logo
ಕನ್ನಡ ಸುದ್ದಿ  /  ಕರ್ನಾಟಕ  /  Result Analysis: ಹಾಸನ ಜಿಲ್ಲೆಯ ಚುನಾವಣಾ ಫಲಿತಾಂಶ; ಕುಟುಂಬ ರಾಜಕಾರಣದ ವಿರುದ್ಧ ಎಚ್ಚರಿಕೆಯ ಸಂದೇಶ

Result Analysis: ಹಾಸನ ಜಿಲ್ಲೆಯ ಚುನಾವಣಾ ಫಲಿತಾಂಶ; ಕುಟುಂಬ ರಾಜಕಾರಣದ ವಿರುದ್ಧ ಎಚ್ಚರಿಕೆಯ ಸಂದೇಶ

HT Kannada Desk HT Kannada

May 13, 2023 09:50 PM IST

google News

ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು

    • ಕಳೆದ ಚುನಾವಣೆಯಲ್ಲಿ ಹಾಸನದ ಏಳು ಕ್ಷೇತ್ರಗಳಲ್ಲಿ ಆರನ್ನು ಗೆದ್ದು ಪ್ರಾಬಲ್ಯ ಮೆರೆದಿದ್ದ ಜೆಡಿಎಸ್, ಈ ಬಾರಿ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬಿಜೆಪಿ ಈಗ ತನ್ನ ಬಲವನ್ನು 2 ಸ್ಥಾನಗಳಿಗೆ ಹೆಚ್ಚಿಸಿಕೊಂಡಿದೆ.
ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು
ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು

ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಈ ಬಾರಿಯ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪು ಅಭ್ಯರ್ಥಿಗಳಿಗೆ ಎಚ್ಚರಿಕೆಯ ಪಾಠದಂತಿದೆ. ಇದೇ ವೇಳೆ ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವ ಕುಗ್ಗುತ್ತಿರುವ ಸೂಚನೆಯನ್ನೂ ಈ ಫಲಿತಾಂಶ ನೀಡಿದೆ. ಎಚ್‌ಡಿ ರೇವಣ್ಣ ಅವರ ಕುಟುಂಬ ರಾಜಕಾರಣದ ವಿರುದ್ಧ ಮತದಾರ ಸ್ಪಷ್ಟ ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಆರನ್ನು ಗೆದ್ದು ಪ್ರಾಬಲ್ಯ ಮೆರೆದಿದ್ದ ಜೆಡಿಎಸ್, ಈ ಬಾರಿ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬಿಜೆಪಿ ಈಗ ತನ್ನ ಬಲವನ್ನು 2 ಸ್ಥಾನಗಳಿಗೆ ಹೆಚ್ಚಿಸಿಕೊಂಡಿದ್ದರೆ, 2018ರಲ್ಲಿ ಶೂನ್ಯ ಸಾಧನೆ ಮಾಡಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಒಂದು ಸ್ಥಾನ ಗೆಲ್ಲುವ ಮೂಲ ಖಾತೆ ತೆರೆದಿದೆ.

ಜೆಡಿಎಸ್ ತೆಕ್ಕೆಯಲ್ಲಿದ್ದ ಸಕಲೇಶಪುರ ಮತ್ತು ಬೇಲೂರು ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರೆ, ಅರಸೀಕೆರೆ ಕ್ಷೇತ್ರವನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಬಿಜೆಪಿ ಶಾಸಕರಿದ್ದ ಪ್ರತಿಷ್ಠಿತ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಮತ್ತೆ ಅಧಿಕಾರ ಸ್ಥಾಪಿಸಿದೆ. ಉಳಿದಂತೆ ಅರಕಲಗೂಡು, ಹೊಳೆನರಸೀಪುರ ಮತ್ತು ಶ್ರವಣಬೆಳಗೊಳ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡಿದೆ.

