ಕರ್ನಾಟಕ ನಕ್ಸಲ್ ಪುನರ್ವಸತಿ ಪ್ಯಾಕೇಜ್ ಸುಲಭಕ್ಕೆ ಸಿಗಲ್ಲ, ನೀತಿಯಲ್ಲಿವೆ ದೋಷ ಎನ್ನುತ್ತಿದ್ದಾರೆ ಶರಣಾದ ಮಾಜಿ ನಕ್ಸಲರು
Nov 21, 2024 02:36 PM IST
ಕರ್ನಾಟಕ ನಕ್ಸಲ್ ಪುನರ್ವಸತಿ ಪ್ಯಾಕೇಜ್ ಸುಲಭಕ್ಕೆ ಸಿಗಲ್ಲ. ಸರ್ಕಾರದ ನೀತಿಯಲ್ಲಿ ದೋಷ ಇದೆ ಎಂದು ಶರಣಾದ ಮಾಜಿ ನಕ್ಸಲರು ಹೇಳುತ್ತಿದ್ಧಾರೆ. (ಸಾಂಕೇತಿಕ ಚಿತ್ರ)
ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಕ್ಸಲ್ ಚಳವಳಿಗೆ ಹಿನ್ನಡೆ ಉಂಟುಮಾಡಿರುವುದಲ್ಲದೆ, ಶರಣಾದ ನಕ್ಸಲರ ಬದುಕಿನ ಕಡೆಗೆ ಗಮನ ಸೆಳೆಯುವಂತೆ ಮಾಡಿದೆ. ಎನ್‌ಕೌಂಟರ್ ಖಂಡಿಸಿದ ಮಾಜಿ ನಕ್ಸಲರು, ಕರ್ನಾಟಕ ನಕ್ಸಲ್ ಪುನರ್ವಸತಿ ಪ್ಯಾಕೇಜ್ ಸುಲಭಕ್ಕೆ ಸಿಗಲ್ಲ, ನೀತಿಯಲ್ಲಿ ದೋಷಗಳಿವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಅದರ ಕಡೆಗೊಂದು ನೋಟ ಇಲ್ಲಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ನಕ್ಸಲ್ ಪುನರ್ವಸತಿ ನೀತಿ ಪ್ರಕಾರ, ಸಶಸ್ತ್ರ ಹೋರಾಟದ ಹಾದಿ ಬಿಟ್ಟು ಸಮಾಜ ಮುಖ್ಯವಾಹಿನಿ ಸೇರುವುದಕ್ಕೆ ಶರಣಾದ ನಕ್ಸಲರ ಬದುಕಿನ ಹಾದಿ ಹೂ ಹಾಸಿದ ನೆಲದಂತೆ ಇಲ್ಲ. ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ಈ ವಿಚಾರವನ್ನು ಮಾಜಿ ನಕ್ಸಲರು ಹೇಳಿಕೊಳ್ಳತೊಡಗಿದ್ಧಾರೆ. ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ ನೂರ್ ಶ್ರೀಧರ್, ಸಿರಿಮನೆ ನಾಗರಾಜು ಅವರು ಕೂಡ ನಕ್ಸಲ್ ಪುನರ್ವಸತಿ ಪ್ಯಾಕೇಜ್ ವಿಚಾರ ಪ್ರಸ್ತಾಪಿಸಿದ್ದರು. ಇದಲ್ಲದೆ, ಕೊಪ್ಪದಲ್ಲಿ ಮಾಜಿ ನಕ್ಸಲ ಅಗಲಗಂಡಿ ವೆಂಕಟೇಶ್ ಕೂಡ ನಕ್ಸಲ್ ಪುನರ್ವಸತಿ ಪ್ಯಾಕೇಜ್ ವಿಚಾರದ ಕಡೆಗೆ ಗಮನಸೆಳೆದಿದ್ದರು. ಕರ್ನಾಟಕ ಸರ್ಕಾರ ಘೋಷಿಸಿರುವ ನಕ್ಸಲ್ ಪುನರ್ವಸತಿ ಪ್ಯಾಕೇಜ್ ನೀತಿಯಲ್ಲಿ ದೋಷಗಳಿರುವ ಕಾರಣ ಮತ್ತು ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವ ಕಾರಣ ಶರಣಾದ ನಕ್ಸಲರು ವಿಶೇಷವಾಗಿ 2016ರ ನಂತರ ಶರಣಾದವರು ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದು, ಶರಣಾಗಬಾರದಿತ್ತು ಎಂಬ ಮನಸ್ಥಿತಿಗೆ ತಲುಪಿರುವುದಾಗಿ ಅವರು ಹೇಳಿದ್ದರು.
ಕರ್ನಾಟಕ ನಕ್ಸಲ್ ಪುನರ್ವಸತಿ ಪ್ಯಾಕೇಜ್ ಸುಲಭಕ್ಕೆ ಸಿಗಲ್ಲ, ನೀತಿಯಲ್ಲಿವೆ ದೋಷ: ಮಾಜಿ ನಕ್ಸಲರು
ಕರ್ನಾಟಕ ನಕ್ಸಲ್ ಪುನರ್ವಸತಿ ಪ್ಯಾಕೇಜ್ ನೀತಿಯಲ್ಲಿ ದೋಷಗಳಿರುವ ಕಾರಣ ಅದರ ಸವಲತ್ತುಗಳು ಸುಲಭವಾಗಿ ಸಿಗುತ್ತಿಲ್ಲ ಎಂದು ಶರಣಾಗತಿ ಬಳಿಕ ಸಮಾಜದ ಮುಖ್ಯವಾಹಿನಿಯಲ್ಲಿರುವ ಮಾಜಿ ನಕ್ಸಲರು ವಿಕ್ರಂ ಗೌಡ ಎನ್‌ಕೌಂಟರ್ ಬಳಿಕ ಅಳಲು ತೋಡಿಕೊಂಡಿದ್ದಾರೆ. ಈ ನಡುವೆ, 2010 ರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ಜನರು ಸರ್ಕಾರದ ಪುನರ್ವಸತಿ ನೀತಿಯನ್ನು ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಗಂಭೀರ ಪ್ರಕರಣಗಳಿಲ್ಲದ ಮಾಜಿ ನಕ್ಸಲರು ಜಾಮೀನು ಪಡೆದು ಸಹಜ ಜೀವನ ನಡೆಸುತ್ತಿದ್ದಾರೆ. ಆದರೆ ಗಂಭೀರ ಆರೋಪ ಎದುರಿಸುತ್ತಿರುವ ಮಾಜಿ ನಕ್ಸಲರು ಇನ್ನೂ ಕೋರ್ಟ್‌ಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ದ ಹಿಂದೂ ವರದಿ ಮಾಡಿದೆ.
ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಮೇಲೆ ವಿಶ್ವಾಸ ಬರುತ್ತಿಲ್ಲ. ಕನ್ಯಾಕುಮಾರಿ ಎಂಬ ಯುವತಿಯ ಮೇಲೆ ಆಧಾರರಹಿತ 58 ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದಾರೆ. ನಿಲಗುಳಿ ಪದ್ಮನಾಭ ಹೊರಗೆ ಬಂದು 8 ವರ್ಷವಾದರೂ ನ್ಯಾಯಾಲಯಕ್ಕೆ ಅಲೆಯುತ್ತಾರೆ. ಅವರಿಗೆ ಸರ್ಕಾರದಿಂದ ನೆರವು, ಮನೆ, ಕೆಲಸ ಯಾವುದೂ ಸಿಕ್ಕಿಲ್ಲ ಎಂದು ನೂರ್ ಶ್ರೀಧರ್ ನಿನ್ನೆ (ನವೆಂಬರ್ 20) ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಕನ್ಯಾಕುಮಾರಿ ಎದುರಿಸುತ್ತಿರುವ ಸಮಸ್ಯೆಗಳೇನು
