ವಾಹನ ಲೈಸನ್ಸ್ ಹೊಂದಿಲ್ಲದಿದ್ದರೂ ಅಪಘಾತಸಂತ್ರಸ್ತರಿಗೆ ವಿಮಾ ಸಂಸ್ಥೆ ಪರಿಹಾರ ನೀಡಬೇಕು, ಬಳಿಕ ಮಾಲೀಕರಿಂದ ವಸೂಲು ಮಾಡಿ ಎಂದ ಹೈಕೋರ್ಟ್
Oct 09, 2024 11:42 AM IST
ವಾಹನ ಲೈಸನ್ಸ್ ಹೊಂದಿಲ್ಲದಿದ್ದರೂ ಅಪಘಾತ ಸಂತ್ರಸ್ತರಿಗೆ ವಿಮಾ ಸಂಸ್ಥೆ ಪರಿಹಾರ ನೀಡಬೇಕು, ಬಳಿಕ ಮಾಲೀಕರಿಂದ ವಸೂಲು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
- ಕರ್ನಾಟಕ ಹೈಕೋರ್ಟ್ ಸುದ್ದಿಗಳು: ಅಪಘಾತಕ್ಕೆ ಕಾರಣವಾದ ವಾಹನವು ಆಕ್ಸಿಡೆಂಟ್ ಸಂದರ್ಭದಲ್ಲಿ ಮಾನ್ಯ ಪರವಾನಿಗೆ ಮತ್ತು ಫಿಟ್ನೆಸ್ ಪ್ರಮಾಣಪತ್ರ ಹೊಂದಿರದೆ ಇದ್ದರೂ ಸಂತ್ರಸ್ತರಿಗೆ ಪರಿಹಾರ ನೀಡುವ ಬಾಧ್ಯತೆ ವಿಮಾ ಕಂಪನಿ ಹೊಂದಿರುತ್ತದೆ. ಈ ಪರಿಹಾರ ಮೊತ್ತವನ್ನು ವಾಹನ ಮಾಲೀಕರಿಂದ ವಿಮಾ ಸಂಸ್ಥೆ ವಸೂಲು ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು: ವಾಹನ ಅಪಘಾತ ಸಂತ್ರಸ್ತರಿಗೆ ವಿಮಾ ಕಂಪನಿಗಳು ನೀಡುವ ಪರಿಹಾರದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಪಘಾತಕ್ಕೆ ಕಾರಣವಾದ ವಾಹನವು ಅಪಘಾತದ ಸಮಯದಲ್ಲಿ ಮಾನ್ಯವಾದ ಪರವಾನಿಗೆ ಮತ್ತು ಫಿಟ್ನೆಸ್ ಪ್ರಮಾಣಪತ್ರ ಹೊಂದಿರದೆ ಇದ್ದರೂ ಸಂತ್ರಸ್ತರಿಗೆ ಪರಿಹಾರ ನೀಡುವ ಬಾಧ್ಯತೆ ವಿಮಾ ಕಂಪನಿ ಹೊಂದಿರುತ್ತದೆ. ಈ ಪರಿಹಾರ ಮೊತ್ತವನ್ನು ವಾಹನ ಮಾಲೀಕರಿಂದ ವಿಮಾ ಸಂಸ್ಥೆ ವಸೂಲು ಮಾಡಿಕೊಳ್ಳುವ ಹೊಣೆಗಾರಿಕೆ ಹೊಂದಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.
ವಿಮಾ ಕಂಪನಿಯ ವಾದ ಮತ್ತು ಕೋರ್ಟ್ ತೀರ್ಪು
"ಅಪಘಾತ ಮಾಡಿರುವ ವಾಹನವು ಅಪಘಾತದ ಸಮಯದಲ್ಲಿ ಮಾನ್ಯ ಪರವಾನಿಗೆ ಮತ್ತು ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ರಸ್ತೆಯಲ್ಲಿ ಚಲಿಸುತ್ತಿತ್ತು. ವಾಹನ ಮಾಲೀಕರ ಕಡೆಯಿಂದ ಇದು ಮೂಲಭೂತ ಉಲ್ಲಂಘನೆಯಾಗಿದೆ. ಈ ಸಂದರ್ಭದಲ್ಲಿ ವಾಹನ ಮಾಲೀಕರು ಅಪಘಾತ ಸಂತ್ರಸ್ಥರಿಗೆ ಪರಿಹಾರ ನೀಡಬೇಕು. ಇದು ವಿಮಾ ಸಂಸ್ಥೆಯ ಜವಾಬ್ದಾರಿಯಲ್ಲ" ಎಂದು ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ವಾದವನ್ನು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರಿದ್ದ ಏಕಸದಸ್ಯ ಪೀಠವು ತಿರಸ್ಕರಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.
ಇದೇ ಸಂದರ್ಭದಲ್ಲಿ ವಾಹನ ಚಾಲಕನ ವಿರುದ್ಧ ವಿವಿಧ ಕೇಸ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂಬ ವಿಷಯವನ್ನೂ ಕೋರ್ಟ್ ಮುಂದೆ ವಿಮಾ ಕಂಪನಿ ತಿಳಿಸಿತ್ತು. "ವಾಹನದ ಚಾಲಕನ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 56 (ಸಾರಿಗೆ ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರ), 66 (ಪರವಾನಗಿಗಳ ಅಗತ್ಯತೆ) ಮತ್ತು ನಿಯಮ 52 (ನೋಂದಣಿ ಪ್ರಮಾಣಪತ್ರದ ನವೀಕರಣ) ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ" ಎಂದು ವಿಮಾ ಕಂಪನಿ ವಾದ ಮಾಡಿದೆ.
ಹೊಣೆಗಾರಿಕೆಯಿಂದ ವಿಮಾ ಕಂಪನಿ ನುಣುಚಿಕೊಳ್ಳಲು ಸಾಧ್ಯವಿಲ್ಲ
ಈ ಸಂದರ್ಭದಲ್ಲಿ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಸ್ವರಣ್‌ಸಿಂಗ್ ಮತ್ತು ಇತರರ (2004) ಪ್ರಕರಣವನ್ನೂ ಈ ಸಂದರ್ಭದಲ್ಲಿ ತಿಳಿಸಲಾಯಿತು. "ಸ್ವರಣ್ ಸಿಂಗ್ ಪ್ರಕರಣ ಮತ್ತು ಯಲ್ಲವ್ವ ಪ್ರಕರಣದಲ್ಲಿ ಮೂಲಭೂತ ಉಲ್ಲಂಘಣೆ ಇದ್ದರೂ (ಸರ್ಟಿಫಿಕೇಟ್ ಹೊಂದಿರದೆ ಇರುವುದು) ಅರ್ಜಿದಾರರು ಮೂರನೇ ಪಾರ್ಟಿ ಆಗಿರುವ ಕಾರಣ ವಿಮಾ ಕಂಪನಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ವಿಮಾ ಕಂಪನಿಯು ಪರಿಹಾರವನ್ನು ಪಾವತಿಸಬೇಕು. ಬಳಿಕ ಆ ಹಣವನ್ನು ವಾಹನದ ಮಾಲೀಕರಿಂದ ವಸೂಲು ಮಾಡಬೇಕು" ಎಂದು ತೀರ್ಪು ನೀಡಿದೆ.
ಹೀಗಾಗಿ ಸಂತ್ರಸ್ತರಿಗೆ ಶೇಕಡ 9ರಷ್ಟು ವಾರ್ಷಿಕ ಬಡ್ಡಿ ಸೇರಿಸಿ ಪರಿಹಾರವನ್ನು ಪಾವತಿಸಬೇಕು. ವಿಮಾ ಕಂಪನಿಯು 17.88 ಲಕ್ಷ ರೂಪಾಯಿ ಪಾವತಿಸಬೇಕು ಎಂದಿದೆ.
ಸೈಕಲ್ ಸವಾರನಿಗೆ ಅಪಘಾತ ಮಾಡಿದ ಪ್ರಕರಣದ ಹಿನ್ನೆಲೆ
ಚಿಕ್ಕತಿರುಪತಿ-ಹೊಸಕೋಟೆ ರಸ್ತೆಯಲ್ಲಿ ನಂದೀಶಪ್ಪ ಎಂಬವರು ಸೈಕಲ್‌ನಲ್ಲಿ ಹೋಗುತ್ತಿರುವಾಗ ಸರಕು ವಾಹನ ಡಿಕ್ಕಿ ಹೊಡೆದಿತ್ತು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದರು. ಆ ಸಮಯದಲ್ಲಿ 13.44 ಲಕ್ಷ ರೂಪಾಯಿ ಪರಿಹಾರ ನೀಡಲ ಕೋರ್ಟ್ ಆದೇಶಿಸಿತ್ತು.ಪರಿಹಾರ ಮೊತ್ತ ಹೆಚ್ಚಿಸುವತೆ ಮೃತ ನಂದೀಶಪ್ಪರ ಪತ್ನಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಕರಣ ಮತ್ತು ಸಂತ್ರಸ್ಥರ ಆದೇಶ ರದ್ದುಪಡಿಸುವಂತೆ ವಿಮಾ ಕಂಪನಿಗಳು ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದವು.
ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂಬ ವಾದವನ್ನೂ ಕೋರ್ಟ್ ಅಲ್ಲಗೆಳೆದಿತ್ತು. ಪೋಸ್ಟ್ ಮಾರ್ಟಮ್‌ನಲ್ಲಿ ತಿಳಿಸಿರುವ ಹೃದಯ ಸ್ತಂಭನದಿಂದ ಸಾವು ಎಂದು ಉಲ್ಲೇಖಿಸಿದ್ದರೂ ಅಪಘಾತದ ಸಮಯದಲ್ಲಿ ತೀವ್ರವಾಗಿ ತಲೆಗೆ ಏಟು ಆಗಿರುವುದು ಸಾವಿಗೆ ಪ್ರಮುಖ ಕಾರಣ ವೈದ್ಯಕೀಯ ದಾಖಲೆಗಳು ತಿಳಿಸಿವೆ ಎದು ಕೋರ್ಟ್ ತಿಳಿಸಿತ್ತು.