logo
ಕನ್ನಡ ಸುದ್ದಿ  /  ಕರ್ನಾಟಕ  /  Forest Sniffer Dogs: ಕರ್ನಾಟಕ ಅರಣ್ಯ ಇಲಾಖೆಗೆ ಶ್ವಾನದಳದ ಹಿರಿಮೆ; ಬಂಡೀಪುರದಲ್ಲಿ ಶುರುವಾಯ್ತು ಭಾರತದ ಸುಸಜ್ಜಿತ ಶ್ವಾನ ತರಬೇತಿ ಕೇಂದ್ರ

Forest Sniffer Dogs: ಕರ್ನಾಟಕ ಅರಣ್ಯ ಇಲಾಖೆಗೆ ಶ್ವಾನದಳದ ಹಿರಿಮೆ; ಬಂಡೀಪುರದಲ್ಲಿ ಶುರುವಾಯ್ತು ಭಾರತದ ಸುಸಜ್ಜಿತ ಶ್ವಾನ ತರಬೇತಿ ಕೇಂದ್ರ

Umesha Bhatta P H HT Kannada

Dec 02, 2024 08:18 PM IST

google News

ಕರ್ನಾಟಕ ಹುಲಿ ಯೋಜಿತ ಪ್ರದೇಶಗಳ ಶ್ವಾನ ಕೇಂದ್ರಗಳಿಗೆ ತರಬೇತಿ ನೀಡುವ ಕೇಂದ್ರ ಬಂಡೀಪುರದಲ್ಲಿ ಆರಂಭಗೊಂಡಿದ್ದು. ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್‌, ಡಾ,ಮಾಲತಿ ಪ್ರಿಯಾ, ಎಸ್.ಪ್ರಭಾಕರನ್‌ ತಂಡದೊಂದಿಗೆ ಕಾಣಿಸಿಕೊಂಡರು.

    • Karnataka Forest Sniffer Dogs: ಹಲವು ಹಿರಿಮೆಗಳ ಮೂಲಕ ಇಡೀ ಭಾರತದ ಗಮನ ಸೆಳೆದಿರುವ ಕರ್ನಾಟಕ ಅರಣ್ಯ ಇಲಾಖೆಯು ಹುಲಿ ಯೋಜಿತ ಪ್ರದೇಶಗಳಲ್ಲಿ ಶ್ವಾನದಳ ಬಳಕೆಗೆ ಪ್ರತ್ಯೇಕ ಶ್ವಾನದಳ ತರಬೇತಿ ಕೇಂದ್ರವನ್ನು ಬಂಡೀಪುರದಲ್ಲಿ ಆರಂಭಿಸಿದೆ. ಇದರ ವಿಶೇಷ ಇಲ್ಲಿದೆ.
ಕರ್ನಾಟಕ ಹುಲಿ ಯೋಜಿತ ಪ್ರದೇಶಗಳ ಶ್ವಾನ ಕೇಂದ್ರಗಳಿಗೆ ತರಬೇತಿ ನೀಡುವ ಕೇಂದ್ರ ಬಂಡೀಪುರದಲ್ಲಿ ಆರಂಭಗೊಂಡಿದ್ದು. ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್‌, ಡಾ,ಮಾಲತಿ ಪ್ರಿಯಾ, ಎಸ್.ಪ್ರಭಾಕರನ್‌ ತಂಡದೊಂದಿಗೆ ಕಾಣಿಸಿಕೊಂಡರು.
ಕರ್ನಾಟಕ ಹುಲಿ ಯೋಜಿತ ಪ್ರದೇಶಗಳ ಶ್ವಾನ ಕೇಂದ್ರಗಳಿಗೆ ತರಬೇತಿ ನೀಡುವ ಕೇಂದ್ರ ಬಂಡೀಪುರದಲ್ಲಿ ಆರಂಭಗೊಂಡಿದ್ದು. ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್‌, ಡಾ,ಮಾಲತಿ ಪ್ರಿಯಾ, ಎಸ್.ಪ್ರಭಾಕರನ್‌ ತಂಡದೊಂದಿಗೆ ಕಾಣಿಸಿಕೊಂಡರು.

Karnataka Forest Sniffer Dogs: ಕರ್ನಾಟಕ ಅರಣ್ಯ ಇಲಾಖೆಯ ಹಿರಿಮೆಗೆ ಮತ್ತೊಂದು ವಿಶೇಷತೆ ಸೇರ್ಪಡೆಯಾಗಿದೆ. ಅದು ಕರ್ನಾಟಕ ಅರಣ್ಯ ಇಲಾಖೆಯ ಶ್ವಾನ ದಳ. ತನಿಖೆ ಹಾಗೂ ವಿಚಕ್ಷಣೆ, ತರಬೇತಿ ನೀಡಲು ಹೊಸ ತಂಡ ರಚನೆಯಾಗಿದೆ. ಈಗಾಗಲೇ ಬಂಡೀಪುರದಲ್ಲಿ ಶ್ವಾನದ ಮೂಲಕ ತನಿಖೆ, ವನ್ಯಜೀವಿ ಬೇಟೆಗಾರರನ್ನು ಹಿಡಿಯುವ ಕಾರ್ಯ ಒಂದು ದಶಕದಿಂದ ಇದ್ದರೂ ಪ್ರತ್ಯೇಕ ಘಟಕ ಇರಲಿಲ್ಲ. ಈಗ ಇಡೀ ಕರ್ನಾಟಕ ಹುಲಿ ಯೋಜನೆ ವ್ಯಾಪ್ತಿಯಲ್ಲೂ ಶ್ವಾನ ಘಟಕಗಳು ಸುಸಜ್ಜಿತವಾಗಿ, ವೃತ್ತಿಪರವಾಗಿ ಕೆಲಸ ಮಾಡಲಿವೆ. ಶ್ವಾನಗಳಿಗೆ ತಾಲೀಮು ನಡೆಸುವ ಜತೆಗೆ ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಗೂ ತರಬೇತಿ ನೀಡುವ ಘಟಕ ಈಗ ಬಂಡೀಪುರದಲ್ಲಿ ಬಂದಿದೆ. ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ಹುಲಿ ಯೋಜನೆ ನಿರ್ದೇಶಕರ ಮಾರ್ಗದರ್ಶನದಲ್ಲಿ ಈ ವಿಶೇಷ ಘಟಕವನ್ನು ಸಜ್ಜಗೊಳಿಸಲಾಗಿದೆ.

ದಶಕದ ಹಿಂದೆ

ಈ ಹಿಂದೆ ಅರಣ್ಯ ಇಲಾಖೆಯ ಬಂಡೀಪುರ ಹುಲಿಧಾಮದಲ್ಲಿ ಟ್ರಾಫಿಕ್ ಡಬ್ಲುಡಬ್ಲುಎಫ್‌ ಭಾರತದಿಂದ ಸ್ನಿಫರ್ ಡಾಗ್‌ಗಳನ್ನು ಸರಬರಾಜು ಮಾಡಲಾಗಿತ್ತು.ಈ ಸ್ನಿಫರ್ ಡಾಗ್‌ಗಳಿಗೆ 7 -8 ತಿಂಗಳುಗಳ ಕಾಲ ಹರಿಯಾಣದ ಪಂಚಕುಲದಲ್ಲಿರುವ ಇಂಡೋ-ಟೈಬರ್ ಬಾರ್ಡರ್ ಪೋಲೀಸ್ ಫೋರ್ಸ್ (BTC-ITBP) ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿತ್ತು.

ಈ ಹಿಂದೆ, ಬಂಡೀಪುರವು "ರಾಣಾ" ಶ್ವಾನವನ್ನು ಅನ್ನು ಹೊಂದಿತ್ತು. ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ವನ್ಯಜೀವಿ ಸಂಬಂಧಿತ ಅಪರಾಧವನ್ನು ಪತ್ತೆಹಚ್ಚುವಲ್ಲಿ ಮತ್ತು ಮುನ್ನೆಚ್ಚರಿಕೆ ವಹಿಸುವಲ್ಲಿ 8 ವರ್ಷಗಳ ಶ್ಲಾಘನೀಯ ಸೇವೆಯ ನಂತರ, ವಯೋ ಸಂಬಂಧಿತ ಕಾಯಿಲೆಗಳಿಂದಾಗಿ ಕಳೆದ ವರ್ಷ ಸಾವನ್ನಪ್ಪಿತ್ತು. ಈಗ ಬಂಡೀಪುರ ಹುಲಿ ಯೋಜನೆ ಪ್ರದೇಶದಲ್ಲಿ ದ್ರೋಣ ಎನ್ನುವ ಸ್ನಿಫರ್ ಶ್ವಾನವೊಂದು ಈ ಬಳಗ ಸೇರಿಕೊಂಡಿದೆ. ಇದನ್ನು ಕಳೆದ ವರ್ಷ 2023 ರಲ್ಲಿ ತರಬೇತಿ ನಂತರ ಬಂಡೀಪುರದಲ್ಲಿ ಸೇವೆಗೆ ನಿಯೋಜಿಸಲಾಗಿದೆ.

