ಕನ್ನಡಿಗರ ನೆಚ್ಚಿನ ಸಿದ್ದು; ಅವಿರತ ಹೋರಾಟ, ಚಾಣಾಕ್ಷ ರಾಜಕಾರಣ- ವಕೀಲನಿಂದ ಮುಖ್ಯಮಂತ್ರಿವರೆಗೆ ಸಿದ್ದರಾಮಯ್ಯ ಬದುಕು ಸಾಗಿಬಂದ ಹಾದಿಯಿದು
May 18, 2023 01:08 PM IST
ಸಿದ್ದರಾಮಯ್ಯ
- Siddaramaiah: ಅಹಿಂದ ನಾಯಕ, ಮಾಸ್ ಲೀಡರ್ ಎಂದು ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕರ್ನಾಟಕ ಮುಖ್ಯಮಂತ್ರಿ ಕುರ್ಚಿ ಏರಿದ್ದಾರೆ. ಸಿದ್ದರಾಮಯ್ಯ ಎಂಬ ಜನನಾಯಕನ ಜೀವನ ಪಯಣದ ಮೈಲಿಗಲ್ಲುಗಳು ಹೀಗಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಜೀವನಗಾಥೆಯೆಂದರೆ ಕೇವಲ ಸ್ವಂತ ಪರಿಶ್ರಮದಿಂದ ಯಶಸ್ಸಿನ ಎತ್ತರಕ್ಕೆ ಏರಿದ ಈ ನಾಡಿನ ಸಾಮಾನ್ಯ ಮನುಷ್ಯರ ಬದುಕಿನ ಕತೆ. ಸಿದ್ದರಾಮಯ್ಯನವರು ಹುಟ್ಟಿದ್ದು ಈ ನಾಡಿನ ಸಾವಿರಾರು ಹಳ್ಳಿಗಳಲ್ಲೊಂದಾದ ಕುಗ್ರಾಮದಲ್ಲಿ. ಹೆತ್ತವರೇನು ಪ್ರಭಾವಿಗಳಲ್ಲ, ಅವರದ್ದು ಸಾಮಾನ್ಯರೈತ ಕುಟುಂಬ. ಹಳ್ಳಿಗಾಡಿನ ಬದುಕಿನ ಎಲ್ಲ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿಮೆಟ್ಟಿನಿಂತು ಸಾಧನೆಯ ಶಿಖರ ಏರಿದ ಶ್ರೀ ಸಿದ್ದರಾಮಯ್ಯನವರ ಬಾಳದಾರಿ ಇಂತಹದ್ದೇ ಹಿನ್ನೆಲೆಯಿಂದ ಬಂದವರಿಗೆ ಮಾರ್ಗದರ್ಶನ ಮಾತ್ರವಲ್ಲ ಸ್ಪೂರ್ತಿಯೂ ಹೌದು.
ಸಿದ್ದರಾಮಯ್ಯ ಅವರ ಹುಟ್ಟೂರು ಮೈಸೂರು ಜಿಲ್ಲೆ ವರುಣಾ ಹೋಬಳಿಯ ಸಿದ್ದರಾಮನ ಹುಂಡಿ ಗ್ರಾಮ, ಜನನ 1948ರ ಆಗಸ್ಟ್ 12. ಇವರದ್ದು ಕೃಷಿ ಪ್ರಧಾನ ಕುಟುಂಬ.ಅಂದಿನ ಕಾಲದಲ್ಲಿಎಸ್.ಎಸ್.ಎಲ್.ಸಿಪಾಸು ಮಾಡುವುದೇ ಕಠಿಣವಾಗಿತ್ತು.ಅಂತಹ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಕುಟುಂಬದಲ್ಲಿ ಪದವಿ ಪಡೆದ ಮೊದಲಿಗರಾದರು. ಭಾಷಣ ಮಾಡುವುದರಲ್ಲಿ ಸಿದ್ದರಾಮಯ್ಯ ಅವರದ್ದು ಎತ್ತಿದ ಕೈ. ಶಾಲಾ-ಕಾಲೇಜು ದಿನಗಳಲ್ಲಿ ಉತ್ತಮ ಭಾಷಣಕಾರರಾಗಿ ಹೊರಹೊಮ್ಮುವ ಮೂಲಕ ಸಿದ್ದರಾಮಯ್ಯ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಬಾಲ್ಯ ಮತ್ತು ಶಿಕ್ಷಣ
ಸಿದ್ದರಾಮಯ್ಯ ಅವರು ಬಾಲ್ಯದ ದಿನಗಳನ್ನು ಕಳೆದದ್ದು ಸ್ವಗ್ರಾಮಸಿದ್ದರಾಮನ ಹುಂಡಿಯಲ್ಲೇ, ಆರಂಭದ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇನಿಲ್ಲಿಸಬೇಕಾದ ಪರಿಸ್ಥಿತಿ ಬಂದಿತ್ತು. ಶಾಲೆ ಬಿಟ್ಟು ದನ ಮೇಯಿಸುವ ಕಾಯಕಕ್ಕೆಮುಂದಾಗಬೇಕಾಯಿತು. ಆದರೆ ಬಾಲಕ ಸಿದ್ದರಾಮಯ್ಯ ಅವರಲ್ಲಿನ ಪ್ರತಿಭೆಯನ್ನು ಗಮನಿಸಿದಗ್ರಾಮದ ಶಾಲೆಯ ಶಿಕ್ಷಕರು ಶಾಲೆಗೆ ಕರೆತಂದು ನೇರವಾಗಿ 4ನೇ ತರಗತಿಗೆ ಪ್ರವೇಶ ಕೊಟ್ಟರು. ಬಾಲಕ ಆಗಿದ್ದಾಗ ತಾವು ದನ ಮೇಯಿಸಲು ಹೋಗುತ್ತಿದ್ದ ಸಂದರ್ಭವನ್ನು ಸಿದ್ದರಾಮಯ್ಯ ಅವರು ಆಗಾಗ ನೆನಪು ಮಾಡಿಕೊಳ್ಳುವುದುಂಟು.
