ಮಾಜಿ ಪ್ರಧಾನಿ ದೇವೇಗೌಡರು ಸೋತ ಕ್ಷೇತ್ರದಲ್ಲಿ ಸೋಮಣ್ಣಗೆ ಮುದ್ದಹನುಮೇಗೌಡ ಪೈಪೋಟಿ; ತುಮಕೂರು ಲೋಕ ಸಮರಕ್ಕೆ ಅಖಾಡ ರೆಡಿ
Mar 23, 2024 02:59 PM IST
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಂದ ವಿ ಸೋಮಣ್ಣ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ಮುದ್ದಹನುಮೇಗೌಡ ಸ್ಪರ್ಧಿಸಿದ್ದಾರೆ.
- ಮಾಜಿ ಪ್ರಧಾನಿ ದೇವೇಗೌಡರನ್ನ ಸೋಲಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಭಾರಿ ಯಾರಿಗೆ ವಿಜಯಮಾಲೆ? ಬಿಜೆಪಿಯ ವಿ ಸೋಮಣ್ಣ ಮತ್ತು ಕಾಂಗ್ರೆಸ್‌ನ ಮುದ್ದಹನುಮೇಗೌಡ ನಡುವಿನ ಸ್ಪರ್ಧೆ ಹೇಗಿದೆ?
ತುಮಕೂರು: ತುಮಕೂರು ಲೋಕಸಭಾ (Tumkur Lok Sabha Election 2024) ಅಖಾಡ ರೆಡಿಯಾಗಿದೆ. 2019ರಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಸೋಲುಂಡಿದ್ದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ (V Somanna) ಜಯಬೇರಿ ಬಾರಿಸುತ್ತಾರಾ? ಇಲ್ಲ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ (S P Muddahanumegowda) ವಿಜಯಿಯಾಗ್ತಾರಾ ಎಂಬ ಪ್ರಶ್ನೆ ಎದುರಾಗಿದೆ. 2019 ರಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ತುಮಕೂರು ಲೋಕಸಭೆಯಿಂದ ಕಣಕ್ಕಿಳಿಸಲಾಗಿತ್ತು. ಗೌಡರ ಸ್ಪರ್ಧೆಯಿಂದ ತುಮಕೂರು ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು, ಅಂತಿಮವಾಗಿ ಮತದಾರ ಇಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಅವರನ್ನ ಗೆಲ್ಲಿಸಿದ್ದರು. ದೊಡ್ಡ ಗೌಡರು ಸೋತು ಮನೆ ಸೇರಬೇಕಾಯಿತು.
ಇದೀಗ ಬದಲಾದ ರಾಜಕೀಯ ಸನ್ನಿವೇಷದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡು ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಅಖಾಡಕ್ಕೆ ಇಳಿಸಿದೆ, ಎದುರಾಳಿಯಾಗಿ ಕಾಂಗ್ರೆಸ್ ನಿಂದ ಎಸ್.ಪಿ.ಮುದ್ದಹನುಮೇಗೌಡ ಸವಾಲೊಡ್ಡಲಿದ್ದಾರೆ.
ಮಾಜಿ ಸಚಿವ ವಿ ಸೋಮಣ್ಣನ ಶಕ್ತಿ ಏನು?
ಕಳೆದ ವಿಧಾನಸಭೆಯಲ್ಲಿ ವರುಣ, ಚಾಮರಾಜ ನಗರದಿಂದ ಸ್ಪರ್ಧೆ ಮಾಡಿ ಮಾಕಾಡೆ ಮಲಗಿದ್ದ ಸೋಮಣ್ಣರ ರಾಜಕೀಯ ಭವಿಷ್ಯ ಅತಂತ್ರವಾಗಿತ್ತು, ಮುಂದೇನು ಎಂಬ ಪ್ರಶ್ನೆ ಎದುರಾದಾಗ ತುಮಕೂರು ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತು ಕೇಳಿ ಬರಲಾರಂಭಿಸಿತು, ಸ್ಥಳೀಯ ನಾಯಕರ ವಿರೋಧದ ನಡುವೆಯೂ ಹೈ ಕಮಾಂಡ್ ತುಮಕೂರು ಕ್ಷೇತ್ರಕ್ಕೆ ಸೋಮಣ್ಣ ಅವರಿಗೆ ಟಿಕೆಟ್ ನೀಡಿದೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಸೋಮಣ್ಣ ಅವರು ಇಲ್ಲಿನ ಸಿದ್ದಗಂಗಾ ಮಠದ ಜೊತೆ ಕಳೆದ 40 ವರ್ಷಗಳಿಂದ ಅವಿನಾಭಾವ ಒಡನಾಟ ಹೊಂದಿದ್ದಾರೆ, ಮಠವನ್ನೇ ಶಕ್ತಿ ಪೀಠ ಎಂದು ನಂಬಿದ್ದಾರೆ, ಇದೀಗ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದು, ಸ್ಥಳೀಯ ನಾಯಕರನ್ನು ಭೇಟಿಯಾಗಿ ಅಸಮಾಧಾನ ತಣಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಎಲ್ಲಾ ವರ್ಗದ ಮುಖಂಡರು, ನಾಯಕರನ್ನು ಭೇಟಿ ಮಾಡಿ ಆಶೀರ್ವಾದ ಕೇಳುತ್ತಿದ್ದಾರೆ, ಎಲ್ಲರೊಂದಿಗೆ ಬೆರೆಯುವ,ಸೇವಾ ಮನೋಭಾವ ದೊಂದಿಗೆ ದಕ್ಷ ಕೆಲಸಗಾರ ಎಂದು ಗುರುತಿಸಿಕೊಂಡಿದ್ದು ಸೋಮಣ್ಣ ಪಾಲಿಗೆ ಇದೇ ದೊಡ್ಡ ಶಕ್ತಿ.