ಕರ್ನಾಟಕದ ನಕ್ಸಲ್ ಶರಣಾಗತಿ ನೀತಿ ಪ್ರಕಾರ, ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು 2017ರ ಜೂನ್ 5 ರಂದು ಕಳಸ ಮೂಲದ ಕನ್ಯಾಕುಮಾರಿ ತನ್ನ ಪತಿ ಶಿವು ಮತ್ತು ಆರು ತಿಂಗಳ ಗಂಡು ಮಗುವಿನೊಂದಿಗೆ ಶರಣಾಗಿದ್ದರು.ಆದರೆ ಅವರ ವಿರುದ್ಧ ಪ್ರಕರಣಗಳಿದ್ದ ಕಾರಣ ಕಳೆದ 7 ವರ್ಷಗಳಿಂದ ಬೆಂಗಳೂರು ಜೈಲಿನಲ್ಲಿದ್ದರು. ಆರು ವರ್ಷ ಕಾಲ ಆ ಮಗು ಕೂಡ ಕನ್ಯಾಕುಮಾರಿ ಜತೆಗೆ ಜೈಲಿನಲ್ಲಿರಬೇಕಾಯಿತು. ಈಗ ಆ ಮಗು ಪತಿಯ ಜತೆಗಿದ್ದು ಬೆಂಗಳೂರಿನಲ್ಲಿ ಶಾಲೆಗೆ ಹೋಗುತ್ತಿದ್ದಾನೆ. ಶಿವು ಕೂಡ ಮಾಜಿ ನಕ್ಸಲ. ಆತ ಈಗ ರಿಕ್ಷಾ ಚಾಲಕನಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾನೆ. ಕನ್ಯಾಕುಮಾರಿ 2004ರಲ್ಲಿ ಕುದುರೆಮುಖ ಉಳಿಸಿ ಅಭಿಯಾನದಲ್ಲಿ ಭಾಗವಹಿಸಿದ ಬಳಿಕ ನಕ್ಸಲ್ ಚಳವಳಿ ಸೇರಿದ್ದಳು. ಈಗ ಆಕೆಯ ವಿರುದ್ಧ ಕರ್ನಾಟಕದಲ್ಲಿ 33 ಸೇರಿ ಒಟ್ಟು 60ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ದ ಹಿಂದೂ ವರದಿ ಮಾಡಿದೆ.
2017 ರಿಂದ ಇದುವರೆಗೂ ಆಕೆ ಒಂದು ದಿನವೂ ಜೈಲಿನಿಂದ ಹೊರಗೆ ಬಂದಿಲ್ಲ. ಶರಣಾತಿ ಪ್ಯಾಕೇಜ್ ಪ್ರಕಾರ ಸರ್ಕಾರ ಆಕೆಗೆ 2.5 ಲಕ್ಷ ರೂಪಾಯಿ ನೀಡಿದ್ದರೂ, ಅದು ಇಷ್ಟು ವರ್ಷಗಳ ಕೋರ್ಟ್ ಖರ್ಚು ವೆಚ್ಚಗಳಿಗೆ ಸಾಕಾಗಿಲ್ಲ. ಕನ್ಯಾಕುಮಾರಿ ಯಾವಾಗ ಜೈಲಿನಿಂದ ಹೊರಬರುತ್ತಾಳೋ ಗೊತ್ತಿಲ್ಲ. ಇದು ಶರಣಾದ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದ ಬಳಿಕ, ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಇದೇನಾ ಎಂದು ಶಿವು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ದ ಹಿಂದೂ ವರದಿ ಹೇಳಿದೆ.
ಮಾಜಿ ನಕ್ಸಲರಾದ ನಿಲಗುಳಿ ಪದ್ಮನಾಭ ಮತ್ತು ಆತನ ಪತ್ನಿ ರೇಣುಕಾ ಹೇಗಿದ್ದಾರೆ?
ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು 2016ರ ನವೆಂಬರ್ 14 ರಂದು ಶರಣಾದವರು ನಿಲಗುಳಿ ಪದ್ಮನಾಭ ಮತ್ತು ರೇಣುಕಾ, ಪರಶುರಾಮ ಮತ್ತು ರಿಜ್ವಾನ್ ಬೇಗಂ (ಕಲ್ಪನಾ) ದಂಪತಿ. ಶರಣಾದ ಬಳಿಕ ಕೆಲ ಕಾಲ ಪದ್ಮನಾಭ ಚಿಕ್ಕಮಗಳೂರು, ಬೆಳಗಾವಿ ಕಾರಾಗೃಹದಲ್ಲಿದ್ದ. 2017ರ ಸೆಪ್ಟೆಂಬರ್‌ನಲ್ಲಿ ಆತನ ಬಿಡುಗಡೆಯಾಯಿತು. ಸದ್ಯ ಕೊಪ್ಪದ ನಿಲಗುಳಿಯಲ್ಲಿ ಪದ್ಮನಾಭ - ರೇಣುಕಾ ದಂಪತಿ ತಮ್ಮ ಪುತ್ರ ಹರ್ಷಿತ್ ಜತೆಗೆ ವಾಸವಿದ್ದಾರೆ. ಪದ್ಮನಾಭ ವಿರುದ್ಧ 19 ಕೇಸ್‌ಗಳಿದ್ದವು. ನಕ್ಸಲ್ ಚಳವಳಿ ತೀವ್ರವಾಗಿದ್ದ ಸಂದರ್ಭದಲ್ಲಿ 2004ರಲ್ಲಿ ಆಗುಂಬೆ ಸಮೀಪ ಬರ್ಕನದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗುಂಡೇಟು ತಗುಲಿದ ಕಾರಣ ಒಂದು ಕಾಲು ಕಳೆದುಕೊಂಡಿದ್ದ ಎಂದು ದ ಹಿಂದೂ ವರದಿ ಮಾಡಿದೆ. "ಪೊಲೀಸರು ನನ್ನನ್ನು 2 ಸಲ ಬಂಧಿಸಿದರು. ಜೈಲಿನಲ್ಲಿ ನರಕ ತೋರಿಸಿದರು. ಜಾಮೀನು ಸಿಕ್ಕರೂ ಅದರ ಪ್ರಕ್ರಿಯೆ ವಿಳಂಬ ಮಾಡಿದರು. ಆ ಸಮಯದಲ್ಲಿ ಇನ್ನೊಂದು ಕೇಸ್‌ನಲ್ಲಿ ಬಂಧನ ವಾರೆಂಟ್ ಪಡೆದುಕೊಂಡು ಬೆಳಗಾವಿಗೆ ಕಳುಹಿಸಿದರು. ಶರಣಾದವರನ್ನು ನಡೆಸಿಕೊಳ್ಳುವ ರೀತಿ ಇದೇನಾ? ನನ್ನ ಬೇಡಿಕೆಗಳು ಈಡೇರಿಲ್ಲ. ಕರ್ನಾಟಕ ಸರ್ಕಾರದ ಪ್ಯಾಕೇಜ್ ಸವಲತ್ತುಗಳೂ ಸಿಕ್ಕಿಲ್ಲ. ವಾರಕ್ಕೆ ಮೂರು ನಾಲ್ಕು ದಿನ ಕೋರ್ಟ್‌ಗೆ ಎಂದು ಅಲೆದಾಡುವ ನನಗೆ ಕೆಲಸ ಯಾರು ಕೊಡ್ತಾರೆ ಎಂದು ಪದ್ಮನಾಭ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಗಿ ದ ಹಿಂದೂ ವರದಿ ಹೇಳಿದೆ. ಈ ಕೇಸ್‌ಗಳನ್ನಾದರೂ ಬೇಗ ಮುಗಿಸಿದ್ರೆ ಬದುಕು ಕಟ್ಟಿಕೊಳ್ಳಬಹುದಿತ್ತು ಎಂದು ಪದ್ಮನಾಭ ಹೇಳಿದ್ದಾಗಿ ವರದಿ ವಿವರಿಸಿದೆ.