ಪ್ರಾಥಮಿಕ ಶಿಕ್ಷಣದ ಬಳಿಕ ಸಿದ್ದರಾಮಯ್ಯ ಅವರು ಮುಖ ಮಾಡಿದ್ದು, ಮೈಸೂರು ಕಡೆಗೆ. ಕಾಲೇಜು ಶಿಕ್ಷಣಕ್ಕಾಗಿ ಯುವರಾಜ ಕಾಲೇಜಿಗೆ ಪ್ರವೇಶ ಪಡೆದಸಿದ್ದರಾಮಯ್ಯ ಅವರು ಅಲ್ಲಿಯೇ ಬಿ.ಎಸ್ಸಿ ಪದವಿ ಪಡೆದರು.‘ನನ್ನನ್ನು ಡಾಕ್ಟರ್ಮಾಡಬೇಕೆಂದು ಅಪ್ಪನ ಯೋಚನೆಯಾಗಿತ್ತು’ ಎಂದು ಸಿದ್ದರಾಮಯ್ಯನವರು ಹಳೆಯ ನೆನಪನ್ನು ಮೆಲುಕು ಹಾಕುತ್ತಾರೆ. ಅಪ್ಪನ ಬಯಕೆಯ ಹೊರತಾಗಿಯೂ ಸಿದ್ದರಾಮಯ್ಯನವರು ಕಾನೂನುವ್ಯಾಸಂಗಕ್ಕೆ ಮುಂದಾದರು. ಕಾನೂನು ಪದವಿಗಾಗಿ ಶಾರದಾ ವಿಲಾಸ ಕಾಲೇಜಿಗೆ ಸೇರ್ಪಡೆಯಾದರು.ಅದರ ನಂತರ ಕೆಲಕಾಲ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂಸೇವೆ ಸಲ್ಲಿಸಿದರು. ಇದಾದ ನಂತರ ವಕೀಲ ವೃತ್ತಿಯನ್ನು ಆರಂಭಿಸಿದರು.
ಹೋರಾಟದ ಬದುಕು
ನ್ಯಾಯವಾದಿಯಾಗಿ ಸಿದ್ದರಾಮಯ್ಯ ಅವರ ಮನಸ್ಸು ನ್ಯಾಯಾಲಯದಲ್ಲೇ ಕಳೆದು ಹೋಗಲಿಲ್ಲ. ಶೋಷಿತ ವರ್ಗಗಳ ಪರ ಅವರ ಮನ ಸದಾ ಮಿಡಿಯುತ್ತಿತ್ತು. ಹೀಗಾಗಿ ಶ್ರೀ ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತಕ ಡಾ. ರಾಮ ಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದರು. ವಿದ್ಯಾರ್ಥಿ ಆಗಿದ್ದಾಗ ಮೈಸೂರಿನ ಸುಬ್ಬರಾಯನ ಕೆರೆ ಬಳಿ ಇರುವ ಕಟ್ಟಡದಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ ಸಿದ್ದರಾಮಯ್ಯ ಅವರು ಕಷ್ಟದ ದಿನಗಳನ್ನು ಎದುರಿಸಿದ ಕಾಲವದು. ಅಂದಿನ ಆ ಅನುಭವವೇ ಮುಖ್ಯಮಂತ್ರಿಯಾಗಿ ಬಡವರ ಪರವಾದ ಹಲವಾರು ಯೋಜನೆಗಳನ್ನು ಇಂದು ಜಾರಿಗೆ ತರಲು ಸಹಕಾರಿ ಆಯಿತು. ‘’ಬಡವರ ಕಷ್ಟ ಏನು ಎಂಬುದು ನನಗೆ ಗೊತ್ತು, ಅದನ್ನು ಸ್ವಂತ ಅನುಭವಿಸಿದವನು ನಾನು. ಆದ್ದರಿಂದಲೇ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮತ್ತಿತರ ಯೋಜನೆಗಳನ್ನು ಜಾರಿಗೆ ತರುವ ನಿರ್ಧಾರ ಕೈಗೊಂಡಿದ್ದೇನೆ’’ ಎಂದು ಸಿದ್ದರಾಮಯ್ಯ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಪ್ರೊ.ಪಿ.ಎಂ ಚಿಕ್ಕಬೋರಯ್ಯ ಎಂಬುವರ ಬಳಿ ವಕೀಲ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದ ಶ್ರೀ ಸಿದ್ದರಾಮಯ್ಯ ಅವರು ಕ್ರಮೇಣ ಸಾರ್ವಜನಿಕ ಜೀವನಕ್ಕೆ ತೆರೆದುಕೊಂಡರು. ನಾಯಕತ್ವದ ಗುಣಲಕ್ಷಣಗಳನ್ನು ಮೈಗೂಡಿಸಿಕೊಳ್ಳತೊಡಗಿದರು.
