logo
ಕನ್ನಡ ಸುದ್ದಿ  /  ಕರ್ನಾಟಕ  /  ಉಪ ಚುನಾವಣೆ; ಶಿಗ್ಗಾಂವಿ ಟಿಕೆಟ್‌ ಕೇಳಿದ ನಿರಾಣಿ, ಸಂಡೂರಿಗೆ ತುಕಾರಾಂ ಪುತ್ರಿ ಇಲ್ಲವೇ ಪತ್ನಿ; ಚನ್ನಪಟ್ಟಣದಿಂದ ಅನಿತಾ ಅಥವಾ ನಿಖಿಲ್‌

ಉಪ ಚುನಾವಣೆ; ಶಿಗ್ಗಾಂವಿ ಟಿಕೆಟ್‌ ಕೇಳಿದ ನಿರಾಣಿ, ಸಂಡೂರಿಗೆ ತುಕಾರಾಂ ಪುತ್ರಿ ಇಲ್ಲವೇ ಪತ್ನಿ; ಚನ್ನಪಟ್ಟಣದಿಂದ ಅನಿತಾ ಅಥವಾ ನಿಖಿಲ್‌

Umesha Bhatta P H HT Kannada

Oct 17, 2024 09:37 AM IST

google News

ಕರ್ನಾಟಕದ ವಿಧಾನಸಭೆಯ ಮೂರು ಕ್ಷೇತ್ರಗಳ ಟಿಕೆಟ್‌ ಲಾಬಿ ಜೋರಾಗಿದೆ.

    • ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟಿಕೆಟ್‌ ಲಾಬಿಯೂ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಲ್ಲಿ ಜೋರಾಗಿದೆ.
ಕರ್ನಾಟಕದ ವಿಧಾನಸಭೆಯ ಮೂರು ಕ್ಷೇತ್ರಗಳ ಟಿಕೆಟ್‌ ಲಾಬಿ ಜೋರಾಗಿದೆ.
ಕರ್ನಾಟಕದ ವಿಧಾನಸಭೆಯ ಮೂರು ಕ್ಷೇತ್ರಗಳ ಟಿಕೆಟ್‌ ಲಾಬಿ ಜೋರಾಗಿದೆ.

ಬೆಂಗಳೂರು: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಟಿಕೆಟ್‌ ಗಾಗಿ ತೆರೆಮರೆಯ ಕಸರತ್ತುಗಳು ಆರಂಭವಾಗಿವೆ. ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ ಮತ್ತು ಮಾಜಿ ಸಚಿವ ತುಕಾರಾಂ ಅವರ ರಾಜೀನಾಮೆಯಿಂದ ತೆರವಾಗಿರುವ ಸಂಡೂರು

ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಮೂವರೂ ಲೋಕಸಭೆಗೆ ಆಯ್ಕೆಯಾಗಿದ್ದು ರಾಜೀನಾಮೆ ನೀಡಿರುವುದರಿಂದ ಉಪಚುನಾವಣೆ ನಡೆಯುತ್ತಿದೆ.

ಮೂರು ಕ್ಷೇತ್ರಗಳು ಮೂರೂ ಪಕ್ಷಗಳ ಕ್ಷೇತ್ರಗಳಾಗಿದ್ದು ಉಳಿಸಿಕೊಳ್ಳುತ್ತವೆಯೋ ಅಥವಾ ಕಳೆದುಕೊಳ್ಳುತ್ತವೆಯೋ ಎಂದು ಕಾದು ನೋಡಬೇಕಿದೆ. ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮುನ್ನವೇ ಆಡಳಿತಾರೂಢ ಕಾಂಗ್ರೆಸ್‌ ಬಿಜೆಪಿ ಮತ್ತು ಜೆಡಿಎಸ್‌ ಗಿಂತ ಮುಂಚಿತವಾಗಿ ಪ್ರಚಾರವನ್ನು ಆರಂಭಿಸಿದೆ.

ಚನ್ನಪಟ್ಟಣದಲ್ಲಿ ಪೈಪೋಟಿ

ಚನ್ನಪಟ್ಟಣದಲ್ಲಿ ಯಾವ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಚರ್ಚೆಯಲ್ಲೇ ಬಿಜೆಪಿ ಜೆಡಿಎಸ್‌ ಮುಳುಗಿದ್ದು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ

ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್‌ ಈಗಾಗಲೇ ಹತ್ತಾರು ಬಾರಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ನೂರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಡಿಕೆ ಸೋದರರು ಈಗಾಗಲೇ ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದಾರೆ.

ಜೆಡಿಎಸ್‌ ಗೆ ಚನ್ನಪಟ್ಟಣದದಲ್ಲಿ ಸಿ.ಪಿ.ಯೋಗೇಶ್ವರ್‌ ತಲೆನೋವಾಗಿ ಪರಿಣಮಿಸಬಹುದು ಎನ್ನಲಾಗುತ್ತಿದೆ. ಇಲ್ಲಿ ನಿಖಿಲ್‌ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಯೋಗೇಶ್ವರ್‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ.