ಮುದ್ದಹನುಮೇಗೌಡರ ಪ್ಲಸ್ ಪಾಯಿಂಟ್ ಇದು
ಸರಳ, ಸಜ್ಜನಿಕೆಯಿಂದಲೇ ಕ್ಲಾಸ್ ಲೀಡರ್ ಎನಿಸಿಕೊಂಡಿರುವ ಎಸ್.ಪಿ ಮುದ್ದಹನುಮೇಗೌಡ 2014 ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಜಯಗಳಿಸಿದ್ದರು. ಗೆದ್ದ ನಂತರ ಜಿಲ್ಲೆಯಲ್ಲಿ ಜನ ಮೆಚ್ಚುವಂತಹ ಒಂದಷ್ಟು ಕೆಲಸ ಮಾಡಿದರು, ಇವರ ಕೆಲಸ ಮೆಚ್ಚಿದ ಕ್ಷೇತ್ರದ ಜನ ಮುಂದೆಯೂ ಮುದ್ದಹನುಮೇಗೌಡ ಅವರೇ ಎಂಪಿ ಎಂದು ಮಾತನಾಡಿಕೊಂಡರು, ಆದರೆ 2019 ರಲ್ಲಿ ಮುದ್ದಹನುಮೇಗೌಡರಿಗೆ ಕಾಂಗ್ರೆಸ್‌ನ ಟಿಕೆಟ್ ಸಿಗಲೇ ಇಲ್ಲ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ ದೇವೇಗೌಡರಿಗೆ ಟಿಕೆಟ್ ನೀಡಲಾಯಿತು. ಇಲ್ಲಿ ದೇವೇಗೌಡರು ಸೋತರು, ಟಿಕೆಟ್ ಸಿಗದೆ ಅಸಮಾಧಾನ ಗೊಂಡಿದ್ದ ಮುದ್ದಹನುಮೇಗೌಡರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆ ಗೊಂಡರು.
ಆದರೆ ಅಲ್ಲೂ ಅವರಿಗೆ ಹೇಳಿಕೊಳ್ಳು ಸ್ಥಾನಮಾನ, ವಿಧಾನಸಭೆಯಲ್ಲಿ ಟಿಕೆಟ್ ಸಿಗಲಿಲ್ಲ, ಲೋಕಸಭೆಗೂ ಟಿಕೆಟ್ ಅನುಮಾನ ಎಂಬುದನ್ನು ಅರಿತು ಮರಳಿ ಕಾಂಗ್ರೆಸ್ ಗೂಡಿಗೆ ಸೇರಿದರು. ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಣ್ಣ ಅವರಿಗೆ ಸವಾಲೊಡ್ಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ತಮ್ಮ ಸರಳ, ಸಜ್ಜನಿಕೆ ಮುದ್ದಹನುಮೇಗೌಡ ರ ಪಾಲಿನ ಶಕ್ತಿಯಾಗಿದೆ.
ಈಗಾಗಲೇ ಇಬ್ಬರು ಅಭ್ಯರ್ಥಿ ಗಳು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ, ಮತದಾರನ ಮನ ಮುಟ್ಟಿ ಗೆಲುವು ತಮ್ಮದಾಗಿಸಿಕೊಳ್ಳು ನಾನಾ ತಂತ್ರ, ಪ್ರತಿ ತಂತ್ರ ರೂಪಿಸುತ್ತಿದ್ದಾರೆ, ಏಪ್ರಿಲ್ 26 ರಂದು ಚುನಾವಣೆಗೆ ಮತದಾನ ನಡೆಯಲಿದೆ. ದೇಶದ ಗಮನ ಸೆಳೆದು ಮಾಜಿ ಪ್ರಧಾನಿ ದೇವೇಗೌಡರು ಸೋತ ಕ್ಷೇತ್ರದಲ್ಲಿ ಬಿಜೆಪಿಯ ಸೋಮಣ್ಣ ಗೆಲ್ತಾರಾ? ಕಾಂಗ್ರೆಸ್ ನ ಮುದ್ದಹನುಮೇಗೌಡ ವಿಕ್ಟರಿ ಬಾರಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.