ರಾಜಕಾರಣದ ಆರಂಭ
ಶೋಷಿತ ವರ್ಗಗಳ ಕಷ್ಟಕಾರ್ಪಣ್ಯಗಳಿಗಾಗಿ ಸದಾ ಮಿಡಿಯುತ್ತಿದ್ದ ಸಿದ್ದರಾಮಯ್ಯನವರಲ್ಲಿ ಸಾಮಾಜಿಕ ನ್ಯಾಯದ ಆಶಯ ಸೈದ್ದಾಂತಿಕವಾಗಿ ಸ್ಪಷ್ಟಗೊಳ್ಳಲು ಕಾರಣವಾದುದು ಡಾ,ರಾಮಮನೋಹರ ಲೋಹಿಯಾ ಚಿಂತನೆ. ಇದಕ್ಕಾಗಿ ಅವರು ವಕೀಲ ವೃತ್ತಿಯನ್ನು ಬಿಟ್ಟು ರಾಜಕಾರಣಕ್ಕೆ ಧುಮುಕಿದರು. ಹೀಗೆ ವಕೀಲ ವೃತ್ತಿಯನ್ನು ಬಿಟ್ಟು ಬಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಮುಂದೆ ಸಾಗಿದರು. 1978ರಲ್ಲಿ ರಾಜಕಾರಣದಲ್ಲಿ ಅಧಿಕೃತವಾಗಿ ಪ್ರವೇಶಮಾಡಿದ ಸಿದ್ದರಾಮಯ್ಯ ಅವರು ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ಜೊತೆ ಜೊತೆಗೆ ರೈತ ಚಳವಳಿಯತ್ತ ಆಕರ್ಷಿತರಾದರು. ಹೀಗಾಗಿ ಅವರಿಗೆ ಪ್ರೊ.ಎಂ.ಡಿ ನಂಜುಂಡ ಸ್ವಾಮಿ ಅವರ ಒಡನಾಟ ಲಭಿಸಿತು.
1980ರಲ್ಲಿ ಶ್ರೀ ಸಿದ್ದರಾಮಯ್ಯ ಅವರು ಮೊದಲಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದರು. ಆದರೆ ಗೆಲುವು ಸಾಧ್ಯವಾಗಲಿಲ್ಲ. ಆದರೆ ಹುಟ್ಟು ಛಲಗಾರ ಆ ಸೋಲಿನಿಂದ ಹಿಮ್ಮೆಟ್ಟಲಿಲ್ಲ. ಮೊದಲ ಸೋಲನ್ನೇ ಗೆಲುವಿನ ಸೋಪಾನ ಮಾಡಿಕೊಂಡ ಶ್ರೀ ಸಿದ್ದರಾಮಯ್ಯನವರು 1983ರ ವಿಧಾನಸಭೆ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರು. ತಕ್ಕಡಿ ಗುರುತಿನೊಂದಿಗೆ ಕಣಕ್ಕಿಳಿದಿದ್ದ ಶ್ರೀ ಸಿದ್ದರಾಮಯ್ಯನವರು ಇಂದಿರಾ ಕಾಂಗ್ರೆಸ್‍ನ ಡಿ ಜಯದೇವರಾಜ ಅರಸು ಅವರನ್ನು ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.. ಇದರಲ್ಲಿ ಮೈಸೂರು ತಾಲ್ಲೂಕಿನ ಮುಖಂಡರಾಗಿದ್ದ ಕೆಂಪವೀರಯ್ಯ ಎಂಬುವರ ಪಾತ್ರ ಪ್ರಮುಖವಾಗಿತ್ತು.
ಸಿದ್ದರಾಮಯ್ಯ ಅವರು ವಿಧಾನಸಭೆಗೆ ಪ್ರವೇಶ ಪಡೆದಾಗ ಶ್ರೀರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರ ಇತ್ತು. ಸರ್ಕಾರ ರಚನೆಗೆ ಹೆಗಡೆ ಅವರು ಪಕ್ಷೇತರರು ಹಾಗೂ ಬಿಜೆಪಿ ಸದಸ್ಯ ಬೆಂಬಲ ಪಡೆದಿದ್ದರು. ಶ್ರೀ ಸಿದ್ದರಾಮಯ್ಯ ಅವರೂ ಸಹ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಯಿತು. ಬಳಿಕ ರೇಷ್ಮೆ ಸಚಿವರಾದರು.
1985ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದಾಗ ಶ್ರೀ ಸಿದ್ದರಾಮಯ್ಯ ಅವರು ಜನತಾಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿ ಚುನಾಯಿತರಾದರು. ಬಳಿಕ ಪಶು ಸಂಗೋಪನೆ, ರೇಷ್ಮೆ ಸಚಿವರಾದರು. ಎಸ್.ಆರ್ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 1989ರಲ್ಲಿ ಜನತಾಪಕ್ಷ ಇಬ್ಭಾಗವಾಗಿ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷ ಅಸ್ತಿತ್ವಕ್ಕೆ ಬಂತು. ಶ್ರೀ ಸಿದ್ದರಾಮಯ್ಯ ಅವರು ಆಗ ಜನರಾದಳದೊಂದಿಗೆ ಗುರುತಿಸಿಕೊಂಡರು. ಆದರೆ ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಹೊಂದಿದರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು. ಅದು ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ತುಸು ಹಿನ್ನಡೆಯ ಕಾಲ.
