logo
ಕನ್ನಡ ಸುದ್ದಿ  /  ಕರ್ನಾಟಕ  /  Union Budget 2023: ಕೇಂದ್ರ ಬಜೆಟ್ 'ರೈತರ ಪಾಲಿಗೆ ನಿರಾಸೆ' ಯಾಕೆ ಎಂದು ವಿವರಿಸಿದ ಕುರುಬೂರು ಶಾಂತಕುಮಾರ್

Union Budget 2023: ಕೇಂದ್ರ ಬಜೆಟ್ 'ರೈತರ ಪಾಲಿಗೆ ನಿರಾಸೆ' ಯಾಕೆ ಎಂದು ವಿವರಿಸಿದ ಕುರುಬೂರು ಶಾಂತಕುಮಾರ್

HT Kannada Desk HT Kannada

Feb 01, 2023 06:18 PM IST

ಸಂಗ್ರಹ ಚಿತ್ರ

    • ಈ ಬಾರಿಯ ಬಜೆಟ್​ ರೈತರ ಪಾಲಿಗೆ ನಿರಾಸೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2023-24ನೇ ಸಾಲಿನ ಕೇಂದ್ರ ಬಜೆಟ್​​ ಅನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ್ದಾರೆ.ಕೃಷಿ ಕ್ಷೇತ್ರಕ್ಕೆ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಕರ್ನಾಟಕದ ಬರಪೀಡಿತ ಪ್ರದೇಶದ ಜಿಲ್ಲೆಗಳ ರೈತರಿಗೆ ವರದಾನವಾದಗಿ ಭದ್ರಾ ಮೇಲ್ದಂಡೆ ಯೋಜನೆಗೆ 5,360 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಆದರೆ ಈ ಬಾರಿಯ ಬಜೆಟ್​ ರೈತರ ಪಾಲಿಗೆ ನಿರಾಸೆ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋ ಸುರಂಗ ನಿಲ್ದಾಣದ ಮೇಲ್ಬಾಗದ ರಸ್ತೆಯ ಕೆಳಗೆ ಕುಸಿದ ಭೂಮಿ, ಪರ್ಯಾಯ ಮಾರ್ಗ ಬಳಸಲು ಸೂಚನೆ

ಕರ್ನಾಟಕ ಹವಾಮಾನ ಮೇ 9; ಮೈಸೂರು, ಮಂಡ್ಯ, ಕೊಡಗು, ಬೆಂಗಳೂರು ಸೇರಿ 23 ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು

ಕೇಂದ್ರ ಬಜೆಟ್​ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುರುಬೂರು ಶಾಂತಕುಮಾರ್, "ಭದ್ರಾ ಮೇಲ್ದಂಡೆ ಯೋಜನೆಗೆ 5,360 ಕೋಟಿ ಪ್ರಕಟ ಸ್ವಾಗತಾರ್ಹ. ಬರಪೀಡಿತ ಪ್ರದೇಶದ ಜಿಲ್ಲೆಗಳಿಗೆ ಹೆಚ್ಚು ಅನುಕೂಲಕರವಾಗಿರುವ ಇದು ತುರ್ತಾಗಿ ಕಾರ್ಯಗತವಾಗಬೇಕು. ಬಜೆಟ್​​ನಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡಿರುವುದು, ಬಡವರಿಗೆ ಉಚಿತ ಆಹಾರ ವಿತರಣೆಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಣೆ ಮಾಡಿರುವುದು, ಸಿರಿಧಾನ್ಯಗಳ ಉತ್ಪಾದನೆಗೆ ಒತ್ತು ನೀಡಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಇದು ಮಧ್ಯಮ ವರ್ಗಕ್ಕೆ ಸಹಕಾರಿಯಾಗಿದೆ" ಎಂದಿದ್ದಾರೆ.

