Kannada habba 2022: ಓದುವುದಕ್ಕೆ ಕನ್ನಡ ಪುಸ್ತಕ ಬೇಕು? ಅತ್ಯುತ್ತಮವಾದುದು ಯಾವುದು?; ಇದಕ್ಕೆ ಉತ್ತರ ನೀಡುತ್ತಿದೆ ʻಸುಕೃತಿʼ ಪುಸ್ತಕ ಪರಿಚಯ
Nov 01, 2022 03:22 PM IST
ಸುಕೃತಿ ಪುಸ್ತಕ ಪರಿಚಯ
- Kannada habba 2022: ಕನ್ನಡ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿದೆ ಎಂಬಿತ್ಯಾದಿ ಟೀಕೆ, ಆರೋಪಗಳ ನಡುವೆಯೂ ಉತ್ತಮ ಓದುಗರ ಸಂಖ್ಯೆ ಕಡಿಮೆ ಆಗಿಲ್ಲ ಎಂಬುದು ಕೂಡ ಸತ್ಯ. ಆದರೆ, ಹೊಸ ತಲೆಮಾರಿಗೆ ಕನ್ನಡ ಪುಸ್ತಕಗಳನ್ನು ಓದಬೇಕು ಎಂಬ ಹಂಬಲ ಇದೆ. ಯಾವುದು ಸೂಕ್ತ? ನಿರ್ಧರಿಸುವುದು ಹೇಗೆ? ನಿಮ್ಮ ನೆರವಿಗೆ ʻಸುಕೃತಿʼಯನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ.
ಇಂದು ಕರುನಾಡ ಹಬ್ಬ. ನವೆಂಬರ್ ತಿಂಗಳು ಪೂರ್ತಿ ಈ ಹಬ್ಬದ ಸಂಭ್ರಮ, ಸಡಗರ ಕಡಿಮೆ ಏನಲ್ಲ. ನಿತ್ಯವೂ ಕಾರ್ಯಕ್ರಮ. ಟೀಕೆಗಳ ಹೊರತಾಗಿಯೂ ಕನ್ನಡ ಭಾಷೆ, ಕನ್ನಡ ನಾಡು, ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಹಬ್ಬಗಳ ಮೆರವಣಿಗೆ ಮುಂದುವರಿದಿದೆ.
ದಿನ ನಿತ್ಯ ಓದುವುದಕ್ಕೆ ಸಾಧ್ಯವಾಗದೇ ಹೋದರೂ, ಕನಿಷ್ಠ ಪಕ್ಷ ನವೆಂಬರ್ ತಿಂಗಳಲ್ಲಾದರೂ ಸಾಹಿತ್ಯ ಓದುವವರಿದ್ದಾರೆ. ಇದಕ್ಕಾಗಿ ಉತ್ತಮ ಪುಸ್ತಕಗಳನ್ನು ಹುಡುಕಾಡುವವರಿದ್ದಾರೆ. ಹೊಸ ತಲೆಮಾರು ಮತ್ತು ಹಳೆ ತಲೆಮಾರಿನವರು ಕೂಡ ಇದರಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಒಂದು ಸಂದಿಗ್ಧ ಎದುರಾಗುತ್ತದೆ. ಯಾವ ಪುಸ್ತಕ ಓದುವುದು? ಚೆನ್ನಾಗಿದೆಯಾ? ಎಂಬಿತ್ಯಾದಿ ಪ್ರಶ್ನೆ ಸುಳಿದಾಡುತ್ತದೆ. ಅವರಿವರಲ್ಲಿ ಕೇಳಿ ಪುಸ್ತಕ ಖರೀದಿಸುತ್ತಾರೆ. ಅಂತಹ ಪುಸ್ತಕಗಳು ಕೆಲವೊಮ್ಮೆ ಚೆನ್ನಾಗಿರಬಹುದು. ಇಲ್ಲದೇ ಇರಲೂಬಹುದು. ಇಂತಹವರ ನೆರವಿಗೆ ನಿಂತಿದೆ ʻಸುಕೃತಿʼ ಪುಸ್ತಕ ಪರಿಚಯ.