ರಾಜಕೀಯ ತಿರುವು
ಜೆ.ಡಿ.ಎಸ್ ನಿಂದ ಹೊರಬಂದ ಶ್ರೀ ಸಿದ್ದರಾಮಯ್ಯ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 2006ರ ಜುಲೈ 22ರಂದು ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಬೆಳವಣಿಗೆ ಶ್ರೀ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವು ನೀಡಿತು. ಬಳಿಕ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರೋಚಕ ಗೆಲುವು ಸಾಧಿಸಿದರು.
2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಆಯಿತು. ಆಗ ವರುಣಾ ಕ್ಷೇತ್ರ ಹೊಸದಾಗಿ ರಚನೆ ಆಯಿತು. ಆ ಕ್ಷೇತ್ರದಿಂದ ಶ್ರೀ ಸಿದ್ದರಾಮಯ್ಯ ಅವರು ವಿಧಾನಸಭೆ ಪ್ರವೇಶಿಸಿದರು. ಬಳಿಕ ಅವರು ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಈ ಸಂದರ್ಭದಲ್ಲಿ ಶ್ರೀ ಸಿದ್ದರಾಮಯ್ಯ ಅವರು ಬಳ್ಳಾರಿಯ ಗಣಿಧಣಿಗಳ ವಿರುದ್ಧ ರಣಕಹಳೆ ಮೊಳಗಿಸಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ರಾಜ್ಯ ರಾಜಕೀಯದಲ್ಲಿ ಹೊಸಸಂಚಲವನ್ನೇ ಉಂಟುಮಾಡಿದರು.
ಮುಖ್ಯಮಂತ್ರಿ ಗಾದಿಯತ್ತ
2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಮಾತ್ರ ಶ್ರಮಿಸದೆ ಇಡೀ ರಾಜ್ಯಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರೀ ಗೆಲುವಿಗೆ ಕಾರಣರಾದರು. 2013 ಮೇ 13 ರಂದು ಈ ನಾಡಿನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ ನವರ ಮುಂದೆ ಹಲವಾರು ಸವಾಲುಗಳಿದ್ದವು. ಹಲವಾರು ಸಂದರ್ಭಗಳಲ್ಲಿ ಅವರೇ ಹೇಳಿಕೊಂಡಿರುವಂತೆ ಕೋಮು ಸೌಹಾರ್ದತೆಗೆ ಹೆಸರಾಗಿದ್ದ ಕರ್ನಾಟಕದಲ್ಲಿ ಕೋಮು ಸೌಹಾರ್ದತೆಯ ವಾತಾವರಣ ಕಲುಷಿತವಾಗಿತ್ತು. ಆರ್ಥಿಕ ಶಿಸ್ತಿಗೆ ಬದ್ಧವಾಗಿದ್ದ ಕರ್ನಾಟಕದಲ್ಲಿ ವಿತ್ತೀಯ ಶಿಸ್ತು ಅಪಾಯದ ಅಂಚಿನಲ್ಲಿತ್ತು. ದಕ್ಷ ಆಡಳಿತಕ್ಕೆ ಹೆಸರಾಗಿದ್ದ ಕರ್ನಾಟಕದ ಖ್ಯಾತಿ ಮಸುಕಾಗುತ್ತಿತ್ತು. ರಾಜ್ಯದ ಸ್ಥಿರ ರಾಜಕೀಯ ಅಸ್ಥಿರತೆಯ ಅಂಚಿಗೆ ಬಂದು ನಿಂತಿತ್ತು.
ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು ಈ ಸವಾಲುಗಳನ್ನು ದಿಟ್ಟತನದಿಂದಲೇ ಸ್ವೀಕರಿಸಿದರು. ತಮ್ಮ ಸುದೀರ್ಘ ರಾಜಕೀಯದ ಅನುಭವಗಳನ್ನು ಅಡಿಗಲ್ಲನ್ನಾಗಿಟ್ಟುಕೊಂಡು ಕರ್ನಾಟಕದ ಅಭಿವೃದ್ಧಿ ಸೌಧ ನಿರ್ಮಿಸಲು ಸಂಕಲ್ಪ ತೊಟ್ಟರು. ಪ್ರಮಾಣವಚನ ಸ್ವೀಕರಿಸಿದ ಮರುಘಳಿಗೆಯಲ್ಲಿಯೇ ರಾಜ್ಯದ ಶಕ್ತಿ ವಿಧಾನಸೌಧದ ಮೂರನೇ ಮಹಡಿಯ ಸಚಿವ ಸಂಪುಟ ಸಭಾಂಗಣಕ್ಕೆ ಎದೆಯುಬ್ಬಿಸಿ ನಡೆದರು. ನಾಡಿನ ಜನತೆಯ ಒಳಿತನ್ನೇ ಉಸಿರಾಗಿಸಿಕೊಂಡಿದ್ದ ತಮ್ಮ ಮಾತೃ ಹೃದಯದಿಂದ ಬಡ ಜನತೆಯ ಮೇಲೆ ಮಮತೆಯ ಮಹಾಪೂರವನ್ನೇ ಹರಿಸಿದರು. ಬಡಜನರ ಸಂಕಷ್ಟ ನಿವಾರಿಸುವ ದಿಟ್ಟ ನಿರ್ಧಾರಗಳನ್ನು ಪ್ರಕಟಿಸಿದರು. ನಾಡಿನ ಇತಿಹಾಸದಲ್ಲಿಯೇ ಮೊದಲಬಾರಿಗೆ ಏಕಸಚಿವ ಸಂಪುಟ ಸಭೆ ನಡೆಸಿ ಅನ್ನಭಾಗ್ಯ, ಕ್ಷೀರಧಾರೆ, ಋಣಮುಕ್ತ, ವಸತಿ ಭಾಗ್ಯ .... ಇತ್ಯಾದಿ ಜನಪರ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದರು.
