ಕರ್ನಾಟಕದಲ್ಲಿ 3ಪಕ್ಷಗಳಿಗೆ ಲೋಕಸಭಾ ಫಲಿತಾಂಶದ ಪಾಠ, ಕಾಂಗ್ರೆಸ್ ಮೇಲೆ ಖರ್ಗೆ, ಬಿಜೆಪಿ ಮೇಲೆ ಯಡಿಯೂರಪ್ಪ ಹಿಡಿತ ಬಿಗಿ, ಜೆಡಿಎಸ್‌ಗೆ ಎಚ್ಚರಿಕೆ
Jun 05, 2024 09:13 AM IST
ಕರ್ನಾಟಕದಲ್ಲಿ 3ಪಕ್ಷಗಳಿಗೆ ಲೋಕಸಭಾ ಫಲಿತಾಂಶದ ಪಾಠ, ಕಾಂಗ್ರೆಸ್ ಮೇಲೆ ಖರ್ಗೆ, ಬಿಜೆಪಿ ಮೇಲೆ ಯಡಿಯೂರಪ್ಪ ಹಿಡಿತ ಬಿಗಿ, ಜೆಡಿಎಸ್‌ಗೆ ಎಚ್ಚರಿಕೆ (ಸಾಂಕೇತಿಕ ಚಿತ್ರ)
ಲೋಕಸಭಾ ಫಲಿತಾಂಶವು ಕರ್ನಾಟಕದಲ್ಲಿ ಮೂರೂ ಪಕ್ಷಗಳಿಗೆ ಪಾಠ ಕಲಿಸಿದೆ. ಸದ್ಯ ಸಿಎಂ ಮತ್ತು ಡಿಸಿಎಂ ಸೇಫ್ ಆಗಿದ್ದಾರೆ. ಕಾಂಗ್ರೆಸ್ ಮೇಲೆ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿಯಲ್ಲಿ ಯಡಿಯೂರಪ್ಪ ಹಿಡಿತ ಬಿಗಿಯಾಗಿದೆ. ಫಲಿತಾಂಶದ ಬಳಿಕ ಸೋಲು,ಗೆಲುವಿನ ಕಾರಣಗಳ ಹುಡುಕಾಟ, ತಂತ್ರಗಾರಿಕೆ ವೈಫಲ್ಯ ಚರ್ಚೆಗೆ ಒಳಗಾಗಿದೆ. (ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫಲಿತಾಂಶ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಪಾಠ ಕಲಿಸಿದೆ. 1 ಸ್ಥಾನದಿಂದ 9ಕ್ಕೆ ಏರಿದ್ದರೂ ಈ ವಿಜಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಖುಷಿಯನ್ನೇನೂ ನೀಡಿಲ್ಲ.
ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮುಗ್ಗರಿಸಿದ್ದಾರೆ. ಇತ್ತ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಿವಕುಮಾರ್ ಅವರ ಸಹೋದರ ಹಾಲಿ ಸಂಸದ ಡಿ.ಕೆ. ಸುರೇಶ್ ಪರಾಭವಗೊಂಡಿದ್ದಾರೆ. ಈ ಇಬ್ಬರೂ ಧುರೀಣರೂ ಟಿಕೆಟ್ ಕೊಡಿಸಿದ ಅನೇಕ ಅಭ್ಯರ್ಥಿಗಳೂ ಸೋಲು ಕಂಡಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಕಲಬುರಗಿಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧನೆ
ಇದ್ದುದರಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಸಾದನೆ ಮಾಡಿದ್ದು, ಇದರ ಶ್ರೇಯಸ್ಸು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಬೇಕು. ಅವರ ಪರಿಶ್ರಮದಿಂದಾಗಿಯೇ ಬೀದರ್, ರಾಯಚೂರು, ಬಳ್ಳಾರಿ ಕಲಬುರಗಿ, ಕೊಪ್ಪಳ ಮೊದಲಾದ ಕ್ಷೇತ್ರಗಳಲ್ಲಿ ಖರ್ಗೆ ಅವರ ಕರಾಮತ್ತು ನಡೆದಿದೆ.
