logo
ಕನ್ನಡ ಸುದ್ದಿ  /  ಕರ್ನಾಟಕ  /  Ksrtc Conductor: ಕೋಲಾರ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ, ನಿರ್ವಾಹಕನ ನಿರ್ವಾಜ್ಯ ಸೇವೆ ಪಡೆಯಿರಿ

KSRTC Conductor: ಕೋಲಾರ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿ, ನಿರ್ವಾಹಕನ ನಿರ್ವಾಜ್ಯ ಸೇವೆ ಪಡೆಯಿರಿ

Umesha Bhatta P H HT Kannada

Apr 09, 2024 11:40 PM IST

google News

ಕೋಲಾರದ ಕಂಡೆಕ್ಟರ್‌ ಶ್ರೀನಿಧಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.

    • Kolar News ಕೆಎಸ್‌ಆರ್‌ಟಿಸಿಯಲ್ಲಿ ನಿತ್ಯ ಸಹಸ್ರಾರು ಮಂದಿ ಪ್ರಯಾಣಿಸುತ್ತಾರೆ. ಬಸ್‌ಗಳ ಪ್ರಯಾಣ ಹಲವರಿಗೆ ಹಿತಕರವೂ ಆಗಿರುತ್ತದೆ. ಅದಕ್ಕೆ ಕೋಲಾರದ ಕಂಡೆಕ್ಟರ್‌ ಶ್ರೀನಿಧಿ ಅವರಂತರ ಸೇವಾಪರತೆಯೂ ಕಾರಣ. ಈ ಬಗ್ಗೆ ಪುರುಷೋತ್ತಮರಾವ್‌ ಅವರು ಬರೆದಿರುವ ಪುಟ್ಟ ಲೇಖನ ಗಮನ ಸೆಳೆಯುತ್ತದೆ.
ಕೋಲಾರದ ಕಂಡೆಕ್ಟರ್‌ ಶ್ರೀನಿಧಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕೋಲಾರದ ಕಂಡೆಕ್ಟರ್‌ ಶ್ರೀನಿಧಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೋಲಾರ: ಸೇವೆ ಎನ್ನುವುದಕ್ಕೆ ಇಂತದೇ ಮಾರ್ಗ ಬೇಕು ಎನ್ನುವುದಿಲ್ಲ. ಮಾಡುವ ಕಾಯಕದಲ್ಲಿಯೇ ಗೌರವವನ್ನು ಕಾಣು ಎನ್ನುವ ಮಾತಿದೆ. ನಾವು ಒಪ್ಪಿಕೊಂಡ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಖಂಡಿತಾ ಆ ಕೆಲಸಕ್ಕೂ ಗೌರವ. ನಮಗೂ ಗೌರವ. ಹಾಗೆ ಗೌರವ ಸಂಪಾದಿಸುವ ಕೆಎಸ್‌ಆರ್‌ಟಿಸಿ ಬಸ್‌ ಕಂಡೆಕ್ಟರ್‌ ಒಬ್ಬರ ಕುರಿತು ಲೇಖಕರಾದ ಪುರುಷೋತ್ತಮರಾವ್‌ ತಮಗೆ ಆಗಿರುವ ಅನುಭವವನ್ನು ದಾಖಲಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಬರೆದಿರವ ಪುಟ್ಟ ಲೇಖನಕ್ಕೆ ನಿರೀಕ್ಷೆ ಮೀರಿದ ಪ್ರತಿಕ್ರಿಯೆ ಬಂದಿದೆ. ಇಂತವರ ಸಂತತಿ ಹೆಚ್ಚಲಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಯಕವೇ ಕೈಲಾಸ ಎನ್ನುವ ಅಭಿಪ್ರಾಯವನ್ನೂ ಬರೆದಿದ್ದಾರೆ.

