logo
ಕನ್ನಡ ಸುದ್ದಿ  /  ಕರ್ನಾಟಕ  /  Caste Census: ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಪರ ವಿರೋಧ; ಅಡಕತ್ತರಿಯಲ್ಲಿ ಸಿದ್ದರಾಮಯ್ಯ ಸರ್ಕಾರ; ವಿಶ್ಲೇಷಣೆ

Caste Census: ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಪರ ವಿರೋಧ; ಅಡಕತ್ತರಿಯಲ್ಲಿ ಸಿದ್ದರಾಮಯ್ಯ ಸರ್ಕಾರ; ವಿಶ್ಲೇಷಣೆ

HT Kannada Desk HT Kannada

Oct 04, 2023 09:09 AM IST

google News

ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಪರ ವಿರೋಧ

    • ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯ ನಂತರ ರಾಜ್ಯದಲ್ಲೂ ಜಾತಿ ಗಣತಿ ಬಿಡುಗಡೆಗೆ ಪರ ವಿರೋಧ ಹೆಚ್ಚಾಗಿದೆ. ಇದರಿಂದ ಅಡಕತ್ತರಿಯಲ್ಲಿ ಸಿಲುಕಿದೆ ಸಿದ್ದರಾಮಯ್ಯ ಸರ್ಕಾರ. ಬಿಡುಗಡೆ ಮಾಡಿದರೆ ಲಿಂಗಾಯತ ಒಕ್ಕಲಿಗರ ಆಕ್ರೋಶ, ಮಾಡದಿದ್ದರೆ ಹಿಂದುಳಿದ ವರ್ಗಗಳ ಸಿಟ್ಟು. ಹಾಗಾದರೆ ಸರ್ಕಾರದ ಮುಂದಿನ ಹಾದಿ ಏನು? ವಿಶ್ಲೇಷಣೆ: ಎಚ್.ಮಾರುತಿ
ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಪರ ವಿರೋಧ
ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ಹೆಚ್ಚಿದ ಪರ ವಿರೋಧ

ಬಿಹಾರ ಸರ್ಕಾರವು ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಇಡೀ ದೇಶದಾದ್ಯಂತ ಜಾತಿ ಗಣತಿಯನ್ನು ನಡೆಸುವಂತೆ ಕೂಗು ಎದ್ದಿದೆ. ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಆದರೆ ರಾಜ್ಯದಲ್ಲಿ ಜಾತಿ ಗಣತಿ ವರದಿ ಸಿದ್ದವಾಗಿ 8 ವರ್ಷಗಳಾಗಿದ್ದರೂ ಸ್ವೀಕರಿಸಿ ಬಿಡುಗಡೆ ಮಾಡುವ ಧೈರ್ಯವನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ತೋರಲಿಲ್ಲ ಎನ್ನುವುದು ಸಾಬೀತಾಗಿದೆ.

ವರದಿಯನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್‌ನ ಒಂದು ಗುಂಪು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೆ ಕಾಂಗ್ರೆಸ್ ಮತ್ತು ಸರ್ಕಾರದೊಳಗಿನ ಮತ್ತೊಂದು ಗುಂಪು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015ರಲ್ಲಿ ನ್ಯಾಯಮೂರ್ತಿ ಕಾಂತರಾಜು ನೇತೃತ್ವದ ಸಮಿತಿಯನ್ನು ನೇಮಿಸಿತ್ತು. ಅದೇ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುಮಾರು 1.6 ಕೋಟಿ ಸರ್ಕಾರಿ ನೌಕರರು ರಾಜ್ಯದ 1.3 ಕೋಟಿ ಮನೆಗಳ ಸಮೀಕ್ಷೆ ನಡೆಸಿದ್ದರು. ಇದಕ್ಕಾಗಿ ಸರ್ಕಾರ 169 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿತ್ತು. ಈ ಸಮಿತಿಯ ಸೋರಿಕೆಯಾದ ವರದಿಯ ಪ್ರಕಾರ ಹಿಂದುಳಿದ ವರ್ಗಗಳ ಶೇಕಡವಾರು ಜನಸಂಖ್ಯೆ ಮೊದಲ ಸ್ಥಾನದಲ್ಲಿದ್ದು ಮುಸ್ಲಿಮರ ಜನಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಇದುವರೆಗೂ ಮೊದಲ ಎರಡು ಸ್ಥಾನಗಳಲ್ಲಿದ್ದ ಲಿಂಗಾಯತ ಮತ್ತು ಒಕ್ಕಲಿಗರ ಜನಸಂಖ್ಯೆ ಕಡಿಮೆಯಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಇದರಿಂದ ಈ ಎರಡೂ ಪ್ರಬಲ ಸಮುದಾಯಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ಸಿದ್ದರಾಮಯ್ಯ ಸರ್ಕಾರ ವರದಿ ಸ್ವೀಕಾರಕ್ಕೆ ಹಿಂದೇಟು ಹಾಕಿತ್ತು. ನಂತರ ರಚನೆಯಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರಗಳೂ ಈ ವರದಿ ಸ್ವೀಕರಿಸಲು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಹಿಂದೇಟು ಹಾಕಿದ್ದು ಇತಿಹಾಸ.

ಐದು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾತಿ ಗಣತಿ ವರದಿಯನ್ನು ಸ್ವೀಕರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಆ ಭರವಸೆಯನ್ನು ಈಡೇರಿಸುವಂತೆ ಆ ಪಕ್ಷದ ನಾಯಕರು ಸಿದ್ದರಾಮಯ್ಯ ಅವರಿಗೆ ನೆನಪು ಮಾಡಿಕೊಡುತ್ತಿದ್ದಾರೆ. ಬಿಹಾರ ಸರ್ಕಾರ ವರದಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಕಾಂಗ್ರೆಸ್ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಮುಖಂಡರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಮೇಲ್ವರ್ಗಗಳ ಸಚಿವರು ಶಾಸಕರು ಮತ್ತು ನಾಯಕರು ಜೇನುಗೂಡಿಗೆ ಕೈ ಹಾಕುವುದು ಬೇಡ ಎಂದು ಸಲಹೆ ನೀಡುತ್ತಿದ್ದಾರೆ.

ಅತ್ತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರೂ ಸಹ ಅಧಿಕಾರಕ್ಕೆ ಬಂದರೆ ಜಾತಿಗಣತಿಯನ್ನು ನಡೆಸಿ ಅದರ ಪ್ರಕಾರ ಸೌಲಭ್ಯಗಳನ್ನು ಹಂಚುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕೋಲಾರದಲ್ಲಿ ಜಾತಿಗಣತಿ ಪರವಿರುವುದಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕಾಂತರಾಜು ವರದಿ ಪ್ರಕಾರ ಲಿಂಗಾಯತರ ಜನಸಂಖ್ಯೆ ಶೇ.17 ರಿಂದ ಶೇ.11ಕ್ಕೆ ಕುಸಿದಿದೆ. ಹಾಗೆಯೇ ಒಕ್ಕಲಿಗರ ಜನಸಂಖ್ಯೆಯೂ ಕಡಿಮೆಯಾಗಿದ್ದು, ವರದಿಯನ್ನು ಸ್ವೀಕಾರ ಮಾಡಿದರೆ ಈ ಎರಡೂ ಸಮುದಾಯಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂಬ ಭಯ ಸರ್ಕಾರಕ್ಕಿದೆ. ಇದರಿಂದ ರಾಜಕೀಯ ಸ್ಥಾನಪಲ್ಲಟಗಳಾಗುವ ಸಂಭವವಿದ್ದು ಈ ಎರಡೂ ಸಮುದಾಯಗಳ ಬೆಂಬಲ ಕೈ ತಪ್ಪಿ ಹೋದೀತು ಎಂಬ ಆತಂಕವೂ ಮನೆ ಮಾಡಿದೆ. ಈಗಾಗಲೇ ಲಿಂಗಾಯತ ಮತ್ತು ಒಕ್ಕಲಿಗ ಮಠಾಧೀಶರುಗಳು ಸರಣಿ ಸಭೆಗಳನ್ನು ಮಾಡಿದ್ದು ತಮ್ಮ ತಮ್ಮ ಸಮುದಾಯಗಳ ಸಚಿವರು ಮತ್ತು ಶಾಸಕರ ಮೂಲಕ ವರದಿಯನ್ನು ಅಂಗೀಕರಿಸದಂತೆ ಒತ್ತಡ ಹಾಕುತ್ತಿದ್ದಾರೆ.

ಅಧಿಕಾರಕ್ಕೆ ಬಂದ ನಂತರ ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿಯನ್ನು ಅಂಗೀಕರಿಸಿಲು ಸಿದ್ದವಿರುವುದಾಗಿ ಹೇಳಿದ್ದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಾಜಿ ಸಚಿವ ಜಯಪ್ರಕಾಶ್ ಹೆಗಡೆ ಅವರು ವರದಿಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಪ್ರಗತಿಯಾಗಿಲ್ಲ.

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ರಾಜ್ಯ ರಾಜಕಾರಣದ ಮೇಲೆ ಹಿಡಿತ ಹೊಂದಿವೆ. ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಮೇಲೂ ಈ ಸಮುದಾಯಗಳ ಪ್ರಭಾವ ಇದ್ದೇ ಇರುತ್ತದೆ. ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ನಂತರ ಬಿಡುಗಡೆಯಾಗಿರುವ ವರದಿಗಳ ಪ್ರಕಾರ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಹುದ್ದೆಗಳಲ್ಲಿಯೂ ಈ ಸಮುದಾಯಗಳೇ ಸಿಂಹಪಾಲು ಪಡೆದಿವೆ.

ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು, ಜಾತಿಗಣತಿ ವರದಿಯನ್ನು ಅಂಗೀಕರಿಸುವಂತೆಯೂ ಇಲ್ಲ, ಸುಮ್ಮನಿರುವ ಹಾಗೆಯೂ ಇಲ್ಲ ಎನ್ನುವಂತಾಗಿದೆ ಸರ್ಕಾರದ ಪರಿಸ್ಥಿತಿ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಗಳಲ್ಲಿ ಸರ್ಕಾರಗಳು ಏನು ಮಾಡುತ್ತವೆ ಎಂದರೆ ವರದಿಯನ್ನು ಸ್ವೀಕರಿಸಿ ಪರಿಶೀಲಿಸಲು ಸಚಿವ ಸಂಪುಟದ ಉಪ ಸಮಿತಿ ಅಥವಾ ಜಂಟಿ ಸದನ ಸಮಿತಿಗೆ ಒಪ್ಪಿಸಿ ಕೈ ತೊಳೆದುಕೊಳ್ಳುವ ಸಂಭವಗಳೇ ಹೆಚ್ಚು. ಸರ್ಕಾರದ ಅವಧಿ ಮುಗಿಯುವವರೆಗೆ ಈ ಸಮಿತಿಗಳು ಆಮೆವೇಗದಲ್ಲಿ ಕೆಲಸ ಮಾಡುತ್ತಲೇ ಇರುತ್ತವೆ. ಸಾರ್ವಜನಿಕರ ನೆನಪಿನ ಶಕ್ತಿ ಯಾವಾಗಲೂ ತುಂಬಾ ಕಡಿಮೆ ಅವಧಿಯದ್ದಾಗಿರುತ್ತದೆ ಎಂಬ ಇಂಗ್ಲೀಷ್ ನಾಣ್ಣುಡಿ ನೆನಪಾದರೆ ಅಚ್ಚರಿಯೇನಿಲ್ಲ. ಜನ ಮರೆತುಬಿಡುತ್ತಾರೆ ಎಂಬ ಭಂಡ ಧೈರ್ಯ ಸರ್ಕಾರಗಳಿಗೆ ಇದ್ದೇ ಇರುತ್ತದೆ.

ವಿಶ್ಲೇಷಣೆ: ಎಚ್.ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