ಇಲ್ಲಿಯೇ ತರಬೇತಿ ಕೇಂದ್ರ

ಕರ್ನಾಟಕದಲ್ಲಿ ಸದ್ಯ ಐದು ಹುಲಿ ಯೋಜನೆಗಳಿವೆ. ಅದರಲ್ಲಿ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗ ಹುಲಿಧಾಮ, ಭದ್ರಾ ಹಾಗೂ ದಾಂಡೇಲಿಯ ಕಾಳಿ ವಿಭಾಗ ಪ್ರಮುಖವಾದವು. ಮಲೈ ಮಹದೇಶ್ವರ ಹಾಗೂ ಕುದುರೆಮುಖ ಹುಲಿ ಯೋಜನೆ ಪ್ರಸ್ತಾವನೆಯಿದ್ದರೂ ಅಂತಿಮ ಒಪ್ಪಿಗೆ ಬಾಕಿಯಿದೆ. ಕರ್ನಾಟಕದ ಹುಲಿ ಯೋಜಿತ ಪ್ರದೇಶಗಳಲ್ಲಿ ಅರಣ್ಯ, ವನ್ಯಜೀವಿ ಸಂಬಂಧಿತ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಸಿಬ್ಬಂದಿ ಶ್ರಮಿಸುತ್ತಿದ್ದರೂ ಶ್ವಾನ ಗಳ ಬಳಕೆ ಆರಂಭಿಸಲಾಗಿತ್ತು. ಇದನ್ನೂ ಎಲ್ಲಾ ಹುಲಿ ಯೋಜನೆಗೆ ವಿಸ್ತರಿಸಿ ತರಬೇತಿ ಕೇಂದ್ರ ಆರಂಭಿಸುವ ಇರಾದೆ ಹೊಂದಲಾಗಿತ್ತು. ಅದರಂತೆ ಈಗ ಶ್ವಾನದಳವನ್ನು ಸುಸಜ್ಜಿತಗೊಳಿಸಲಾಗಿದೆ.

ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಕರ್ನಾಟಕ ಹುಲಿ ಯೋಜನೆ ನಿರ್ದೇಶಕ ಡಾ.ಪಿ. ರಮೇಶ್‌ ಕುಮಾರ್‌ ಶ್ವಾನದಳವನ್ನು ಬಲಪಡಿಸುವ ಯೋಜನೆ ರೂಪಿಸಿ ಅನುಮತಿ ಪಡೆದಿದ್ದಾರೆ. ಈಗಾಗಲೇ ಶ್ವಾನದಳ ಹೊಂದಿದ್ದ ಬಂಡೀಪುರದಲ್ಲಿಯೇ ತರಬೇತಿ ಕೇಂದ್ರವನ್ನು ಆರಂಭಿಸುವ ಯೋಜನೆ ರೂಪಿಸಿ ಇದನ್ನು ಜಾರಿಗೆ ತಂದಿದ್ದಾರೆ. ಸುಸಜ್ಜಿತ ಘಟಕವನ್ನು ಬಂಡೀಪುರದಲ್ಲಿ ಉದ್ಘಾಟಿಸಲಾಗಿದೆ.