ಈತ ಕೋಲಾರ ಡಿಪೋದಲ್ಲಿನ ಕೆ ಎಸ್ ಆರ್ ಟಿಸಿ ಕಂಡೆಕ್ಟರ್. ಹೆಸರು ಶ್ರೀನಿಧಿ. ಪಕ್ಕದ ಜನ್ನ ಘಟ್ಟದವರು. ಯುಗಾದಿ ಹಬ್ಬದಂದು ಬೆಂಗಳೂರಿನಿಂದ ವಿಜಯಪುರದ ಮೂಲಕ ಕೋಲಾರಕ್ಕೆ ಬರುವಾಗ ಬಸ್ ಸಂಖ್ಯೆ KA07 F 1780 ಬಸ್ಸಿನಲ್ಲಿ ಪರಿಚಯವಾದವರು. ವಾಸ್ತವ ವೆಂದರೆ ನಾನೇ ಸ್ವತಃ ಅವರನ್ನು ಖುಷಿಯಿಂದ ಪರಿಚಯ ಮಾಡಿಕೊಂಡಿದ್ದು, ಕಾರಣವೆಂದರೆ ಅವರು ಕರ್ತವ್ಯದಲ್ಲಿ ತೋರಿಸಿದ ಶಿಸ್ತು, ಪ್ರಾಮಾಣಿಕತೆ ಮತ್ತು ಪರೋಪಕಾರಿ ಮನೋಭಾವ. ನಾನು ವಿಜಯಪುರದಲ್ಲಿ ಬಸ್ ಹತ್ತುವಾಗಲೇ ಅವರು ಇಬ್ಬರು ವಯಸ್ಸಾದ ಮಹಿಳೆಯರಿಗೆ ಅವರ ಸಾಮಾನು ಸರಂಜಾಮುಗಳನ್ನು ಜತನದಿಂದ ತಾವೇ ಇಳಿಸಿಕೊಟ್ಟರು. ಆ ಮಹಿಳೆಯರು ಈತನನ್ನು ಪ್ರೀತಿಯಿಂದ ಹರಸಿದರು. ಸಾಮಾನ್ಯವಾಗಿ ನಮ್ಮ ಅನುಭವದಂತೆ ಸೀನಿಯರ್ ಟಿಕೆಟ್ ಎಂದ ಕೂಡಲೇ ಉಳಿಕೆ ಚಿಲ್ಲರೆ 1ರಿಂದ 5 ರ ವರೆಗೆ ವಾಪಸ್ ಕೊಡುವುದೇ ಇಲ್ಲ. ನಮಗೂ ದಬಾಯಿಸಿ ಕೇಳಲು ಮನಸ್ಸಾಗುವುದಿಲ್ಲ. ಏನೇ ಹಿಂಜರಿಕೆ. ಆದರೆ ಈತ ಒಂದು ರೂ ಚಿಲ್ಲರೆಯನ್ನು ಗೌರವದಿಂದ ವಾಪಸ್ಸು ಕೊಟ್ಟ. ನಾನು ಧನ್ಯವಾದ ಹೇಳಿದೆ. ಆತ ಬೆಳಗ್ಗೆ ಮನೆಯಿಂದಲೇ ಚಿಲ್ಲರೆ ಕಾಸುಗಳನ್ನು ಹೊತ್ತು ತರುತ್ತಾನಂತೆ. ಪ್ರಯಾಣಿಕರೊಂದಿಗೆ ತುಂಬಾ ಮರ್ಯಾದೆ ಮತ್ತು ಪ್ರೀತಿಯಿಂದ ನಡೆದುಕೊಳ್ಳುವ ಈತ ಕಡೆಯಲ್ಲಿ ತನ್ನಲ್ಲಿರುವ ಚಿಲ್ಲರೆ ನೋಟುಗಳು ಯಾರಿಗಾದರೂ ಬೇಕೆ ಎಂದು ಕೇಳಿ ಅಗತ್ಯವಿದ್ದವರಿಗೆ ಕೊಟ್ಟ. ಅಷ್ಟು ಸಾಲದೆಂಬಂತೆ ಅವುಗಳಲ್ಲಿ ಯಾವುದಾದರೂ ನೋಟು ಜೀರ್ಣವಾಗಿದ್ದು ಚಲಾವಣೆ ಕಷ್ಟ ಎನಿಸಿದರೆ ಹಿಂದಿರುಗಿಸಿ ಎಂದು ಮನವಿ ಮಾಡಿಕೊಂಡ. ಎಷ್ಟು ಮಂದಿ ನಿರ್ವಾಹಕರಿಗೆ ಈ ಮನಸ್ಥಿತಿ ಇರಲು ಸಾಧ್ಯ. ಭೇಷ್ ಶ್ರೀನಿಧಿ. ಸಂಸ್ಥೆಯಲ್ಲಿ ನಿಮ್ಮಂಥಹವರ ಸಂಖ್ಯೆ ಹೆಚ್ಚಾಗಲಿ.

-ಪುರುಷೋತ್ತಮರಾವ್‌, ಕೋಲಾರ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