Karnataka poll: ಶೇಕಡ 13ರಷ್ಟಿರುವ ಮುಸ್ಲಿಮರನ್ನು ಓಲೈಸಿ ಮತ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಯಿತು ಓವೈಸಿ ಪಾರ್ಟಿ
May 16, 2023 07:00 AM IST
ಅಸಾದುದ್ದೀನ್ ಓವೈಸಿ (ಕಡತ ಚಿತ್ರ)
Karnataka poll: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಎಐಎಂಐಎಂ ಕೊನೆಗೆ ಸ್ಪರ್ಧಿಸಿದ್ದು ಎರಡನೇ ಸ್ಥಾನಗಳಲ್ಲಿ. ಆದರೆ ಫಲಿತಾಂಶ ಶೂನ್ಯ. ಈ ಶೂನ್ಯ ಸಾಧನೆಯ ಹಿಂದಿನ ಲೆಕ್ಕಾಚಾರ ಹೀಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಮೂಲಕ ಕರ್ನಾಟಕದ ವಿಧಾನಸಭೆ ಪ್ರವೇಶಿಸಬೇಕು ಎಂಬ ಅಸಾದುದ್ದೀನ್ ಓವೈಸಿಯ ಕನಸು ನನಸಗಿಲ್ಲ. ರಾಜ್ಯದಲ್ಲಿ ಶೇಕಡ 13 ರಷ್ಟು ಮುಸಲ್ಮಾನ ಸಮುದಾಯದವರು ಇದ್ದರೂ, ಅವರ ಮತಗಳನ್ನು ಸೆಳೆಯುವಲ್ಲಿ ಅಸಾದುದ್ದೀನ್ ಓವೈಸಿ ಅವರ ಅಲ್ ಇಂಡಿಯಾ ಮಜ್ಲಿಸ್ ಏ ಇತ್ತೇಹಾದ್ ಮುಸ್ಲಿಮೀನ್ (ಎಐಎಂಐಎಂ) ವಿಫಲವಾಗಿದೆ.
ಕರ್ನಾಟಕದಲ್ಲಿ ನೆಲೆ ಕಾಣಬೇಕು ಎಂದು ಎಐಎಂಐಎಂ 2021ರಲ್ಲೇ ತನ್ನ ಪ್ರಯತ್ನ ಶುರುಮಾಡಿತ್ತು. ಕೆಲವು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಕಂಡಿತ್ತು. ಇದರಿಂದ ಪ್ರೇರಿತವಾಗಿ ಇತ್ತೀಚೆಗೆ ಮುಕ್ತಾಯವಾದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ ಇಬ್ಬರೂ ಸೋತಿದ್ದಾರೆ.
ಒವೈಸಿ ಅವರ ಚುನಾವಣಾ ಪ್ರಚಾರವು ಹಿಜಾಬ್ ನಿಷೇಧ, ಟಿಪ್ಪು ಸುಲ್ತಾನ್ ಮತ್ತು ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರಿಗೆ 4 ಪ್ರತಿಶತ ಮೀಸಲಾತಿಯನ್ನು ತೆಗೆದುಹಾಕುವುದರ ಸುತ್ತಲಿನ ವಿವಾದಗಳ ಮೇಲೆ ಕೇಂದ್ರೀಕರಿಸಿತ್ತು. ಮುಸ್ಲಿಂ ಮೀಸಲಾತಿಯನ್ನು ರದ್ದುಪಡಿಸುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು "ಸಂಪೂರ್ಣ ಕಾನೂನುಬಾಹಿರ" ಎಂದು ಓವೈಸಿ ಬಣ್ಣಿಸಿದ್ದರು.
