Shakti Scheme: ಶಕ್ತಿ ಯೋಜನೆಗೆ ಚಾಲನೆ ದೊರೆತ 11 ಗಂಟೆಯಲ್ಲಿ 5.71 ಲಕ್ಷ ಮಹಿಳೆಯರ ಉಚಿತ ಬಸ್ ಪ್ರಯಾಣ, ನಾರಿಯರಿಗೆ ಉಳಿಯಿತು 1.40 ಕೋಟಿ ಹಣ
Jun 12, 2023 05:35 PM IST
Shakti Scheme: ಶಕ್ತಿ ಯೋಜನೆಗೆ ಚಾಲನೆ ದೊರೆತ 11 ಗಂಟೆಯಲ್ಲಿ 5.71 ಲಕ್ಷ ಮಹಿಳೆಯರ ಉಚಿತ ಬಸ್ ಪ್ರಯಾಣ, ನಾರಿಯರಿಗೆ ಉಳಿಯಿತು 1.40 ಕೋಟಿ ಹಣ(PTI)
- Karnataka Shakti Scheme: ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಪ್ರಯೋಜನವನ್ನು ಎಷ್ಟು ಮಹಿಳೆಯರು ಪಡೆದಿರಬಹುದು ಎಂಬ ಕುತೂಹಲ ಯಾರಲ್ಲಿ ಮೂಡಿರುವುದಿಲ್ಲ ಹೇಳಿ, ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮೊದಲ ದಿನ ಒಟ್ಟು 5,71,023 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ.ಈ ಪ್ರಯಾಣದ ಮೌಲ್ಯ ಸುಮಾರು 1,40 ಕೋಟಿ ಎಂದು ತಿಳಿದುಬಂದಿದೆ.
ಬೆಂಗಳೂರು: ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಅದರಂತೆ ಈ ಪೈಕಿ ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಭಾನುವಾರ ಚಾಲನೆ ನೀಡಲಾಗಿದೆ. ವಿಧಾನಸೌಧದ ಎದುರು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐವರು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಮೂಲಕ ಚಾಲನೆ ನೀಡಿದರು
ಈ ಉಚಿತ ಯೋಜನೆಯ ಪ್ರಯೋಜನವನ್ನು ಎಷ್ಟು ಮಹಿಳೆಯರು ಪಡೆದಿರಬಹುದು ಎಂಬ ಕುತೂಹಲ ಯಾರಲ್ಲಿ ಮೂಡಿರುವುದಿಲ್ಲ ಹೇಳಿ, ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಮೊದಲ ದಿನ ಒಟ್ಟು 5,71,023 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಈ ಪ್ರಯಾಣದ ಮೌಲ್ಯ ಸುಮಾರು 1,40 ಕೋಟಿ ಎಂದು ತಿಳಿದು ಬಂದಿದೆ.
ಯೋಜನೆ ಆರಂಭವಾದ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12ಗಂಟೆ ವರೆಗಿನ ಪ್ರಯಾಣಿಕರ ಸಂಖ್ಯೆ 5.71 ಲಕ್ಷದಷ್ಟು ಇದೆ. ಇದು ಸುಮಾರು 11 ಗಂಟೆಗಳಲ್ಲಿ ಪ್ರಯಾಣ ಮಾಡಿದ ಮಹಿಳಾ ಪ್ರಯಾಣಿಕರ ಅಂಕಿಅಂಶ. ಮಧ್ಯಾಹ್ನ 1 ಗಂಟೆಯ ನಂತರ ಕಾರ್ಯಾಚರಣೆ ಮಾಡಿದ ಹಲವಾರು ಬಸ್ ಗಳು ಇನ್ನೂ ಕೇಂದ್ರ ಸ್ಥಾನವನ್ನು ತಲುಪಿರುವುದಿಲ್ಲ. ಹಾಗಾಗಿ ಆ ವಾಹನಗಳಲ್ಲಿ ಇರುವ ಮಹಿಳಾ ಪ್ರಯಾಣಿಕರ ಸಂಖ್ಯೆ ಈ ಪಟ್ಟಿಯಲ್ಲಿ ಸೇರಿಲ್ಲ. ಇವರ ಸಂಖ್ಯೆಯೂ ಸೇರಿದರೆ ಪ್ರಯಾಣಿಕರ ಸಂಖ್ಯೆ ಏಳೆಂಟು ಲಕ್ಷ ದಾಟಬಹುದು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಯಾವ ಯಾವ ನಿಗಮಗಳ ಬಸ್ ಗಳಲ್ಲಿ ಎಷ್ಟು ಎಷ್ಟು ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ನೋಡೋಣ.