ಸಂಡೂರಲ್ಲಿ ಬಿಜೆಪಿಯಿಂದ ಯಾರು

ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸೋಮವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಈ ಕ್ಷೇತ್ರದ 20 ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಪ್ರಚಾರವನ್ನು ಆರಂಭಿಸಿದ್ದಾರೆ.

ಸಂಡೂರಿನಿಂದ ತುಕಾರಾಂ ಅವರ ಪತ್ನಿ ಅನುಪಮಾ ಇಲ್ಲವೇ ಪುತ್ರಿ ವಂದನಾ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ. ಬಿಜೆಪಿ ಟಿಕೆಟ್‌ ಗಾಗಿ ಮಾಜಿ ಸಂಸದ ದೇವೇಂದ್ರಪ್ಪ, ಶ್ರೀರಾಮುಲು ಮತ್ತು ಎಸ್‌ ಟಿ ಮೋರ್ಚಾ ಅಧ್ಯಕ್ಷ ಕೆ.ದಿವಾಕರ್‌ ಆಕಾಂಕ್ಷಿಗಳಾಗಿದ್ದಾರೆ.

ಮಗನಿಗೆ ಟಿಕೆಟ್‌ ಕೇಳಿದ ಬೊಮ್ಮಾಯಿ

ಮತ್ತೊಂದು ಕಡೆ ಶಿಗ್ಗಾಂವಿಯಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸದ್ದಿಲ್ಲದೆ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದಾರೆ. ಅವರು ಈಗಾಗಲೇ ಸ್ಥಳೀಯ ಮುಖಂಡರು ಮತ್ತು ಬೂತ್‌ ಮಟ್ಟದ ಪದಾಧಿಕಾರಿಗಳೊಂದಿಗೆ ಚರ್ಚೆ ಆರಂಭಿಸಿದ್ದಾರೆ.

ಹಾಗೆಂದು ಬಿಜೆಪಿ- ಜೆಡಿಎಸ್‌ ಸುಮ್ಮನೆ ಕುಳಿತಿವೆ ಎಂದು ಹೇಳುವಂತಿಲ್ಲ. ಮೂರೂ ಕ್ಷೇತ್ರಗಳಲ್ಲಿ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತಿವೆ. ಯಾರೇ ಅಭ್ಯರ್ಥಿಗಳಾದರೂಒಮ್ಮತದಿಂದ ಕೆಲಸ ಮಾಡುವಂತೆ ಕಾರ್ಯಕರ್ತರನ್ನು ಹುರಿದುಂಬಿಸುತ್ತಿವೆ.

ಶಿಗ್ಗಾಂವಿ ಕ್ಷೇತ್ರದಿಂದ ತಮ್ಮ ಪುತ್ರ ಭರತ್‌ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲು ಬಸವರಾಜ ಬೊಮ್ಮಾಯಿ ಚಿಂತನೆ ನಡೆಸುತ್ತಿದ್ದಾರೆ. ಮೂಲತಃ ಈ ಕ್ಷೇತ್ರವನ್ನು ತಾವುಪ್ರತಿನಿಧಿಸುತ್ತಾ ಬಂದಿದ್ದು, ತಮ್ಮ ಕುಟುಂಬಕ್ಕೆ ಈ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಹೈಕಮಾಂಡ್‌ ಮುಂದೆ ಬೇಡಿಕೆ ಇರಿಸಿದ್ದಾರೆ. ಆದರೆ ಬಹಿರಂಗವಾಗಿ ತಮ್ಮ ಪುತ್ರಉದ್ಯಮದತ್ತ ಗಮನ ಹರಿಸಿದ್ದು, ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳುತ್ತಿದ್ದಾರೆ.

ಮತ್ತೊಂದು ಕಡೆ ಬೀಳಗಿ ಕ್ಷೇತ್ರದಿಂದ ಪರಾಭವಗೊಂಡಿರುವ ಬಿಜೆಪಿ ನಾಯಕ ಮುರುಗೇಶ್‌ ನಿರಾಣಿ ಅವರೂ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಪಂಚಮಸಾಲಿ ಮತದಾರರ ಸಂಖ್ಯೆ ಗಣನೀಯವಾಗಿದ್ದು ಗೆಲುವು ಸುಲಭ ಎನ್ನುವುದು ಇವರ ವಾದವಾಗಿದೆ. ಈಗಾಗಲೇ ಅವರು ಹಲವು ಮಠಾಧೀಶರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕ್ಷೇತ್ರಕ್ಕೆ ನಿರಾಣಿ ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿಗಳಿದ್ದಾರೆ. ವರಿಷ್ಠರೊಂದಿಗೆ ಚರ್ಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ಮೂರು ಕ್ಷೇತ್ರಗಳಿಗೆ ಮೂರು ನಾಲ್ಕು ದಿನಗಳಲ್ಲಿ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಲಿವೆ.

(ವರದಿ: ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