Waqf Land Grab: ನಾನು ಶುದ್ಧ ಹಿಂದೂಸ್ತಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್; ಜಮೀರ್ ಅಹ್ಮದ್ ಖಾನ್
Oct 31, 2024 04:34 PM IST
ನಾನು ಶುದ್ಧ ಹಿಂದೂಸ್ತಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್; ಜಮೀರ್ ಅಹ್ಮದ್ ಖಾನ್
- Zameer Ahmed Khan: ಜಮೀರ್ ಅಹ್ಮದ್ ಖಾನ್ ಕೋಮು ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕೆಂಬ’ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಕ್ಫ್ ಸಚಿವ, ನಾನು ಶುದ್ಧ ಹಿಂದೂಸ್ತಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್ ಎಂದು ಹೇಳಿದ್ದಾರೆ.
ಹುಬ್ಬಳ್ಳಿ: ನಾನು ಮೊದಲು ಭಾರತೀಯ. ನಂತರ ರಾಜಕಾರಣಿ. ನನಗೆ ಎಲ್ಲಾ ಜನಾಂಗದವರು ಬೇಕು. ಯಾವುದೇ ಕಾರಣಕ್ಕೂ ಜಾತಿ ರಾಜಕಾರಣ ಮಾಡುತ್ತಿಲ್ಲ. ರಾಜಕೀಯಕ್ಕೆ ಬಂದ ಮೇಲೆ ಅದನ್ನೆಲ್ಲ ಬಿಡಬೇಕು. ಇಲ್ಲವೇ ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ವಕ್ಫ್ ಬೋರ್ಡ್ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಟಾಂಗ್ ನೀಡಿದ್ದಾರೆ. ‘ಭಾರತದಲ್ಲಿರುವ ಮುಸ್ಲಿಮರು ಹಿಂದೂಗಳೇ, ಜಮೀರ್ ಅಹ್ಮದ್ ಕೋಮು ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕೆಂಬ’ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ನಾನು 24 ಕ್ಯಾರೆಟ್ ಗೋಲ್ಡ್ ಎಂದ ಜಮೀರ್
ಜಮೀರ ಅಹ್ಮದ್ ಖಾನ್, ‘ಜೋಶಿಯವರು ಹಿಂದೂ ಮುಸ್ಲಿಂ ಬಿಟ್ಟರೆ ಏನೂ ಮಾತನಾಡಲ್ಲ. ಮುಸಲ್ಮಾನರು ಮತ ನೀಡಲ್ಲ ಅಂತ ಬಿಜೆಪಿಯವರು ಅವರನ್ನು ದ್ವೇಷ ಮಾಡುತ್ತಿದ್ದಾರೆ. ಒಂದು ವೇಳೆ ಮತ ಕೊಟ್ಟರೆ ಮುಸಲ್ಮಾನರು ಒಳ್ಳೆಯವರು. ನಾನು ಯಾವತ್ತು ಕೋಮುದ್ವೇಷ ಹರಡಿಸುವಂತಹ ಕೆಲಸ ಮಾಡಿಲ್ಲ. ನಾನು ಶುದ್ದ ಹಿಂದೂಸ್ಥಾನಿ ಭಾರತೀಯ. 24 ಕ್ಯಾರೆಟ್ ಗೋಲ್ಡ್. ನನ್ನನ್ನು ಹೇಗೆ ಕಿತ್ತು ಹಾಕುತ್ತಾರೆ’ ಎಂದು ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ರೈತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ ‘ಬಿಜೆಪಿಯವರು ರೈತರನ್ನು ಎತ್ತಿ ಕಟ್ಟುತ್ತಿದ್ದಾರೆ. ನಾನು ವಕ್ಫ್ ಸಚಿವನಾಗಿ ಹೇಳುತ್ತೇನೆ. ಯಾವ ರೈತರಿಗೂ ತೊಂದರೆ ಆಗಲ್ಲ. ಮಹಾರಾಷ್ಟ್ರ ಇತರೆಡೆ ಚುನಾವಣೆ ಇರುವುದಕ್ಕಾಗಿ ಬಿಜೆಪಿಯವರು ಹೀಗೆಲ್ಲಾ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದಿದ್ದಾರೆ.
ವಾಗ್ದಾಳಿ ನಡೆಸಿದ್ದ ಪ್ರಹ್ಲಾದ್ ಜೋಶಿ
ವಕ್ಫ್ ಭೂ ಕಬಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ರೈತರಿಗೆ ವಕ್ಫ್ ನೀಡಿದ್ದ ನೋಟಿಸ್ ಹಿಂಪಡೆದಿದ್ದೇವೆ ಎನ್ನುತ್ತಾರೆ ಸಿಎಂ. ಆದರೆ, ಪಹಣಿಯಲ್ಲಿ ವಕ್ಫ್ ಹೆಸರಿರುವುದನ್ನು ಏನು ಮಾಡುತ್ತೀರಿ? ಬಿಜೆಪಿ ಸರ್ಕಾರ ವಕ್ಫ್ ಹೆಸರು ದಾಖಲಿಸಲು ಬಿಡಲ್ಲವೆಂದು ವಕ್ಫ್ ಕಮಿಟಿ ಆಗ ಸರ್ಕಾರದ ಗಮನಕ್ಕೆ ಬಾರದಂತೆ ರಹಸ್ಯವಾಗಿ ಮಾಡಿದೆ. ಜನಕ್ಕೂ ಗೊತ್ತಾಗಿಲ್ಲ. ಸರ್ಕಾರದ ಗಮನಕ್ಕೆ ಬಂದಿದ್ದರೆ ಆಗಲೇ ವಕ್ಫ್ ಗೆ ವಾರ್ನಿಂಗ್ ಕೊಡುತ್ತಿತ್ತು ಮತ್ತು ವಕ್ಫ್ ಹೆಸರನ್ನು ಕಿತ್ತೆಸೆಯುತ್ತಿತ್ತು ತಮ್ಮ ಸರ್ಕಾರ. ಮೊದಲು ಜಮೀರ್ ಅಹ್ಮದ್ರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದರು.
ಪಹಣಿಯಲ್ಲಿ ವಕ್ಫ್: ಧಾರವಾಡದಲ್ಲಿ ಪ್ರತಿಭಟನೆ
ಧಾರವಾಡ: ರೈತರ ಜಮೀನುಗಳ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆ ಹಿನ್ನೆಲೆಯಲ್ಲಿ ಶ್ರೀರಾಮಸೇನೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಜಮೀನುಗಳ ಕಬಳಿಸುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡಲು ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಿಂಗಪ್ಪ ದಿಟವಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು. ರೈತರ ಜಮೀನುಗಳ ಪಹಣಿ ಪತ್ರದಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆದು ಹಾಕಬೇಕು ಇಲ್ಲವೇ, ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.