logo
ಕನ್ನಡ ಸುದ್ದಿ  /  ಕರ್ನಾಟಕ  /  Mysore Muda Scam: ಮುಡಾ ಹಗರಣ, ಸಿಎಂಗೆ ರಾಜ್ಯಪಾಲರ ನೊಟೀಸ್‌, ಗರಿಗೆದರಿದ ರಾಜಕೀಯ, ಸಚಿವರ ಉಪಹಾರ, ಸಿಎಂ ಗೈರಿನಲ್ಲಿ ಸಂಪುಟ ಸಭೆ

Mysore Muda Scam: ಮುಡಾ ಹಗರಣ, ಸಿಎಂಗೆ ರಾಜ್ಯಪಾಲರ ನೊಟೀಸ್‌, ಗರಿಗೆದರಿದ ರಾಜಕೀಯ, ಸಚಿವರ ಉಪಹಾರ, ಸಿಎಂ ಗೈರಿನಲ್ಲಿ ಸಂಪುಟ ಸಭೆ

Umesha Bhatta P H HT Kannada

Aug 01, 2024 02:28 PM IST

google News

ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ನೊಟೀಸ್‌ ನೀಡಿದ್ದಾರೆ.

  • Karnataka Politics ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ( Mysore Muda Scam) ನಡೆದಿರುವ ನಿವೇಶನ ಹಗರಣ ಕುರಿತು ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ವಿವರಣೆ ಕೇಳಿ ನೊಟೀಸ್‌ ಜಾರಿ ಮಾಡಿದ್ದು ಸಾಕಷ್ಟು ಬೆಳವಣಿಗೆಗಳು ನಡೆದಿವೆ. 

ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ನೊಟೀಸ್‌ ನೀಡಿದ್ದಾರೆ.
ಮೈಸೂರು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ನೊಟೀಸ್‌ ನೀಡಿದ್ದಾರೆ.

ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ( Mysore Muda Scam) ನಡೆದಿದೆ ಎನ್ನಲಾದ ಬದಲಿ ನಿವೇಶನಗಳ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ( CM Siddaramaiah) ಅವರ ಕುಟುಂಬದ ಸದಸ್ಯರ ಹೆಸರು ಕೇಳಿ ಬಂದಿರುವುದರಿಂದ ವಿವರಣೆ ನೀಡುವಂತೆ ರಾಜ್ಯಪಾಲರ ಥಾವರ್‌ ಚಂದ್‌ ಗೆಹ್ಲೋಟ್‌( Karnatak Governor Thawar Chand Gehlot) ನೊಟೀಸ್‌ ಅನ್ನು ಜಾರಿಗೊಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದ ವಿವರಣೆ ನೀಡಬೇಕು ಎನ್ನುವುದನ್ನು ನೊಟೀಸ್‌ ನಲ್ಲಿ ತಿಳಿಸಲಾಗಿದ್ದು, ಇದು ರಾಜಕೀಯ ವಿವಾದ ಸ್ವರೂಪ ತೆಗೆದುಕೊಳ್ಳುವ ಸನ್ನಿವೇಶ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ನಡೆದಿವೆ. ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರ ಉಪಾಹಾರ ಸಭೆ ನಡೆದಿದ್ದು, ಮಧ್ಯಾಹ್ನದ ಸಚಿವ ಸಂಪುಟ ಸಭೆ ಸಿಎಂ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಿಎಂ ಬೆಂಬಲಕ್ಕೆ ನಿಲ್ಲಲು ನಿರ್ಧರಿಸಲಾಗಿದೆ. ಕಾನೂನು ಹೋರಾಟದ ಕುರಿತೂ ಚರ್ಚೆಗಳು ನಡೆದಿವೆ.