ತರಬೇತಿ ಹೇಗೆ

ಕರ್ನಾಟಕ ಅರಣ್ಯ ಇಲಾಖೆಯ ಈ ವಿನೂತನ ಪ್ರಯತ್ನವು ಯಾವುದೇ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದಲ್ಲೇ ಮೊದಲನೆಯದು.20 ಸಿಬ್ಬಂದಿಗಳು (ಸ್ನಿಫರ್ ಡಾಗ್ ಕೀಪರ್ಸ್) ಬಂಡೀಪುರ ಟೈಗರ್ ರಿಸೆಟ್ವೆಯ ಮೆಲುಕಾಮನಹಳ್ಳಿ ಅಡ್ಮಿನ್ ಬ್ಲಾಕ್‌ನಲ್ಲಿ ವರದಿ ಮಾಡಿದ್ದಾರೆ. ಅವರು 10 ತಿಂಗಳ ಕಾಲ ಬಂಡೀಪುರದಲ್ಲಿ ಉಳಿದು ತರಬೇತಿ ಪಡೆಯುತ್ತಾರೆ. 10 ತಿಂಗಳ ತರಬೇತಿಯ ನಂತರ ಸಿಬ್ಬಂದಿಯನ್ನು ಆಯಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅಂದರೆ ಬಂಡೀಪುರ, ನಾಗರಹೊಳೆ, ಭದ್ರಾ, ಬಿಆರ್‌ಟಿ, ಕಾಳಿ ಪ್ರದೇಶದಲ್ಲಿನ ಬೇಟೆ ಪ್ರಕರಣ, ಅಕ್ರಮ ಮರ ಕಡಿಯುವ ಪ್ರಕರಣಗಳಂತಹ ಯಾವುದೇ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ಪತ್ತೆಹಚ್ಚಲು ಮತ್ತು ವನ್ಯಜೀವಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ನಿಯೋಜಿಸಲಾಗುತ್ತದೆ. ಈ ತರಬೇತಿ ಕೇಂದ್ರವು ಪ್ರತಿ ವರ್ಷ 10 ಶ್ವಾನಗಳಿಗೆ ಇಡೀ ಕರ್ನಾಟಕ ರಾಜ್ಯಕ್ಕೆ ಅರಣ್ಯ ಮತ್ತು ವನ್ಯಜೀವಿಗಳ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ತರಬೇತಿ ನೀಡುತ್ತದೆ. ಇವುಗಳನ್ನು ವನ್ಯಜೀವಿ ಸ್ನಿಫರ್ ಮತ್ತು ವನ್ಯಜೀವಿ ಅಪರಾಧ ಟ್ರ್ಯಾಕಿಂಗ್ ಶ್ವಾನಗಳು ಎಂದು ಕರೆಯಲಾಗುತ್ತದೆ. ಈಗಾಗಲೇ ಪೊಲೀಸ್‌ ಇಲಾಖೆ ಈ ಶ್ವಾನಗಳನ್ನು ಬಳಸುವಲ್ಲಿ ಯಶಸ್ವಿಯೂ ಆಗಿದೆ.

ಅರಣ್ಯ ಇಲಾಖೆಯೂ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಹಲವಾರು ಮಾರ್ಗ ಕಂಡುಕೊಂಡಿದೆ. ಇದರಲ್ಲಿ ಶ್ವಾನದಳದ ಬಳಕೆಯೂ ಸೇರ್ಪಡೆಯಾಗಿದೆ. ಇದನ್ನು ವ್ಯವಸ್ಥಿತವಾಗಿ ರೂಪಿಸುವ ಉದ್ದೇಶದಿಂದ ಶ್ವಾನದಳ ಬಲಪಡಿಸಲಾಗಿದೆ. ಇದು ಕರ್ನಾಟಕ ಅರಣ್ಯ ಇಲಾಖೆಗೂ ಹೆಮ್ಮೆಯ ಕ್ಷಣ ಎಂದು ಕರ್ನಾಟಕದ ಹುಲಿ ಯೋಜನೆ ನಿರ್ದೇಶಕರಾಗಿರುವ ಡಾ.ಪಿ.ರಮೇಶ್‌ ಕುಮಾರ್‌ ಹೇಳುತ್ತಾರೆ.

ಬಂಡೀಪುರದ ಶ್ವಾನದಳದ ತರಬೇತಿ ಕೇಂದ್ರದಲ್ಲಿ ಡಾ.ರಮೇಶ್‌ ಕುಮಾರ್.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