Siddaramaiah Cabinet Meeting: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆ; ಯಾವ ಗ್ಯಾರಂಟಿಯಲ್ಲಿ ಯಾರಿಗೆ ಸಿಗಲಿದೆ ಸಿಹಿ ಸುದ್ದ
Jun 02, 2023 11:20 AM IST
ವಿಧಾನಸೌಧದಲ್ಲಿ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಕಾಂಗ್ರೆಸ್ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳ ಪೈಕಿ ಮೂರು ಇಂದೇ ಘೋಷಣೆ ಮಾಡಿ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ (Congress) ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳನ್ನು (Congress Guarantees) ಅಧಿಕೃತವಾಗಿ ಜಾರಿಗೆ ತರುವ ಸಂಬಂಧ ಇಂದು (ಜೂನ್ 2, ಶುಕ್ರವಾರ) ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ (Cabinet Meeting) ನಡೆಯಲಿದ್ದು, ಮೂರು ಗ್ಯಾರಂಟಿಗಳ ಘೋಷಣೆ ಪಕ್ಕಾ ಅಂತ ಹೇಳಲಾಗುತ್ತಿದೆ.
ವಿಧಾನಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟದ ಬಗ್ಗೆ ಕರ್ನಾಟಕ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಮಹಿಳೆಯರಿಗೆ ಉಚಿತ ಬಸ್. ಈ ಮೂರು ಯೋಜನೆಗಳನ್ನು ಮೊದಲ ಹಂತವಾಗಿ ಘೋಷಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನುಳಿದ ಎರಡು ಗ್ಯಾರಂಟಿಗಳಾದ ಗೃಹ ಲಕ್ಷ್ಮಿ ಯೋಜನೆ ಹಾಗೂ ಯುವನಿಧಿಯ ಸಾಧಕ ಬಾಧಕಗಳನ್ನು ನೋಡಿಕೊಂಡು ಜಾರಿಗೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಗೃಹ ಜ್ಯೋತಿ ಯೋಜನೆಯಡಿ ಎಲ್ಲಾ ಮನೆಗಳಿಗೆ 200 ಯೂನಿಟ್ ವಿದ್ಯುತ್ ಉಚಿತ, ಪ್ರತಿ ಕುಟುಂಬದ ಮನೆಯ ಯಜಮಾನಿ ಅಥವಾ ಮನೆಯೊಡತಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವಂತ ಗೃಹ ಲಕ್ಷ್ಮಿ ಯೋಜನೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ, ನಿರುದ್ಯೋಗಿ ಪದವೀಧರ ಯುವಕರಿಗೆ ಪ್ರತಿ ತಿಂಗಳು 3,000 (ಎರಡು ವರ್ಷಗಳ ವರೆಗೆ), ಡಿಪ್ಲೋಮಾ ಮಾಡಿದ ಯುವಕರಿಗೆ ತಿಂಗಳಿಗೆ 1,500 (18 ರಿಂದ 25 ವರ್ಷದೊಳಗಿನವರಿಗೆ) ರೂಪಾಯಿ ನೀಡುವ ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಬಸ್ ಸೇವೆಯ ಮಹಿಳಾ ಶಕ್ತಿ ಎಂಬ ಒಟ್ಟು ಐದು ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು.
ಕಾಂಗ್ರೆಸ್ ಘೋಷಣೆ ಮಾಡಿರುವಂತ ಈ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಸುಮಾರು 50,000 ಕೋಟಿ ರೂಪಾಯಿಗಳ ವೆಚ್ಚ ಆಗಬಹುದು ಎಂದು ಕಾಂಗ್ರೆಸ್ ಸರ್ಕಾರ ಅಂದಾಜಿಸಿದೆ. ನಾನು ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ. ನಾಳೆ ನಿರ್ಧಾರ ಕೈಗೊಳ್ಳುತ್ತೇವೆ.
10 ಕೆಜಿ ಅಕ್ಕಿ ನೀಡುತ್ತೇವೆ. ಇದನ್ನು ಜಾರಿಗೆೊಳಿಸುವ ಬಗ್ಗೆ ಎರಡನೇ ಆಲೋಚನೆಯೇ ಇಲ್ಲ. ಸಚಿವ ಸಂಪುಟ ಸಭೆ ಬಳಿಕ ಈ ಕುರಿತು ವಿವರಿಸುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಘೋಷಣ ಮಾಡಿತ್ತು. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದೀಗ ನುಡಿದಂತೆ ನಯಬೇಕಾದ ಸರದಿ ಕಾಂಗ್ರೆಸ್‌ನದ್ದಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಸರ್ಕಾರ ಯಾವ ನಿರ್ಧಾರಗಳನ್ನು ಪ್ರಕಟಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.