KGF MLA Roopakala: ಶಕ್ತಿ ಯೋಜನೆಗೆ ಚಾಲನೆ ನೀಡಿ ಸ್ವತಃ ಕೆಎಸ್ಆರ್ಟಿಸಿ ಬಸ್ ಓಡಿಸಿದ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ VIDEO
Jun 11, 2023 05:25 PM IST
ಕೆಎಸ್ಆರ್ಟಿಸಿ ಬಸ್ ಓಡಿಸಿದ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್
- Roopakala Shashidhar drives KSRTC bus: ಕೋಲಾರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ರೂಪಕಲಾ ಶಶಿಧರ್ ಅವರು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಮಹಿಳೆಯರು ಕುಳಿತಿದ್ದ ಬಸ್ ಚಲಾಯಿಸಿ ಗಮನ ಸೆಳೆದಿದ್ದಾರೆ.
ಕೋಲಾರ: ಕಾಂಗ್ರೆಸ್ನ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Travel For Women) ಒದಗಿಸುವ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಇಂದು (ಜೂನ್ 11, ಭಾನಿವಾರ) ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಕೋಲಾರದಲ್ಲಿ ಕೆಜಿಎಫ್ ಶಾಸಕಿ ಎಂ ರೂಪಕಲಾ ಶಶಿಧರ್ (KGF MLA Roopakala Shashidhar) ಅವರು ಶಕ್ತಿ ಯೋಜನೆಗೆ ಚಾಲನೆ ನೀಡಿದರು.
ಕೋಲಾರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ರೂಪಕಲಾ ಶಶಿಧರ್ ಅವರು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಮಹಿಳೆಯರು ಕುಳಿತಿದ್ದ ಬಸ್ ಚಲಾಯಿಸಿ ಗಮನ ಸೆಳೆದಿದ್ದಾರೆ. ರಾಬರ್ಟ್ಸನ್ ಪೇಟೆಯ ಕುವೆಂಪು ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಬಸ್ ಓಡಿಸಿದರು. ಇದಕ್ಕೆ ಬಸ್ ಚಾಲಕ ನೆರವಾಗಿ, ಅವರಿಗೆ ಚಾಲನೆಯ ಸಲಹೆ ನೀಡಿದರು.
ಆರಂಭದಲ್ಲಿ ಗೇರ್ ಸರಿಯಾಗಿ ಬೀಳದೆ ಎರಡು ಬಾರಿ ಬಸ್ ಹಿಮ್ಮುಖವಾಗಿ ಚಲಿಸಿದ್ದು, ಹಿಂಭಾಗದಲ್ಲಿದ್ದ ಮತ್ತೊಂದು ಬಸ್ಗೆ ಡಿಕ್ಕಿಯಾಗುವುದು ತಪ್ಪಿದೆ. ಕೊಂಚ ದೂರ ಬಸ್ ಚಲಾಯಿಸಿದ ಬಳಿಕ ಶಾಸಕಿ ರೂಪಕಲಾ ಶಶಿಧರ್ ಅವರು ಮತ್ತೆ ಸ್ವಲ್ಪ ದೂರ ಬಸ್ನಲ್ಲಿ ಕುಳಿತು ಪ್ರಯಾಣಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಅಪ್ಪ-ಮಕ್ಕಳು ಸ್ಫರ್ಧಿಸಿದ್ದರು. ಈ ಪೈಕಿ ಕೆ.ಎಚ್.ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಾಕಲಾ ಶಶಿಧರ್ ಕೂಡ ಹೌದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದು ಕೆ.ಎಚ್.ಮುನಿಯಪ್ಪ ಅವರು ಗೆದ್ದು ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೂಪಾಕಲಾ ಶಶಿಧರ್ ಕೂಡ ಜಯಭೇರಿ ಬಾರಿಸಿದ್ದರು.
ಉಚಿತ ಬಸ್ ಪ್ರಯಾಣದ ಬಗ್ಗೆ ಮಹಿಳೆಯರು ತಿಳಿಯಬೇಕಾಗಿದ್ದಿಷ್ಟು
1.ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಶಕ್ತಿ ಯೋಜನೆ ಅನ್ವಯವಾಗುತ್ತೆದೆ. ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸಲು ಇದು ಅನ್ವಯಿಸುವುದಿಲ್ಲ.
2. ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ.
3. ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್ ಬಸ್ಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
3. ಬಿಎಂಟಿಸಿ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಬಸ್‌ಗಳಲ್ಲಿ ಪುರುಷರಿಗಾಗಿ ಶೇ.50 ಆಸನಗಳನ್ನು ಕಾಯ್ದಿರಿಸಲಾಗಿರುತ್ತದೆ.
4. ಫ್ರೀ ಆದ್ರೂ ಟಿಕೆಟ್ ಪಡೆಯಲೇಬೇಕು. ಅದರಲ್ಲಿ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣ ಬೆಳೆಸುತ್ತೀರಿ ಎಂಬುದು ನಮೂದಾಗಿರುತ್ತದೆ.
5. ಒಂದು ವೇಳೆ ಟಿಕೆಟ್ ನೀಡಲು ತಾಂತ್ರಿಕ ದೋಷವಾದಲ್ಲಿ ಕಂಡಕ್ಟರ್ ನಿಮಗೆ ಪಿಂಕ್ ಟಿಕೆಟ್ ನೀಡುತ್ತಾರೆ, ಅದನ್ನು ಪಡೆಯಿರಿ.
6. ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಾದರೆ ʻಶಕ್ತಿ ಸ್ಮಾರ್ಟ್ ಕಾರ್ಡ್ʼ ಹೊಂದುವುದು ಕಡ್ಡಾಯ. ಈ ಕಾರ್ಡ್ಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಪಡೆಯಬೇಕು.
7. ಶಕ್ತಿ ಸ್ಮಾರ್ಟ್ ಕಾರ್ಡ್ ಸಿಗುವವರೆಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಭಾರತ ಸರ್ಕಾರ ಅಥವಾ ಕರ್ನಾಟಕ ಸರ್ಕಾರ ಅಥವಾ ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ನಿಮ್ಮ ಭಾವಚಿತ್ರ ಹಾಗೂ ವಸತಿ ವಿಳಾಸವಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಿ ಉಚಿತ ಟಿಕೆಟ್ ಪಡೆಯಬಹುದು.