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಬಸ್ ಗಳಲ್ಲಿ 1,93,831 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದು ಇವರ ಪ್ರಯಾಣದ ಮೌಲ್ಯ 58,16,178 ರೂಪಾಯಿಗಳು.
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ 2,01,215 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದು ಇದರ ಮೌಲ್ಯ 26,19,604 ರೂಪಾಯಿಗಳು.
- ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ 1,22,354 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಇವರ ಸಂಚಾರದ ಮೌಲ್ಯ 36,17,096ಲಕ್ಷ ರೂಪಾಯಿಗಳು.
- ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ 53,623ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇವರ ಪ್ರಯಾಣದ ಮೌಲ್ಯ 19,70,000 ರೂಪಾಯಿಗಳು.
- ಹೀಗೆ ಒಟ್ಟು ಮೊದಲ ದಿನ ಒಟ್ಟು 5,71,023 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಈ ಪ್ರಯಾಣದ ಮೌಲ್ಯ ಸುಮಾರು 1,40,22,878 ಕೋಟಿ ರೂಪಾಯಿಗಳು ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಈ ಅಂಕಿ ಅಂಶಗಳಲ್ಲಿ ಹಿಂತಿರುಗಿ ಬಾರದ ಬಸ್ ಗಳ ಪ್ರಯಾಣಿಕರ ಸಂಖ್ಯೆ ಲಭ್ಯವಾಗಿಲ್ಲ. ಇಂದು ಸಂಜೆಯ ವೇಳೆಗೆ ಆ ಬಸ್ ಗಳು ಕೇಂದ್ರ ಸ್ಥಾನ ತಲುಪಬಹುದು. ಕೆಲವರು ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತಾರೆ. ನಿನ್ನೆ ಸಂಜೆ ಅಥವಾ ರಾತ್ರಿ ದೂರದ ಬೀದರ್ ಗುಲ್ಬರ್ಗ ದಿಂದ ಹೋರಾಟ ಬಸ್ ಬೆಂಗಳೂರು ಸೇರುವುದು ತಡವಾಗಬಹುದು.
ಇದು 11 ಗಂಟೆಗಳ ಅಂಕಿ ಅಂಶಗಳು ಮಾತ್ರ. ದಿನದ 24 ಗಂಟೆಗಳ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಬಹುದು. ನಿನ್ನೆ ಭಾನುವಾರವಾಗಿದ್ದು, ಶಾಲಾ ಕಾಲೇಜು ಗಳಿಗೆ ತೆರಳುವ ವಿದ್ಯಾರ್ಥಿನಿಯರು, ಖಾಸಗಿ ಸರಕಾರಿ ಕಚೇರಿಗಳಿಗೆ ತೆರಳುವ ನೌಕರರು ಪ್ರಯಾಣ ಮಾಡಿಲ್ಲ. ಬೆಂಗಳೂರು ಮಹಾನಗರ ವೊಂದರಲ್ಲೇ ನಾಲ್ಕೈದು ಲಕ್ಷ ಮಹಿಳಾ ನೌಕರರು ಗಾರ್ಮೆಂಟ್ಸ್ ಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಖಾಸಗಿ ಕಂಪನಿಗಳು ಐ ಟಿ ಬಿಟಿ ಕಂಪನಿಗಳ ನೌಕರರು e ಸವಲತ್ತನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಹಾಗಾಗಿ ಬೆಂಗಳೂರು ಸೇರಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹತ್ತು ಲಕ್ಷ ದಾಟಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ನಾರೀಶಕ್ತಿಗೆ ಸರಕಾರ ಬಲ ತುಂಬಿದ್ದು, ಮೊದಲ ದಿನವೇ ಒಂದೂವರೆ ಕೋಟಿ ಹಣ ಮಹಿಳೆಯರ ಬಳಿ ಉಳಿದಿದೆ. ನಂಬುವುದು ಕಷ್ಟವಾದರೂ ಸತ್ಯ ಅಲ್ಲವೇ ?
ವಿಶೇಷ ವರದಿ: ಎಚ್. ಮಾರುತಿ