ಹೊಳೆನರಸೀಪುರದಲ್ಲಿ ಸ್ವಾಭಿಮಾನದ ಪಾಠ

ಜೆಡಿಎಸ್ ಭದ್ರಕೋಟೆ ಎನಿಸಿದ್ದ ಹಾಸನ ಜಿಲ್ಲೆಯಲ್ಲಿ, ಪಕ್ಷ ಈ ಬಾರಿ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಜಿಲ್ಲಾ ಜೆಡಿಎಸ್‍ನ ಪ್ರಶ್ನಾತೀತ ನಾಯಕ ಎಚ್‌ಡಿ ರೇವಣ್ಣ ಅವರೇ ತಮ್ಮ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿ ಕಾಂಗ್ರೆಸ್‍ನ ಶ್ರೇಯಸ್ ಪಟೇಲ್ ವಿರುದ್ಧ ಕೇವಲ 3152 ಮತಗಳ ಅಂತರದಿಂದ ಗೆಲುವಿನ ದಡ ಸೇರಿ ನಿಟ್ಟುಸಿರುಬಿಟ್ಟಿದ್ದಾರೆ. ಮಾಜಿ ಸಂಸದ ದಿವಂಗತ ಜಿ ಪುಟ್ಟಸ್ವಾಮಿಗೌಡರ ಮೊಮ್ಮಗ ಕಾಂಗ್ರೆಸ್‍ನ ಶ್ರೇಯಸ್ ಪಟೇಲ್ ಇದೇ ಪ್ರಥಮ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರೂ, ಅನುಭವಿ ರೇವಣ್ಣ ಅವರಿಗೆ ಪ್ರಬಲ ಪೈಪೋಟಿ ಒಡ್ಡಿ ಗೆಲುವಿನ ಓಟದಲ್ಲಿ ಏದುರಿಸು ಬಿಡುವಂತೆ ಮಾಡಿದ್ದಾರೆ. ಸತತ ಅಧಿಕಾರದ ಅಮಲಲ್ಲಿ ಅಹಂಕಾರದ ನಡವಳಿಕೆ ತೋರಿದರೆ, ನೀವೆಷ್ಟೇ ಅಭಿವೃದ್ಧಿ ಕೆಲಸ ಮಾಡಿದ್ದರೂ ಮತದಾರ ಸ್ವಾಭಿಮಾನದ ಉತ್ತರ ನೀಡುತ್ತಾನೆ ಎಂಬುದಕ್ಕೆ ಹೊಳೆನರಸಿಪುರದ ಫಲಿತಾಂಶ ಸಾಕ್ಷಿ ಆಗಿದೆ. ಕಳೆದ ಚುನಾವಣೆಯಲ್ಲಿ ಎಚ್‌ಡಿ ರೇವಣ್ಣ ಅವರು ಕಾಂಗ್ರೆಸ್‍ನ ಬಿಪಿ ಮಂಜೇಗೌಡರಿಗಿಂತ 43832 ಅಧಿಕ ಮತಗಳನ್ನು ಪಡೆದು ವಿಜೇತರಾಗಿದ್ದರು. ಒಟ್ಟು ಆರು ಬಾರಿ ವಿಧಾನಸಭೆಗೆ ಆರಿಸಿ ಬಂದಿರುವ ಎಚ್‌ಡಿ ರೇವಣ್ಣನವರಿಗೆ ಇದು ಸತತ ಐದನೇ ಗೆಲುವಾಗಿದೆ.

