನ್ನೆ ಶಿಗ್ಗಾಂವಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿ ಮಾತನಾಡಿದರು.
ಇದು ಯಾವ ಜನ್ಮದ ಋಣಾನುಬಂಧವೋ ನಮ್ಮನ್ನು ಇಲ್ಲಿ ಕೂಡಿಸಿದೆ. ನಾನು ಎಷ್ಟೇ ಕೆಲಸ ಮಾಡಿದರೂ ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ಅದು ಕಡಿಮೆ. ಇಲ್ಲಿನ ಶಾಸಕರು ಮುಖ್ಯಮಂತ್ರಿಯಾಗಿ ಈ ರಾಜ್ಯವನ್ನು ಮುನ್ನಡಿಸಿದರು. ಎಸ್ ನಿಜಲಿಂಗಪ್ಪ ಅವರು ಅವರೋಧ ಆಯ್ಕೆಯಾಗಿ ಕೆಲಸ ಮಾಡಿ ಗೌರವಯುತವಾಗಿ ರಾಜ್ಯವನ್ನು ಮುನ್ನಡೆಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇವತ್ತಿನ ಸ್ಪರ್ಧಾತ್ಮಕ ರಾಜಕಾರಣದಲ್ಲಿ ಹಾಗೂ ನೀವು ನನಗೆ ಕೊಟ್ಟಿರುವ ಬೆಂಬಲದಿಂದ 2018 ರ ಚುನಾವಣೆಯಲ್ಲಿ ನೀವು ನನಗೆ ಕೊಟ್ಟ ಮತದ ಶಕ್ತಿಯಿಂದ ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಯ ಕಲ್ಪನೆ ಇಟ್ಟುಕೊಂಡು ನಾನು ಕೆಲಸ ಮಾಡಿದ್ದೇನೆ. ನನ್ನ ರಿಪೋರ್ಟ್ ಕಾರ್ಡ್ ನಿಮ್ಮ ಮುಂದೆ ಇಟ್ಟು ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.