ಇದನ್ನು ಹುಟ್ಟುಹಾಕಿದವರು ಪ್ರಮೋದ್ ನವರತ್ನ ಗೋಪಾಲ್. ಇದ್ಯಾವುದೇ ಸಂಸ್ಥೆ ಅಲ್ಲ. ನೀವು ಫೇಸ್‌ಬುಕ್‌ನಲ್ಲಿ ಸುಕೃತಿ ಪುಸ್ತಕ ಪರಿಚಯ ಅಂತ ಹುಡುಕಿದರೆ, ಈ ಪುಟ ಸಿಕ್ಕೇ ಸಿಗುತ್ತದೆ. ಕುತೂಹಲ ಏನು ಅಂದರೆ, ಇದರಲ್ಲಿ ಪುಸ್ತಕ ಪರಿಚಯ ಒಬ್ಬರೇ ಮಾಡಿಲ್ಲ ಅಥವಾ ಮಾಡುತ್ತಿಲ್ಲ. ನಾಡಿನ ಗಣ್ಯರು ಮತ್ತು ಸಾಮಾನ್ಯರು ಈ ಕೆಲಸ ಮಾಡಿದ್ದಾರೆ. ಅದಕ್ಕೆ ಈ ಪುಟ ಅವಕಾಶ ನೀಡಿದೆ. HT ಕನ್ನಡದ ಜತೆಗೆ ಮಾತಿಗೆ ಸಿಕ್ಕ ಪ್ರಮೋದ್ ನವರತ್ನ ಗೋಪಾಲ್ ಅವರು, ಈ ಪ್ರಯತ್ನವನ್ನು ವಿವರಿಸಿದ್ದು ಹೀಗೆ.
ಕರೋನಾ ಅವಧಿಗೂ ಮೊದಲು 20 -30 ಸಾಹಿತ್ಯಾಸಕ್ತರು ಒಟ್ಟು ಸೇರಿ ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಎರಡು ಅಥವಾ ಮೂರು ಪುಸ್ತಕಗಳ ಅಧ್ಯಯನ, ಚರ್ಚೆ ಮಾಡುವ ವಾಡಿಕೆ ಇತ್ತು. ಈ ಮೂಲಕ ಹೊಸಬರಿಗೂ ಆ ಪುಸ್ತಕ ಓದುವುದಕ್ಕೆ ಪ್ರೇರಣೆ ನೀಡುವ ಕೆಲಸ ಆಗುತ್ತಿತ್ತು.
ಕೋವಿಡ್ ಸಂಕಷ್ಟ ಎದುರಾದ ಕೂಡಲೇ ಮೂರು ತಿಂಗಳು ಮನೆಯಿಂದ ಹೊರಗೇ ಬಾರದ ಸ್ಥಿತಿ ಬಂತಲ್ಲ. ಆಗ ʻಸುಕೃತಿ ಪುಸ್ತಕ ಪರಿಚಯʼದ ಪರಿಕಲ್ಪನೆ ಮನಸ್ಸಿನಲ್ಲಿ ಮೂಡಿತು. ಎಲ್ಲವೂ ಆನ್‌ಲೈನ್‌ಗೆ ಬಂದಾಗ ಇದೂ ಇರಲಿ ಎಂಬ ತೀರ್ಮಾನವಾಯಿತು.
ಸುಕೃತಿ ಎಂದರೆ ಸು ಎಂದರೆ ಉತ್ತಮ. ಕೃತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಸುಕೃತಿಗಳ ಪರಿಚಯವೇ ಈ ಸುಕೃತಿ ಪುಸ್ತಕ ಪರಿಚಯ. ಇಲ್ಲಿ ಹೊಸ ಹೊಸ ಪುಸ್ತಕಗಳ ಅಂದರೆ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕಗಳ ಪರಿಚಯ ಮಾಡಿಕೊಡ್ತಾರೆ ಎಂಬ ಭಾವನೆ ಬೇಡ.