ಬಾಲಣ್ಣನಿಗೆ ಪ್ರಯಸದ ಹ್ಯಾಟ್ರಿಕ್

ಅದೇ ರೀತಿ ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ ಸತತ ಮೂರನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ. ಆದರೆ, ಅವರ ಈ ಹ್ಯಾಟ್ರಿಕ್ ಸಾಧನೆಗೆ ಕಾಂಗ್ರೆಸ್‍ನ ಎಂಎ ಗೋಪಾಲಸ್ವಾಮಿ ತೀವ್ರ ಅಡ್ಡಿ ಉಂಟು ಮಾಡಿದ್ದರಿಂದ ಕೇವಲ 6645 ಮತಗಳ ಗೆಲುವು ದಾಖಲಿಸಿದ್ದಾರೆ. ಕಳೆದ ಬಾರಿ ಬಾಲಕೃಷ್ಣ ಅವರ ಗೆಲುವಿನ ಅಂತರ 53012 ಮತಗಳಷ್ಟಿತ್ತು. ಅಭಿವೃದ್ಧಿ ಕಾರ್ಯ ನಡೆಸುವುದರೊಂದಿಗೆ ಮತದಾರರೊಂದಿಗೆ ಉತ್ತಮ ಒಡನಾಟ ಹೊಂದಿದ್ದರೂ ಸರ್ಕಾರಿ ಕಚೇರಿಗಳಲ್ಲಿ ಮತ್ತು ಪೊಲೀಸ್ ಇಲಾಖೆಯಲ್ಲಿ ಮಿತಿಮೀರಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಯತ್ನಿಸಿದ ಸಿಎನ್ ಬಾಲಕೃಷ್ಣ ಅವರಿಗೆ ಈ ಫಲಿತಾಂಶ ಎಚ್ಚರಿಕೆಯ ಪಾಠದಂತಿದೆ.

ಪ್ರೀತಂ ಅಹಂಗೆ ಪೆಟ್ಟು; ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟು

ಅಭಿವೃದ್ಧಿ ಕಾರ್ಯ ನಡೆಸುವುದರ ಜೊತೆಗೆ ಜೆಡಿಎಸ್‍ನ ಎಚ್‌ಡಿ ರೇವಣ್ಣ ಕುಟುಂಬವನ್ನು ಎದುರು ಹಾಕಿಕೊಂಡು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದಿದ್ದ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡರ ಗರ್ವಭಂಗ ಸಹ ಈ ಚುನಾವಣೆ ಫಲಿತಾಂಶದ ವಿಶೇಷ. ಎಚ್‌ಡಿ ರೇವಣ್ಣ ತಮ್ಮ ವಿರುದ್ಧ ಸ್ಪರ್ಧಿಸಿದರೆ 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುವುದಾಗಿ ಸವಾಲು ಹಾಕಿದ್ದ ಪ್ರೀತಂಗೌಡ, ಜೆಡಿಎಸ್‍ನ ಒಬ್ಬ ಸಾಮಾನ್ಯ ಕಾರ್ಯಕರ್ತನ ಎದುರು ಮಂಡಿ ಊರಬೇಕಾಗಿ ಬಂದಿದ್ದು, ಪ್ರಜಾಪ್ರಭುತ್ವದ ವಿಶೇಷ. ಜೆಡಿಎಸ್‍ನ ಎಚ್‌ಪಿ ಸ್ವರೂಪ್ ವಿರುದ್ಧ ಪ್ರೀತಂಗೌಡ 7854 ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ. ಗೆಲುವಿಗೆ ಅಭಿವೃದ್ಧಿ ಒಂದೇ ಮಾನದಂಡವಾಗುವುದಿಲ್ಲ, ಮಾತು ಮತ್ತು ನಡವಳಿಕೆಯಲ್ಲಿ ಸೌಜನ್ಯವೂ ಇರಬೇಕು ಎಂಬ ನೀತಿಪಾಠವನ್ನು ಹಾಸನ ಕ್ಷೇತ್ರದ ಮತದಾರ ಹೇಳಿದ್ದಾನೆ.

ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ತಮಗೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದ ಎಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ಅವರು ಕೊನೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ನಿರ್ಧಾರದಂತೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್‌ಪಿ ಸ್ವರೂಪ್ ಅವರಿಗೆ ಟಿಕೆಟ್ ಕೊಡಲು ಒಪ್ಪಿದ್ದಲ್ಲದೆ, ಅಸಮಾಧಾನ ಮರೆತು ಎಚ್‌ಡಿ ರೇವಣ್ಣ ಅವರ ಇಡೀ ಕುಟುಂಬ ಸ್ವರೂಪ್ ಪರ ಕೆಲಸ ಮಾಡಿದ್ದು ಸಹ ಬಿಜೆಪಿ ಸೋಲಿಗೆ ಮತ್ತು ಜೆಡಿಎಸ್ ಗೆಲುವಿಗೆ ಕಾರಣವಾಗಿದೆ. ಅಲ್ಲದೆ, ಕುಟುಂಬ ರಾಜಕಾರಣ ಮಾಡದೆ ಕಾರ್ಯಕರ್ತರ ಪರ ಪಕ್ಷ ನಿಂತರೆ ಮತದಾರರು ಬೆಂಬಲಿಸುತ್ತಾರೆ ಎಂಬ ನೀತಿಪಾಠವನ್ನೂ ಈ ಫಲಿತಾಂಶ ಕಲಿಸಿದೆ.

ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ ಶಿವಲಿಂಗೇಗೌಡ

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ ಕೆಎಂ ಶಿವಲಿಂಗೇಗೌಡ ಈ ಬಾರಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದರೂ, ಕ್ಷೇತ್ರದ ಮತದಾರರು ಅವರ ಕೈ ಬಿಡದೆ ಸತತ ನಾಲ್ಕನೇ ಗೆಲುವು ತಂದುಕೊಟ್ಟಿದ್ದಾರೆ.

ಪಕ್ಷ ತೊರೆದ ಶಿವಲಿಂಗೇಗೌಡರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದು, ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದ ಎನ್ಆರ್ ಸಂತೋಷ್ ಅವರನ್ನು ಕರೆತಂದು ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿದರೂ ದಳಪತಿಗಳ ಬಯಕೆ ಈಡೇರಿಲ್ಲ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರಾದಿ ಆಗಿ ಜೆಡಿಎಸ್ ನಾಯಕರು ಅರಸೀಕೆರೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿ, ತಮ್ಮ ಪಕ್ಷದ ಅಭ್ಯರ್ಥಿ ಎನ್ಆರ್ ಸಂತೋಷ್ ಅವರನ್ನು ಗೆಲ್ಲಿಸಿ ಎಂಬುದಾಗಿ ಕೇಳಿಕೊಳ್ಳುವುದಕ್ಕಿಂತ ಶಿವಲಿಂಗೇಗೌಡರನ್ನು ಸೋಲಿಸಿ ಎಂದು ಕರೆ ನೀಡಿದ್ದೇ ಹೆಚ್ಚು. ಆದರೆ ಕ್ಷೇತ್ರದ ಮತದಾರರು ದ್ವೇಷ ರಾಜಕಾರಣದ ವಿರುದ್ಧ ಮತ ನೀಡಿರುವಂತಿದೆ. ಕಳೆದ ಬಾರಿ ಕಾಂಗ್ರೆಸ್‍ನ ಜಿಬಿ ಶಶಿಧರ್ ಅವರ ವಿರುದ್ಧ 43689 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದ ಶಿವಲಿಂಗೇಗೌಡರು, ಈ ಬಾರಿ ಜೆಡಿಎಸ್‍ನ ಸಂತೋಷ್ ವಿರುದ್ಧ 20177 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.