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪಡೆಯುವ ವಿಚಾರದಲ್ಲಿ ಸಿಎಂ ಕುಟುಂಬದವರಿಗೆ ವಿಶೇಷ ಗಮನ ನೀಡಲಾಗಿದೆ. ಬದಲಿ ನಿವೇಶನ ವಿಚಾರದಲ್ಲಿ ಮುಡಾಕ್ಕೆ ಕೋಟ್ಯಂತರ ರೂ. ನಷ್ಟ ಆಗಿದೆ. ಭಾರೀ ಹಗರಣವೂ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರೂ ಮೂರ್ನಾಲ್ಕು ಬಾರಿ ಸ್ಪಷ್ಟನೆ ನೀಡಿದ್ದಾರೆ. ಇದು ಗಂಭೀರ ಸ್ವರೂಪ ಪಡೆದು ರಾಜ್ಯಪಾಲರು ವಿವರಣೆಯನ್ನೂ ಕೇಳಿದ್ದರು. ರಾಜ್ಯ ಸರ್ಕಾರದಿಂದ ಪ್ರಕರಣದ ಎಲ್ಲಾ ಆಯಾಮದ ಮಾಹಿತಿ ಕೇಳಿದ್ದರು. ಅಲ್ಲದೇ ಸಿಎಂ ಅವರಿಗೂ ನೊಟೀಸ್‌ ಅನ್ನೂ ಜಾರಿಗೊಳಿಸಿದ್ದರು. ಈ ಕುರಿತು ವಿವರಣೆ ಕೊಡುವಂತೆ ಸಿಎಂ ಅವರಿಗೆ ಸೂಚಿಸಿದ್ದರು.

ಈಗಾಗಲೇ ಈ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಿಂ ಅವರು ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿವರಣೆ ಕೇಳಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ನೊಟೀಸ್‌ಗೆ ನೀಡುವ ಉತ್ತರ ನೋಡಿಕೊಂಡು, ಸರ್ಕಾರ ನೀಡಿರುವ ಮಾಹಿತಿ ಹಾಗೂ ಈ ಕುರಿತು ತಮ್ಮ ಮಾಹಿತಿ ಆಧರಿಸಿ ರಾಜ್ಯಪಾಲರು ಏನು ಕ್ರಮ ಕೈಗೊಳ್ಳಬಹುದು ಎನ್ನುವ ಕುತೂಹಲವಿದೆ. ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕಬಹುದು ಎನ್ನುವ ಆತಂಕ ಕಾಂಗ್ರೆಸ್‌ ವಲಯದಲ್ಲಿದೆ.

ಈ ಕಾರಣದಿಂದಲೇ ದೆಹಲಿ ಭೇಟಿ ಮುಗಿಸಿಕೊಂಡು ಬಂದಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಗುರುವಾರ ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿ ಸಕ್ರಿಯರಾಗಿದ್ದರು. ಬೆಳಿಗ್ಗೆಯೇ ಸಿದ್ದರಾಮಯ್ಯ ಅವರ ಮನೆಯಲ್ಲಿ ಸಚಿವರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ರಾಜ್ಯಪಾಲರ ನೊಟೀಸ್‌,ಕಾನೂನು ಚೌಕಟ್ಟುಗಳ ಸಹಿತ ಹಲವು ವಿಚಾರಗಳ ಕುರಿತು ಚರ್ಚೆಯಾಯಿತು. ಅಲ್ಲಿಯೂ ಕಾನೂನು ಹೋರಾಟದ ಬಗ್ಗೆ ಸಲಹೆ ನೀಡಲಾಯಿತು.

ಉಪಾಹಾರ ಸಭೆಯಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಡುವ ಸಾಧ್ಯತೆಯ ಕುರಿತಾಗಿಯೂ ವಿಸ್ತೃತವಾಗಿ ಸಮಾಲೋಚನೆ ನಡೆದಿದೆ. ಈಗಾಗಲೇ ನೀಡಿರುವ ನೋಟಿಸ್‌ ಅನ್ನು ವಾಪಸ್‌ ಪಡೆಯುವಂತೆ ರಾಜ್ಯಪಾಲರಲ್ಲಿ ಮನವಿ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆಯೂ ಚರ್ಚೆ ಮಾಡಲಾಯಿತು. ರಾಜ್ಯಪಾಲರ ನಡೆ ವಿರೋಧಿಸಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಕೂಡ ಉಪಾಹಾರ ಸಭೆಯಲ್ಲಿ ಹಲವರು ಸಲಹೆಯನ್ನು ನೀಡಿದರು.

ಮಧ್ಯಾಹ್ನದ ಹೊತ್ತಿಗೆ ನಡೆದ ಸಂಪುಟ ಸಭೆಗೆ ಸಿಎಂ ಸಿದ್ದರಾಮಯ್ಯ ಬಂದಿರಲಿಲ್ಲ. ಡಿಕೆಶಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಿಎಂ ಅವರನ್ನು ಬೆಂಬಲಿಸಿ ಕಾನೂನು ಹೋರಾಟ ನಡೆಸುವ ಕುರಿತು ನಿರ್ಣಯಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