ಕನ್ನಡ ಸಾಹಿತ್ಯ ಸರಣಿ
ನವೆಂಬರ್ ತಿಂಗಳು ಸಾಮಾನ್ಯವಾಗಿ ಕನ್ನಡ ಸಾಹಿತ್ಯ ಸರಣಿ ನಡೆಯುತ್ತದೆ. ಅಂದರೆ ಕಳೆದ ವರ್ಷವೂ ಕನ್ನಡ ಪುಸ್ತಕಗಳ ಪರಿಚಯ ಕಿರು ವಿಡಿಯೋಗಳ ಮೂಲಕ ನಿರೂಪಿಸಲಾಗಿತ್ತು. ಕಳೆದ ವರ್ಷ ಒಂದು ತಿಂಗಳು ಪೂರ್ತಿ ಇಂತಹ ವಿಡಿಯೋಗಳನ್ನು ಪ್ರಕಟಿಸಲಾಗಿತ್ತು. ಅವುಗಳನ್ನು ಅವಲೋಕಿಸಿದರೆ ಕನ್ನಡದ ಅತ್ಯುತ್ತಮ ಕೃತಿಗಳ ಪರಿಚಯ ಮಾಡಿಕೊಟ್ಟಿರುವುದನ್ನು ಗಮನಿಸಬಹುದು.
ಇನ್ನು ಪುಸ್ತಕ ಪರಿಚಯವನ್ನು ಒಬ್ಬರೇ ಮಾಡಲ್ಲ. ಶತಾವಧಾನಿ ಡಾ.ಗಣೇಶ್ ಸೇರಿ ನಾಡಿನ ಹಲವಾರು ಗಣ್ಯರು, ಅದೇ ರೀತಿ ಜನಸಾಮಾನ್ಯರು, ವಿದ್ಯಾರ್ಥಿಗಳು ಕೂಡ ತಾವು ಓದಿದ ಉತ್ತಮ ಕೃತಿಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಈ ಸಲ ಹೇಗಿದೆ ಕಾರ್ಯಕ್ರಮ ಎಂದರೆ, ಕಳೆದ ಸಲಕ್ಕಿಂತ ಭಿನ್ನವಾಗಿ ಈ ಸಲ ಪುಸ್ತಕ ಪರಿಚಯಿಸಲು ನೋಡುಗರಿಗೂ ಸೆಪ್ಟೆಂಬರ್‌ನಲ್ಲೇ ಮನವಿ ಮಾಡಲಾಗಿತ್ತು. ಪುನರಾವರ್ತನೆ ಆಗದ ರೀತಿಯಲ್ಲಿ ಪುಸ್ತಕಗಳನ್ನು ಪರಿಚಯಿಸಲಾಗುತ್ತಿದೆ.
ಥೀಮ್ ಆಧಾರಿತ ಪುಸ್ತಕ ಪರಿಚಯ
ನವೆಂಬರ್ ತಿಂಗಳ ಕನ್ನಡ ಸಾಹಿತ್ಯ ಸರಣಿಯ ಹೊರತಾಗಿ ಥೀಮ್ ಆಧಾರಿತ ಪುಸ್ತಕ ಪರಿಚಯ ಮಾಡಿದ್ದೆವು. ದೇಶದ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ 75 ಕೃತಿಗಳನ್ನು ಪರಿಚಯಿಸುವ ಕೆಲಸ ಆಗಿತ್ತು. ಸ್ವರಾಜ್ಯ 75 ಸರಣಿ ಇದಾಗಿತ್ತು. ಈ ರೀತಿಯ ಕಾರ್ಯಕ್ರಮಗಳನ್ನು ಕೂಡ ಈ ಪುಟ ಆಯೋಜಿಸುತ್ತಿದೆ ಎಂದು ಪ್ರಮೋದ್ ತಿಳಿಸಿದ್ದಾರೆ.