logo
ಕನ್ನಡ ಸುದ್ದಿ  /  ಕರ್ನಾಟಕ  /  Bpl Card: ಬಿಪಿಎಲ್‌ ಪಡಿತರ ಕಾರ್ಡ್‌ ನಿಮ್ಮಲ್ಲಿದೆಯೇ?; ಈ ವ್ಯಾಪ್ತಿಗೆ ಬಂದರೆ ವಾಪಾಸ್‌ ಕೊಟ್ಟು ಬಿಡಿ, ಇಲ್ಲದಿದ್ದರೆ ಕಠಿಣ ಶಿಕ್ಷೆ ಕಾದಿದೆ

Bpl Card: ಬಿಪಿಎಲ್‌ ಪಡಿತರ ಕಾರ್ಡ್‌ ನಿಮ್ಮಲ್ಲಿದೆಯೇ?; ಈ ವ್ಯಾಪ್ತಿಗೆ ಬಂದರೆ ವಾಪಾಸ್‌ ಕೊಟ್ಟು ಬಿಡಿ, ಇಲ್ಲದಿದ್ದರೆ ಕಠಿಣ ಶಿಕ್ಷೆ ಕಾದಿದೆ

Umesha Bhatta P H HT Kannada

Oct 22, 2024 05:16 PM IST

google News

ಅರ್ಹರಲ್ಲದೇ ಇದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರು ವಾಪಾಸ್‌ ನೀಡಲು ಸೂಚಿಸಲಾಗಿದೆ.

    • ಸರಕಾರದ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದಿದ್ದರೇ, ಅವುಗಳನ್ನು ಕೂಡಲೆ ತಾಲೂಕು ಕಚೇರಿಯ ಆಹಾರ ಶಾಖೆಗೆ ಹಿಂದಿರುಗಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ವೇಳೆ ವಾಪಸ್ ನೀಡದೆ ಇದ್ದರೆ ಕಾನೂನು ಕ್ರಮದ, ಜೊತೆಗೆ ದಂಡ ಸಹ ಖಚಿತ ಎಂದು ಸೂಚಿಸಿದೆ.
ಅರ್ಹರಲ್ಲದೇ ಇದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರು ವಾಪಾಸ್‌ ನೀಡಲು ಸೂಚಿಸಲಾಗಿದೆ.
ಅರ್ಹರಲ್ಲದೇ ಇದ್ದರೂ ಬಿಪಿಎಲ್‌ ಕಾರ್ಡ್‌ ಹೊಂದಿದ್ದವರು ವಾಪಾಸ್‌ ನೀಡಲು ಸೂಚಿಸಲಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ಗಳು ಬೇಕಾಬಿಟ್ಟಿಯಾಗಿ ವಿತರಣೆಯಾಗಿರುವ ಆರೋಪಗಳು ಕೇಳಿ ಬರುತ್ತಲೇ ಇವೆ. ಅರ್ಹರಿಗಿಂತಲೂ ಅನರ್ಹರೆ ಹೆಚ್ಚಿನ ಬಿಪಿಎಲ್‌ ಕಾರ್ಡ್‌ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈಗಾಗಲೇ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯೂ ಅಭಿಯಾನ ನಡೆಸಿ ಅನರ್ಹ ಬಿಪಿಎಲ್‌ ಕಾರ್ಡ್‌ದಾರದಿಂದ ಕಾರ್ಡ್‌ ವಾಪಾಸ್‌ ಪಡೆದಿದೆ. ಮತ್ತೆ ಕೆಲವರಿಗೆ ಭಾರೀ ದಂಡವನ್ನೂ ವಿಧಿಸಿದೆ. ಈಗಂತೂ ಗ್ಯಾರಂಟಿ ಯೋಜನೆ ಜಾರಿಗೊಂಡ ನಂತರ ಬಿಪಿಎಲ್‌ ಕಾರ್ಡ್‌ದಾರರಿಗೆ ಹೆಚ್ಚಿನ ಸೌಲಭ್ಯ ಸಿಗುತ್ತಿದ್ದರೆ, ಸರ್ಕಾರಕ್ಕೆ ಭಾರೀ ಹೊರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವೇತನ ಪಡೆಯುತ್ತಿರುವವರು ಮತ್ತು ಕಾರು ಹಾಗೂ ಟ್ಯಾಕ್ಟರ್​ ಇದ್ದೂ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್​ ಪಡಿತರ ಚೀಟಿ ಪಡೆದವರಿಗೆ ರಾಜ್ಯ ಸರ್ಕಾರ ಹೊಸ ಸೂಚನೆ ನೀಡಿದೆ. ಸರ್ಕಾರದ ಮಾನದಂಡ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್​ ಪಡಿತರ ಚೀಟಿ ಹೊಂದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹೊರಡಿಸಿರುವ ಆದೇಶ ಆಧರಿಸಿ ಚಿಕ್ಕಮಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ತಹಸಿಲ್ದಾರರು ಹೊಸ ಸೂಚನೆಗಳನ್ನು ಪ್ರಕಟಿಸಿದ್ದಾರೆ.

ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅಥವಾ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವವರು ತಕ್ಷಣವೆ ತಾಲೂಕು ಕಚೇರಿಯ ಆಹಾರ ಶಾಖೆಗೆ ಪಡಿತರ ಚೀಟಿಯನ್ನು ಒಪ್ಪಿಸುವಂತೆ ಇಲಾಖೆಯು ಪ್ರಕಟಣೆ ಹೊಡಿಸಿದೆ. ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ 1977ರ ಹಾಗೂ ಐ.ಪಿ.ಸಿ. ಕಲಂಗಳಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ರಾಜ್ಯ ಸರ್ಕಾರ ಅಂತ್ಯೋದಯ, ಬಿಪಿಎಲ್​ ಕಾರ್ಡ್ ಪರಿಷ್ಕರಣಿಗೆ ಮುಂದಾಗಿದೆ. ಇದರ ಭಾಗವಾಗಿ ಅಕ್ರಮವಾಗಿ ಪಡಿತರ ಚೀಟಿ ಪಡೆದವರ ಅಥವಾ ಸರ್ಕಾರದ ಮಾನದಂಡಗಳ ವಿರುದ್ಧವಾಗಿ ಪಡಿತರ ಚೀಟಿ ಹೊಂದಿದವರಿಗೆ ಆಯಾ ತಾಲೂಕುಗಳಲ್ಲಿ ತಹಶಿಲ್ದಾರರು ನೋಟಿಸ್ ‌ಜಾರಿ ಮಾಡಿದ್ದಾರೆ. ಸರ್ಕಾರ ಕಳೆದ ತಿಂಗಳು ಅನರ್ಹ ಪಡಿತರದಾರರ ಪಟ್ಟಿ ಬಿಡುಗಡೆ ಮಾಡಿತ್ತು. ಕೆಲವರು ಸ್ವಯಂ ಪ್ರೇರಿತರಾಗಿ ಕಾರ್ಡ್‌ ಹಿಂದಿರುಗಿಸಿದ್ದರೆ ಇನ್ನೂ ಹಲವರು ತಮ್ಮಲ್ಲೇ ಇಟ್ಟುಕೊಂಡು ಸೌಲಭ್ಯ ಪಡೆಯತ್ತಲೂ ಇದ್ದಾರೆ. ಈ ಕಾರಣದಿಂದ ಮತ್ತೊಂದು ಸೂಚನೆಯನ್ನು ನೀಡಲಾಗಿದೆ.

ಬಿಪಿಎಲ್‌ ಕಾರ್ಡ್‌ ಇವರ ಬಳಿ ಇರೋ ಹಾಗಿಲ್ಲ

1) ಸರ್ಕಾರ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳಿಂದ ವೇತನ ಪಡೆಯುತ್ತಿರುವವರು ಪಡಿತರ ಚೀಟಿ ಹೊಂದುವಂತಿಲ್ಲ.

2) ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವವರು ಬಿಪಿಎಲ್‌ ಪಡಿತರ ಚೀಟಿ ಹೊಂದಲು ಅನರ್ಹರಾಗುತ್ತಾರೆ.

3) ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿ ಹೊಂದಲು ಅವಕಾಶವಿಲ್ಲ

4) ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್​​, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿ ಹೊಂದುವಂತಿಲ್ಲ ಎಂದು ತಿಳಿಸಲಾಗಿದೆ.

5) ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಬಿಪಿಎಲ್‌ ಕಾರ್ಡ್‌ ಇಟ್ಟುಕೊಳ್ಳವಂತೆ ಇಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