Annabhagya Yojane: ಕರ್ನಾಟಕದ ಬಹು ನಿರೀಕ್ಷೆಯ ಅನ್ನಭಾಗ್ಯದ ಮಾರ್ಗಸೂಚಿ ಪ್ರಕಟ; ಫಲಾನುಭವಿ ಯಾರು, ಯಾರಲ್ಲ
Jul 07, 2023 08:13 AM IST
ಅನ್ನಭಾಗ್ಯ (ಪ್ರಾತಿನಿಧಿಕ ಚಿತ್ರ)
Annabhagya Yojane: ಕರ್ನಾಟಕದ ಬಹುಸಂಖ್ಯಾತ ಜನರು ಬಹಳ ನಿರೀಕ್ಷೆಯೊಂದಿಗೆ ಕಾಯುತ್ತಿರುವ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಆಯ್ಕೆಗೆ ಸರ್ಕಾರ ಗುರುವಾರ (ಜುಲೈ 6) ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರಂತೆ ಅನ್ನಭಾಗ್ಯ ಯೋಜನೆಯು ಯಾರಿಗೆ ಉಂಟು, ಯಾರಿಗೆ ಇಲ್ಲ. ಇಲ್ಲಿದೆ ಮಾಹಿತಿ.
ಬೆಂಗಳೂರು: ರಾಜ್ಯದ ಬಹುಸಂಖ್ಯಾತ ಜನರು ಬಹಳ ನಿರೀಕ್ಷೆಯೊಂದಿಗೆ ಕಾಯುತ್ತಿರುವ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಆಯ್ಕೆಗೆ ಸರ್ಕಾರ ಗುರುವಾರ (ಜುಲೈ 6) ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರಂತೆ ಅನ್ನಭಾಗ್ಯ ಯೋಜನೆಯು ಯಾರಿಗೆ ಉಂಟು, ಯಾರಿಗೆ ಇಲ್ಲ. ಇಲ್ಲಿದೆ ಮಾಹಿತಿ.
ಸರ್ಕಾರ ಈಗಾಗಲೇ 15 ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದರಲ್ಲಿ ಫಲಾನುಭವಿಗಳ ಆಯ್ಕೆಯ ಮಾನದಂಡವನ್ನು ಪ್ರಕಟಿಸಲಾಗಿದೆ.
ಈ ಅಂತ್ಯೋದಯ ಪಡಿತರದಾರರಿಗೆ ಸಿಗಲ್ಲ ಪ್ರಯೋಜನ, ಆದರೆ…
ಅಂತ್ಯೋದಯ ಅನ್ನ ಯೋಜನೆಯಲ್ಲಿ ಮೂರಕ್ಕಿಂತ ಕಡಿಮೆ ಸದಸ್ಯರು ಇರುವ ಕುಟುಂಬಕ್ಕೆ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯದ ʻನೇರ ನಗದು ವರ್ಗಾವಣೆʼ ಇಲ್ಲ. ಯಾಕೆ ಎಂದರೆ, ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕಿಲೋ ಆಹಾರ ಧಾನ್ಯವನ್ನು ಪಡೆಯುತ್ತಿರುವುದು ಗೊತ್ತಿರುವ ವಿಚಾರ. ಅಂತಹ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆಯ ಸೌಲಭ್ಯ ಸಿಗಲ್ಲ.
- ಪಡಿತರ ಚೀಟಿಯಲಿ, ಕುಟುಂಬದ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು, ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿ ಕುಟುಂಬಗಳನ್ನು ನಗದು ವರ್ಗಾವಣೆ ಸೌಲಭ್ಯ ಇಲ್ಲ.
- ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಆಗಿಲ್ಲದೇ ಇದ್ದರೆ ಅಂತಹ ಕುಟುಂಬದ ಪಡಿತರ ಚೀಟಿಗೂ ನಗದು ವರ್ಗಾವಣೆ ನಡೆಯಲ್ಲ.
- ಇ-ಕೆವೈಸಿ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸದ ಪಡಿತರ ಚೀಟಿದಾರರಿಗೂ ಈ ನೇರ ನಗದು ಸೌಲಭ್ಯ ತಾತ್ಕಾಲಿಕವಾಗಿ ಸಿಗುವುದಿಲ್ಲ.
- ಜೂನ್ ತಿಂಗಳಲ್ಲಿ ಆಹಾರ ಧಾನ್ಯ ಪಡೆದುಕೊಂಡ ಪಡಿತರ ಚೀಟಿದಾರರನ್ನು ಜುಲೈ ತಿಂಗಳ ನೇರ ನಗದು ಪ್ರಯೋಜನದ ಫಲಾನುಭವಿಯನ್ನಾಗಿ ಪರಿಗಣಿಸಲಾಗುತ್ತದೆ.
- ಜುಲೈ ತಿಂಗಳ 20ನೇ ತಾರೀಖಿನೊಳಗಾಗಿ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಚೀಟಿ ಕುಟುಂಬಗಳಿಗೆ ಆಗಸ್ಟ್ ತಿಂಗಳಿನಲ್ಲಿ ನಗದು ವರ್ಗಾವಣೆ ಸೌಲಭ್ಯವು ದೊರಕುತ್ತದೆ. ಇಲ್ಲದೇ ಹೋದರೆ ಸಿಗಲ್ಲ.
- ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವ ಪಡಿತರ ಚೀಟಿದಾರರಿಗೂ ಈ ನೇರ ನಗದು ಸೌಲಭ್ಯ ಸಿಗುವುದಿಲ್ಲ. ಅವರು ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿದ ಬಳಿಕ ಈ ಪ್ರಯೋಜನದ ಫಲಾನುಭವಿ ಆಗಬಹುದು.
ಅನ್ನಭಾಗ್ಯದ ಡಿಬಿಟಿ ಯಾರಿಗೆ ಉಂಟು
- ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯ ಕುಟುಂಬದಲ್ಲಿ 4 ಸದಸ್ಯರಿದ್ದರೆ ಸದರಿ ಕುಟುಂಬವು 170 ರೂಪಾಯಿಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬವು 510 ರೂಪಾಯಿಗಳನ್ನು 06 ಸದಸ್ಯರನ್ನು ಹೊಂದಿರುವ ಕುಟುಂಬವು 850 ರೂಪಾಯಿಗಳನ್ನು ಪಡೆಯುತ್ತದೆ.
- ಕುಟುಂಬದ ಮುಖ್ಯಸ್ಥರನ್ನು ಗುರುತಿಸಿರುವ ಪಡಿತರ ಚೀಟಿಗೆ ನಗದು ವರ್ಗಾವಣೆ ಸೌಲಭ್ಯ
- ಆಧಾರ್ ಜೋಡಣೆ ಮಾಡಿರುವ ಮತ್ತು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯ
- ಕಳೆದ ಮೂರು ತಿಂಗಳುಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