ಕಾಂಗ್ರೆಸ್ 15 ಸ್ಥಾನಗಳ ನಿರೀಕ್ಷೆಯಲ್ಲಿತ್ತು. ಆದರೂ ಈಗಿನ ಸಾಧನೆ ಕಳಪೆಯೇನಲ್ಲ. 2019ರಲ್ಲಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು.
ಸದಾ ಮುಖ್ಯಮಂತ್ರಿಯಾಗುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದ ಶಿವಕುಮಾರ್ ಇನ್ನು ಮುಂದೆ ಅಂತಹ ಆಸೆಯನ್ನು ವ್ಯಕ್ತಪಡಿಸುವುದು ಕಷ್ಟಸಾಧ್ಯ. ಆ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎನ್ನಬಹುದು. ಬೆಂಗಳೂರಿನ ಉಸ್ತುವಾರಿ ವಹಿಸಿಕೊಂಡಿರುವ ಅವರು ಇಲ್ಲಿನ ನಾಲ್ಕೂ ಸ್ಥಾನಗಳಲ್ಲಿ ಗೆಲುವು ತಂದುಕೊಡಲು ವಿಫಲರಾಗಿದ್ದಾರೆ. ನೈತಿಕ ಹೊಣೆ ಹೊತ್ತು ಇಂದೋ ನಾಳೆಯೋ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ. ಸ್ಥೂಲವಾಗಿ ಪಲಿತಾಂಶವನ್ನು ವಿಶ್ಲೇಷಿಸಿದರೆ ದಲಿತ ಸಮುದಾಯದ ನಾಯಕರೊಬ್ಬರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಸಾಧ್ಯತೆಗಳಿವೆ.
ಈ ಫಲಿತಾಂಶ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ತಲೆ ದಂಡವೂ ಆಗದು. ಆದರೆ ಕೆಲವು ಸಚಿವರ ತಲೆದಂಡ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ ಬೆಂಗಳೂರಿನಲ್ಲಿ ಐವರು ಸಚಿವರಿದ್ದರೂ ಒಂದೂ ಕ್ಷೇತ್ರವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ತುಮಕೂರಿನಲ್ಲಿ ಇಬ್ಬರು ಸಚಿವರಿದ್ದರೂ ಗೆಲ್ಲಲಾಗಿಲ್ಲ. ತಮ್ಮ ವಂಶದ ಕುಡಿಗಳನ್ನೇ ಗೆಲ್ಲಿಸಲಾಗದ ಸಚಿವರಿದ್ದಾರೆ. ಅವರ ಬದಲಾಗಿ ಇತರರಿಗೆ ಅವಕಾಶ ಮಾಡಿಕೊಡುವಂತೆ ಬೇಡಿಕೆ ಮುಂದಿಡುವ ಸಾಧ್ಯತೆಗಳಿವೆ.
ಕೋಲಾರದಲ್ಲಿ ಸಚಿವ ಕೆ ಎಚ್ ಮುನಿಯಪ್ಪ ಅವರ ಕಾರಣದಿಂದಾಗಿಯೇ ಆ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು. ಈಗ ಅವರ ವಿರೋಧಿಗಳು ಸಹಜವಾಗಿಯೇ ಅವರನ್ನು ಕೈ ಬಿಡುವಂತೆ ಒತ್ತಡ ಹೇರಬಹುದು. ಬೆಳಗಾವಿಯಲ್ಲಿ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ನಡುವಿನ ಕಿತ್ತಾಟದಿಂದ ಸೋಲಾಗಿರುವುದು ಸುಳ್ಳೇನಲ್ಲ.
ಕಾಂಗ್ರೆಸ್ ಪಾಲಿಗೆ ಒಟ್ಟಾರೆ ಈ ಚುನಾವಣೆಯ ಪಾಠ ಏನೆಂದರೆ ಮಲ್ಲಿಕಾರ್ಜುನ ಖರ್ಗೆ ಅವರ ಕೈ ಮೇಲಾಗಿದ್ದು, ಅವರ ಪ್ರಾಬಲ್ಯ ಹೆಚ್ಚಿದೆ. ಹಾಗೆಯೇ ಬೀದರ್ ನಲ್ಲಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಂಡಿರುವ ಸಚಿವ ಈಶ್ವರ ಖಂಡ್ರೆ ಅವರ ಪ್ರಾಬಲ್ಯವೂ ಹೆಚ್ಚಾಗಿದೆ.