ಅರಕಲಗೂಡಿನಲ್ಲಿ ಎ ಮಂಜು ಗೆಲುವು

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ, ಜೆಡಿಎಸ್‍ನ ಎಟಿ ರಾಮಸ್ವಾಮಿ ವಿರುದ್ಧ ಸೋಲನುಭವಿಸಿದ್ದ ಮಾಜಿ ಸಚಿವ ಎ ಮಂಜು, ನಂತರ ಬಿಜೆಪಿ ಸೇರಿ ಸಂಸತ್ ಚುನಾವಣೆಯಲ್ಲಿ ಜೆಡಿಎಸ್‍ನ ಪ್ರಜ್ವಲ್ ರೇವಣ್ಣ ವಿರುದ್ಧ ಕಣಕ್ಕಿಳಿದು ಪರಾಭವಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಟಿ ರಾಮಸ್ವಾಮಿ ಜೆಡಿಎಸ್ ತೊರೆದು ಬಿಜೆಪಿ ಸೇರಿದರೆ, ಎ ಮಂಜು ಬಿಜೆಪಿ ಬಿಟ್ಟು ಜೆಡಿಎಸ್ ಸೇರಿ ಮತ್ತೊಮ್ಮೆ ಅರಕಲಗೂಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ 74643 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂಟಿ ಕೃಷ್ಣೇಗೌಡರ ವಿರುದ್ಧ 19605 ಮತಗಳ ಅಂತರದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಎಂಟಿ ಕೃಷ್ಣೇಗೌಡರು ಟಿಕೆಟ್ ಕೈ ತಪ್ಪಿದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು 55038 ಮತಗಳನ್ನು ಪಡೆದಿದ್ದು, ಕಾಂಗ್ರೆಸ್‌‍ನ ಅಧಿಕೃತ ಅಭ್ಯರ್ಥಿ ಶ್ರೀಧರಗೌಡ 35947 ಮತಗಳಿಸಿದ್ದಾರೆ. ಒಂದು ವೇಳೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಇಲ್ಲದಿದ್ದರೆ ಎ ಮಂಜು ಗೆಲುವು ಕಷ್ಟವಾಗುತ್ತಿತ್ತು. ಬಿಜೆಪಿ ಅಭ್ಯರ್ಥಿ ಯೋಗಾರಮೇಶ್ 19575 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಎಚ್‍ಕೆಕೆಗೆ ಕೈಕೊಟ್ಟ ಅದೃಷ್ಟ

ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆಯಾಗಿದ್ದ ಜೆಡಿಎಸ್ ಶಾಸಕ ಎಚ್‌ಕೆ ಕುಮಾರಸ್ವಾಮಿ ಅವರಿಗೆ ಈ ಬಾರಿ ಅದೃಷ್ಟ ಕೈಕೊಟ್ಟಿದೆ. ಬೇಲೂರು ಕ್ಷೇತ್ರದಲ್ಲಿ ಮೂರು ಬಾರಿ ಸೇರಿದಂತೆ ಒಟ್ಟು ಆರು ಬಾರಿ ಶಾಸಕರಾಗಿರುವ ಎಚ್‌ಕೆ ಕುಮಾರಸ್ವಾಮಿ ಅವರನ್ನು ಅದೃಷ್ಟವಂತ ರಾಜಕಾರಣಿ ಎಂದೇ ಹೇಳಲಾಗುತ್ತದೆ. ಸೌಮ್ಯ ಸ್ವಭಾವದ ಎಚ್‌ಕೆ ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯಗಳ ಕುರಿತು ಅಷ್ಟೇನು ಮುತುವರ್ಜಿ ವಹಿಸದಿದ್ದರೂ, ಪ್ರತಿಪಕ್ಷಗಳಲ್ಲಿ ಸಮರ್ಥ ಅಭ್ಯರ್ಥಿ ಇಲ್ಲ ಎಂಬ ಕಾರಣಕ್ಕೆ ಕ್ಷೇತ್ರದ ಮತದಾರರು ಗೆಲ್ಲಿಸುತ್ತಾ ಬಂದಿದ್ದರು. ಈ ಬಾರಿಯೂ ಅದೇ ಅದೃಷ್ಟ ಮುಂದುವರೆಯುವ ನಿರೀಕ್ಷೆಯಲ್ಲಿದ್ದ ಕುಮಾರಸ್ವಾಮಿ ಅವರಿಗೆ ಮುಖಭಂಗ ಉಂಟಾಗಿದೆ. ಕಳೆದ ಬಾರಿ ಬಿಜೆಪಿಯ ನಾರ್ವೆ ಸೋಮಶೇಖರ್ ವಿರುದ್ಧ ಕೇವಲ 4942 ಮತಗಳ ಅಂತರದಿಂದ ವಿಜಯ ಸಾಧಿಸಿದ್ದ ಎಚ್‍ಕೆಕೆ, ಈ ಬಾರಿ ಬಿಜೆಪಿಯ ಸಿಮೆಂಟ್ ಮಂಜು ವಿರುದ್ಧ ಕೇವಲ 2056 ಮತಗಳ ಅಂತರದಿಂದ ಸೋಲುಂಡಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಕಾಂಗ್ರೆಸ್‍ನ ಮುರಳಿ ಮೋಹನ್ 42811 ಮತಗಳನ್ನು ಗಳಿಸಿದ್ದು ಸಹ ಎಚ್‍ಕೆಕೆ ಸೋಲಿಗೆ ಕಾರಣವಾಗಿದೆ.

ಲಿಂಗೇಶ್ ಕೈ ಹಿಡಿಯದ ಲಿಂಗಾಯತರು

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತದಾರರೇ ನಿರ್ಣಾಯಕ ಸಂಖ್ಯೆಯಲ್ಲಿದ್ದೂ, ಕಣದಲ್ಲಿದ್ದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಜೆಡಿಎಸ್ ಶಾಸಕ ಕೆಎಸ್ ಲಿಂಗೇಶ್ ಒಬ್ಬರೇ ಸ್ಥಳೀಯರು ಮತ್ತು ಲಿಂಗಾಯತರಾಗಿದ್ದರೂ ಸಹ ಸೋಲುಂಡಿದ್ದಾರೆ. ಕಳೆದ ಬಾರಿ ಗೆಲುವು ತಂದುಕೊಟ್ಟಿದ್ದ ಜಾತಿ ಲೆಕ್ಕಾಚಾರ ಈ ಬಾರಿ ಉಪಯೋಗಕ್ಕೆ ಬಂದಿಲ್ಲ. ಕಳೆದ ಬಾರಿ ಲಿಂಗೇಶ್‍ಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಬಿಜೆಪಿಯ ಎಚ್‌ಕೆ ಸುರೇಶ್ ಈ ಬಾರಿ ಯಶಸ್ವಿ ಆಗಿ ಗೆಲುವಿನ ದಡ ಸೇರಿದ್ದರೆ, ಹಾಲಿ ಶಾಸಕರಾಗಿದ್ದ ಜೆಡಿಎಸ್‍ನ ಲಿಂಗೇಶ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ ಶಿವರಾಮು ಬಿಜೆಪಿಯ ಎಚ್‌ಕೆ ಸುರೇಶ್‍ಗೆ ಪ್ರಬಲ ಪೈಪೋಟಿ ಒಡ್ಡಿ 7736 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಬಿಜೆಪಿಯ ಎಚ್‌ಕೆ ಸುರೇಶ್ 63571 ಮತ ಗಳಿಸಿ ವಿಜೇತರಾದರೆ, ಕಾಂಗ್ರೆಸ್‍ನ ಬಿ ಶಿವರಾಮು 55835 ಮತ್ತು ಜೆಡಿಎಸ್‍ನ ಕೆಎಸ್ ಲಿಂಗೇಶ್ 38893 ಮತ ಪಡೆದು ಪರಾಭವಗೊಂಡಿದ್ದಾರೆ.

ಒಟ್ಟಿನಲ್ಲಿ ಈ ಚುನಾವಣೆ ಫಲಿತಾಂಶ ಕುಟುಂಬ ರಾಜಕಾರಣ, ಅಹಂಕಾರದ ನಡವಳಿಕೆ, ಭ್ರಷ್ಟಾಚಾರ, ಜಾತಿ ಲೆಕ್ಕಾಚಾರ ಮತ್ತು ಅಸಮರ್ಥತೆಯ ವಿರುದ್ಧ ಮತದಾರರು ನೀಡಿರುವ ಎಚ್ಚರಿಕೆ ಗಂಟೆ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ವರದಿ: ಎಆರ್ ವೆಂಕಟೇಶ್, ಹಾಸನ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