"ಆದರೆ, ಕೃಷಿಯಿಂದ ರೈತರ ಮಕ್ಕಳು ವಲಸೆ ಹೋಗುತ್ತಿರುವುದನ್ನು ತಪ್ಪಿಸಲು ಬೇಕಾದ ಯಾವುದೇ ಯೋಜನೆಗಳು ಇಲ್ಲ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಖಾತ್ರಿ ಸಿಗುವಂತಹ ಯೋಜನೆ ಜಾರಿ ಬಗ್ಗೆ ಸ್ಪಷ್ಟ ನಿರ್ಧಾರವೇ ಪ್ರಕಟವಾಗಿಲ್ಲ. ಬಡ್ಡಿ ರಹಿತ ಸಾಲ ನೀಡುವ ಕೃಷಿ ಸಾಲ ನೀತಿಯ ಬಗ್ಗೆಯಾಗಲಿ ಯಾವುದೇ ನಿರ್ಧಾರ ಬಂದಿಲ್ಲ. ಒಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ನಿರಾಸದಾಯಕವಾದ ಬಜೆಟ್ ಆಗಿದೆ" ಎಂದು ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.

"ಕಳೆದ ವರ್ಷ ನವದೆಹಲಿಯಲ್ಲಿ ನಡೆದ ರೈತರ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಂಎಸ್‌ಪಿ ಖಾತರಿ ಯೋಜನೆಗೆ ಭರವಸೆ ನೀಡಿದ್ದರು. ಇದಾಗಿ ಒಂದು ವರ್ಷ ಕಳೆದರೂ ಕೇಂದ್ರ ಯೋಜನೆ ಜಾರಿಗೆ ಮುಂದಾಗಿಲ್ಲ" ಎಂದ ಶಾಂತಕುಮಾರ್ ಅವರು ಕೃಷಿ ಉತ್ಪನ್ನಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ನೀರಾವರಿ-ಸಂಬಂಧಿತ ಸಲಕರಣೆಗಳ ಮೇಲಿನ ಜಿಎಸ್​ಟಿಯನ್ನು ತೆಗೆದುಹಾಕಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಕೊಡುಗೆ - ಪ್ರಮುಖ ಅಂಶಗಳು

- ಈ ಬಾರಿಯ ಬಜೆಟ್​​ನಲ್ಲಿ ಕೃಷಿಕರಿಗೆ ನೀಡುವ ಸಾಲದ ಯೋಜನೆಯ ಕ್ರೆಡಿಟ್​ ಗುರಿಯನ್ನು 20 ಲಕ್ಷ ಕೋಟಿವರೆಗೆ ವಿಸ್ತರಿಸಲಾಗಿದೆ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.

- ಈ ಬಾರಿಯ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿರುವ ನಿರ್ಮಲಾ ಸೀತರಾಮನ್​, ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳಿಂದ ಕೃಷಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ.

-ಪಿಎಂ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ ಉಪಯೋಜನೆಗಳನ್ನು ಘೋಷಣೆ ಮಾಡಲಾಗುವುದು. ಇದಕ್ಕಾಗಿ 6,000 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.

- ಬೆಳೆ ಯೋಜನೆ ಮಾಡುವ ಸಂದರ್ಭ ರೈತ ಕೇಂದ್ರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಸಾರ್ವಜನಿಕ ವೇದಿಕೆಯಾಗಿ ನಿರ್ಮಿಸಲಾಗುವುದು ಎಂದಿದ್ದಾರೆ.

-2,200 ಕೋಟಿ ರೂಪಾಯಿ ವೆಚ್ಚದಲ್ಲಿ "ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಿಗೆ" ರೋಗ-ಮುಕ್ತ ಗುಣಮಟ್ಟದ ನಾಟಿ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲು 'ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್' ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

- ಪರ್ಯಾಯ ರಸಗೊಬ್ಬರಗಳನ್ನು ಬಳಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು PM PRANAM ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

- ಶ್ರೀ ಅನ್ನ ಗೋಧಿ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಇದಕ್ಕೆ ಪೂರಕವಾಗಿ ಹೈದರಾಬಾದ್​ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು