Water Scarcity: ಮುಂಗಾರು ಮಳೆ ವಿಳಂಬ ಕಾರಣ ರಾಜ್ಯದ 8 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ; ಪರಿಹಾರಕ್ಕೆ ಅಧಿಕಾರಿಗಳಿಗೆ ಸರ್ಕಾರದ ಸೂಚನೆ
Jun 12, 2023 04:48 PM IST
ಮುಖ್ಯಮಂತ್ರಿ ಸಿದ್ದರಾಮಯ್ಯ (ಕಡತ ಚಿತ್ರ)
Water Scarcity: ಮುಂಗಾರು ಮಳೆ ಈ ಸಲ ವಿಳಂಬವಾಗಿದೆ. ವಾಡಿಕೆ ಮಳೆಗಿಂತ ಶೇಕಡ 65ರಷ್ಟು ಮಳೆಕೊರತೆ ಕಾಡಿದೆ. ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, 8 ಜಿಲ್ಲೆಗಳಲ್ಲಿ ತೀವ್ರವಾಗಿದೆ. ಈ ಜಿಲ್ಲೆಗಳಲ್ಲಿ ಪರಿಹಾರ ಕ್ರಮಕ್ಕೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Monsoon) ತಡವಾಗಿ ಜೂನ್ 10ರಿಂದ ಶುರುವಾಗಿದೆ. ವಾಡಿಕೆಯ ಮಳೆಗಿಂತ ಶೇಕಡ 67 ಮಳೆ (Rain) ಕಡಿಮೆ ಬಿದ್ದ ಕಾರಣ, ಎಂಟು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧ್ಯಕ್ಷತೆಯ ಸಭೆಯಲ್ಲಿ ಇಂದು (ಜೂ.12) ಗಮನಸೆಳೆದಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಇದರಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು.
ಮಳೆ ಕೊರತೆಯ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಈಗ ವಾಡಿಕೆ ಮಳೆಗಿಂತ ಶೇಕಡ 67 ಕಡಿಮೆ ಇದ್ದರೂ, ಮುಂದಿನ ದಿನಗಳಲ್ಲಿ ವಾಡಿಕೆಯಷ್ಟು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ಇದೆ. ಆದರೆ ಕಳೆದ ಕೆಲವು ದಿನಗಳಲ್ಲಿ ಮಳೆಯ ಕೊರತೆಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪೂರ್ವ ಮುಂಗಾರು ಕೊರತೆಯ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಮುಂಗಾರು ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದ್ದಾರೆ.
ರಾಯಚೂರು, ಕೊಪ್ಪಳಗಳಲ್ಲಿ ಕಲುಷಿತ ನೀರಿನ ಸಮಸ್ಯೆ
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಇರದಿದ್ದರೂ ಕಲುಷಿತ ನೀರಿನ ಸಮಸ್ಯೆ ಉಂಟಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಇದರ ವರದಿಯನ್ನಾಧರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ರಾಜ್ಯದ 15 ಜಿಲ್ಲೆಗಳಲ್ಲಿ 322 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ 148 ಗ್ರಾಮಗಳಲ್ಲಿ ಖಾಸಗಿ ಬೋರ್ ವೆಲ್‌ಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿ.ಇ.ಓ. ತಾಲೂಕುಗಳಿಗೆ ಭೇಟಿ ನೀಡಬೇಕು. ಪಿಡಿಓಗಳ ಕಾರ್ಯನಿರ್ವಹಣೆ ಬಗ್ಗೆ ನಿಗಾ ವಹಿಸಬೇಕು. ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಪೈಪ್ ಲೈನ್ ಅಳವಡಿಸಿರುವುದರ ಗುಣಮಟ್ಟ ಪರಿಶೀಲಿಸಿ. ಕೊಳವೆ ಒಡೆದುಹೋಗುವುದು ಮತ್ತಿತರ ಸಮಸ್ಯೆ ಉಂಟಾದರೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು
ಸಭೆಯಲ್ಲಿ ಅಧಿಕಾರಿಗಳಿಗೆ ಕೊಟ್ಟ ಸೂಚನೆ ಹೀಗಿದೆ
- ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನೀರಿನ ಸಮಸ್ಯೆ ಉದ್ಭವಿಸಿದ 24 ಗಂಟೆಯೊಳಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು
- ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಈ ಕುರಿತು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಯಿತು.
- ಯಾವುದೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವ ಆಗಿದ್ದರೆ, ಕೂಡಲೇ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಆಡಳಿತಾತ್ಮಕ ವಿಚಾರಗಳಿಗೆ ವಿಳಂಬ ಧೋರಣೆ ಸರಿಯಲ್ಲ. ಈ ಕುರಿತು ಅಧಿಕಾರ ಪ್ರತ್ಯಾಯೋಜನೆ ಮಾಡುವ ಕುರಿತೂ ಚಿಂತನೆ ನಡೆಸಲು ಸೂಚನೆ ನೀಡಲಾಯಿತು.
- ಜಲಜೀವನ್ ಮಿಷನ್ ಮೂಲಕ ನೀರು ಒದಗಿಸಿದ ಗ್ರಾಮಗಳಲ್ಲಿ ಇಓ, ಇಂಜಿನಿಯರುಗಳು ತಪಾಸಣೆ ನಡೆಸಿ, ಪೈಪ್ ಲೈನ್‌ಗಳನ್ನು ಪರಿಶೀಲಿಸಿ, ಸಮಸ್ಯೆಗಳಿದ್ದಲ್ಲಿ ಸರಿ ಪಡಿಸಬೇಕು. ಕಲುಷಿತ ನೀರು ಸೇವನೆ ಪ್ರಕರಣಗಳು ಮರುಕಳಿಸಬಾರದು ಎಂದು ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
- ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು ನಿಮ್ಮ ಜವಾಬ್ದಾರಿ. ಅನುದಾನದ ಅಗತ್ಯವಿದ್ದರೆ ಒದಗಿಸಲಾಗುವುದು. ನೆಪ ಹೇಳಿ, ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಬೇಡಿ.
- ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಸೂಕ್ಷ್ಮ ವಿಷಯ. ಮಳೆ ಬಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿದರೆ ಒಳ್ಳೆಯದು. ಇಲ್ಲವಾದರೆ, ಅಧಿಕಾರಿಗಳು ದಿನದ 24 ಗಂಟೆಯೂ ಜಾಗೃತರಾಗಿದ್ದು ನೀರಿನ ಸಮಸ್ಯೆ ಬಗೆಹರಿಸಬೇಕು. ಇದಕ್ಕಾಗಿ ನಿಮಗೆ ಒದಗಿಸಿದ ಸವಲತ್ತುಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಂಪರ್ಕದಲ್ಲಿದ್ದು ನೀರಿನ ಸಮಸ್ಯೆ ಕುರಿತು ಸರಿಯಾದ ಮಾಹಿತಿ ಒದಗಿಸಬೇಕು.
- ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು.