logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Politics: ನಾವು ಅಕ್ಕಿಯನ್ನು ಉಚಿತವಾಗಿ ಕೇಳಿರಲಿಲ್ಲ, ಕೇಂದ್ರ ಸರಕಾರದ್ದು ಬಡಜನ ವಿರೋಧಿ ಧೋರಣೆ; ಎಂ ಬಿ ಪಾಟೀಲ

Karnataka Politics: ನಾವು ಅಕ್ಕಿಯನ್ನು ಉಚಿತವಾಗಿ ಕೇಳಿರಲಿಲ್ಲ, ಕೇಂದ್ರ ಸರಕಾರದ್ದು ಬಡಜನ ವಿರೋಧಿ ಧೋರಣೆ; ಎಂ ಬಿ ಪಾಟೀಲ

HT Kannada Desk HT Kannada

Jun 19, 2023 12:29 PM IST

google News

ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

    • Annabhagya Guarantee Scheme: ಅನ್ನಭಾಗ್ಯ ಯೋಜನೆಯ ಅಗತ್ಯದ ಬಗ್ಗೆ ನಾವು ಈಗಾಗಲೇ ಕೇಂದ್ರ ಸರಕಾರಕ್ಕೆ ಸಾಕಷ್ಟು ಹೇಳಿದ್ದೇವೆ. ಇನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ದನಿ ಎತ್ತಬೇಕು. ದೇವರು ಇನ್ನಾದರೂ ಅವರಿಗೆ ಸದ್ಬುದ್ಧಿಯನ್ನು ಕೊಡಲಿ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ
ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡವರಿಗೆ ವಿತರಿಸಲು ಅಗತ್ಯವಾಗಿರುವ ಅಕ್ಕಿಯನ್ನು ನಾವು ಕೇಂದ್ರ ಸರಕಾರದಿಂದ ಖರೀದಿಸಲು ಕೇಳಿದ್ದೆವೇ ವಿನಾ ಪುಕ್ಕಟೆಯಾಗಿಯೇನೂ ಕೇಳಿರಲಿಲ್ಲ. ಆದರೆ ಅವರು ಇದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ತನ್ನ ಬಡಜನ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ಹೇಳಿದ್ದಾರೆ.

ಭಾನುವಾರ ಇಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅನ್ನಭಾಗ್ಯ ಯೋಜನೆಯ ಅಗತ್ಯದ ಬಗ್ಗೆ ನಾವು ಈಗಾಗಲೇ ಕೇಂದ್ರ ಸರಕಾರಕ್ಕೆ ಸಾಕಷ್ಟು ಹೇಳಿದ್ದೇವೆ. ಇನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ದನಿ ಎತ್ತಬೇಕು. ದೇವರು ಇನ್ನಾದರೂ ಅವರಿಗೆ ಸದ್ಬುದ್ಧಿಯನ್ನು ಕೊಡಲಿ ಅಷ್ಟೆ," ಎಂದರು.

ಕಾಂಗ್ರೆಸ್ ಸರಕಾರವು ಚುನಾವಣೆಯ ಹೊತ್ತಿನಲ್ಲೇ ಅನ್ನಭಾಗ್ಯ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಇವುಗಳನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ. ಬಡವರ ಹಸಿವನ್ನು ನೀಗಿಸುವಂತಹ ಅನ್ನಭಾಗ್ಯ ಯೋಜನೆಗೆ ಮೊದಲು ಅಕ್ಕಿ ಕೊಡುವುದಾಗಿ ಹೇಳಿದ ಕೇಂದ್ರದ ಬಿಜೆಪಿ ಸರಕಾರವು ಈಗ ಅದರಿಂದ ಹಿಂದೆ ಸರಿದಿರುವುದು ಅವರ ಸಣ್ಣತನವನ್ನು ತೋರಿಸುತ್ತದೆ ಅಷ್ಟೆ," ಎಂದು ಅವರು ಟೀಕಿಸಿದರು.

ವಿಮಾನ ನಿಲ್ದಾಣಗಳ ನಿರ್ವಹಣೆಗೆ ಚಿಂತನೆ

ರಾಜ್ಯದಲ್ಲಿನ ಹೊಸ ವಿಮಾನ ನಿಲ್ದಾಣಗಳನ್ನು ರಾಜ್ಯ ಸರಕಾರದ ವತಿಯಿಂದಲೇ ನಿರ್ವಹಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ. ಇದರ ಸಾಧಕ-ಬಾಧಕಗಳನ್ನು ನೋಡಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸದ್ಯಕ್ಕೆ ನಾವು ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸಿ ರಾಜ್ಯದ ಹಲವೆಡೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. ಆದರೆ ಬಳಿಕ ಇವುಗಳನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಬಿಟ್ಟುಕೊಡುತ್ತಿದ್ದೇವೆ. ಅವರು, ಇವುಗಳನ್ನು ಅದಾನಿ ಸೇರಿದಂತೆ ಹಲವು ಖಾಸಗಿ ಕಂಪನಿಗಳಿಗೆ ವಹಿಸುತ್ತಿದ್ದಾರೆ. ಹೀಗಾಗಿ ನಮ್ಮದೇ ವಿಮಾನ ನಿಲ್ದಾಣಗಳ ಮೇಲೆ ನಮಗೆ ಯಾವ ಹಕ್ಕೂ ಇಲ್ಲದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಿಸುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ಭಾವನೆ ಇದೆ. ವಿಮಾನ ನಿಲ್ದಾಣ ಪ್ರಾಧಿಕಾರದವರು ಯಾರಿಗೋ ವಹಿಸುವ ಬದಲು ನಾವೇ ಆ ಕೆಲಸವನ್ನು ಮಾಡಬಹುದು. ಸದ್ಯಕ್ಕೆ ಇದನ್ನು ಎಲ್ಲ ಮಗ್ಗುಲಿನಿಂದಲೂ ಪರಿಶೀಲಿಸಲಾಗುತ್ತಿದೆ. ಮಹಾರಾಷ್ಟ್ರದ ಮಾದರಿಯನ್ನೂ ಗಮನಿಸುತ್ತಿದ್ದೇವೆ. ಸದ್ಯದ ವ್ಯವಸ್ಥೆಯಲ್ಲಿ ರಾಜ್ಯದ ಅಹವಾಲುಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಕನಿಷ್ಠಪಕ್ಷ ಆಲಿಸುವುದೂ ಇಲ್ಲ ಎಂದು ಅವರು ನುಡಿದರು.

ಏಕಗವಾಕ್ಷಿ ವ್ಯವಸ್ಥೆ ಬಲವರ್ಧನೆ

ರಾಜ್ಯದಲ್ಲಿ ಪಾರದರ್ಶಕ ಮತ್ತು ಕಾನೂನುಬದ್ಧ ರೀತಿಯಲ್ಲಿ ಬಂಡವಾಳ ಹೂಡಿ, ಉದ್ಯೋಗಸೃಷ್ಟಿ ಮಾಡಲು ಯಾರೇ ಮುಂದೆ ಬಂದರೂ ಅವರನ್ನು ಸ್ವಾಗತಿಸಲಾಗುವುದು. ಇದರಲ್ಲಿ ತಾರತಮ್ಯ ಇರುವುದಿಲ್ಲ. ಆದರೆ ನಾನು ಪ್ರಾಸಂಗಿಕವಾಗಿ ಅದಾನಿ ಹೆಸರು ಹೇಳಿದ್ದನ್ನೇ ಇಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಿರುವುದು ಕ್ಷುಲ್ಲಕತನ ಎಂದು ಪಾಟೀಲ್‌ ಹೇಳಿದರು.

ಹೂಡಿಕೆಗೆ ಸರಾಗ ವ್ಯವಸ್ಥೆ ಇರಲು ಏಕಗವಾಕ್ಷಿ ವ್ಯವಸ್ಥೆ ಪರಿಣಾಮಕಾರಿಯಾಗಿರಬೇಕು. ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ಉದ್ಯಮಕ್ಕೆ ಪರವಾನಗಿ ನೀಡಲು ಅಗತ್ಯವಿರುವ ಎಲ್ಲ ಇಲಾಖೆಗಳನ್ನೂ ಒಂದೆಡೆ ತಂದು, ಸರಳ ವ್ಯವಸ್ಥೆಯನ್ನು ಇಟ್ಟುಕೊಳ್ಳಲಾಗಿದೆ. ನಮ್ಮಲ್ಲೂ ಅಂತಹ ವ್ಯವಸ್ಥೆ ಬರಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