ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಶ್‌ಲೆಸ್ ಆಗಿ ಓಡಾಡಿ: ಯುಪಿಐಗೆ ಮಣೆ ಹಾಕಿದ ಕರ್ನಾಟಕ ಸಾರಿಗೆ, ಚಿಲ್ಲರೆ ತಲೆಬಿಸಿ ಇನ್ನು ಉಪಶಮನ
Nov 13, 2024 06:12 AM IST
ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಶ್‌ಲೆಸ್ ಆಗಿ ಓಡಾಡಿ: ಯುಪಿಐಗೆ ಮಣೆ ಹಾಕಿದ ಕರ್ನಾಟಕ ಸಾರಿಗೆ, ಚಿಲ್ಲರೆ ತಲೆಬಿಸಿ ಇನ್ನು ಉಪಶಮನ
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಬಸ್‌ಗಳಲ್ಲಿ ನಗದು ರಹಿತ ಪಾವತಿ ಆಯ್ಕೆಗಳನ್ನು ಆರಂಭಿಸಿದ್ದು, ಪ್ರಯಾಣಿಕರಿಗೆ ಇಡೀ ಕೆಎಸ್‌ಆರ್‌ಟಿಸಿ ನೆಟ್‌ವರ್ಕ್‌ನಲ್ಲಿ ಯುಪಿಐ ಮೂಲಕ ಪಾವತಿಸಲು ಅವಕಾಶ ಕಲ್ಪಿಸಿದೆ. (ವರದಿ-ಎಚ್. ಮಾರುತಿ)
ಬೆಂಗಳೂರು: ಬೆಂಗಳೂರು ನಗರ ಸಾರಿಗೆ ಸಂಸ್ಥೆ ಬಸ್ ಇರಲಿ, ಕೆಎಸ್‌ಆರ್‌ಟಿಸಿ ಬಸ್ ಇರಲಿ ಮೊದಲ ಸಮಸ್ಯೆ ಎಂದರೆ ಚಿಲ್ಲರೆ ಸಮಸ್ಯೆ ಕಾಡುತ್ತದೆ. ಇದೇ ವಿಷಯಕ್ಕೆ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಲೆಕ್ಕವಿಲ್ಲದಷ್ಟು ಜಗಳ ನಡೆದು ಹೋಗಿದೆ. ಒಮ್ಮೊಮ್ಮೆ ಬಸ್ ನಿಲ್ಲಿಸಿ ಜಗಳ ಅತಿರೇಕಕ್ಕೆ ಹೋಗಿದ್ದೂ ಉಂಟು. ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಸಾರಿಗೆ ಇಲಾಖೆ ಯುಪಿಐ ಬಳಸಲು ಮುಂದಾಗಿದೆ. ಯುಪಿಐ ಹೊಸದೇನೂ ಅಲ್ಲ. ಎಲ್ಲರಿಗೂ ಇದರ ಬಳಕೆ ತಿಳಿದೇ ಇದೆ.
ಯುಪಿಐ ಮೂಲಕ ಟಿಕೆಟ್ ಖರೀದಿ ಮಾಡಲು ಅವಕಾಶ ನೀಡಬೇಕೆನ್ನುವುದು ಸಾರ್ವಜನಿಕರು ಮತ್ತು ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾಗಿತ್ತು. ಚಿಲ್ಲರೆ ಸಮಸ್ಯೆ ಜತೆಗೆ ಪ್ರಯಾಣಿಕರು ಟಿಕೆಟ್ ಖರೀದಿ ಮಾಡಲು ಕಡ್ಡಾಯವಾಗಿ ಜತೆಯಲ್ಲಿ ನಗದು ಹಣವನ್ನು ಇಟ್ಟು ಕೊಳ್ಳಲೇಬೇಕಿತ್ತು. ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಯುಪಿಐ ಜಾರಿಗಳಿಸಲಾಗಿದೆ. ಇದಕ್ಕಾಗಿ ಸರ್ಕಾರ 10 ಸಾವಿರ ಸುಧಾರಿತ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್ (ಇಟಿಎಂ)ಗಳನ್ನು ಖರೀದಿಸಿದೆ.
ಈ ಮೆಷಿನ್ಗಳ ಮೂಲಕ ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ಪ್ರಯಾಣಿಕರಿಗೆ ಎಲ್ಲ ರೀತಿಯ ಆಯ್ಕೆಗಳಿರುವುದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಕಿರಿ ಕಿರಿಯೂ ಇರುವುದಿಲ್ಲ. ಕೆಎಸ್‌ಆರ್‌ಟಿಸಿ 8,800 ಬಸ್ಗಳನ್ನು ಓಡಿಸುತ್ತಿದ್ದು, ಇನ್ನೂ ಎರಡು ಮೂರು ಸಾವಿರ ಬಸ್ಗಳನ್ನು ಖರೀದಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಹೀಗಾಗಿ, ಹೆಚ್ಚು ಇಟಿಎಂಗಳನ್ನು ಖರೀದಿಸಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡುತ್ತಾ ನೂತನ ವ್ಯವಸ್ಥೆಯಿಂದ ಚಿಲ್ಲರೆ ಸಮಸ್ಯೆ ಉದ್ಭವವಾಗುವುದಿಲ್ಲ. ಪ್ರಯಾಣಿಕರು ಮತ್ತು ನಿರ್ವಾಹಕರಿಬ್ಬರಿಗೂ ಜಗಳ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ. ನ್ಯಾಸನಲ್ ಕಾಮನ್ ಮೊಬಿಲಿಟಿ ಕಾರ್ಡ್ಸ ಮತ್ತು ಕೆಎಸ್‌ಆರ್‌ಟಿಸಿ ವಿತರಿಸುವ ಎಲಾ ರೀತಿಯ ಬಸ್ ಪಾಸ್ಗಳಿಗೂ ಇಟಿಎಂಗಳು ಅನ್ವಯಿಸುತ್ತವೆ ಎಂದೂ ಹೇಳಿದ್ದಾರೆ.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದೇನು?
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಪ್ರತಿಕ್ರಿಯಿಸಿ ನೂತನ ತಂತ್ರಜ್ಞಾನವನ್ನು ಸಾರಿಗೆ ಸಂಸ್ಥೆಯೂ ಅಳವಡಿಸಿಕೊಂಡಿದೆ. ಎರಡು ದಶಕಗಳಿಂದ ಬಳಸುತ್ತಿದ್ದ ಹಳೆಯ ಇಟಿಎಂಗಳ ಬದಲಾಗಿ ಹೊಸ ಸುಧಾರಿತ ಇಟಿಎಂಗಳನ್ನು ಬಳಸಲಾಗುತ್ತಿದೆ. 10,245 ಆಂಡ್ರಾಯ್ಡ್ ಆಧಾರಿತ ಇಟಿಎಂಗಳನ್ನು ಖರೀದಿಸಿ ಎಲ್ಲ ಸಾರಿಗೆ ಸಂಸ್ಥೆಗಳಿಗೆ ವಿತರಿಸಲಾಗಿದೆ. ಇವುಗಳಿಗೆ ಟಚ್ ಸ್ಕ್ರೀನ್ ಮತ್ತು ವೈರ್ ಲೆಸ್ ಸಂಪರ್ಕವೂ ಇರುತ್ತದೆ. ತ್ವರಿತವಾಗಿ ಕೆಲಸ ಮಾಡುತ್ತವೆ ಎಂದು ತಿಳಿಸಿದ್ದಾರೆ.
ಹಲವು ಕಡೆ ಪ್ರಾಯೋಗಿಕವಾಗಿ ಬಳಸಲಾಗಿದ್ದು ಪ್ರಯೋಗ ಯಶಸ್ವಿಯಾಗಿದೆ. ಈ ತಿಂಗಳ ಅಂತ್ಯದೊಳಗೆ ರಾಜ್ಯಾದ್ಯಂತ ಹೊಸ ಇಟಿಂಗಳನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಡಿಜಿಟಲ್ ಪೇಮೆಂಟ್ ಸಿಸ್ಟಂ ಅಳವಡಿಸಕೊಂಡ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.
ಸಾರಿಗೆ ಸಂಸ್ಥೆಗೆ ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್ ಮ್ಯಾನೇಜ್ಮೆಂಟ್ ಸಿಸ್ಟಂ (ಐಟಿಎಂಎಸ್) ವ್ಯವಸ್ಥೆಯನ್ನು ಎಬಿಕ್ಸ್ ಕ್ಯಾಷ್ ಎಂಬ ಸಂಸ್ಥೆ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿದೆ. ಈ ಸಸ್ಥೆಯೊಂದಿಗೆ 5 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿನ್ಯಾಸ, ಸ್ಥಾಪನೆ, ನಿರ್ವಹಣೆ ಮತ್ತು ಆಪರೇಷನ್ ಸೇರಿದಂತೆ ಎಲ್ಲವನ್ನೂ ಈ ಸಂಸ್ಥೆ ನಿರ್ವಹಿಸಲಿದೆ. ಮುಂದಿನ 5 ವರ್ಷಗಳಲ್ಲಿ ಹಂತಹಂತವಾಗಿ ಹೊಸದಾಗಿ 15 ಸಾವಿರ ಇಟಿಎಂಗಳನ್ನು ಖರೀದಿಸಲು ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಹೀಗೆ ಕೆಲಸ ಮಾಡಲಿದೆ..
- ಸಾರಿಗೆ ಸಂಸ್ಥೆಯ ಎಲ್ಲ ನಿರ್ವಾಹಕರ ಬಳಿ ಇಟಿಎಂ ಯಂತ್ರ ಇರುತ್ತದೆ.
- ನಗದು ಮತ್ತು ನಗದು ರಹಿತ ಸೇವೆ ಲಭ್ಯ ಇರುತ್ತದೆ.
- ನಗದು ರಹಿತ ಸೇವೆ ಆಯ್ದುಕೊಂಡರೆ ಇಟಿಎಂ ಯಂತ್ರದ ಮೇಲೆ QR ಕೋಡ್ ಕಾಣಿಸುತ್ತದೆ.
- ಪ್ರಯಾಣಿಕರು QR ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು.
- ಪಾವತಿ ಯಶಸ್ವಿಯಾದ ನಂತರ ಟಿಕೆಟ್ ಲಭ್ಯವಾಗುತ್ತದೆ.