logo
ಕನ್ನಡ ಸುದ್ದಿ  /  ಕರ್ನಾಟಕ  /  ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಜೈಲು

ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 5 ವರ್ಷ ಜೈಲು

Jayaraj HT Kannada

Oct 24, 2024 10:45 PM IST

google News

ಮರಕುಂಬಿ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

    • Koppal Crime: ದಶಕದ ಹಿಂದೆ ಕೊಪ್ಪಳದ ಮರಕುಂಬಿಯಲ್ಲಿ ನಡೆದಿದ್ದ ದಲಿತರು ಮತ್ತು ಸವರ್ಣೀಯರ ನಡುವಿನ ಸಂಘರ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ಪ್ರಕಟವಾಗಿದೆ. 98 ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮರಕುಂಬಿ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಮರಕುಂಬಿ ದೌರ್ಜನ್ಯ ಪ್ರಕರಣ; 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ (ಸಾಂದರ್ಭಿಕ ಚಿತ್ರ)

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 10 ವರ್ಷಗಳ ಹಿಂದೆ ನಡೆದ ಪ್ರಕರಣ ಸಂಬಂಧ ಇಂದು (ಅಕ್ಟೋಬರ್‌ 24ರ ಗುರುವಾರ) ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಮರಕುಂಬಿಯಲ್ಲಿ ದಲಿತರ ಮೇಲೆ ಸವರ್ಣಿಯರಿಂದ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 98 ಅಪರಾಧಿಗಳಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ವೇಳೆ ಮೂವರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. 2014ರ ಆಗಸ್ಟ್ 28ರಂದು ನಡೆದಿದ್ದ ಘಟನೆ ಸಂಬಂಧ, ಇದೇ ಅಕ್ಟೋಬರ್ 21ರಂದು ಪ್ರಕರಣದ ಅರ್ಜಿ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಿತ್ತು.‌ ಪ್ರಕರಣದಲ್ಲಿ 101 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಿದ್ದ ನ್ಯಾಯಾಲಯ, ಅಕ್ಟೋಬರ್ 24ಕ್ಕೆ ಶಿಕ್ಷೆ ಪ್ರಮಾಣದ ತೀರ್ಪು ಕಾಯ್ದಿರಿಸಿತ್ತು. ಅದರಂತೆ ಕೊಪ್ಪಳ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 117 ಆರೋಪಿಗಳಿದ್ದರು. 117 ಜನರ ಪೈಕಿ 101 ಜನರಿಗೆ ಶಿಕ್ಷೆಯಾಗಿದೆ. ಇನ್ನುಳಿದ 16 ಜನರಲ್ಲಿ ಕೆಲವರು ಮೃತಪಟ್ಟಿದ್ದಾರೆ. ಕೆಲವರ ಹೆಸರುಗಳು ಪುನರಾವರ್ತನೆಯಾಗಿವೆ. ಹೀಗಾಗಿ ಸದ್ಯ 101 ಜನ ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ರೂಪಾಯಿ ದಂಡ ವಿಧಿಸಲಾಗಿದೆ.

ಉಳಿದ ಮೂವರು ಅಪರಾಧಿಗಳಿಗೆ ತಲಾ 2000 ರೂ ದಂಡ ಹಾಗೂ 5 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಈ ಮೂವರು ಅಪರಾಧಿಗಳು ಎಸ್‌ಸಿ ಎಸ್‌ಟಿ ವರ್ಗಕ್ಕೆ ಸೇರಿದ್ದರಿಂದ ಅವರಿಗೆ ಜಾತಿನಿಂದನೆ ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಕೊಲೆ ಯತ್ನ ಸೇರಿದಂತೆ ಇತರ ಸೆಕ್ಷನ್ ಅಡಿಯಲ್ಲಿ ​ 5 ವರ್ಷಗಳ ಶಿಕ್ಷೆ ವಿಧಿಸಿದೆ.

ಪ್ರಕರಣದ ಹಿನ್ನೆಲೆ

ಹತ್ತು ವರ್ಷಗಳ ಹಿಂದೆ, ಅಂದರೆ 2014ರ ಆಗಸ್ಟ್ 28ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ಭಾರಿ ಗಲಾಟೆ ನಡೆದಿತ್ತು. ಸಿನಿಮಾ ಮಂದಿರದಲ್ಲಿ ಟಿಕೆಟ್‌ ವಿಚಾರಕ್ಕೆ ಆರಂಭವಾಗಿದ್ದ ಜಗಳ ಸಂಘರ್ಷಕ್ಕೆ ಕಾರಣವಾಗಿತ್ತು. ಗ್ರಾಮದಲ್ಲಿದ್ದ ಅಸ್ಪ್ರಶ್ಯತೆ ಎಂಬ ಸಾಮಾಜಿಕ ಪಿಡುಗು ಗ್ರಾಮವನ್ನು ಸ್ಮಶಾನವಾಗಿಸಿತ್ತು. ಸವರ್ಣೀಯರಿಂದಾಗಿ ನೊಂದಿದ್ದ ಗ್ರಾಮದ ದಲಿತರು ಬಹಿರಂಗವಾಗಿ ಅಸ್ಫಶ್ಯತೆಯನ್ನು ಖಂಡಿಸಿದ್ದರು. ಈ ನಡುವೆ ಗಂಗಾವತಿಯಲ್ಲಿರುವ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಟಿಕೆಟ್ ಖರೀದಿಸುವ ವಿಚಾರವಾಗಿ ಜಗಳ ಆರಂಭವಾಗಿತ್ತು. ದಲಿತರ ಗುಂಪು ಮತ್ತೊಂದು ಯುವಕರ ಗುಂಪಿನ ಮೇಲೆ ಹಲ್ಲೆ ಮಾಡಿಸಿದೆ ಎಂದು ಗ್ರಾಮದಲ್ಲಿ ಸುದ್ದಿ ಹಬ್ಬಿತು. ಈ ಸುದ್ದಿಯು ಸವರ್ಣೀಯರ ಆಕ್ರೋಶಕ್ಕೆ ಕಾರಣವಾಗಿ, ದಲಿತರಿರುವ ಪ್ರದೇಶಕ್ಕೆ ನುಗ್ಗಿ ದೊಡ್ಡ ಮಟ್ಟದಲ್ಲಿ ಜಗಳ ನಡೆದಿತ್ತು. ಪರಿಣಾಮ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು.

2014ರಲ್ಲಿ ನಡೆದ ಸವರ್ಣೀಯರು ಮತ್ತು ದಲಿತರ ನಡುವೆ ಗಲಾಟೆ ಪ್ರಕರಣದ ಒಟ್ಟು 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಇಂದು (ಅಕ್ಟೋಬರ್ 24) ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