ಸಿದ್ದರಾಮಯ್ಯನವರ ಈ ದಿಟ್ಟ ನಡೆಯನ್ನು ನೋಡಿ ನಾಡಿನ ಜನತೆ ಹುಬ್ಬೇರಿಸಿತು. ಹಲವರು ಅನುಮಾನ ವ್ಯಕ್ತಪಡಿಸಿದರು. ಕೆಲವರು ಕುಹಕವಾಡಿದರು. ಇಂತಹ ಜನಾನುರಾಗಿ ಯೋಜನೆಗಳ ಮೂಲಕ ಇವರು ಬೊಕ್ಕಸವನ್ನೇ ಬರಿದುಗೊಳಿಸುತ್ತಾರೆ ಎಂದರು. ಆದರೆ ಸಿದ್ದರಾಮಯ್ಯನವರು ಈ ಕುಹಕದ ಮಾತುಗಳಿಂದ ಎದೆಗುಂದಲಿಲ್ಲ. ತಮ್ಮ ನುಡಿಗಳನ್ನು ನಡೆಯಲ್ಲಿ ತೋರಿಸಿದರು. ನುಡಿದಂತೆ ನಡೆದಿದ್ದೇವೆ ಎನ್ನುವ ಘೋಷವಾಕ್ಯವನ್ನೇ ರಚಿಸಿ ಅದರಂತೆ ನಡೆದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಮಗೆ ಸರ್ಕಾರಿ ಯೋಜನೆಗಳಲ್ಲ, ಅಂಕಿ-ಅಂಶಗಳ ಲೆಕ್ಕವೂ ಅಲ್ಲ, ಸಾಧನೆಯ ಪಟ್ಟಿಯೂ ಅಲ್ಲ, ಅದು ನಮ್ಮ ಬದ್ಧತೆ, ಕರ್ತವ್ಯ ಮತ್ತು ಕಾಳಜಿ. ರಾಜಕೀಯ ಪಕ್ಷಗಳು ಚುನಾವಣಾ ಕಾಲದಲ್ಲಿ ಪ್ರಕಟಿಸುವ ಪ್ರಣಾಳಿಕೆಗೂ, ಅಧಿಕಾರಕ್ಕೆ ಬಂದ ನಂತರ ನಡೆಸುವ ಆಡಳಿತಕ್ಕೂ ಸಂಬಂಧವೇ ಇರುವುದಿಲ್ಲವೆಂಬ ಆರೋಪವಿದೆ. ಈ ಆರೋಪದ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಣಾಳಿಕೆ ಕೇವಲ ಪ್ರಚಾರ ಕರಪತ್ರವಲ್ಲ, ಅದೊಂದು ಬದ್ಧತೆ. ಚುನಾವಣಾ ಸಂದರ್ಭದಲ್ಲಿ ಹೇಳಿದರೆ, ಅದನ್ನು ಆಡಳಿತದಲ್ಲಿ ಮಾಡಿ ತೋರಿಸಬೇಕು.
ಮೊದಲ ಆದೇಶ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ಸಿದ್ದರಾಮಯ್ಯನವರು ಆಗಲೇ ನುಡಿದಂತೆ’ನಡೆಯಬೇಕು’’ ಎಂಬ ಸಂಕಲ್ಪವನ್ನು ಮಾಡಿಬಿಟ್ಟಿದ್ದರು. ಚುನಾವಣಾ ಕಾಲದಲ್ಲಿ ಪಕ್ಷ ಪ್ರಕಟಿಸುವ ಪ್ರಣಾಳಿಕೆ ಕೇವಲ ಕಾಗದಗಳ ಕಂತೆಯಾಗಿ ಕಳೆದುಹೋಗಲು ಬಿಡಬಾರದು, ಅದು ಅಧಿಕಾರದ ದಿನಗಳಲ್ಲಿ ಸರ್ಕಾರಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಅವರು ನಿರ್ಧರಿಸಿದ್ದರು. ಅದರ ಫಲವಾಗಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಾಲ ಮನ್ನಾ, ಕಾರ್ಯಕ್ರಮಗಳನ್ನು ಘೋಷಿಸಿದರು.
ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಅಪ್ಪಟ ಹಳ್ಳಿಹೈದ. ತನ್ನ ಸುತ್ತಲಿನ ಬಡತನ, ಅನಕ್ಷರತೆ, ಶೋಷಣೆ, ಮೂಢನಂಬಿಕೆ, ಜನರ ಸಂಕಷ್ಟ, ನೋವು-ನಲಿವುಗಳನ್ನು ಕಣ್ಣಾರೆ ಕಂಡವರು. ಅವರೇ ಹೇಳಿಕೊಳ್ಳುವಂತೆ, ಬಹುಶ: “ಇಂಥ ದು:ಸ್ಥಿತಿಯ ವಾತಾವರಣ ನನ್ನೊಳಗೆ ನೋವು, ಸಿಟ್ಟು ಹೆಪ್ಪುಗಟ್ಟದೆ ಹೋಗಿದ್ದರೆ, ಬಹುಶ: ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ”, ಇವುಗಳೆಲ್ಲಾ ಕಣ್ಣೆದುರಿಗೆ ಬಂದಾಗ, ಈ ಸಾಮಾಜಿಕ ಸ್ಥಿತಿ ಯಾವ ತೆರನದು? ಅದರ ಫಲಾನುಭವತೆ ಯಾವ ಸ್ವರೂಪದ್ದು? ಈ ಸಾಮಾಜಿಕ ನ್ಯಾಯ ಸ್ಥಿರತೆಗೊಳಿಸುವುದು ಹೇಗೆ? ನೊಂದವರ, ಶೋಷಿತರ, ಬಡವರ ಮಡಿಲಿಗೆ ತಲುಪಿಸುವುದು ಹೇಗೆ? ಸಮಸಮಾಜ ನಿರ್ಮಾಣದ ಬಗೆಗೆ ಅವರ ಮನ ಸದಾ ತುಡಿಯುತ್ತಲೇ ಇತ್ತು.
