PFI ban: ಪಿಎಫ್ಐ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
Nov 30, 2022 04:53 PM IST
ಸೆಪ್ಟೆಂಬರ್ ತಿಂಗಳಲ್ಲಿ PFI ಅನ್ನು 'ಕಾನೂನುಬಾಹಿರ ಸಂಘ' ಎಂದು ಕೇಂದ್ರ ಸರ್ಕಾರ ಘೋಷಿಸಿತು. ಮುಂದಿನ ಐದು ವರ್ಷಗಳವರೆಗೆ ಅದನ್ನು ನಿಷೇಧಿಸಿತು.
- ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪಿಎಫ್‌ಐ ಕಾರ್ಯಕರ್ತ ನಾಸೀರ್ ಪಾಷಾ ಎಂಬಾತ ತನ್ನ ಪತ್ನಿ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಅರ್ಜಿ ವಜಾಗೊಳಿಸಿದೆ.
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮೇಲಿನ ನಿಷೇಧವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ. ನಿಷೇಧದ ಕುರಿತು ಕೇಂದ್ರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಸಂಘಟನೆ ನಿಷೇಧ ಕುರಿತ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ, ರಾಜ್ಯದ ಪಿಎಫ್‌ಐ ಮುಖಂಡರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪಿಎಫ್‌ಐ ಕಾರ್ಯಕರ್ತ ನಾಸೀರ್ ಪಾಷಾ ಎಂಬಾತ ತನ್ನ ಪತ್ನಿ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಈ ತೀರ್ಪು ನೀಡಿದೆ. ಪಾಷಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಕರಣದ ಸಂಬಂಧ ಎಲ್ಲ ಕಕ್ಷಿದಾರರ ವಾದವನ್ನು ಆಲಿಸಿದ್ದ ಹೈಕೋರ್ಟ್ ಸೋಮವಾರ ತೀರ್ಪನ್ನು ಕಾಯ್ದಿರಿಸಿತ್ತು. 2007-08ರಲ್ಲಿ ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯ್ದೆ(Karnataka Societies Registration Act)ಯಡಿಯಲ್ಲಿ ಪಿಎಫ್‌ಐ ನೋಂದಣಿಯಾಗಿದ್ದು, ಸಮಾಜದ ದೀನದಲಿತ ವರ್ಗದ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
"ಹಲವಾರು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಸಂಸ್ಥೆಯನ್ನು ಹಲವಾರು ವ್ಯಕ್ತಿಗಳು ಅನುಸರಿಸುತ್ತಿದ್ದಾರೆ. ಅಲ್ಲದೆ ಹಲವರಿಗೆ ಇದರಿಂದ ಪ್ರಯೋಜನ ಸಿಕ್ಕಿದೆ. ಹೀಗಾಗಿ ಯಾವುದೇ ಕಾರಣವನ್ನು ಸ್ಪಷ್ಟಪಡಿಸದೆ, ಸಂಘಟನೆಯು ಅನಿಯಂತ್ರಿತ ಮತ್ತು ಕಾನೂನುಬಾಹಿರ ಎಂದು ದೂರಿ ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ಇದರ ಹಿಂದೆ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರವಿದೆ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, ಕೇಂದ್ರವು ಪಿಎಫ್‌ಐಯನ್ನು 'ಕಾನೂನುಬಾಹಿರ ಸಂಘ' ಎಂದು ಘೋಷಿಸಿತು. ಆ ಬೆನ್ನಲ್ಲೇ ಅದನ್ನು ಮುಂದಿನ ಐದು ವರ್ಷಗಳವರೆಗೆ ನಿಷೇಧಿಸಿತು. ಜೊತೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಂಘಟನೆ ಮತ್ತದರ ಅಂಗಸಂಸ್ಥೆಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆಯನ್ನು ಬಲಗೊಳಿಸುವಂತೆ ನಿರ್ದೇಶಿಸಿತು.
ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ಸ್ಟೇಟ್(ISIS)ನಂತಹ ಜಾಗತಿಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಪಿಎಫ್‌ಐಗೆ ಅಂತಾರಾಷ್ಟ್ರೀಯ ಸಂಪರ್ಕವಿದೆ ಎಂಬ ಮಾಹಿತಿ ಕೇಂದ್ರ ತನಿಖಾ ಸಂಸ್ಥೆಗಳಿಗೆ ಲಭಿಸಿತ್ತು. ಈ ಕುರಿತ ಸಂಶೋಧನೆಗಳ ಆಧಾರದ ಮೇಲೆ ಎನ್‌ಐಎ, ಜಾರಿ ನಿರ್ದೇಶನಾಲಯ, ರಾಜ್ಯ ತನಿಖಾ ಸಂಸ್ಥೆಗಳು ಮತ್ತು ಪೊಲೀಸ್ ಪಡೆಗಳು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿತು. ಈ ವೇಳೆ 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ರಾಮಮಂದಿರ ಸ್ಫೋಟ ಮಾಡುವುದಕ್ಕೆ ಪಿಎಫ್ಐ ಸಂಚು ಮಾಡಿತ್ತು ಎಂಬ ಬಗ್ಗೆ ಕಳೆದ ತಿಂಗಳು ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತದ ಅಸ್ಮಿತೆಗೆ ಧಕ್ಕೆ ತರುವ ಪಿಎಫ್ಐ ಸಂಚು ಬಯಲಾಗಿದೆ ಎಂದು ಹೇಳಿದ್ದರು. ಪಿಎಫ್ಐ ಸಂಘಟನೆ ಒಂದು ದೇಶದ್ರೋಹಿ ಸಂಘಟನೆ. ದೇಶವ್ಯಾಪಿ ವಿಧ್ವಂಸಕ ಹಾಗೂ ಭಯೋತ್ಪಾದನೆ ಕೃತ್ಯಗಳನ್ನು ಮಾಡುತ್ತಿದೆ. ಈ ಹಿಂದೆ ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಪೋಟ ಸಂಭವಿಸಿದಂತೆ, ಏಕಕಾಲದಲ್ಲಿ ವಿವಿಧ ಕಡೆ ದುಷ್ಕೃತ್ಯಗಳನ್ನು ಮಾಡುವ ಅವರ ಷಡ್ಯಂತ್ರ ಬಯಲಾಗಿದೆ ಎಂದು ಹೇಳಿದ್ದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು 2006ರಲ್ಲಿ ಕೇರಳದಲ್ಲಿ ಸ್ಥಾಪನೆಯಾಯಿತು. ಅಲ್ಪ ಅವಧಿಯಲ್ಲಿ ದೇಶದೆಲ್ಲೆಡೆ ವ್ಯಾಪಿಸಿ, 22 ರಾಜ್ಯಗಳಲ್ಲಿ ತನ್ನ ಸಂಘಟನೆ ಬಲಪಡಿಸಿತು. ಆ ಬಳಿಕ ಚುನಾವಣಾ ರಾಜಕೀಯಕ್ಕೂ ಕೈ ಹಾಕಿದೆ. ಎಸ್‌ಡಿಪಿಐ ಮೂಲಕ ರಾಜಕೀಯ ಚಟುವಟಿಕೆ ನಡೆಸುತ್ತಿರುವ ಪಿಎಫ್‌ಐ, ಒಂದೂವರೆ ದಶಕದಲ್ಲಿ ಅನೇಕ ಹಿಂಸಾಚಾರ, ಉಗ್ರಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದೆ.