Chitradurga News: ಕರ್ನಾಟಕದ ಹೆಮ್ಮೆಯ ಮಾಜಿ ಸಿಎಂ ನಿಜಲಿಂಗಪ್ಪ ಚಿತ್ರದುರ್ಗ ಮನೆಗೆ ಸ್ಮಾರಕ ರೂಪ: ಕರ್ನಾಟಕ ಸರ್ಕಾರದಿಂದಲೇ ಖರೀದಿ
Nov 15, 2024 04:50 PM IST
ಚಿತ್ರದುರ್ಗದಲ್ಲಿರುವ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಕರ್ನಾಟಕ ಸರ್ಕಾರವೇ ಖರೀದಿ ಸ್ಮಾರಕವಾಗಿ ರೂಪಿಸಲಿದೆ.
ಕರ್ನಾಟಕದ ಮುತ್ಸದಿ ರಾಜಕಾರಣಿ, ಮೂರು ಬಾರಿ ಸಿಎಂ ಆಗಿದ್ದ ಎಸ್.ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಸರ್ಕಾರವೇ ಖರೀದಿ ಮಾಡಿ ಸ್ಮಾರಕ ಮಾಡಲು ಮುಂದಾಗಿದೆ.
ಚಿತ್ರದುರ್ಗ: ಮೈಸೂರು ರಾಜ್ಯವಾದ ಬಳಿಕ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎನ್ನಿಸಿದ, ತಮ್ಮ ಸರಳತೆ, ನಿಷ್ಠತೆಯಿಂದ ಹೆಸರು ಮಾಡಿದ್ದ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಕರ್ನಾಟಕ ಸರ್ಕಾರವೇ ಖರೀದಿ ಮಾಡಿ ಅದನ್ನು ಸ್ಮಾರಕವಾಗಿಸಲು ಮುಂದಾಗಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪ್ರಕಟಿಸಿದ್ದ ಯೋಜನೆಯ ಭಾಗವಾಗಿ 5 ಕೋಟಿ ರೂ. ಗಳನ್ನು ಹಣಕಾಸು ಇಲಾಖೆಯಿಂದ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕವೇ ಇದನ್ನು ಸ್ಮಾರಕವಾಗಿಸಿ, ನಿಜಲಿಂಗಪ್ಪ ಅವರಿಗೆ ಸಂಬಂಧಿಸಿದ ಮಾಹಿತಿ, ಸಂಗ್ರಹಗಳನ್ನು ಒಂದೆಡೆ ಸಿಗುವಂತೆ ಮಾಡುವುದು, ಮುಂದಿನ ಪೀಳಿಗೆಗೆ ನಿಜಲಿಂಗಪ್ಪ ಅವರ ರಾಜಕೀಯ ಗುಣಗಳು,ಮುತ್ಸದಿತನದ ಮಹತ್ವ, ಆಡಳಿತದ ವೈಖರಿ, ವ್ಯಕ್ತಿತ್ವವನ್ನು ತಿಳಿಸುವುದು ಇದರ ಹಿಂದಿನ ಉದ್ದೇಶ. ಹಲವಾರು ವರ್ಷಗಳಿಂದಲೂ ಈ ವಿಚಾರವಾಗಿ ಚರ್ಚೆಗಳು ನಡೆದಿದ್ದರೂ ಯಾವುದೇ ಬೆಳವಣಿಗೆ ಆಗಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ
ನಿಜಲಿಂಗಪ್ಪ ಯಾರು
ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಕರ್ನಾಟಕ ಕಂಡ ಅಪ್ರತಿಮ ನಾಯಕ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನವನ್ನು ಸಾಗಿಸಿದ ಕರ್ನಾಟಕದಲ್ಲಿ ಸಚಿವರಾಗಿ, ಸಂಸದರಾಗಿ ನಂತರ ಮುಖ್ಯಮಂತ್ರಿಯೂ ಆಗಿದ್ದವರು.
ಕರ್ನಾಟಕ ಕಂಡ ಮತ್ತಿಬ್ಬರು ಪ್ರಮುಖ ನಾಯಕರಲ್ಲಿ ರಾಮಕೃಷ್ಣಹೆಗಡೆ ಹಾಗೂ ವೀರೇಂದ್ರ ಪಾಟೀಲ್ ಅವರಿಬ್ಬರೂ ನಿಜಲಿಂಗಪ್ಪ ಅವರ ಶಿಷ್ಯರೇ.
ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಚಿತ್ರದುರ್ಗ ಜಿಲ್ಲೆಯವರಾದರೂ ಜನಿಸಿದ್ದು 1902 ರ ಡಿಸೆಂಬರ್ 10 ರಂದು ಅಜ್ಜಿಯ ಮನೆ ಬಳ್ಳಾರಿ ಜಿಲ್ಲೆಯ ಹಲುವಾಗಲು ಗ್ರಾಮದಲ್ಲಿ. ಅವರ ರಾಜಕೀಯ ಜೀವನ ಹೆಚ್ಚು ಚಿತ್ರದುರ್ಗ ಜಿಲ್ಲೆಯಲ್ಲಿಯೇ ಆಗಿದ್ದು.
ಹೊಸದುರ್ಗ, ಶಿಗ್ಗಾಂವಿ ಕ್ಷೇತ್ರದಿಂದಲೂ ಶಾಸಕರಾಗಿದ್ದರು. ಚಿತ್ರದುರ್ಗದ ಮೊದಲ ಸಂಸದರೂ ಹೌದು. ಮೂರು ಬಾರಿ ಸಿಎಂ ಆಗಿದ್ದವರು.
ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಅಖಿಲ ಭಾರತೀಯ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದರು ನಿಜಲಿಂಗಪ್ಪ.
ಕಾಂಗ್ರೆಸ್‌ನ ಪ್ರಬಲ ನಾಯಕಿಯಾಗಿದ್ದ ಇಂದಿರಾಗಾಂಧಿ ಅವರೊಂದಿಗೆ ನಿಷ್ಠುರತೆ ಕಾರಣಕ್ಕೆ ದೂರ ಉಳಿದು ಅಧಿಕಾರ ಕಳೆದುಕೊಂಡರೂ ತಮ್ಮತನ ಎಂದೂ ಬಿಟ್ಟುಕೊಟ್ಟವರಲ್ಲ. ಪ್ರಾಮಾಣಿಕತೆಗೆ ಹೆಸರಾಗಿದ್ದವರು. 2000ರಲ್ಲಿ ಅವರು ವಿಧಿವಶರಾದರು.
ಸ್ಮಾರಕದ ಬೇಡಿಕೆ
ನಿಜಲಿಂಗಪ್ಪ ಅವರು ರಾಜಕಾರಣದಲ್ಲಿದ್ದರೂ ಅವರ ಮಕ್ಕಳು ಯಾರೂ ರಾಜಕಾರಣಕ್ಕೆ ಬರಲಿಲ್ಲ. ಆಸಕ್ತಿಯಿದ್ದರೂ ನಿಜಲಿಂಗಪ್ಪ ಅವರು ಹೆಚ್ಚಿನ ಒತ್ತು ನೀಡಲಿಲ್ಲ. ಆದರೆ 1937 ರಲ್ಲಿ ನಿಜಲಿಂಗಪ್ಪ ಅವರು ವಾಸಿಸಿದ್ದ ಮನೆಯನ್ನು ಸ್ಮಾರಕಾಗಿಸುವ ಪ್ರಸ್ತಾವಗಳು ಹಿಂದಿನಿಂದಲೂ ಇವೆ.
ನಿಜಲಿಂಗಪ್ಪ ಅವರ ಪುತ್ರ ಕಿರಣ್‌ಶಂಕರ್ ಅವರ ಮಗ ವಿನಯ್ ಹೆಸರಲ್ಲಿ ಆ ಮನೆಯಿದೆ. ಇದನ್ನು ಸರ್ಕಾರವೇ ಖರೀದಿಸಿ ಸ್ಮಾರಕ ಮಾಡುವ ಕುರಿತು ಚರ್ಚೆಗಳಿದ್ದವು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬಜೆಟ್‌ನಲ್ಲಿ ಇದನ್ನು ಮೂರು ವರ್ಷದ ಹಿಂದೆ ಪ್ರಕಟಿಸಿದ್ದರು.
ಐದು ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಆದರಲ್ಲಿ ನಾಲ್ಕು ಕೋಟಿ ರೂ. ಮನೆ ಖರೀದಿಗೆ, ಒಂದು ಕೋಟಿ ರೂ.ವರೆಗೂ ಸ್ಮಾರಕಕ್ಕೆ ಬಳಸುವ ತೀರ್ಮಾನವಾಗಿತ್ತು. ಆದರೆ ಹಣ ಬಿಡುಗಡೆಯಾಗಿರಲಿಲ್ಲ.
ಕೆಲ ದಿನಗಳ ಹಿಂದೆ ಆಸ್ತಿ ಮಾರಾಟಕ್ಕಿದೆ ಎನ್ನುವ ಜಾಹೀರಾತು ಕಿರಣ್ ಶಂಕರ್ ಹೆಸರಲ್ಲಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಕರ್ನಾಟಕ ಸರ್ಕಾರ ಹಣ ಬಿಡುಗಡೆಗೆ ಮುಂದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವೇ ಇದನ್ನು ಖರೀದಿಸಿ ಸ್ಮಾರಕವಾಗಿ ಮಾರ್ಪಡಿಸಲಿದೆ.
ಸಚಿವರು ಹೇಳೋದು ಏನು
ಈ ಕುರಿತು ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಿಎಂ ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆ ಖರೀದಿ ಕುರಿತು ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆದು ಪ್ರಕ್ರಿಯೆ ಆರಂಭಿಸಲಾಗಿದೆ.. ನಿಜಲಿಂಗಪ್ಪ ಅವರು ವಾಸವಿದ್ದ ನಿಜಲಿಂಗಪ್ಪ ಅವರು ಬರೆದಿಟ್ಟಿರುವ ವಿಲ್ ನಂತೆ ಅವರ ಮೊಮ್ಮಗ ವಿನಯ್ ಅವರ ಹೆಸರಿನಲ್ಲಿದ್ದು, ಸಂಪೂರ್ಣ ಇದೀಗ ಆಸ್ತಿಗೆ ವಿನಯ್ ಮಾಲೀಕತ್ವದಲ್ಲಿದೆ. ಈ ಸಂಬಂಧ ಅಧಿಕಾರಿಗಳು ಕಿರಣ್ ಅವರೊಂದಿಗೆ ಚರ್ಚೆ ನಡೆಸಿದ್ದು, ತಿಂಗಳಲ್ಲಿ ಮನೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ನಂತರ ಸ್ಮಾರಕದ ಕೆಲಸವೂ ಆಗಲಿದೆ ಎನ್ನುತ್ತಾರೆ.
ಕರ್ನಾಟಕರತ್ನ ದಿವಂಗತ ಎಸ್. ನಿಜಲಿಂಗಪ್ಪ ಅವರ ಚಿತ್ರದುರ್ಗದ ಮನೆಯನ್ನು ಸರ್ಕಾರದಿಂದ ಖರೀದಿಸಿ ಸ್ಮಾರಕವಾಗಿ ಸಂರಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ . ಈ ಸಂಬಂಧ ಇಂದು ಸಿಎಂ ಜೊತೆ ಮಾತುಕತೆ ನಡೆಸಿದ್ದು, ನಿಜಲಿಂಗಪ್ಪನವರ ಮನೆಯನ್ನು ಖರೀದಿಸಿ, ನವೀಕರಿಸಿ ಅದನ್ನು ಸ್ಮಾರಕವಾಗಿ ಕಾಪಾಡಲು 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲುಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ನಿಜಲಿಂಗಪ್ಪ ಅವರು ಏಕೀಕರಣದ ಬಳಿಕ ಮೈಸೂರು ರಾಜ್ಯದ (ಕರ್ನಾಟಕ) ಪ್ರಥಮ ಮುಖ್ಯಮಂತ್ರಿಗಳಾಗಿದ್ದು, ತಮ್ಮ ಸರಳ, ಸಜ್ಜನಿಕೆಯಿಂದ ಇಡೀ ರಾಜ್ಯದ ಜನಮನ ಗೆದ್ದಿದ್ದರು. ಅವರ ಮನೆಯನ್ನು ಸ್ಮಾರಕ ಮಾಡುವುದಾಗಿ ಈ ಹಿಂದೆಯೇ ಸರ್ಕಾರ ಘೋಷಿಸಿತ್ತು. ಈಗ ಆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿವರಣೆ.
ವಿಭಾಗ