ಬಿಜೆಪಿ ಮೇಲೆ ಯಡಿಯೂರಪ್ಪ ಹಿಡಿತ ಬಿಗಿ
ಬಿಜೆಪಿ ಪ್ರಾಬಲ್ಯ ಕುಸಿದಿದ್ದರೂ ಪಕ್ಷದಲ್ಲಿ ಯಡಿಯೂರಪ್ಪ ಅವರ ಹಿಡಿತ ಮತ್ತಷ್ಟು ಬಿಗಿಯಾಗಿದೆ. ವಿಜಯೇಂದ್ರ ಅವರ ಸ್ಥಾನಕ್ಕೆ ಯಾವುದೇ ಧಕ್ಕೆ ಇರಲಿಕ್ಕಿಲ್ಲ. ನಿಜ! ಬಿಜೆಪಿ ಹಲವು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಸೋಲಿಗೆ ಕೇವಲ ಯಡಿಯೂರಪ್ಪ ಅವರು ಮಾತ್ರ ಕಾರಣರಲ್ಲ. ಆದರೆ ಅವರು ಟಿಕೆಟ್ ಕೊಡಿಸಿದ ಅನೇಕ ಅಭ್ಯರ್ಥಿಗಳು ಲೋಕಸಭೆ ಪ್ರವೇಶಿಸಿದ್ದಾರೆ.
ಯಾರು ಏನೇ ಹೇಳಿದರೂ ಬಿಜೆಪಿ 17 ಸ್ಥಾನಗಳಲ್ಲಿ ಗೆಲ್ಲಲು ಜೆಡಿಎಸ್ ನ ಸಹಕಾರ ಅತಿ ಮುಖ್ಯವಾಗಿದೆ. ಒಂದು ವೇಳೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೆ ಬಿಜೆಪಿ ಇನ್ನೂ ನಾಲ್ಕೈದು ಸ್ಥಾನಗಳನ್ನು ಕಳೆದುಕೊಳ್ಳಬೇಕಾಗಿತ್ತು. ಲಿಂಗಾಯತ ಮತ್ತು ಒಕ್ಕಲಿಗ ಮತಗಳ ಕ್ರೋಢೀಕರಣದಿಂದ ಬಿಜೆಪಿ ಜೆಡಿಎಸ್ ಮೈತ್ರಿಕೂಟ 19 ಸ್ಥಾನಗಳಲ್ಲಿ ಗೆಲ್ಲಲು ಕಾರಣವಾಗಿದೆ.
ಐದು ಗ್ಯಾರಂಟಿಗಳ ಕಾರಣಕ್ಕಾಗಿ 18 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಆಸೆ ಇಟ್ಟುಕೊಂಡಿದ್ದ ಕಾಂಗ್ರೆಸ್ ಗೆ ನಿರಾಸೆ ಮೂಡಿದೆ. ಗ್ಯಾರಂಟಿಗಳು ನೆರವಿಗೆ ಬಂದಿದ್ದರೆ ಕಾಂಗ್ರೆಸ್ ಗೆ ಇನ್ನೂ ಐದಾರು ಸ್ಥಾನಗಳು ಹೆಚ್ಚಾಗಬೇಕಿತ್ತು. ಈ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ಜೆಡಿಎಸ್ ಗೆ ಹುರುಪು ತಂದುಕೊಟ್ಟಿದೆ. ಆದರೆ ತವರು ಕ್ಷೇತ್ರ ಹಾಸನದ ಸೋಲು ಜೆಡಿಎಸ್ ಗೆ ಎಲ್ಲೋ ಒಂದು ಕಡೆ ಹಳೇ ಮೈಸೂರು ಭಾಗದಲ್ಲಿ ನಿಂತ ನೆಲವೇ ಕುಸಿಯುತ್ತಿರುವ ಅನುಭವ ನೀಡಿದೆ. ಒಂದು ವೇಳೆ ಕುಮಾರಸ್ವಾಮಿ ಕೇಂದ್ರ ಸಚಿವರಾದರೆ ಪಕ್ಷ ಕಟ್ಟಲು ಸಹಕಾರಿಯಾಗಬಹುದು.
(ವಿಶ್ಲೇಷಣೆ- ಎಚ್. ಮಾರುತಿ, ಬೆಂಗಳೂರು)