ರಾಮ ಮನೋಹರ ಲೋಹಿಯಾ, ಅಂಬೇಡ್ಕರ್, ಗಾಂಧೀಜಿಯವರ ಚಿಂತನೆಗಳಿಂದ ಪ್ರಭಾವಿತ ರಾಗಿದ್ದ ಇವರು, ‘ಪ್ರೊ: ಎಂ.ಡಿ. ನಂಜುಂಡಸ್ವಾಮಿಯವರ ಪ್ರೇರಣೆ, ಮಾರ್ಗದರ್ಶನದಿಂದ ನಾನು ರಾಜಕೀಯ ಪ್ರವೇಶ ಮಾಡಿದೆ’, ಎಂಬ ಅವರ ದಿಟ್ಟ ನಿಲುವನ್ನು ಪ್ರಶ್ನಿಸಿದವರು ಉಂಟು. `ಲೋಹಿಯಾ ಅವರ ವಿಚಾರಗಳಿಂದ ಪ್ರಭಾವಿತರಾದ ನೀವು, ಕಾಂಗ್ರೆಸ್ ಪಕ್ಷ ಸೇರಿದ್ದು ಹೇಗೆ? ಎಂಬ ಪ್ರಶ್ನೆಗೆ ಬಹಳ ಚಾಣಾಕ್ಷತನದಿಂದ ಅವರು ಉತ್ತರ ನೀಡಿದರು: “ಲೋಹಿಯಾ ಕಾಂಗ್ರೆಸ್ ವಿರೋಧಿಯೇ ಇರಬಹುದು, ಆದರೆ ಅವರ ಬಹುತೇಕ ಚಿಂತನೆಗಳನ್ನೆಲ್ಲಾ ಜಾರಿಗೆ ತಂದಿರುವುದು ಕಾಂಗ್ರೆಸ್. ಭೂ ಸುಧಾರಣೆ, ಮೀಸಲಾತಿ, ಅಧಿಕಾರ ವಿಕೇಂದ್ರೀಕರಣ ಇದೆಲ್ಲಾ ಕಾಂಗ್ರೆಸ್ ಮಾಡಿರುವ ಕೆಲಸಗಳು.”
“ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡಿದರೆ ಮಾತ್ರ, ನೈಜ ಪ್ರಜಾಪ್ರಭುತ್ವ ಸ್ಥಾಪನೆ ಸಾಧ್ಯ, ಎಂಬ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ: ಬಿ.ಆರ್.ಅಂಬೇಡ್ಕರ್ ಅವರ ಆಶಯ ನನ್ನದು. ಆರಂಕುಷಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಇದು ಕನ್ನಡ ಆದಿಕವಿ ಪಂಪ ತನ್ನ ನೆಚ್ಚಿನ ನೆಲೆಯಾದ ಬನವಾಸಿಯನ್ನು ಕುರಿತು ಆಡಿದ ಮಾತು. ಕರ್ನಾಟಕವನ್ನು ತಮ್ಮ ಕರ್ಮಭೂಮಿ ಯನ್ನಾಗಿಸಿಕೊಂಡ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಆಶಯದ ಮಾತುಗಳನ್ನು ಹಲವಾರು ಸಂದರ್ಭಗಳಲ್ಲಿ ಆಡಿದ್ದಾರೆ. ಕರ್ನಾಟಕವೇ ನನ್ನ ಕರ್ಮಭೂಮಿ, ಕನ್ನಡವೇ ನನ್ನ ಉಸಿರು; ನಾಡು ನುಡಿಯ ಸಂರಕ್ಷಣೆಯೆ ನನ್ನ ಧ್ಯೇಯ; ಸಾಮಾಜಿಕ ನ್ಯಾಯವೇ ನನ್ನ ಆದ್ಯತೆ; ಬಡವರ ಅಭ್ಯುದಯವೇ ನನ್ನ ಪರಮಗುರಿ ಹೀಗೆ ಅವರ ಸದಾಶಯಗಳ ಸರಣಿ ಸಾಗುತ್ತದೆ.
ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 60ನ್ನು ತಮ್ಮ ಮೊದಲ ಬಜೆಟ್‍ನಲ್ಲಿಯೇ ಈಡೇರಿಸಿದರು. ಎರಡನೇ ಬಜೆಟ್‍ನಲ್ಲಿ ಪ್ರಣಾಳಿಕೆಯಲ್ಲಿನ ಇನ್ನೂ 30 ಭರವಸೆಗಳನ್ನು ಈಡೇರಿಸಿದರು. ಉಳಿದ ಭರವಸೆಗಳನ್ನು ತಮ್ಮ ಕೊನೆಯ ನಾಲ್ಕು ಬಜೆಟ್ ಗಳಲ್ಲಿ ಜಾರಿಗೆ ತಂದು ನುಡಿದಂತೆ ನಡೆದವರು ಎಂಬ ಖ್ಯಾತಿ ಪಡೆದವರು. ಇದು ಶ್ರೀ ಸಿದ್ದರಾಮಯ್ಯನವರ ಜನಪರ ಧೋರಣೆ, ಬಡವರ ಕಲ್ಯಾಣದ ಬಗ್ಗೆ ಬದ್ದತೆ ಮತ್ತು ಪ್ರಾಮಾಣಿಕ ನಡವಳಿಕೆಗೆ ಸಾಕ್ಷಿ. ದಕ್ಷತೆ ಮತ್ತು ಪ್ರಾಮಾಣಿಕತೆ ಶ್ರೀ ಸಿದ್ದರಾಮಯ್ಯನವರ ವ್ಯಕ್ತಿತ್ವದ ಹೆಗ್ಗುರುತುಗಳು.
2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ‘ ಕೆಲಸ ಮಾಡಿದ್ದೇವೆ ಕೂಲಿ ಕೊಡಿ’ ಎಂದು ರಾಜ್ಯದ ಮತದಾರರ ಮುಂದೆ ಬೊಗಸೆಯೊಡ್ಡಿ ಕೇಳಿದ್ದರು. ಅನ್ನ,ಹಾಲು, ಅಕ್ಷರು, ನೀರು, ಮನೆ, ಔಷಧಿ ಕೊಟ್ಟವರನ್ನು ಜನ ಮರೆಯುವುದಿಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ ಆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. 80 ಸ್ಥಾನಗಳಲ್ಲಿಯಷ್ಟೇ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಬಿಜೆಪಿಗಿಂತ ಶೇಕಡಾ ಎರಡರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ನೀಡಿದ್ದರು.
ಅಲ್ಲಿಂದ ಸಿದ್ದರಾಮಯ್ಯನವರ ಇನ್ನೊಂದು ಹೋರಾಟ ಶುರುವಾಯಿತು. ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು ಜೆಡಿಎಸ್ ಜೊತೆಗಿನ ಮೈತ್ರಿಸರ್ಕಾರಕ್ಕೆ ಒಪ್ಪಿಕೊಂಡರು.ಆದರೆ ಜೆಡಿ ಎಸ್ ಪಕ್ಷದಿಂದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು ಕಾಂಗ್ರೆಸ್ ಪಕ್ಷದ ಸಚಿವರು ಮತ್ತು ಶಾಸಕರನ್ನು ನಿರ್ಲಕ್ಷಿಸುತ್ತಿದ್ದಾರೆಂಬ ದೂರುಗಳು ನಿರಂತರವಾಗಿ ಬಂದರೂ ತಾಳ್ಮೆಯಿಂದ ಇರುವಂತೆ ಮನವೊಲಿಸುತ್ತಾ ಬಂದರು. ಕೊನೆಗೆ ಬಿಜೆಪಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಹದಿನೇಳು ಶಾಸಕರು ಬಲಿಯಾಗುವುದರೊಂದಿಗೆ ಸಮ್ಮಿಶ್ರ ಸರ್ಕಾರ ಪತನವಾಯಿತು.
ನಿರೀಕ್ಷೆಯಂತೆಯೇ ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾದರು. ಕಳೆದ ಮೂರು ವರೆ ವರ್ಷಗಳಲ್ಲಿ ಈ ವಯಸ್ಸಿನಲ್ಲಿಯೂ ವಾರದಲ್ಲಿ ಐದರಿಂದ ಆರು ದಿನಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಮಾಡಿ ಬಿಜೆಪಿಯ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ದ ಜನಜಾಗೃತಿ ಗೊಳಿಸಿದರು. ಕೊರೊನಾ ರೋಗಕ್ಕೆ ತಾನೇ ಒಳಗಾದರೂ ಕೂಡಾ ಅವರು ಮನೆಯೊಳಗೆ ಕೂರಲಿಲ್ಲ. ಸದನದ ಒಳಗೆ ಮತ್ತು ಹೊರಗೆ ಅವರು ನಡೆಸಿದ ಹೋರಾಟದಿಂದ ತತ್ತರಿಸಿ ಹೋದ ಬಿಜೆಪಿ ಅವರನ್ನೇ ಗುರಿಯಾಗಿಟ್ಟುಕೊಂಡು ರಾಜಕೀಯವಾಗಿ ಮಾತ್ರವಲ್ಲ ವೈಯಕ್ತಿಕವಾಗಿಯೂ ದಾಳಿ ಮಾಡಲಾರಂಭಿಸಿತು. ಆದರೆ ಸಿದ್ದರಾಮಯ್ಯನವರು ಹಿಮ್ಮೆಟ್ಟಲಿಲ್ಲ.