ಚುನಾವಣಾ ಪೂರ್ವದಲ್ಲಿ ರಾಜ್ಯದ 25 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಎಐಎಂಐಎಂ ಘೋಷಿಸಿತ್ತು. ಆದಾಗ್ಯೂ, ಅದು ಹುಬ್ಬಳ್ಳಿ-ಧಾರವಾಡ ಪೂರ್ವ ಮತ್ತು ಬಸವನ ಬಾಗೇವಾಡಿಯಿಂದ ಕ್ರಮವಾಗಿ ದುರ್ಗಪ್ಪ ಕಾಶಪ್ಪ ಬಿಜವಾಡ ಮತ್ತು ಅಲ್ಲಾಬಕ್ಷ ಬಿಜಾಪುರ ಅವರನ್ನು ಮಾತ್ರ ಕಣಕ್ಕಿಳಿಸಿತು. ಬಿಜವಾಡ 5,644 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಬಿಜಾಪುರ ಕೇವಲ 1,475 ಮತಗಳನ್ನು ಗಳಿಸಿದ್ದರು. ಅನೇಕ ಸಾರ್ವಜನಿಕ ಸಭೆಗಳನ್ನು ನಡೆಸಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಗೆಲ್ಲುವ ಅವಕಾಶವಿದೆ ಎಂದು ಹೇಳಲಾಗಿದ್ದರೂ, ಅಲ್ಪಸಂಖ್ಯಾತ ಸಮುದಾಯವು 2023 ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿಂದೆ ಒಗ್ಗೂಡಿದಂತಿದೆ. ಒಟ್ಟಾರೆಯಾಗಿ, ಎಐಎಂಐಎಂ ಮತಗಳಿಕೆಯು ಕೇವಲ ಶೇಕಡ 0.02.
ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಎಐಎಂಐಎಂ, 2018ರ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರಲಿಲ್ಲ. ಈಗ ಕರ್ನಾಟಕದ ಜನಾದೇಶಕ್ಕೆ ತಲೆಬಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕರ್ನಾಟಕದ ಜನತೆ ಒಂದು ನಿರ್ಧಾರ ತಗೊಂಡಿದ್ದಾರೆ. ಅಲ್ಲಿ ನಾವು ಸಫಲರಾಗಲಿಲ್ಲ. ಆದರೆ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್, ಬಂಗಾಳವೇ ಇರಲಿ ಎಲ್ಲ ರಾಜ್ಯಗಳಲ್ಲೂ ಎಐಎಂಐಎಂ ಕೆಲಸ ಮುಂದುವರಿಯಲಿದೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಓವೈಸಿ, ಶೇಕಡ 4 ಮುಸ್ಲಿಂ ಕೋಟಾವನ್ನು ರದ್ದುಗೊಳಿಸಿದ ಕ್ರಮವನ್ನು ಅನೂರ್ಜಿತಗೊಳಿಸುವುದ ಸೇರಿ ಚುನಾವಣಾ ಭರವಸೆಗಳನ್ನು ಆ ಪಕ್ಷವು ಪೂರ್ಣಗೊಳಿಸುತ್ತದೆ ಎಂದು ಭಾವಿಸುತ್ತೇವೆ ಎಂದು ಭಾನುವಾರ ಹೇಳಿದರು.
ಕಾಂಗ್ರೆಸ್ 15 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ, ಅವರಲ್ಲಿ ಒಂಬತ್ತು ಮಂದಿ ಗೆಲುವು ಸಾಧಿಸಿದ್ದಾರೆ. ಸಮುದಾಯದಿಂದ ಬಲವಾದ ಬೆಂಬಲವನ್ನು ಅನುಭವಿಸಿದ ಜನತಾ ದಳ (ಜಾತ್ಯತೀತ) ನಿಂದ ಕಣಕ್ಕಿಳಿದ 23 ಮುಸ್ಲಿಂ ಅಭ್ಯರ್ಥಿಗಳಲ್ಲಿ ಒಬ್ಬರೂ 2023 ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಜೆಡಿಎಸ್ ಗೆದ್ದ ಸ್ಥಾನಗಳ ಸಂಖ್ಯೆ 2018 ರಲ್ಲಿ 37 ಇದ್ದದ್ದು 19 ಕ್ಕೆ ಇಳಿದಿದೆ.
ಪಿಎಫ್‌ಐ ನಿಷೇಧ ಮತ್ತು ಹಿಜಾಬ್ ವಿವಾದ ಆದ ನಂತರ ರಾಜ್ಯದಲ್ಲಿ ನಡೆದ ಮೊದಲ ಚುನಾವಣೆ ಇದು ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ ಬಹುತೇಕ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತಚಲಾಯಿಸಿದ್ದಾರೆ. ಮುಸ್ಲಿಮರದ್ದೇ ಪಕ್ಷವೆನಿಸಿಕೊಂಡ ಎಸ್‌ಡಿಪಿಐ ಇದ್ದರೂ, ಎಐಎಂಐಎಂ ಇದ್ದರೂ ಅವರು ಬೆಂಬಲಿಸಿದ್ದು ಕಾಂಗ್ರೆಸ್ ಪಕ್ಷವನ್ನು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.