Karnataka Election: ಬಿಜೆಪಿಯಿಂದ ಸಾರ್ವಜನಿಕರಿಗೆ ದ್ರೋಹ, ನೈಜ ಸಮಸ್ಯೆಗಳಿಂದ ದಿಕ್ಕು ತಪ್ಪಿಸುವ ಹುನ್ನಾರ: ಪ್ರಿಯಾಂಕ ಗಾಂಧಿ
Apr 30, 2023 05:28 PM IST
ಪ್ರಿಯಾಂಕ ಗಾಂಧಿ . (File Photo)
Priyanka Gandhi in Karnataka: "ನೀವು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯಯವರ ಕೆಲಸವನ್ನು ನೋಡಿದ್ದೀರಿ. ಇದೇ ರೀತಿ ನಿಮ್ಮೆಲ್ಲರಿಗಾಗಿ ನಾವು ಏನಾದರೂ ಅತ್ಯುತ್ತಮವಾದದ್ದನ್ನು ಮಾಡುತ್ತೇವೆ ಎಂಬ ವಿಶ್ವಾಸವಿದೆ" ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ಕರ್ನಾಟಕ (Karnataka Election)ಕ್ಕೆ ಆಗಮಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಭಾನುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ಸಾರ್ವಜನಿಕರಿಗೆ ದ್ರೋಹ ಮಾಡಿದೆ. ಜನರನ್ನು ಮುಖ್ಯ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
"ಬಿಜೆಪಿ ಎಲ್ಲಾ ಹಂತಗಳಲ್ಲಿ ಸಾರ್ವಜನಿಕರಿಗೆ ದ್ರೋಹ ಮಾಡಿದೆ, ಭಾರತೀಯ ಜನತಾ ಪಕ್ಷವು ನಿರುದ್ಯೋಗ ಇತ್ಯಾದಿ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ" ಎಂದು ಅವರು ಹೇಳಿದರು.
ಮುಂಬರುವ ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನೆನಪಿಸಿದ ಪ್ರಿಯಾಂಕ ಗಾಂಧಿ, ನಮ್ಮ ಪಕ್ಷವು ನೈಜ್ಯ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸಲಿದೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷವು ಮಾಡುವುದಿಲ್ಲ ಎಂದರು.
"ಈ ಚುನಾವಣೆಯು ಸಾರ್ವಜನಿಕರು ತಮ್ಮ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಇದೆ. ಇಲ್ಲಿ ಲೂಟಿ ಆಗಿದೆ ಎನ್ನುವುದು ಸಾರ್ವಜನಿಕರಿಗೆ ತಿಳಿದಿದೆ. ಅವರು ಬದಲಾವಣೆ ಬಯಸುತ್ತಾರೆ" ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಮತ್ತು ಜನರಿಗಾಗಿ ಕೆಲಸ ಮಾಡಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
"ಬಿಜೆಪಿಯು ಸುಳ್ಳು ಭರವಸೆಗಳನ್ನು ನೀಡುತ್ತದೆ ಮತ್ತು ಎಂದಿಗೂ ಈಡೇರಿಸುವುದಿಲ್ಲ. ಆದರೆ ಕಾಂಗ್ರೆಸ್ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಕಾಂಗ್ರೆಸ್ ಯಾವಾಗಲೂ ಜನರಿಗಾಗಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ. ಜನರಿಗೆ ಎಂದೂ ದ್ರೋಹ ಮಾಡಬಾರದು" ಎಂದು ಅವರು ಹೇಳಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂತೆ ಕೆಲಸ ಮಾಡುತ್ತೇವೆ
"ನೀವು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯಯವರ ಕೆಲಸವನ್ನು ನೋಡಿದ್ದೀರಿ. ಇದೇ ರೀತಿ ನಿಮ್ಮೆಲ್ಲರಿಗಾಗಿ ನಾವು ಏನಾದರೂ ಅತ್ಯುತ್ತಮವಾದದ್ದನ್ನು ಮಾಡುತ್ತೇವೆ ಎಂಬ ವಿಶ್ವಾಸವಿದೆ" ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ.
ಮೊನ್ನೆ ಬುಧವಾರ, ಚಿತ್ರದುರ್ಗದಲ್ಲಿ ರೋಡ್ ಶೋ ವೇಳೆಯೂ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು.
40 ಪರ್ಸೆಂಟ್ ಸರ್ಕಾರ ಯಾರದು? ಎಲ್ಲ ಹಗರಣಗಳನ್ನು ಮಾಡಿದ್ದು ಯಾರು? ಪಿಎಸ್‌ಐ ಹಗರಣ ಮಾಡಿದ್ದು ಯಾರು? ಗುತ್ತಿಗೆದಾರರಿಗೆ ಕಿರುಕುಳ ನೀಡಿದವರು ಯಾರು? ಹುದ್ದೆಗಳಿಗೆ ಕಮಿಷನ್ ಕೇಳುವವರು ಯಾರು? ಇಲ್ಲಿಂದ ಯಾರನ್ನು ಕಿತ್ತೊಗೆಯಬೇಕು? ಎಂದು ಪ್ರಿಯಾಂಕ ಗಾಂಧಿ ವಾದ್ರಾ ಪ್ರಶ್ನಿಸಿದ್ದರು.
ರೋಡ್‌ಶೋನಲ್ಲಿ ಭಾಗವಹಿಸಿದ ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿದ್ದರು. "ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನರು ತಮ್ಮ ಸ್ವಾಭಿಮಾನ ಮತ್ತು ಭವಿಷ್ಯಕ್ಕಾಗಿ ಮತ ಚಲಾಯಿಸಬೇಕೆಂದು ಕೇಳಿಕೊಂಡರು. "ಈ ಚುನಾವಣೆಯಲ್ಲಿ ನಿಮ್ಮ ಭವಿಷ್ಯ, ನಿಮ್ಮ ಮಕ್ಕಳು, ನಿಮ್ಮ ರಾಜ್ಯ ಮತ್ತು ನಿಮ್ಮ ಹೆಮ್ಮೆಗಾಗಿ ಮತ ಚಲಾಯಿಸಿ" ಎಂದು ಅವರು ಹೇಳಿದರು. ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.