ಕೊರೊನಾ ಕಾಲದ ಭ್ರಷ್ಟಾಚಾರ, 40% ಕಮಿಷನ್, ಪೇಸಿಎಂ, ಪಿಎಸ್ ಐ ನೇಮಕಾತಿ ಅಕ್ರಮ, ಅಮುಲ್ –ನಂದಿನಿ ವಿವಾದ ಹೀಗೆ ಒಂದೊಂದು ಹಗರಣಗಳನ್ನು ಊರೂರು ಸುತ್ತಿ ಬಯಲಿಗೆಳೆಯುತ್ತಾ ಬಂದ ಸಿದ್ದರಾಮಯ್ಯನವರು ಬಿಜೆಪಿ ನಾಯಕರ ನಿದ್ದೆಗೆಡಿಸಿಬಿಟ್ಟಿದ್ದರು. ಕೇವಲ ಬಿಜೆಪಿಯ ವೈಫಲ್ಯಗಳನ್ನು ಎತ್ತಿ ತೋರಿಸುವ ಜೊತೆಯಲ್ಲಿಯೇ ತನ್ನ ಐದು ವರ್ಷಗಳ ಆಡಳಿತದ ಸಾಧನೆಗಳನ್ನು ಹೇಳುತ್ತಾ ಜನರಿಗೆ ಪರ್ಯಾಯವನ್ನು ತೋರಿಸುತ್ತಾ ಬಂದದ್ದು ಸಿದ್ದರಾಮಯ್ಯನವರ ವೈಶಿಷ್ಟೈ. ಸಶಕ್ತ ನಾಯಕ ಮತ್ತು ಸುಭದ್ರ ಸರ್ಕಾರವನ್ನು ತಮ್ಮಿಂದ ಮಾತ್ರ ಕೊಡಲು ಸಾಧ್ಯ ಎಂದು ಜನತೆಗೆ ಮನವರಿಕೆ ಮಾಡಿಕೊಟ್ಟಿರುವ ಪರಿಣಾಮವೇ ಈ ವಿಧಾನಸಭಾ ಚುನಾವಣೆಯ ಫಲಿತಾಂಶ.
ಈಗ ಆರುವರೆ ಕೋಟಿ ಕನ್ನಡಿಗರ ನಿರೀಕ್ಷೆಯಂತೆಯೇ ಸಿದ್ದರಾಮಯ್ಯನವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಕರ್ನಾಟಕದ ನಿಜವಾದ ಸರ್ವಜನಾಂಗಗಳ ಶಾಂತಿಯ ತೋಟ ಆಗಲಿದೆ. ಸರ್ವಜನಪ್ರಿಯ ಸರ್ಕಾರ ರಾಜ್ಯದ ಅಭಿವೃದ್ದಿಯ ಭಾಗ್ಯದ ಬಾಗಿಲು ತೆರೆಯಲಿದೆ.ಇಂತಹ ಮುಖ್ಯಮಂತ್ರಿಗಳ ಆಡಳಿತದಲ್ಲಿ ಕರ್ನಾಟಕ ಸುರಕ್ಷಿತ ಹಸ್ತದಲ್ಲಿದೆ ಎಂದು ತಿಳಿದುಕೊಂಡು ನಾಡಿನ ಜನತೆ ನೆಮ್ಮದಿಯಾಗಿರಬಹುದು.
ಕುಟುಂಬ
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಗೃಹಿಣಿ. ಹಿರಿಯ ಪುತ್ರ ದಿ.ರಾಕೇಶ್ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಹಠಾತ್ ಅನಾರೋಗ್ಯದಿಂದ ಅವರು ನಿಧನ ಹೊಂದಿದ ಮೇಲೆ ವೃತ್ತಿಯಿಂದ ವೈದ್ಯರಾದ ಕಿರಿಯ ಪುತ್ರ ಡಾ. ಎಸ್ ಯತೀಂದ್ರ ಅವರು ರಾಜಕೀಯ ರಂಗ ಪ್ರವೇಶಿಸಿದರು. ಪ್ರಸ್ತುತ ಯತೀಂದ್ರ ಅವರು ತಂದೆಯವರಿಗೆ ರಾಜಕೀಯದಲ್ಲಿ ನೆರವಾಗುತ್ತಿದ್ದಾರೆ.
ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಮಾತಿಗೆ ನಿಂತರೆ ಅಪ್ಪಟ ಮೈಸೂರು ಸೀಮೆಯ ಗ್ರಾಮ ಭಾಷೆ ಹೊರಹೊಮ್ಮುತ್ತದೆ. ಆ ಶೈಲಿಯಲ್ಲಿಯೇ ಭಾಷಣ ಮಾಡಿ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಶ್ರೀ ಸಿದ್ದರಾಮಯ್ಯ ಅವರಿಗೆ ಇದೆ. ಅವರ ಮಾತು ಒರಟು, ಆದರೆ ಮನಸ್ಸು ಮಾತ್ರ ಮೃದು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ನವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.
ಆಸಕ್ತಿಯ ಕ್ಷೇತ್ರಗಳು
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸದ ನಂತರವೂ ಅವರೊಳಗಿನ ಸಿದ್ರಾಮನಹುಂಡಿ ಸಿದ್ರಾಮಣ್ಣ ಮಾತ್ರ ಬದಲಾಗಲೆ ಇಲ್ಲ. ಅವರಿಗೆ ವೀರಗಾಸೆ ಕುಣಿತ(ಜಾನಪದ ನೃತ್ಯ ಶೈಲಿ) ಎಂದರೆ ಅತ್ಯಂತ ಅಚ್ಚುಮೆಚ್ಚು. ಪ್ರತೀ ವರ್ಷ ಹಳ್ಳಿಯಲ್ಲಿ ಏರ್ಪಡಿಸುವ ಹಬ್ಬಕ್ಕೆ ತಪ್ಪದೆ ಭಾಗವಹಿಸುವ ಜೊತೆಗೆ ಹಳ್ಳಿಯವರೊಂದಿಗೆ ನೃತ್ಯದಲ್ಲಿ ಹೆಜ್ಜೆ ಹಾಕುತ್ತಾರೆ. ಬೋಡಾ ಸಾಂಬಾರು, ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆ ಅವರ ನೆಚ್ಚಿನ ಖಾದ್ಯಗಳು.